






ಪುತ್ತೂರು: ಜಾತ್ಯಾತೀತ ಜನತಾದಳ ಪಕ್ಷದ ಪುತ್ತೂರು ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಕೋಡಿಂಬಾಡಿ ನಿವಾಸಿ ಕೆ. ಪ್ರಭಾಕರ ಸಾಲ್ಯಾನ್ ನೇಮಕಗೊಂಡಿದ್ದಾರೆ.


ರಾಜ್ಯ ಜನತಾದಳದ ಅಧ್ಯಕ್ಷರೂ ಕೇಂದ್ರ ಸಚಿವರೂ ಆಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಆದೇಶದ ಮೇರೆಗೆ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ಅವರು ಈ ನೇಮಕ ಮಾಡಿದ್ದಾರೆ.
ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಕೈಪಂಗಳ ದೋಳದ ಸೀನಪ್ಪ ಪೂಜಾರಿ ಮತ್ತು ಗಿರಿಜಾ ದಂಪತಿಯ ಮಗನಾಗಿ 1975ರ ಜೂನ್ 24ರಂದು ಜನಿಸಿದ ಪ್ರಭಾಕರ ಸಾಲ್ಯಾನ್ ಬಾಕಿಲಗುತ್ತು ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲ ಮತ್ತು ಪ್ರೌಢ ಶಿಕ್ಷಣವನ್ನು ಎಸ್.ಜಿ.ಎಂ. ಪ್ರೌಢಶಾಲೆ ಭಕ್ತಕೊಡಿ ಹಾಗೂ ಸರಕಾರಿ ಜೂನಿಯರ್ ಕಾಲೇಜು ಪುತ್ತೂರುನಲ್ಲಿ ಪೂರ್ಣಗೊಳಿಸಿದ ನಂತರ ಸಮಾಜ ಸೇವೆಗೆ ಕಾಲಿರಿಸಿದ್ದರು.



2002ರಲ್ಲಿ ಕರೆಮನೆಯಲ್ಲಿ ನಿತ್ಯೋದಯ ಯುವಕ ಮಂಡಲ ಸ್ಥಾಪಿಸಿ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು 2004ರಲ್ಲಿ ಪುತ್ತೂರು ಯುವಕ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಯಾಗಿ, 2007ರಲ್ಲಿ ವೀರಮಂಗಲ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, 2008ರಲ್ಲಿ ಯುವವಾಹಿನಿ ಪುತ್ತೂರು ಘಟಕದ ಪುನರ್ ಚೇತನದ ರೂವಾರಿಯಾಗಿ ಮತ್ತು ಅಧ್ಯಕ್ಷರಾಗಿ ಬಳಿಕ ಪುತ್ತೂರು ಬಿಲ್ಲವ ಸಂಘದ ಕಾರ್ಯಕಾರಿ ಸಮಿತಿಯಲ್ಲಿ 8 ವರ್ಷ ಸೇವೆ ಸಲ್ಲಿಸಿದ್ದಾರೆ. 2019ರಲ್ಲಿ ಜಾತ್ಯಾತಿತ ಜನತಾ ದಳ ಪುತ್ತೂರು ಇದರ ಪುತ್ತೂರು ನಗರಾಧ್ಯಕ್ಷರಾಗಿ, 2021ರಲ್ಲಿ ಜಾತ್ಯಾತಿತ ಜನತಾ ದಳ ದಕ್ಷಿಣ ಕನ್ನಡ ಇದರ ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
2023ರಲ್ಲಿ ಪುತ್ತೂರಿನಲ್ಲಿ ನೆಮ್ಮದಿ ವೆಲ್ನೇಸ್ ಸೆಂಟರ್ ಸ್ಥಾಪಿಸಿ ಕೇವಲ ನಾಲ್ಕು ವರ್ಷದಲ್ಲಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ 139 ಉಚಿತ ಥೆರಪಿ ಶಿಬಿರಗಳಲ್ಲಿ 55 ಸಾವಿರ ಜನರಿಗೆ 2 ಲಕ್ಷದ 20 ಸಾವಿರ ಥೆರಪಿಯನ್ನು ನೀಡಿ ಅದೆಷ್ಟೋ ಗುಣವಾಗದ ಕಾಯಿಲೆಯನ್ನು ಗುಣ ಪಡಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಸಾಧನೆಗೆ ಭಾರತದ ಕಂಪಾನಿಯೋ ಸಂಸ್ಥೆಯಿಂದ ಸತತವಾಗಿ ಎರಡು ಬಾರಿ ಬಾಹುಬಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 30 ಬಾರಿ ರಕ್ತದಾನ ಮಾಡುವ ಮೂಲಕವೂ ಇವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.










