






ಪುತ್ತೂರು: ಪುತ್ತೂರು ನಗರದ ಎಪಿಎಂಸಿ ರಸ್ತೆಯ ತಿರುವಿನಲ್ಲಿ ಜಿಡೆಕಲ್ಲು, ಸಾಲ್ಮರ ಕಡೆ ತೆರಳುವ ರಿಕ್ಷಾ ಚಾಲಕರು ಪಾರ್ಕಿಂಗ್ ಮಾಡುತ್ತಿದ್ದು, ಇದೇ ಸ್ಥಳದಲ್ಲಿ ಖಾಸಗಿ ಕಟ್ಟಡವೊಂದು ನಿರ್ಮಾಣವಾದ ಬಳಿಕ ಪಾರ್ಕಿಂಗ್ ಸ್ಥಳಾಂತರ ಮಾಡುವಂತೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ರಿಕ್ಷಾ ಚಾಲಕರು ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ.


“ನಾವು ಹಲವಾರು ವರ್ಷದಿಂದ ಅಲ್ಲೇ ಪಾರ್ಕಿಂಗ್ ಮಾಡುತ್ತಿದ್ದೇವೆ. 2025ರಲ್ಲಿ ಜಿಲ್ಲಾಧಿಕಾರಿಗಳು ನಮಗೆ ಆ ಸ್ಥಳವನ್ನು ಗುರುತಿಸಿಕೊಟ್ಟಿದ್ದರು. ನಾವು ಸಾಲ್ಮರ, ಜಿಡೆಕಲ್ಲು ಕಡೆ ಬಾಡಿಗೆ ತೆರಳುವ ರಿಕ್ಷಾ ಚಾಲಕರು. ಖಾಸಗಿ ಕಟ್ಟಡದ ಮಾಲೀಕರು ನಮ್ಮನ್ನು ಅಲ್ಲಿಂದ ಎಬ್ಬಿಸುವ ಯೋಜನೆ ಮಾಡಿದ್ದಾರೆ. ನಿತ್ಯ ಕಿರುಕುಳ ಕೊಡುವ ಮತ್ತು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ನಮಗೆ ಆ ಜಾಗ ಬಿಟ್ಟರೆ ಬೇರೆ ಜಾಗವಿಲ್ಲ. ಯಾವುದೋ ರಾಜಕೀಯ ಒತ್ತಡಕ್ಕೆ ಮಣಿದು ನಮ್ಮನ್ನು ಧಮನಿಸುವ ಕೆಲಸವನ್ನು ಕಟ್ಟಡದ ಮಾಲೀಕರು ಮಾಡುತ್ತಿದ್ದಾರೆ” ಎಂದು ಚಾಲಕರು ಶಾಸಕರಲ್ಲಿ ತಿಳಿಸಿದರು.



ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಅಶೋಕ್ ರೈ, “ನಿಮಗೆ ಜಿಲ್ಲಾಧಿಕಾರಿಗಳು ಪಾರ್ಕಿಂಗ್ ಸ್ಥಳವನ್ನು ಗುರುತಿಸಿದ್ದಾರೆ. ನಿಮಗೆ ಬೇರೆ ಜಾಗವನ್ನು ಯಾರೂ ತೋರಿಸಿಲ್ಲ. ನೀವು ಈಗ ಎಲ್ಲಿ ಪಾರ್ಕಿಂಗ್ ಮಾಡುತ್ತಿದ್ದೀರೋ ಅಲ್ಲೇ ಮಾಡಿ. ಯಾವ ಶಕ್ತಿಗೂ ಹೆದರುವ ಅಗತ್ಯವಿಲ್ಲ. ಈ ವಿಚಾರದಲ್ಲಿ ಸ್ಥಳ ಪರಿಶೀಲನೆ ಮಾಡುವಂತೆ ಕಮಿಷನರ್ಗೆ ಸೂಚಿಸುತ್ತೇನೆ. ಯಾರಾದರೂ ನಿಮ್ಮನ್ನು ಓಡಿಸಲು ಬಂದರೆ ‘ಶಾಸಕ ಅಶೋಕ್ ರೈ ಇಲ್ಲೇ ಪಾರ್ಕಿಂಗ್ ಮಾಡುವಂತೆ ಹೇಳಿದ್ದಾರೆ’ ಎಂದು ಹೇಳಿ” ಎಂದರು.”ನಾವು ಇನ್ನು ಯಾವುದೇ ಕಾರಣಕ್ಕೂ ಆ ಸ್ಥಳ ಬಿಟ್ಟು ತೆರಳುವುದಿಲ್ಲ. ನಮಗೆ ಶಾಸಕ ಅಶೋಕ್ ರೈ ಅವರೇ ಅಭಯ. ನೀವು ಬಡ ರಿಕ್ಷಾ ಚಾಲಕರ ಪರ ಎಂದು ನಮಗೆ ಗೊತ್ತಿದೆ” ಎಂದು ಚಾಲಕರು ಪ್ರತಿಕ್ರಿಯಿಸಿದರು.










