






ಉಪ್ಪಿನಂಗಡಿ : ಒಂದೆರಡು ದಿನದ ಪರಿಚಯವನ್ನು ಬಳಸಿ ಸ್ನೇಹಾಚಾರದ ಸಲುಗೆಯನ್ನು ನಟಿಸಿ ದೇಗುಲಕ್ಕೆ ಹೋಗಿ ಬರುವೆನೆಂದು ತಿಳಿಸಿ ಬೈಕನ್ನು ಪಡೆದು ಹೋದಾತ ಬೈಕನ್ನು ಹಿಂತಿರುಗಿಸದೆ , ಬೈಕ್ ಬೇಕಾದರೆ ಇಪ್ಪತ್ತು ಸಾವಿರ ಕೊಡಬೇಕೆಂದು ತಾಕೀತು ಮಾಡಿದ ವಿಲಕ್ಷಣ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.


ಇಲ್ಲಿನ ರಾಜಧಾನಿ ಟವರ್ಸ್ ನಲ್ಲಿರುವ ಶ್ರೀ ದೇವಿ ಸ್ಟಿಕ್ಕರ್ ಕಂಟಿಂಗ್ಸ್ ಸೆಂಟರ್ ಮಾಲಕ ಶೀನಪ್ಪ ಎಂಬವರೇ ಸಹಾಯ ಮಾಡಲು ಹೋಗಿ ಮೋಸ ಹೋದವರು. ಅದೇ ಕಟ್ಟಡದಲ್ಲಿನ ಲಾಡ್ಜ್ ನಲ್ಲಿ ಕಳೆದ ಮೂರು ದಿನಗಳಿಂದ ವಾಸ್ತವ ಹೂಡಿದ್ದ , ಲಾಡ್ಜ್ ನಲ್ಲಿ ನೀಡಲಾದ ಆಧಾರ್ ಕಾರ್ಡ್ ನಲ್ಲಿ ಇರುವ ದಾಖಲೆಯಂತೆ ಶ್ಯಾಮ್ ಜಿ ಕೃಷ್ಣನ್ (31) ಎಂಬಾತನೇ ವಂಚನೆಗೈದ ಆರೋಪಿಯಾಗಿದ್ದಾನೆ.



ನೀಡಲಾದ ಆಧಾರ್ ದಾಖಲೆಯನುಸಾರ , ಸಕಲೇಶಪುರ ತಾಲೂಕು ಹಲಸುಲಿಗೆ , ಅಚಂಗಿ ಮನೆ ನಿವಾಸಿ ಗೋಪಾಲಕೃಷ್ಣನ್ ಎಂಬವರ ಮಗನಾಗಿರುವ ಶ್ಯಾಮ್ ಜಿ ಕೃಷ್ಣನ್, ಶೀನಪ್ಪ ರವರ ಸ್ಟಿಕ್ಕರ್ ಕಂಟಿಂಗ್ ಸೆಂಟರ್ ಗೆ ಬಂದು ಆತ್ಮೀಯತೆಯನ್ನು ನಟಿಸುತ್ತಿದ್ದು, ಸೋಮವಾರ ಸಾಯಂಕಾಲದಂದು ಬಂದವನೇ ಮಂಗಳವಾರದಂದು ಉಪ್ಪಿನಂಗಡಿ ದೇವಸ್ಥಾನದಲ್ಲಿ ಪೂಜೆ ಇದೆ ಎಂದು ತಿಳಿಸಿದ್ದ. ಅಂತೆಯೇ ಮಂಗಳವಾರದಂದು ಬೆಳಗ್ಗೆ 9.೦೦ ಗಂಟೆ ಸುಮಾರಿಗೆ ಬಂದಾತ ’ಒಮ್ಮೆ ಬೈಕ್ ಕೊಡಿ. ದೇವಸ್ಥಾನದಲ್ಲಿನ ನನ್ನ ಮನೆಯವರಿಗೆ ಬಟ್ಟೆ ಕೊಟ್ಟು ಎರಡೇ ನಿಮಿಷದಲ್ಲಿ ಹಿಂತಿರುಗುತ್ತೇನೆಂದು’ ತಿಳಿಸಿದ್ದ . ಪ್ರಾರಂಭದಲ್ಲಿ ಬೈಕ್ ನೀಡಲು ಹಿಂದೇಟು ಹಾಕಿದ್ದ ಶೀನಪ್ಪ ರವರನ್ನು ಮಾತಿನ ಮೋಡಿಯಲ್ಲಿ ಮರಳು ಮಾಡಿ ,ಬೈಕ್ ಪಡೆಯಲು ಸಫಲನಾದ. ದಾರಿ ಮಧ್ಯೆ ಪೊಲೀಸರು ಸಿಗಬಹುದೆಂದು ಎಚ್ಚರಿಸಿ ಶೀನಪನವರು ತನ್ನ ಹೆಲ್ಮೆಟ್ ನ್ನು ಕೂಡ ಅವನಿಗಿತ್ತು ಹೋಗಿ ಬರಲು ತಿಳಿಸಿದ್ದರು.
2 ನಿಮಿಷದೊಳಗೆ ಬರುತ್ತೇನೆಂದು ಬೈಕಿನೊಂದಿಗೆ ಹೋದಾತ ಗಂಟೆ ಕಳೆದರೂ ಬಾರದಿದ್ದಾಗ ಕಳವಳಗೊಂಡ ಅವರು ಆತನಿಗೆ ಪೋನಾಯಿಸಿ ವಿಚಾರಿಸಿದರು. ಮೊದ ಮೊದಲು ಬೈಕ್ ನ್ನು ದೇವಸ್ಥಾನದ ಪರಿಸರದಲ್ಲಿ ಇರಿಸಿದ್ದೇನೆಂದು ತಿಳಿಸಿದ ಆತ ಬಳಿಕ ತಾನು ಸಕಲೇಶಪುರದಲ್ಲಿ ಇದ್ದೇನೆಂದೂ , ಬೈಕ್ ಬೇಕಾದರೆ ಇಪ್ಪತ್ತು ಸಾವಿರ ಹಣದೊಂದಿಗೆ ಸಕಲೇಶಪುರಕ್ಕೆ ಬಂದು ಹಣ ಕೊಟ್ಟು ಬೈಕ್ ಕೊಂಡೊಗಬೇಕೆಂದು ತಾಕೀತು ಮಾಡಿದ. ವಂಚನೆಗೀಡಾದೆನೆಂದು ಅರಿತು ಕಂಗಾಲಾದ ಶೀನಪ್ಪ ನವರು ಉಪ್ಪಿನಂಗಡಿ ಪೊಲೀಸ್ ಠಾಣೆಯ ಮೊರೆ ಹೋದರು. ಪೊಲೀಸರು ಬೈಕ್ ಕೊಂಡೊಗಿರುವಾತ ಬೈಕನ್ನು ಹಿಂತಿರುಗಿಸಬಹುದೆಂದು ವಿಶ್ವಾಸ ವ್ಯಕ್ತಪಡಿಸಿ ಕಾಯುವ ನೀತಿ ಅನುಸರಿಸಲು ಮುಂದಾದರಾದರೂ , ರೈತ ಸಂಘದ ಮುಂದಾಳು ರೂಪೇಶ್ ರೈ ಅಲಿಮಾರ ರವರು ಮಧ್ಯೆ ಪ್ರವೇಶಿಸಿದ ಬಳಿಕ ಪ್ರಕರಣ ದಾಖಲಿಸಿಕೊಂಡರು.










