ಹಿರಿಯ ಗಾಯಕಿ ಸುಮನ್ ಕಲ್ಯಾಣ್‌ಪುರ ನಿಧನ

0

ಪುತ್ತೂರು: ಹಿಂದಿ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಸುಮನ್ ಕಲ್ಯಾಣ್‌ಪುರ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. 1937ರಲ್ಲಿ ಢಾಕಾದಲ್ಲಿ ಜನಿಸಿದ ಸುಮನ್ ಅವರು 1954ರಲ್ಲಿ ‘ಮಾಂಗು’ ಚಿತ್ರದ ಮೂಲಕ ಹಿನ್ನೆಲೆ ಗಾಯನಕ್ಕೆ ಪಾದಾರ್ಪಣೆ ಮಾಡಿದರು.

ಲತಾ ಮಂಗೇಶ್ಕರ್ ಅವರೊಂದಿಗೆ ಹೋಲಿಕೆಯಾಗುತ್ತಿದ್ದ ಕಂಠಸಿರಿಯ ಸುಮನ್, 60-70ರ ದಶಕದಲ್ಲಿ ಅತ್ಯಂತ ಬೇಡಿಕೆಯ ಗಾಯಕಿಯಾಗಿದ್ದರು. ‘ಅಜ್‌ಹುನ್ ನ ಆಯೇ ಬಾಲಮಾ’, ‘ನಾ ನಾ ಕರ್ತೆ ಪ್ಯಾರ್ ತುಮ್ಹೀಸೆ ಕರ್ ಬೈಠೆ’, ‘ಯೇ ಸಮಾ ಸಮಾ ಹೈ ಯೇ ಪ್ಯಾರ್ ಕಾ’ ಮೊದಲಾದ ಅವರ ಹಾಡುಗಳು ಇಂದಿಗೂ ಜನಪ್ರಿಯವಾಗಿವೆ. ಹಿಂದಿ ಮಾತ್ರವಲ್ಲದೆ ಮರಾಠಿ, ಬೆಂಗಾಲಿ, ಅಸ್ಸಾಮಿ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ 500ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

ಮೊಹಮ್ಮದ್ ರಫಿ, ಮನ್ನಾಡೆ, ತಲತ್ ಮಹಮೂದ್, ಹೇಮಂತ್ ಕುಮಾರ್ ಅವರೊಂದಿಗೆ ಹಲವು ಯುಗಳ ಗೀತೆಗಳನ್ನು ಹಾಡಿ ಹೆಸರಾಗಿದ್ದರು. ಕೇಂದ್ರ ಸರ್ಕಾರ 2023ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.ಸುಮನ್ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ಸಂಗೀತ ಪ್ರೇಮಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here