






*ಮರೆಯಾದ (ನಿಧನರಾದ ) ಊರಿನ ಸಾಧಕರನ್ನು ಮರೆಯದಿರಿ
*ಅವರನ್ನು ಗುರುತಿಸೋಣ, ಗೌರವಿಸೋಣ, ಶಾಶ್ವತವಾಗಿ ನೆನಪಿಸೋಣ
ಪುತ್ತೂರಿನ ಗ್ರಾಮ ಗ್ರಾಮಗಳಲ್ಲಿ ಹಲವಾರು ಜನ ಸಾಧನೆ ಮಾಡಿದವರಿದ್ದಾರೆ. ಅಭಿವೃದ್ಧಿಗೆ ಶ್ರಮಿಸಿದವರಿದ್ದಾರೆ. ಅವರು ಬಹಳಷ್ಟು ಸೇವೆ ಮತ್ತು ತ್ಯಾಗ ಮಾಡಿದ್ದಾರೆ. ಅಂದು ಅವರಿಂದ ಊರು ಮತ್ತು ತಾಲೂಕು ಅಭಿವೃದ್ಧಿಯಾಗಿದೆ, ಬೆಳೆದಿದೆ. ಅದರ ಫಲ ಇಂದಿನವರಿಗೆ ದೊರಕಿದೆ. ಮುಂದಿನವರಿಗೆ ದೊರಕಲಿದೆ. ಆದರೆ ನಿಧನರಾಗಿರುವ ಅವರ ನೆನಪು ಮರೆಯಾಗುತ್ತಿದೆ. ಅವರ ಕುಟುಂಬದವರು ಮಾತ್ರ ನೆನಪಿಸಿಕೊಳ್ಳುವ ಹಾಗೆ ಆಗಿದೆ. ಹೀಗೆ ಮಾಡಿದ್ದರು, ಹಾಗೆ ಮಾಡಿದ್ದರು ಎಂದು ಹೇಳುವ ಮಟ್ಟಿಗೆ ಬಂದು ನಿಂತಿದೆ. ಇನ್ನು ಸ್ವಲ್ಪ ಸಮಯ ಕಳೆದರೆ ಅವರ ಮನೆಯವರಿಗೂ ಅದು ನೆನಪಿರುವುದಿಲ್ಲ. ಯಾಕೆಂದರೆ ಅವರ ಸಾಧನೆಗಳಿಗೆ, ಕೆಲಸಗಳಿಗೆ ಯಾವುದೇ ಸರಿಯಾದ ದಾಖಲೆಗಳಿಲ್ಲ, ಚಿತ್ರಗಳು, ವೀಡಿಯೋಗಳು ಇಲ್ಲ.
ಈಗ ಕಾಲ ಬದಲಾಗಿದೆ. ತಂತ್ರಜ್ಞಾನ ಬೆಳೆದಿದೆ. ಹಿಂದಿನ ದಿನಗಳನ್ನು, ಕೆಲಸಗಳನ್ನು ದಾಖಲಿಸುವ ಮರು ಸೃಷ್ಟಿ ಮಾಡುವ, ಮುಂದಿನ ಜನಾಂಗಕ್ಕೆ ನೀಡುವ, ಅದನ್ನು ಶಾಶ್ವತವಾಗಿರಿಸುವ ಸಾಧ್ಯತೆಗಳು ನಮ್ಮ ಮುಂದಿದೆ. ಆ ಕೆಲಸವನ್ನು ಪ್ರತೀ ಊರಿನಲ್ಲಿ ಜನರು ಮಾಡಬೇಕಾಗಿದೆ. ಸಾಧಕರ ಸಾಧನೆಗಳ ಚರಿತ್ರೆ ಮರೆತರೆ ನಾವು ಚರಿತ್ರೆ (ಸಾಧನೆ) ಮಾಡಲಾರೆವು ಎಂಬ ಮಾತಿದೆ. ನಾವು ನಮ್ಮವರ ಚರಿತ್ರೆ-ಸಾಧನೆ ಗುರುತಿಸುವ, ದಾಖಲಿಸುವ ಕೆಲಸ ಮಾಡಿದರೆ, ಈಗ ಸಾಧನೆ ಮಾಡುತ್ತಿರುವವರಿಗೆ ಮತ್ತು ಮುಂದಿನವರಿಗೆ ಅದು ದಾರಿದೀಪವಾಗುತ್ತದೆ. ಇಂದಿನವರು ಮಾಡುವ ಸಾಧನೆಗಳನ್ನು ಮುಂದಿನವರು ನೆನಪಿಸುವಂತಹ, ಗುರುತಿಸುವಂತಹ ಕೆಲಸ ನಡೆಯುತ್ತದೆ. ಹಾಗೆ ಆದಾಗ ಊರು ಅಭಿವೃದ್ಧಿಯತ್ತ ಸಾಗುವುದು ಖಂಡಿತ.


ಈ ಮೇಲೆ ಹೇಳಿದ ದಿಕ್ಕಿನಲ್ಲಿ ಆಯಾ ಊರಿನವರು ಮತ್ತು ಸಾಧಕರ ಮನೆಯವರು ಮುಂದೆ ಬಂದು ಅವರ ಸಾಧನೆಗಳನ್ನು ದಾಖಲಿಸುವ, ಗುರುತಿಸುವ ಕೆಲಸಗಳನ್ನು ಮಾಡಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ. ಪ್ರತೀವಾರ ಒಂದೊಂದು ಊರಿನ (ಗ್ರಾಮದ) ಸಾಧಕರ ಸಾಧ್ಯವಾದಷ್ಟು ವಿವರವನ್ನು ಪಡೆದು ಅದನ್ನು ಪತ್ರಿಕೆ ಮತ್ತು ಸುದ್ದಿ ಚಾನೆಲ್ ನಲ್ಲಿ ಪ್ರಕಟಿಸಲಾಗುವುದು. ಅದನ್ನು ವಿಸ್ತರಿಸುವ ಕೆಲಸವನ್ನು, ಶಾಶ್ವತವಾಗಿ ನೆನಪಿಸುವಂತಹ ಕಾರ್ಯಗಳನ್ನು ಆಯಾ ಸಾಧಕರ ಮನೆಯವರು ಮತ್ತು ಊರಿನವರು ಮಾಡಬೇಕು ಎಂದು ಆಶಿಸುತ್ತಾ, ಮರೆಯಾದ ಸಾಧಕರನ್ನು ಊರಿನವರು ಮರೆಯದಂತೆ ಮಾಡುವ, ಅವರನ್ನು ಶಾಶ್ವತವಾಗಿ ಗುರುತಿಸುವ ಯೋಜನೆಗೆ ಕೈ ಹಾಕಿದ್ದೇವೆ. ಜನರು ಮುಂದೆ ಬಂದು ಯೋಜನೆಯನ್ನು ಬೆಂಬಲಿಸಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ.
-ಡಾ. ಯು ಪಿ ಶಿವಾನಂದ













