






ಪುತ್ತೂರು:ಮುಜರಾಯಿ ಇಲಾಖೆಯ ದೇವಾಲಯದ ಅರ್ಚಕರು ಹಾಗೂ ನೌಕರರಿಗೆ ಸರಕಾರ ಸಿಹಿಸುದ್ದಿ ನೀಡಿದೆ.ಪ್ರವರ್ಗ ‘ಸಿ’ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು, ನೌಕರರು ಮತ್ತು ಅವರ ಕುಟುಂಬದ ಸದಸ್ಯರಿಗೆ ‘ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರೆ’ ಯೋಜನೆಯಡಿ ಉಚಿತ ದರ್ಶನ ಯಾತ್ರೆ ಸೌಲಭ್ಯ ಕಲ್ಪಿಸಿದೆ.


ಈ ಯೋಜನೆಯಡಿ ಪ್ರತಿ ಟ್ರಿಪ್ಗೆ 120 ಜನರಂತೆ ಉಚಿತವಾಗಿ ಯಾತ್ರೆಗೆ ಕಳುಹಿಸಲಾಗುವುದು.ಇದಕ್ಕೆ ತಗಲುವ ವೆಚ್ಚವನ್ನು ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಭರಿಸುವಂತೆ ಸಭಾ ನಡವಳಿಯಲ್ಲಿ ತೀರ್ಮಾನಿಸಲಾಗಿದೆ.ಎರಡು ಹಂತದಲ್ಲಿ ನಡೆಯುವ ಯಾತ್ರೆಯಲ್ಲಿ ಪ್ರಥಮವಾಗಿ ಜೂ.19ರಿಂದ 24 ಮತ್ತು ಜು.7ರಿಂದ 12ರ ತನಕ ಆರು ದಿನಗಳ ಯಾತ್ರೆ ನಡೆಯಲಿದೆ. ಜು.21ರಿಂದ 29ರ ತನಕ 9 ದಿನಗಳ ಯಾತ್ರೆ ನಡೆಯಲಿದೆ.



ಎಲ್ಲೆಲ್ಲಿಗೆ ಯಾತ್ರೆ:
ಜೂ.19ರಿಂದ 24 ಹಾಗೂ ಜು.7ರಿಂದ 12ರ ತನಕ ನಡೆಯುವ ಯಾತ್ರೆಯಲ್ಲಿ ಬೆಳಗಾವಿಯಿಂದ ರಾಮೇಶ್ವರ, ಕನ್ಯಾಕುಮಾರಿ, ಮಧುರೈ ಹಾಗೂ ತಿರುವನಂತಪುರ ಕ್ಷೇತ್ರಗಳಿಗೆ ಯಾತ್ರೆ ನಡೆಯಲಿದೆ.ಜು.21ರಿಂದ 29ರ ತನಕ ನಡೆಯುವ ಯಾತ್ರೆಯಲ್ಲಿ ಬೆಂಗಳೂರಿನಿಂದ ವಾರಣಾಸಿ, ಗಯಾ, ಆಯೋಧ್ಯೆ ಮತ್ತು ಪ್ರಯಾಗರಾಜ್ ಕ್ಷೇತ್ರಗಳಿಗೆ ಯಾತ್ರೆ ನಡೆಯಲಿದೆ.ಯಾತ್ರೆಯು ರೈಲು ಮೂಲಕ ತೆರಳಲಿದೆ. ಮುಜರಾಯಿ ಇಲಾಖೆಯ ದೇವಾಲಯಗಳ ಇಬ್ಬರು ಅರ್ಚಕರು ಅಥವಾ ನೌಕರರಿಗೆ ಕುಟುಂಬದ ಒಬ್ಬ ಸದಸ್ಯರ ಜೊತೆಗೆ ಯಾತ್ರೆಗೆ ಅವಕಾಶವಿದೆ.ಅಗತ್ಯ ದಾಖಲೆ, ಮಾಹಿತಿಗಳನ್ನು ದೂರವಾಣಿ ಸಂಖ್ಯೆಯೊಂದಿಗೆ ಇ-ಮೇಲ್ ಮೂಲಕ ಸಲ್ಲಿಸಬೇಕು.ಇಬ್ಬರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳ ಸ್ವೀಕೃತವಾದರೆ ವಯಸ್ಸಿನ ಆಧಾರದ ಮೇಲೆ ಹಿರಿಯ ಅರ್ಚಕ/ನೌಕರರನ್ನು ಆಯ್ಕೆ ಮಾಡಲಾಗುವುದು.ಹೆಸರು ನೋಂದಾಯಿಸಿದ ಬಳಿಕ ತಿರಸ್ಕರಿಸಿದರೆ ಅಂತಹ ಅರ್ಚಕರು ಅಥವಾ ನೌಕರರಿಂದ ಯಾತ್ರೆಯ ಪೂರ್ಣ ಮೊತ್ತವನ್ನು ವಸೂಲಿ ಮಾಡಲು ಧಾರ್ಮಿಕ ದತ್ತಿ ಇಲಾಖೆಯ ಉಪ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.










