ಪುತ್ತೂರು: ಕೋವಿ ಬಳಕೆದಾರರಿಂದ ಶಾಸಕ ಅಶೋಕ್ ರೈ ಭೇಟಿ; ಗೃಹ ಸಚಿವರಿಗೆ ಮನವಿ ಮಾಡಲು ನಿರ್ಧಾರ

0

ಪುತ್ತೂರು: ಕೋವಿ ಪರವಾನಿಗೆ ಮತ್ತು ನವೀಕರಣ ವಿಚಾರದಲ್ಲಿ ಇರುವ ಗೊಂದಲ ಇನ್ನೂ ನಿವಾರಣೆಯಾಗದ ಹಿನ್ನೆಲೆಯಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅವರ ಕಚೇರಿಯಲ್ಲಿ ಕೋವಿ ಬಳಕೆದಾರರ ಸಭೆ ನಡೆಯಿತು.ಶಾಸಕ ಅಶೋಕ್ ರೈ ಸಭೆಯ ನೇತೃತ್ವ ವಹಿಸಿದ್ದರು.

ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಹಾಗೂ ಕಡಬ ಭಾಗದ ಕೋವಿದಾರರು ಸಭೆಯಲ್ಲಿ ಭಾಗವಹಿಸಿದ್ದರು. ಜಿಲ್ಲೆಯಲ್ಲಿ ಕೋವಿ ಪರವಾನಿಗೆ ಸಿಗದಿರುವುದು ಮತ್ತು ಇರುವ ಕೋವಿಯ ಪರವಾನಿಗೆ ನವೀಕರಣವಾಗದಿರುವ ವಿಚಾರದ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಮುಂದಿನ ಕ್ರಮ, ಸರ್ಕಾರಕ್ಕೆ ಮನವಿ ಹಾಗೂ ನ್ಯಾಯಾಲಯದಲ್ಲಿ ಪ್ರಶ್ನಿಸುವ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.

‘ಸದನದಲ್ಲಿ ಶಬ್ದವೆತ್ತಿದ್ದು ಅಶೋಕ್ ರೈ ಒಬ್ಬರೆ’: ಸಭೆಯಲ್ಲಿ ಮಾತನಾಡಿದ ಜಯಪ್ರಕಾಶ್ ಜೋಶಿ, ಜಿಲ್ಲೆಯ ಕೋವಿ ಬಳಕೆದಾರರ ಪರವಾಗಿ ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ್ದು ಪುತ್ತೂರು ಶಾಸಕ ಅಶೋಕ್ ರೈ ಅವರು ಒಬ್ಬರೆ. ಬೇರೆ ಶಾಸಕರು ಸೇರಿ ಒಟ್ಟಾಗಿ ಈ ವಿಚಾರದಲ್ಲಿ ಮಾತನಾಡಿದ್ದರೆ ಇನ್ನೂ ಶಕ್ತಿ ಬರುತ್ತಿತ್ತು. ಆದರೆ ಆ ಬಗ್ಗೆ ನೀವು ಬಿಟ್ಟರೆ ಬೇರೆ ಯಾರೂ ಬಾಯಿ ತೆರೆಯಲಿಲ್ಲ ಎಂದರು.ಜಿಲ್ಲೆಯಲ್ಲಿ ಮಾತ್ರ ಯಾಕೆ ಈ ಸಮಸ್ಯೆ? ಶಾಸಕರು ಅಧಿವೇಶನದಲ್ಲಿ ಪ್ರಶ್ನೆ ಎತ್ತಿದಾಗ ಗೃಹ ಸಚಿವರು ಸಮಸ್ಯೆ ಬಗೆಹರಿಸುವ ಮಾತನಾಡಿದ್ದರು. ಕೋವಿ ಪರವಾನಿಗೆ ನವೀಕರಣವಾಗದವರ ಪಟ್ಟಿ ಸಲ್ಲಿಸುವಂತೆ ಗೃಹ ಸಚಿವರು ಕೇಳಿಕೊಂಡಾಗ ಶಾಸಕರ ಮೂಲಕ ಅದನ್ನು ನೀಡಲಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಶಕ್ತಿ ಪುತ್ತೂರು ಶಾಸಕರಿಗೆ ಮಾತ್ರ ಇದೆ ಎಂದು ಹೇಳಿದರು.

ಮತ್ತೊಮ್ಮೆ ಗೃಹ ಸಚಿವರ ಬಳಿ ಮಾತುಕತೆ: ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಗೃಹ ಸಚಿವರ ಜೊತೆ ಮತ್ತೊಮ್ಮೆ ಮಾತುಕತೆ ನಡೆಸುವುದಾಗಿ ಶಾಸಕರು ತಿಳಿಸಿದರು. ಕೋವಿ ಬಳಕೆದಾರರ ಮನವಿಯನ್ನು ಸಚಿವರಿಗೆ ನೀಡುತ್ತೇನೆ. ಇದಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಚರ್ಚೆ ನಡೆಸುತ್ತೇನೆ. ಜಿಲ್ಲೆಯ ಕೃಷಿಕರಿಗೆ ಕೋವಿ ಅಗತ್ಯವಾಗಿದೆ. ಕಾಡುಪ್ರಾಣಿಗಳ ಕಾಟದಿಂದ ಕೃಷಿ ಬೆಳೆ ನಾಶವಾಗುತ್ತಿರುವ ಬಗ್ಗೆಯೂ ಸಚಿವರಿಗೆ ಮತ್ತೊಮ್ಮೆ ವಿವರಣೆ ನೀಡುತ್ತೇನೆ. ಗೃಹ ಇಲಾಖೆಯ ಕಾರ್ಯದರ್ಶಿಯ ಜೊತೆಗೂ ಮಾತನಾಡುತ್ತೇನೆ ಎಂದರು. ಸಭೆಯಲ್ಲಿ 50ಕ್ಕೂ ಮಿಕ್ಕಿ ಕೋವಿ ಬಳಕೆದಾರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here