ಪುತ್ತೂರಿನಲ್ಲಿ ‘ಪ್ರಾರಂಭ್ 2026’ : ಆದಾಯ ತೆರಿಗೆ ಕಾಯ್ದೆ-2025 ಕುರಿತು ಜಾಗೃತಿ

0

ಪುತ್ತೂರು: ಆದಾಯ ತೆರಿಗೆ ಇಲಾಖೆ, ವಾರ್ಡ್-1 ಪುತ್ತೂರು ಕಚೇರಿ ವತಿಯಿಂದ ಚಾರ್ಟರ್ಡ್ ಅಕೌಂಟೆಂಟ್ಸ್ ಅಸೋಸಿಯೇಷನ್, ಚೇಂಬರ್ ಆಫ್ ಕಾಮರ್ಸ್, ರೋಟರಿ ಪುತ್ತೂರು ಸಿಟಿ ಹಾಗೂ ಒಕ್ಕಲಿಗ ಸೇವಾ ಸಂಘದ ಸಹಯೋಗದಲ್ಲಿ ‘ಪ್ರಾರಂಭ್ 2026’ – ಆದಾಯ ತೆರಿಗೆ ಕಾಯ್ದೆ–2025 ಕುರಿತು ಜಾಗೃತಿ ಕಾರ್ಯಕ್ರಮ ಮೇ.28ರಂದು ತೆಂಕಿಲದ ಗೌಡ ಸಮಾಜ ಚುಂಚಶ್ರೀ ಸಭಾಭವನದಲ್ಲಿ ನಡೆಯಿತು.

ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಸಿಎ ದೀಪಕ್ ನಿರೂಪಿಸಿದರು. ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಉಲ್ಲಾಸ್ ಪೈ ಅತಿಥಿಗಳನ್ನು ಸ್ವಾಗತಿಸಿದರು.ಮುಖ್ಯ ಅತಿಥಿ ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಸಿ.ಬಿ. ಸುರೇಶ್ ಕುಮಾರ್ ಮಾತನಾಡಿ, ಹೊಸ ಆದಾಯ ತೆರಿಗೆ ಕಾಯ್ದೆ–2025ರ ಸರಳೀಕರಣ, ಟಿಡಿಎಸ್ ಹಾಗೂ ಟಿಸಿಎಸ್ ನಿಯಮಗಳ ಬಗ್ಗೆ ವಿವರಿಸಿದರು. “ಹೊಸ ಕಾಯ್ದೆಯ ತಿದ್ದುಪಡಿಗಳು ಹೊಸ ಪ್ರಕರಣಗಳಿಗೆ ಮಾತ್ರ ಅನ್ವಯ. ಬಾಕಿ ಇರುವ ಹಳೆಯ ಪ್ರಕರಣಗಳಿಗೆ ಅನ್ವಯಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

ಆದಾಯ ತೆರಿಗೆ ಅಧಿಕಾರಿ ಸುದರ್ಶನ್ ರಾವ್ ಕೆ. ಅವರು ‘ಪ್ರಾರಂಭ್–2026’ ಪವರ್‌ಪಾಯಿಂಟ್ ಪ್ರಸ್ತುತಿ ನೀಡಿದರು. “ಹಳೆಯ ಕಾಯ್ದೆಯಲ್ಲಿ ಹಲವು ತಿದ್ದುಪಡಿಗಳಿಂದ ಸಿಎ, ವೇತನ ನಿರ್ವಹಣಾಧಿಕಾರಿಗಳು ಕಾನೂನು ಅರ್ಥಮಾಡಿಕೊಳ್ಳಲು ಹೆಚ್ಚು ಸಮಯ ವ್ಯಯಿಸಬೇಕಿತ್ತು. ಇದಕ್ಕೆ ಪರಿಹಾರವಾಗಿ ಕಾಯ್ದೆ–2025 ಜಾರಿಯಾಗಿದೆ. ಹೊಸ ಕಾಯ್ದೆ ಸರಳ, ಸ್ಪಷ್ಟ, ಡಿಜಿಟಲ್ ಸ್ನೇಹಿ ಸ್ವರೂಪದಲ್ಲಿದ್ದು ಗೊಂದಲ-ವ್ಯಾಜ್ಯ ಕಡಿಮೆ ಮಾಡಿ ತೆರಿಗೆ ಅನುಸರಣೆ ಸುಲಭಗೊಳಿಸುವ ಉದ್ದೇಶ ಹೊಂದಿದೆ” ಎಂದರು.

ತೆರಿಗೆದಾರರಿಗೆ ಲಭ್ಯವಿರುವ KAR SETHU ಮತ್ತು KAR SAATHI ಆ್ಯಪ್‌ಗಳ ಬಗ್ಗೆಯೂ ಮಾಹಿತಿ ನೀಡಿದರು.ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ರವಿಕೃಷ್ಣ ಡಿ ಕಲ್ಲಾಜೆ, ಸುಳ್ಯದ ಸಿಎ ಗಣೇಶ್ ಭಟ್, ಸಿಎ ಅಸೋಸಿಯೇಷನ್ ಸದಸ್ಯರು, ಚೇಂಬರ್ ಆಫ್ ಕಾಮರ್ಸ್ ಸದಸ್ಯರು, ರೋಟರಿ ಪುತ್ತೂರು ಸಿಟಿ ಸದಸ್ಯರು, ಒಕ್ಕಲಿಗ ಸೇವಾ ಸಂಘದ ಪದಾಧಿಕಾರಿಗಳು ಹಾಗೂ ಸಿಎ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಿಎ ಅರವಿಂದ ಕೃಷ್ಣ ವಂದಿಸಿದರು.

LEAVE A REPLY

Please enter your comment!
Please enter your name here