ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ ಆರೋಪದ ಪ್ರಕರಣ : ರಾಜಿ ಸಂಧಾನದ ಪ್ರಸ್ತಾವನೆ ಪುರಸ್ಕರಿಸಿದ ಹೈಕೋರ್ಟ್

0

ಸಂತ್ರಸ್ತೆ,ಆರೋಪಿ ಸಹಿತ ಸಂಬಂಧಿಸಿದವರು ಜೂ.19ರಂದು ಕಡ್ಡಾಯವಾಗಿ ಮಧ್ಯಸ್ಥಿಕೆ ಕೇಂದ್ರಕ್ಕೆ ಹಾಜರಾಗಲು ಸೂಚನೆ

ಬೆಂಗಳೂರು :ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ಮಗು ಕರುಣಿಸಿ ವಂಚಿಸಿರುವ ಆರೋಪದಲ್ಲಿ ಕೃಷ್ಣ ಜೆ.ರಾವ್ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಆರೋಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ವಿವಾದವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವ ಪ್ರಸ್ತಾವನೆಯನ್ನು ಪುರಸ್ಕರಿಸಿದೆ.


ತನ್ನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಆರೋಪಿ ಕೃಷ್ಣ ಜೆ. ರಾವ್ ಸಲ್ಲಿಸಿದ್ದ ಅರ್ಜಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂತು.ಈ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಪಿ.ಪಿ.ಹೆಗ್ಡೆ ಅವರು, ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವ ಕುರಿತು ಕೋರ್ಟ್ ಮುಂದೆ ಪ್ರಸ್ತಾಪಿಸಿದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯ, ಜೂ.19ರಂದು ಸಂತ್ರಸ್ತೆ, ಆರೋಪಿ ಹಾಗೂ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ವ್ಯಕ್ತಿಗಳು ಕಡ್ಡಾಯವಾಗಿ ಮಧ್ಯಸ್ಥಿಕೆ ಕೇಂದ್ರಕ್ಕೆ ಹಾಜರಾಗಬೇಕು ಎಂದು ಸೂಚನೆ ನೀಡಿದೆ.


ಹಣ ಪಾವತಿಗೆ ಗಡುವು:
ಹೈಕೋರ್ಟ್‌ನ ಹಿಂದಿನ ಆದೇಶದಂತೆ, ಸಂತ್ರಸ್ತೆ ಮತ್ತು ಮಗುವಿನ ಪಾಲನೆಗೆಂದು ಆರೋಪಿ ಕೃಷ್ಣ ಜೆ.ರಾವ್ ಮೊದಲ ತಿಂಗಳ 75 ಸಾವಿರ ರೂಪಾಯಿಗಳನ್ನು ಕೋರ್ಟ್‌ನಲ್ಲಿ ಠೇವಣಿ ಇಟ್ಟಿದ್ದು ಈ ಹಣವನ್ನು ತಕ್ಷಣವೇ ಸಂತ್ರಸ್ತೆಗೆ ಪಾವತಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.ಎರಡನೇ ತಿಂಗಳ 75 ಸಾವಿರ ರೂಪಾಯಿಗಳನ್ನು ನಾಲ್ಕು ದಿನಗಳೊಳಗೆ ಪಾವತಿಸುವಂತೆ ಇದೇ ವೇಳೆ ನ್ಯಾಯಪೀಠ ಆರೋಪಿಗೆ ಸೂಚಿಸಿ, ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಿದೆ.ಮಧ್ಯಸ್ಥಿಕೆ ಕೇಂದ್ರದಲ್ಲಿ ನಡೆಯುವ ಸಂಧಾನದ ವರದಿಯ ಆಧಾರದ ಮೇಲೆ ಮುಂದಿನ ಕಾನೂನು ಪ್ರಕ್ರಿಯೆಗಳು ನಿರ್ಧಾರವಾಗಲಿವೆ.


ಮಧ್ಯಂತರ ತಡೆಯಾಜ್ಞೆ ನೀಡಿದ್ದ ನ್ಯಾಯಪೀಠ:
ಆರೋಪಿ ಕೃಷ್ಣ ಜಿ.ರಾವ್ ವಿರುದ್ಧದ ಪ್ರಕರಣದ ಮುಂದಿನ ವಿಚಾರಣೆಗೆ ಏ.24ರಂದು ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದ್ದ ಹೈಕೋರ್ಟ್, ಅರ್ಜಿಯ ಅಂತಿಮ ಆದೇಶವಾಗುವ ತನಕ ಸಂತ್ರಸ್ತ ಯುವತಿ ಮತ್ತು ಆಕೆಯ ಮಗುವಿನ ಪಾಲನೆಗಾಗಿ ಆರೋಪಿ ಕೃಷ್ಣ ಜೆ.ರಾವ್ ವೈಯಕ್ತಿಕವಾಗಿ ಇಲ್ಲವೇ ಪೋಷಕರ ಮೂಲಕ ತಿಂಗಳಿಗೆ 75 ಸಾವಿರ ರೂ.ನೀಡಬೇಕು ಎಂಬ ಷರತ್ತು ವಿಧಿಸಿತ್ತಲ್ಲದೆ,ಮೊದಲ ಕಂತಿನ ಹಣವನ್ನು ಮೇ 1ರ ಒಳಗೆ ಮಗುವಿನ ತಾಯಿಗೆ ನೀಡಬೇಕು ಎಂದು ಆದೇಶಿಸಿತ್ತು.ಪ್ರಕರಣವನ್ನು ಈ ನ್ಯಾಯಾಲಯ ಇತ್ಯರ್ಥಪಡಿಸುವವರೆಗೆ ಸಂತ್ರಸ್ತೆ, ಆಕೆಯ ಪೋಷಕರು ಅಥವಾ ಸಂಬಂಧಿಗಳು ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಮುಂದೆ ಹೋಗಬಾರದು ಎಂದೂ ನ್ಯಾಯಪೀಠ ನಿರ್ಬಂಧ ವಿಧಿಸಿತ್ತು.


ಬಿಜೆಪಿ ಮುಖಂಡ ಪಿ.ಜಿ.ಜಗನ್ನಿವಾಸ ರಾವ್ ಅವರ ಮಗ ಕೃಷ್ಣ ಜೆ.ರಾವ್, ಪ್ರೀತಿಸಿದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ ಪರಿಣಾಮ ಆಕೆ ಗರ್ಭಿಣಿಯಾಗಿದ್ದು ಆ ಬಳಿಕ ಆತ ಮದುವೆಯಾಗಲು ನಿರಾಕರಿಸಿ ವಂಚಿಸಿರುವುದಾಗಿ ಆರೋಪಿಸಲಾಗಿದೆ. ಬಳಿಕದ ಬೆಳವಣಿಗೆಯಲ್ಲಿ ಸಂತ್ರಸ್ತೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಮಗುವಿಗೆ ವರ್ಷವಾಗುತ್ತಾ ಬಂದಿದೆ.ಈ ಮಧ್ಯೆ, ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಗರ್ಭವತಿಯನ್ನಾಗಿಸಿ ವಂಚಿಸಿದ್ದ ಆರೋಪದಲ್ಲಿ ಕೃಷ್ಣ ಜೆ.ರಾವ್ ವಿರುದ್ಧ ಕಲಂ 64(2)(ಎಂ) ಮತ್ತು 69 ಬಿಎನ್ಎಸ್ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ತನ್ನ ವಿರುದ್ಧ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಕೃಷ್ಣಜೆ.ರಾವ್‌ ನನ್ನು ಪೊಲೀಸರು ಬಂಧಿಸಿದ್ದರು.ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ಬಳಿಕ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಮಂಗಳೂರು ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ.


ಪ್ರಕರಣ ರದ್ದತಿಗೆ ಹೈಕೋರ್ಟ್‌ಗೆ ಅರ್ಜಿ:
ಸಂತ್ರಸ್ತ ನೀಡಿದ್ದ ದೂರಿನ ಆಧಾರದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣದ ಮುಂದಿನ ಎಲ್ಲ ಪ್ರಕ್ರಿಯೆಗಳನ್ನು ರದ್ದುಪಡಿಸುವಂತೆ ಕೋರಿ ಆರೋಪಿ ಕೃಷ್ಣ ಜೆ.ರಾವ್ ಹಿರಿಯ ವಕೀಲ ಪಿ.ಪಿ.ಹೆಗ್ಡೆ ಅವರ ಮೂಲಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣದ ಮುಂದಿನ ವಿಚಾರಣೆಗೆ ಷರತ್ತಿನೊಂದಿಗೆ ಮಧ್ಯಂತರ ತಡೆಯಾಜ್ಞೆ ನೀಡಿ ಏ.24ರಂದು ಆದೇಶಿಸಿತ್ತು.
ಅರ್ಜಿಯನ್ನು ಆಲಿಸಿದ ನ್ಯಾಯಪೀಠ, ಒಂದು ವೇಳೆ ಈ ಪ್ರಕರಣವು ಕೇವಲ ಇಬ್ಬರ ನಡುವಿನ ಒಮ್ಮತದ ಸಂಬಂಧವಾಗಿದ್ದು, ಮಗು ಜನಿಸುವ ಹಂತಕ್ಕೆ ತಲುಪದೆ ಇದ್ದಿದ್ದರೆ ಹಾಗೂ ತಾಯಿ-ಮಗು ಸಂಕಷ್ಟಕ್ಕೆ ಸಿಲುಕದೆ ಇದ್ದಿದ್ದರೆ, ಈ ನ್ಯಾಯಾಲಯ ಪ್ರಕರಣದ ಪ್ರಕ್ರಿಯೆಗಳಿಗೆ ಸಂಪೂರ್ಣ ತಡೆಯಾಜ್ಞೆ ನೀಡುತ್ತಿತ್ತು. ಆದರೆ, ಈಗ ಪರಿಸ್ಥಿತಿ ಭಿನ್ನವಾಗಿದೆ.ಸಂತ್ರಸ್ತೆಯ ಪೋಷಕರು ಮಗುವನ್ನು ನೋಡಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಅರ್ಜಿದಾರರ ಕೃತ್ಯಗಳಿಂದಾಗಿ ಸಂತ್ರಸ್ತೆ ಮತ್ತು ಮಗು ಇಂದು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ, ಈ ಪ್ರಕರಣ ಇತ್ಯರ್ಥವಾಗುವವರೆಗೆ ಅರ್ಜಿದಾರ ಆರೋಪಿಯು ಸ್ವತಃ ಅಥವಾ ತನ್ನ ಪೋಷಕರ ಮೂಲಕ ಸಂತ್ರಸ್ತೆ ಹಾಗೂ ಮಗುವಿನ ಅಗತ್ಯತೆಗಳನ್ನು ಪೂರೈಸಲು ಪ್ರತಿ ತಿಂಗಳು 75 ಸಾವಿರ ರೂ. ಪಾವತಿಸಬೇಕು ಎಂಬ ಷರತ್ತಿಗೆ ಒಳಪಟ್ಟು ಅರ್ಜಿದಾರರ ವಿರುದ್ಧದ ಪ್ರಕರಣಕ್ಕೆ ತಡೆ ನೀಡಿ, ವಿಚಾರಣೆಯನ್ನು ಜೂನ್ 5ಕ್ಕೆ ಮುಂದೂಡಲಾಗಿತ್ತು.

LEAVE A REPLY

Please enter your comment!
Please enter your name here