ವಿದ್ಯುತ್ ಖಾಸಗೀಕರಣ ವಿರೋಧಿಸಿ ಮೆಸ್ಕಾಂ ಅಧಿಕಾರಿ, ಸಿಬ್ಬಂದಿಗಳಿಂದ ಪ್ರತಿಭಟನೆ

0

ಕೃಷಿ, ಕೈಗಾರಿಕೆ, ಗುತ್ತಿಗೆದಾರರು ಸೇರಿ ಎಲ್ಲ ವರ್ಗದವರಿಗೂ ಪರಿಣಾಮ: ಕೈಜೋಡಿಸಿ ಆಕ್ಷೇಪಣೆ ಸಲ್ಲಿಸಲು ಕರೆ

ಪುತ್ತೂರು: ಮೆಸ್ಕಾಂನ 3 ಜಿಲ್ಲೆ ಸೇರಿದಂತೆ ರಾಜ್ಯದ 15 ಜಿಲ್ಲೆಗಳಲ್ಲಿ ವಿದ್ಯುತ್ ಇಲಾಖೆಯನ್ನು ಕರ್ನಾಟಕದಲ್ಲಿ ಖಾಸಗೀಕರಣಗೊಳಿಸುವುದರ ವಿರುದ್ಧ ಜೂ.16ರಂದು ಬನ್ನೂರಿನಲ್ಲಿರುವ ಮೆಸ್ಕಾಂನ ಪುತ್ತೂರು ವಿಭಾಗದ ಕಚೇರಿಯಲ್ಲಿ ಮೆಸ್ಕಾಂನ ಅಧಿಕಾರಿ ಹಾಗೂ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದರು.


ವಿದ್ಯುತ್ ಇಲಾಖೆಯನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಈಗಾಗಲೇ ಕರ್ನಾಟಕದಲ್ಲಿ ಪ್ರಾರಂಭಗೊಂಡಿದೆ. ಟಾಟಾ ಕಂಪನಿಯವರು ಖಾಸಗಿಗೆ ಅರ್ಜಿ ಹಾಕಿದ್ದಾರೆ. ಖಾಸಗಿಯವರಿಗೆ ನೀಡಬೇಕಾದರೆ ಕರ್ನಾಟಕ ವಿದ್ಯುತ್ಚಕ್ತಿ ನಿಯಂತ್ರಣ ಆಯೋಗ ಸಾರ್ವಜನಿಕರ ಅಭಿಪ್ರಾಯ, ಆಕ್ಷೇಪಣೆಗಳನ್ನು ಪಡೆಯಬೇಕು. ಆಕ್ಷೇಪಣೆಗಳನ್ನು ಸಲ್ಲಿಸಲು ಜೂ.23ರ ತನಕ ಅವಕಾಶವಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಖಾಸಗೀಕರಣಗೊಂಡರೆ ಕೃಷಿ, ಕೈಗಾರಿಕೆ, ಗುತ್ತಿಗೆದಾರರು ಸಹಿತ ಎಲ್ಲಾ ವರ್ಗದವರಿಗೂ ಪರಿಣಾಮ ಬೀಳಲಿದೆ. ಹೀಗಾಗಿ ಪ್ರತಿಯೊಬ್ಬ ನಾಗರೀಕರು ಆಕ್ಷೇಪಣೆಗಳನ್ನು ಸಲ್ಲಿಸುವ ಮೂಲಕ ಖಾಸಗೀಕರಣದಿಂದ ಸಂಭವಿಸಬಹುದಾದ ಹೊಡೆತ, ಸಮಸ್ಯೆಗಳನ್ನು ತಡೆಯುವಂತೆ ಪ್ರತಿಭಟನೆಯಲ್ಲಿ ಆಗ್ರಹ ವ್ಯಕ್ತವಾಯಿತು.


ಬಿಎಸ್‌ಎನ್‌ಎಲ್‌ನ ಪರಿಸ್ಥಿತಿ ಮೆಸ್ಕಾಂಗೂ ಬರಬಹುದು-ರಾಮಚಂದ್ರ;
ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್, ಡಿಪ್ಲೋಮ ಇಂಜಿನಿಯರ‍್ಸ್ ಎಸೋಸಿಯೇಶನ್ ರಾಜ್ಯಾಧ್ಯಕ್ಷ ರಾಮಚಂದ್ರ ಎ. ಮಾತನಾಡಿ, ವಿದ್ಯುತ್ ಇಲಾಖೆಯನ್ನು ಖಾಸಗೀಕರಣಗೊಳಿಸುವ ಪ್ರಕ್ರೀಯೆ ಈಗಾಗಲೇ ಪ್ರಾರಂಭಗೊಂಡಿದೆ. ವಿದ್ಯುತ್ ಖಾಸಗೀಕರಣಗೊಂಡರೆ ಬಿಎಸ್‌ಎನ್‌ಎಲ್‌ನ ಪರಿಸ್ಥಿತಿ ಎದುರಿಸಬೇಕಾಗಬಹುದು. ಅಧಿಕ ಜನಸಂಖ್ಯೆ ಆದಾಯ ಬರುವ ಪ್ರಮುಖ ನಗರಗಳನ್ನು ಏರ್‌ಟೆಲ್, ಜಿಯೋದಂತಹ ಖಾಸಗಿ ಕಂಪನಿಗಳು ಪಡೆದುಕೊಂಡಿದೆ. ಆದಾಯ ಇಲ್ಲದೇ ಇರುವ ಗ್ರಾಮೀಣ ಪ್ರದೇಶಗಳು ಸರಕಾರಿ ಸಂಸ್ಥೆಗಳ ಕೈಯಲ್ಲಿದ್ದು ಅಲ್ಲಿ ಸಮಸ್ಯೆ ನಿಭಾಯಿಸಲು ಅಸಾಧ್ಯವಾಗಿದೆ. ಮುಂದೆ ಮೆಸ್ಕಾಂನ ಸ್ಥಿತಿಯೂ ಇದೇ ರೀತಿಯಾಗುವ ಸಾಧ್ಯತೆಯಿದೆ. ಟಾಟಾ ಸಂಸ್ಥೆಯ ಮಂಗಳೂರು ಮಹಾನಗರ ಪಾಲಿಕೆ, ಉಳ್ಳಾಲ, ಉಡುಪಿ, ಶಿವಮೊಗ್ಗ ನಗರ ಮಾತ್ರ ಖಾಸಗಿಕಣಕ್ಕೆ ಪ್ರಸ್ತಾವಣೆ ಸಲ್ಲಿಸಿದ್ದಾರೆ. ಸುಳ್ಯ, ನೆಲ್ಯಾಡಿ ಪುತ್ತೂರುಗಳನ್ನು ಅವರು ಬಿಟ್ಟಿದ್ದಾರೆ. ದೊಡ್ಡ ನಗರಗಳಲ್ಲಿ ಬೃಹತ್ ಕೈಗಾರಿಕೆಗಳು, ಅಪಾರ್ಟ್ ಮೆಂಟ್‌ಗಳಿದ್ದು ಅಲ್ಲಿ ದೊಡ್ಡ ಮಟ್ಟದ ಆದಾಯ ಬರುತ್ತದೆ. ಖಾಸಗಿಯವರು ಸ್ವಂತ ಲಾಭಾಕ್ಕಾಗಿ ಮಾತ್ರ ಮಾಡುತ್ತಾರೆಯೇ ವಿನಃ ಸಾರ್ವಜನಿಕ ಹಿತಾಶಕ್ತಿ ನೋಡಲು ಸಾಧ್ಯವಿಲ್ಲ. ಈಗಾಗಲೇ ಖಾಸಗೀಕರಣಗೊಂಡಿರುವ ದೆಹಲಿ, ಒಡಿಸ್ಸಾ, ಮಹಾರಾಷ್ಟ್ರ ಸಹಿತ ಹಲವು ರಾಜ್ಯಗಳಲ್ಲಿ ಅಲ್ಲಿನ ಜನತೆ ಬಹಳಷ್ಟು ಸಂಕಷ್ಟು ಎದುರಿಸುತ್ತಿದ್ದು ಈ ಪರಿಸ್ಥಿತಿ ಕರ್ನಾಟಕದ ಜನತೆಗೆ ಬಾರದಂತೆ ಪ್ರತಿಯೊಬ್ಬರೂ ಆಕ್ಷೇಪಣೆ ಸಲ್ಲಿಸುವಂತೆ ಅವರು ವಿನಂತಿಸಿದರು.


ಖಾಸಗೀಕರಣದಿಂದ ಉಚಿತ ಯೋಜನಗೆಳಿಗೆ ಹೊಡೆತ-ಕರಿಬಸಪ್ಪ:
659 ಸಂಘದ ಕೇಂದ್ರ ಸಮಿತಿ ಸದಸ್ಯ ಕರಿಬಸಪ್ಪ ಮಾತನಾಡಿ, ಒಂದು ಬಾರಿ ಖಾಸಗೀಕರಣಗೊಂಡರೆ ಬಳಿಕ ಏನೂ ಮಾಡಲು ಸಾಧ್ಯವಿಲ್ಲ. ಉಚಿತ ಯೋಜನೆಗಳು ಸ್ಥಗಿತಗೊಳ್ಳಲಿದೆ. ಉತ್ತರಪ್ರದೇಶದಲ್ಲಿ ನಿರಂತರ ಹೋರಾಟದ ಪರಿಣಾಮ ಖಾಸಗೀಕರಣಗೊಂಡಿಲ್ಲ. ಒಡಿಸ್ಸಾದಲ್ಲಿ ಸಂಘಟನೆಗಳು ಭಿನ್ನಮತದಿಂದಾಗಿ ಖಾಸಗೀಕರಣಗೊಂಡು ಇಂದು ಸಾರ್ವಜನಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಅಲ್ಲಿ 1999ರಲ್ಲಿ ನೆರೆಬಂದಾಗ ಖಾಸಗಿ ಕಂಪನಿಯವರು ಸ್ಪಂಧನೆ ನೀಡದೆ ಅಲ್ಲಿನ ಜನತೆ ಬಹಳಷ್ಟು ಸಂಕಷ್ಟಗಳನ್ನು ಅನುಭವಿಸಿದ್ದರು. ಈಗ ಅಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಾರ್ವಜನಿಕರ ಸಂಸ್ಥೆಗಳ ಜನರ ಸೇವೆಗಾಗಿರುವಂತದ್ದು ಹೊರತು ಹಣ ಮಾಡುವ ಉದ್ದೇಶವಲ್ಲ. ಖಾಸಗಿ ಕಂಪನಿಗಳು ತಮ್ಮ ಲಾಭಕ್ಕಾಗಿ ಮಾತ್ರ ಬರುತ್ತಾರೆ. ಜನಸೇವೆ ಸಾಧ್ಯವಿಲ್ಲ. ಇದರ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಖಾಸಗಿಗೆ ಈಗ ಮಂಗಳೂರು ನಗರ ಮಾತ್ರ ಕೇಳಿದ್ದು ಮುಂದೆ ಎಲ್ಲಾ ಕಡೆ ವ್ಯಾಪಿಸಲಿದೆ. ಪ್ರತಿಯೊಬ್ಬರೂ ಹೋರಾಟಕ್ಕೆ ಸಿದ್ದರಿರಬೇಕು ಎಂದರು.


ಪ್ರತಿಯೊಬ್ಬರ ಅಳಿವು, ಉಳಿವಿನ ಪ್ರಶ್ನೆ-ಷಣ್ಮುಗಪ್ಪ:
659 ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಷಣ್ಮುಗಪ್ಪ ಮಾತನಾಡಿ, ವಿದ್ಯುತ್ ಇಲಾಖೆ ಖಾಸಗೀರಕಣಗೊಂಡರೆ ಸಿಬ್ಬಂಗಳು ಮಾತ್ರವಲ್ಲ ಗ್ರಾಹಕರು, ರೈತರು, ಗುತ್ತಿಗೆದಾರರ ಅಳಿವು ಉಳಿವಿನ ಪ್ರಶ್ನೆಯಿದೆ. ಇದಕ್ಕಾಗಿ ಪುತ್ತೂರು ವಿಭಾಗ ವ್ಯಾಪ್ತಿಯ ರೈತ ಸಂಘಟನೆಗಳ ಮುಖಾಂತವೂ ಆಕ್ಷೇಪಣೆಗಳನ್ನು ಸಲ್ಲಿಸಬೇಕು. ಒಡಿಸಾದಲ್ಲಿ ಖಾಸಗೀಕರಣಗೊಂಡಿದ್ದು ಗ್ರಾಹಕರು, ನೌಕರರು, ಕೃಷಿಕರಿಗೆ ಬಹಳಷ್ಟು ಸಂಕಷ್ಟ ಎದುರಿಸುವಂತಾಗಿದೆ. ದೆಹಲಿಯಲ್ಲಿ ಖಾಸಗೀಕರಣದ ಪರಿಣಾಮ 700 ರೂಪಾಯಿ ಬರುತ್ತಿದ್ದ ಗ್ರಾಹಕರ ಬಿಲ್ 2700 ರೂಪಾಯಿ ಏರಿಕೆಯಾಗಿದೆ. ಹೀಗಾಗಿ ಗ್ರಾಹಕರಿಗೆ ಖಾಸಗೀಕರಣದ ಪರಿಣಾಮಗಳ ಕುರಿತು ಅರಿವು ಮೂಡಿಸಬೇಕು. ಇಂಧನ ಸಚಿವರು, ಮುಖ್ಯಮಂತ್ರಿಗಳು ಹಾಗೂ ಕೆಐಆರ್‌ಇಸಿಗೆ ಆಕ್ಷೇಪಣೆಗಳನ್ನು ಸಲ್ಲಿಸಬೇಕು. ಒಕ್ಕೂಟ ನೀಡುವ ಕರೆಗಳಿಗೆ ಪ್ರತಿಯೊಬ್ಬರು ಸ್ಪಂಧನೆ ನೀಡಬೇಕು ಎಂದರು.


ಹೋರಾಟಕ್ಕೆ ಗುತ್ತಿಗೆದಾರರ ಸಂಘದ ಬೆಂಬಲ-ಕೃಷ್ಣಪ್ರಶಾಂತ್:
ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೃಷ್ಣಪ್ರಶಾಂತ್ ಮಾತನಾಡಿ, ವಿದ್ಯುತ್ ಇಲಾಖೆ ಖಾಸಗೀರಕಣದ ವಿರುದ್ಧ ಗುತ್ತಿಗೆದಾರರ ರಾಜ್ಯ ಸಂಘದ ಮೂಲಕ ಕಳೆದ ಒಂದು ತಿಂಗಳುಗಳಿಂದ ಬಹಳಷ್ಟು ಹೋರಾಟ ಮಾಡಲಾಗುತ್ತಿದೆ. ಗುತ್ತಿಗೆದಾರರು ಬಹಳಷ್ಟು ವರ್ಷಗಳಿಂದ ಇಲಾಖೆಯೊಂದಿಗೆ ಕೆಲಸ ಮಾಡಿಕೊಂಡು ಬಂದವರು. ಹೀಗಾಗಿ ಇಲಾಖೆ ಬೇರೆಯಲ್ಲ, ನಾವು ಬೇರೆಯಲ್ಲ. ಖಾಸಗೀಕರಣಗೊಂಡರೆ ಸೀಮಿತ ಗುತ್ತಿಗೆದಾರರಿಗೆ ಮಾತ್ರ ಕೆಲಸ ದೊರೆಯಲಿದೆ. ಸಣ್ಣಪುಟ್ಟ ಗುತ್ತಿಗೆದಾರರಿಗೆ ಕೆಲಸ ದೊರೆಯುವುದು ಶೇ.98ರಷ್ಟು ಅಸಾಧ್ಯ. ಹೀಗಾಗಿ ನಿಮ್ಮ ಹೋರಾಟಕ್ಕೆ ಗುತ್ತಿಗೆದಾರರ ಬೆಂಬಲವಿದೆ ಎಂದು ಹೇಳಿದರು.


ವಿದ್ಯುತ್ ಕಾಯಿದೆಯ 2026ರ ತಿದ್ದುಪಡಿಯಿಂದ ಸಂಕಷ್ಟ-ಸುಪ್ರೀತ್ ಕುಮಾರ್
ಸುಳ್ಯದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುಪ್ರೀತ್ ಕುಮಾರ್ ಮಾತನಾಡಿ, ಕೇಂದ್ರ ಸರಕಾರವು 2003ರಲ್ಲಿ ಜಾರಿ ಮಾಡಿದ ವಿದ್ಯುತ್ ಕಾಯಿದೆಯಂತೆ ಖಾಸಗಿಕರಣಗೊಂಡ ಬಳಿಕ ಯಾವುದೇ ಸಮಸ್ಯೆಯಾದರೂ ಕಾಯಿದೆಯಂತೆ ಸಾರ್ವಜನಿಕ ಹಿತದೃಷ್ಠಿಯಿಂದ ಸೆಕ್ಷನ್ 108ರಲ್ಲಿ ಅಧಿಕಾರ ಚಲಾಯಿಸಿ ಖಾಸಗಿಯವರ ಲೈಸನ್ಸ್ ರದ್ದು ಮಾಡಲು ರಾಜ್ಯ ಸರಕಾರಕ್ಕೆ ಅಧಿಕಾರವಿತ್ತು. ಆದರೆ 2026ರ ತಿದ್ದುಪಡಿ ಕಾಯಿದೆಯಲ್ಲಿ ಸೆಕ್ಷನ್ 108ನ್ನು ತೆಗೆದುಹಾಕಿದ್ದಾರೆ. ಹೀಗಾಗಿ ಮುಂದೆ ತಿದ್ದುಪಡಿ ಕಾಯಿದೆ ಜಾರಿಯಾದರೆ ರಾಜ್ಯ ಸರಕಾರಕ್ಕೆ ಯಾವುದೇ ಅಧಿಕಾರವಿರುವುದಿಲ್ಲ. ಈ ಕಾಯಿದೆಯು ಲೋಕಸಭೆಯಲ್ಲಿ ಅನುಮೋದನೆ ಪಡೆದು ರಾಜ್ಯ ಸಭೆಯಲ್ಲಿದೆ. ಅಲ್ಲಿಯೂ ಅನುಮೋದನೆ ದೊರೆತರೆ ಮುಂದೆ ಸಂಭವಿಸಬಹುದಾದ ಸಮಸ್ಯೆಗಳ ಬಗ್ಗೆ ನಾವು ಯೋಚಿಸಬೇಕು. ಗ್ರಾಹಕರೂ ಆಕ್ಷೇಪಣೆ ಸಲ್ಲಿಸಬೇಕು. ನಾಗರಿಕರೆಲ್ಲರೂ ಒಟ್ಟಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆಯಿದೆ. ಅದು ಪುತ್ತೂರಿನಿಂದ ಪ್ರಾರಂಭವಾಗಬೇಕು ಎಂದು ಹೇಳಿದರು.


ಇಂಜಿನಿಯರ‍್ಸ್ ಸಂಘದ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಪೈ, 659 ನೌಕರರ ಸಂಘದ ಅಧ್ಯಕ್ಷ ಶಂಕರ ಪ್ರಕಾಶ್, ಎಸ್‌ಎಲ್‌ಇಎಸ್‌ಟಿ ಅಸೋಸಿಯೇಶನ್‌ನ ಕೇಂದ್ರ ಸಮಿತಿ ಸದಸ್ಯ ಸದಾಶಿವ, ೬೫೯ ಸಂಘದ ಕೇಂದ್ರ ಸಮಿತಿ ಸದಸ್ಯ ಪುತ್ತು ಜೆ. ಮಾತನಾಡಿ, ವಿದ್ಯುತ್ ಖಾಸಗೀಕರಣದ ವಿರುದ್ಧ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಆಗ್ರಹಿಸಿದರು. ನಗರ ಉಪ ವಿಭಾಗ ಸಹಾಯಕ ಲೆಕ್ಕಾಧಿಕಾರಿ ಕೃಷ್ಣಮೂರ್ತಿ ಸ್ವಾಗತಿಸಿ, ವಂದಿಸಿದರು. ಮೆಸ್ಕಾಂ ಪುತ್ತೂರು ವಿಭಾಗದ ಸುಳ್ಯ, ಸುಬ್ರಹ್ಮಣ್ಯ, ಕಡಬ, ಪುತ್ತೂರು ವಿಭಾಗಗಳ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳು, ಗುತ್ತಿಗೆದಾರರು, ವಿವಿಧ ವಿಭಾಗಗಳ ಅಧಿಕಾರಿ ಹಾಗೂ ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಖಾಸಗೀಕರಣದಿಂದ ಗೃಹಜ್ಯೋತಿ ಸಹಿತ ಎಲ್ಲಾ ಉಚಿತ ಯೋಜನೆಗಳಿಗೆ ಕುತ್ತು
ವಿದ್ಯುತ್ ಇಲಾಖೆ ಖಾಸಗೀಕರಣದಿಂದ ಇಲಾಖೆಗೆ ಮಾತ್ರ ಸಂಕಷ್ಟವಲ್ಲ. ರೈತರು, ಗ್ರಾಹಕರು, ಗುತ್ತಿಗೆದಾರರು, ಕೈಗಾರಿಕೋದ್ಯಮಿಗಳಿಗೂ ದೊಡ್ಡ ಮಟ್ಟದ ಹೊಡೆತ ಬೀಳಲಿದೆ. ಗೃಹ ಜ್ಯೋತಿಯಂತಹ ಉಚಿತ ವಿದ್ಯುತ್ ಯೋಜನೆ, ಪಂಪ್‌ಸೆಟ್‌ಗಳಿಗೆ ರಿಯಾಯಿತಿ ಸಹಿತ ಎಲ್ಲಾ ರಿಯಾಯಿತಿಗಳಿಗೂ ಹೊಡೆತ ಬೀಳಲಿದೆ. ನಾವು ಇಲಾಖೆಯ ಒಳಗಡೇ ಇರುವುದರಿಂದ ನಮಗೆ ಇದರ ಸುಳಿವು ದೊರೆತಿದ್ದು ಆಕ್ಷೇಪಣೆ ಪ್ರಾರಂಭಿಸಿದ್ದೇವೆ. ಸಾರ್ವಜನಿಕರು, ರೈತರು, ಕೈಕಾರಿಕೋದ್ಯಮಿಗಳು, ಗುತ್ತಿಗೆದಾರರು ಸಹಿತ ಪ್ರತಿಯೊಬ್ಬರೂ ಆಕ್ಷೇಪಣೆ ಸಲ್ಲಿಸುವ ಮೂಲಕ ಖಾಸಗೀಕರಣ ಎಂಬ ಪ್ರಕ್ರೀಯೆ ಕರ್ನಾಟಕ ರಾಜ್ಯದೊಳಗೆ ಪ್ರವೇಶಿಸದಂತೆ ಮುಂಜಾಗ್ರತೆ ವಹಿಸಬೇಕು.
-ರಾಮಚಂದ್ರ, ಕಾರ್ಯನಿರ್ವಾಹಕ ಇಂಜಿನಿಯರ್, ರಾಜ್ಯಾಧ್ಯಕ್ಷರು ಡಿಪ್ಲೋಮ ಇಂಜಿನಿಯರ‍್ಸ್ ಎಸೋಸಿಯೇಶನ್

LEAVE A REPLY

Please enter your comment!
Please enter your name here