ರಾಮನಗರ: ಉಚಿತ ನೋಟ್ ಬುಕ್ ವಿತರಣೆ

0

ನೆಲ್ಯಾಡಿ: ಒಂದರಿಂದ ಪದವಿ ತನಕ ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ರಾಮನಗರ, ಪಡುಬೆಟ್ಟು ಹಾಗೂ ಬಲ್ಯ ಗ್ರಾಮಗಳ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನೊಂದಿಗೆ ಉಚಿತ ನೋಟ್‌ಬುಕ್ ವಿತರಣೆ ಕಾರ್ಯಕ್ರಮ ರಾಮನಗರ ಅಮೆತ್ತಿಮಾರುಗುತ್ತುವಿನಲ್ಲಿ ನಡೆಯಿತು.


ಪುಸ್ತಕ ವಿತರಿಸಿ ಮಾತನಾಡಿದ ಪ್ರಗತಿಪರ ಕೃಷಿಕ ರಮೇಶ್ ಗೌಡ ನಾಲ್ಗುತ್ತು ಮಾತನಾಡಿ, ಕಳೆದ 5 ವರ್ಷಗಳಿಂದ ಅರ್ಹ ಮಕ್ಕಳಿಗೆ ಪ್ರೋತ್ಸಾಹಪೂರ್ವಕವಾಗಿ ಉಚಿತ ನೋಟುಬುಕ್ ವಿತರಿಸುತ್ತಾ ಬಂದಿದ್ದೇವೆ. ಈ ವರ್ಷ 150ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದು ಎಲ್ಲರಿಗೂ ಪುಸ್ತಕ ವಿತರಣೆ ಮಾಡುತ್ತಿದ್ದೇವೆ. ಪುಸ್ತಕವನ್ನು ಪಡೆದುಕೊಂಡ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಶುಭಹಾರೈಸಿದರು. ಕಾರ್ಯಕ್ರಮದ ಸಂಘಟಕ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕರಾದ ಗಂಗಾಧರ ಶೆಟ್ಟಿ ಅಮೆತ್ತಿಮಾರುಗುತ್ತು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಮಣ್ಣಿನ ಧರ್ಮದೈವಗಳ ಮತ್ತು ಶ್ರೀ ನಾಗದೇವರ ಕೃಪಾಶೀರ್ವಾದದಿಂದ 5 ವರ್ಷದಿಂದ ಪುಸ್ತಕ ವಿತರಣೆ ಮಾಡುತ್ತಿದ್ದೇವೆ. ಪ್ರಾರಂಭದ ವರ್ಷ 25 ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿದ್ದೇವೆ. ಈ ದಿನ 150ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಬಂದಿರುವುದು ನಮಗೆ ಸಂತಸ ತಂದಿದೆ. ಪುಸ್ತಕಗಳನ್ನು ತೆಗೆದುಕೊಳ್ಳುವಾಗ ಮಕ್ಕಳ ಮುಖದಲ್ಲಿ ಕಾಣುವ ಸಂತೋಷ ನಮಗೆ ಪ್ರತಿವರ್ಷ ಪುಸ್ತಕ ವಿತರಣೆಯನ್ನು ಮಾಡಲು ಪ್ರೇರಣೆಯಾಗುತ್ತಿದೆ. ನಮ್ಮ ಈ ಕಾರ್ಯದಲ್ಲಿ ಅನೇಕ ದಾನಿಗಳು ಸ್ವಯಂ ಪ್ರೇರಿತರಾಗಿ ಕೈಜೋಡಿಸಿದ್ದಾರೆ. ಈ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಪ್ರತಿವರ್ಷ ನಡೆಸಲು ನಾವು ನಂಬುವಂತಹ ಈ ಮಣ್ಣಿನ ಕಾರಣಿಕ ಶಕ್ತಿಗಳು ಅನುಗ್ರಹಿಸಲಿ ಎಂದರು.


ದಾನಿಗಳಾದ ಮುಂಬೈ ಅಕ್ಷರ ಕ್ಯಾಟರಿಂಗ್ ಸರ್ವೀಸಸ್‌ನ ಅಮರ್‌ಶೆಟ್ಟಿ, ಬೆಂಗಳೂರಿನ ಉದ್ಯಮಿಗಳಾದ ಬಾಲಕೃಷ್ಣನ್, ರಾಜಶೇಖರ್, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮೇನೇಜರ್ ಮಹೇಶ್ ಗೌಡ ಮುದಳೆ, ಪ್ರಗತಿಪರ ಕೃಷಿಕ ರಮೇಶ್ ಗೌಡ ನಾಲ್ಗುತ್ತು, ಶ್ರೀಕರ ರೈ ಮುಂಡ್ರಾಡಿಗುತ್ತು ಕಡಬ, ನೆಲ್ಯಾಡಿ ಬಾಲಾಜಿ ಮೆಡಿಕಲ್ಸ್‌ನ ಉದಯಕುಮಾರ್ ಭಟ್, ಗಂಗಾಧರ ಶೆಟ್ಟಿ ಅಮ್ಮೆತ್ತಿಮಾರುಗುತ್ತು ಪುಸ್ತಕ ನೀಡಿ ಸಹಕರಿಸಿದರು. ಸರಕಾರಿ ಹಿ.ಪ್ರಾ.ಶಾಲೆ ಪಡುವೆಟ್ಟು, ಸರಕಾರಿ ಪ್ರೌಢಶಾಲೆ ಪಡುಬೆಟ್ಟು ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಲ್ಯ ಶಾಲೆಯ ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು. ಸುಮಾರು 50 ಸಾವಿರ ರೂ.ಮೌಲ್ಯದ ನೋಟ್‌ಬುಕ್‌ಗಳನ್ನು ಉಚಿತವಾಗಿ ಮಕ್ಕಳಿಗೆ ನೀಡಲಾಯಿತು

LEAVE A REPLY

Please enter your comment!
Please enter your name here