ಕರ್ನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆ : ಸತತ ನಾಲ್ಕನೇ ಬಾರಿಗೆ ಪಿ.ಪಿ.ಹೆಗ್ಡೆ ಗೆಲುವು

0

ಪುತ್ತೂರು:ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನ 23 ಸ್ಥಾನಗಳಿಗೆ ಮುಂದಿನ ಐದು ವರ್ಷಗಳ ಅವಧಿಗೆ ನೂತನ ಸದಸ್ಯರ ಆಯ್ಕೆಗಾಗಿ ಸುಪ್ರೀಂ ಕೋರ್ಟ್‌ನ ಮಾರ್ಗದರ್ಶನದಲ್ಲಿ ನಡೆದ ಚುನಾವಣೆಯಲ್ಲಿ ಪುತ್ತೂರು ಮೂಲದ ಖ್ಯಾತ ವಕೀಲ ಪಿ.ಪಿ.ಹೆಗ್ಡೆ ಅವರು ಸತತ ನಾಲ್ಕನೇ ಅವಧಿಗೆ ಗೆಲುವು ಸಾಧಿಸಿದ್ದಾರೆ.ಪುತ್ತೂರು ಸೇರಿದಂತೆ ರಾಜ್ಯಾದ್ಯಂತ ಎಲ್ಲ ತಾಲೂಕು ಮತ್ತು ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ಮಾ.10ರಂದು ಚುನಾವಣೆ ನಡೆದಿತ್ತು.ಜೂ.16ರಂದು ಮತ ಎಣಿಕೆ ಆರಂಭಗೊಂಡಿದ್ದು ಮೊದಲ ದಿನ ನಾಲ್ಕು ಸ್ಥಾನಗಳಲ್ಲಿ ವಿಜೇತ ಅಭ್ಯರ್ಥಿಗಳ ಆಯ್ಕೆಯನ್ನು ಘೋಷಿಸಲಾಗಿದೆ.ಮೊದಲ ದಿನದ ಮತ ಎಣಿಕೆಯಲ್ಲಿ ಪಿ.ಪಿ.ಹೆಗ್ಡೆ ಮಂಗಳೂರು,ಕಲಮೇಶ್ವರ ತುಕಾರಾಮ್ ಚಿಕ್ಕೋಡಿ,ಶಿವಕುಮಾರ್ ಎನ್.ಬೆಂಗಳೂರು,ಧನಂಜಯ ಸಿಎಂ ಬೆಂಗಳೂರು ಇವರ ಆಯ್ಕೆಯನ್ನು ಘೋಷಿಸಲಾಗಿದೆ.ಉಳಿದ ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ಆಯ್ಕೆ ಘೋಷಣೆಯಾಗಬೇಕಿದೆ.23 ಸ್ಥಾನಗಳಿಗೆ ಒಟ್ಟು 149 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು.


ಸತತ ನಾಲ್ಕನೇ ಬಾರಿಗೆ ಪಿ.ಪಿ.ಹೆಗ್ಡೆಯವರಿಗೆ ಗೆಲುವು:
ಪಿ.ಪಿ.ಹೆಗ್ಡೆಯವರು ಸತತ ನಾಲ್ಕನೇ ಬಾರಿಗೆ ರಾಜ್ಯ ವಕೀಲರ ಪರಿಷತ್‌ಗೆ ಚುನಾಯಿತರಾಗಿದ್ದಾರೆ.2005ರಿಂದ ಸತತವಾಗಿ ಅವರು ರಾಜ್ಯ ವಕೀಲರ ಪರಿಷತ್‌ಗೆ ಆಯ್ಕೆಯಾಗಿದ್ದು ಈ ಹಿಂದೆ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಚುನಾಯಿತ 23 ಸದಸ್ಯರು ಮತ್ತು ಸುಪ್ರೀಂ ಕೋರ್ಟ್ ನಾಮನಿರ್ದೇಶನ ಮಾಡಲಿರುವ ಇಬ್ಬರು ಸೇರಿ ಒಟ್ಟು 25 ಮಂದಿ ಸದಸ್ಯರು ಮುಂದೆ ಸಭೆ ಸೇರಿ ನೂತನ ಅಧ್ಯಕ್ಷ,ಉಪಾಧ್ಯಕ್ಷ ಸಹಿತ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ.


ಸುಳ್ಯ ತಾಲೂಕಿನ ಪಂಜ ಕೂತ್ಕುಂಜದ ಶ್ರೀಧರ ಹೆಗ್ಡೆಯವರ ಪುತ್ರರಾಗಿದ್ದು ಪಿ.ಪಿ.ಹೆಗ್ಡೆ ಎಂದೇ ಚಿರಪರಿಚಿತರಾಗಿರುವ ಪದ್ಮಪ್ರಸಾದ್ ಹೆಗ್ಡೆಯವರು ಎಲ್.ಎಲ್.ಬಿ ಮತ್ತು ಎಲ್.ಎಲ್.ಎಮ್ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದಿದ್ದರು.ಅತೀ ಕಿರಿಯ ವಯಸ್ಸಿನಲ್ಲಿಯೇ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಅನುಭವವುಳ್ಳ ಅವರು ಮಂಗಳೂರು,ಬೆಂಗಳೂರು ಮತ್ತು ದೆಹಲಿಯಲ್ಲಿ ಕಛೇರಿ ಹೊಂದಿದ್ದಾರೆ.ಸುಪ್ರೀಂಕೋರ್ಟ್ ವಕೀಲರಾಗಿಯೂ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ.ಕಳೆದ ಮೂರು ಅವಧಿಯಲ್ಲಿ ಪಿ.ಪಿ. ಹೆಗ್ಡೆಯವರು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ಸಕ್ರಿಯ ಸದಸ್ಯರಾಗಿದ್ದಾರೆ.ಹಲವಾರು ಕ್ಲಿಷ್ಟಕರ ಕೇಸುಗಳಲ್ಲಿ ಸಮರ್ಥವಾಗಿ ವಾದಿಸಿ ಗಮನ ಸೆಳೆದಿರುವ ಪಿ.ಪಿ.ಹೆಗ್ಡೆರವರು ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಅವರ ಪುತ್ರನ ಭ್ರಷ್ಟಾಚಾರದ ವಿರುದ್ಧ ಹೋರಾಟ ರೂಪಿಸಿ ಯಶಸ್ವಿಯಾಗಿದ್ದರು.ಈ ಹೋರಾಟಕ್ಕೆ ನ್ಯಾಯಮೂರ್ತಿಗಳಾದ ಶಿವರಾಜ್ ಪಾಟೀಲ್ ಮತ್ತು ಸಂತೋಷ್ ಹೆಗ್ಡೆಯವರು ವಕೀಲರೊಂದಿಗೆ ಕೈ ಜೋಡಿಸಿದ್ದರು.


ಪಿ.ಪಿ.ಹೆಗ್ಡೆ ಅವರು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ, ನಕಲಿ ವಕೀಲರುಗಳನ್ನು ಪತ್ತೆ ಹಚ್ಚಿ ಅವರನ್ನು ಅಮಾನತುಗೊಳಿಸಿದ್ದರಲ್ಲದೆ ವಕೀಲ ವೃತ್ತಿಯಲ್ಲಿ ಇರುವವರು ಅನ್ಯ ವೃತ್ತಿ ಮಾಡಬಾರದು ಎಂಬ ನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದರು.ಪ್ರಚಲಿತ ಕಾನೂನು ಮತ್ತು ಸಂವಿಧಾನದ ಕುರಿತು ಆಳವಾದ ಜ್ಞಾನ ಹೊಂದಿರುವ ಪಿ.ಪಿ. ಹೆಗ್ಡೆಯವರು ಬರಹಗಳ ಮೂಲಕವೂ ಗಮನ ಸೆಳೆದಿದ್ದಾರೆ.ಅಲ್ಲದೆ, ಮಹಾವೀರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮೂಲಕ ಸಹಕಾರಿ ಕ್ಷೇತ್ರವೂ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ.ಸುಳ್ಯದ ಪಂಜ ಕೂತ್ಕುಂಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದ ಪಿ.ಪಿ.ಹೆಗ್ಡೆಯವರು ಬಳಿಕ ಮೂಡಬಿದ್ರೆ ಜೈನ್ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ್ದರು.ನಂತರ ಬೆಳ್ತಂಗಡಿ ತಾಲೂಕಿನ ಉಜಿರೆ ಸಿದ್ದವನ ಗುರುಕುಲದ ವಿದ್ಯಾರ್ಥಿಯಾಗಿದ್ದ ಇವರು ಉಜಿರೆ ಎಸ್.ಡಿ.ಎಂ. ಕಾಲೇಜು ಮತ್ತು ಮಂಗಳೂರು ಎಸ್.ಡಿ.ಎಂ. ಲಾ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ, ಉಡುಪಿ ಮಠ, ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನ, ಸುಬ್ರಹ್ಮಣ್ಯ ಮಠ ಸಹಿತ ಹಲವು ಧಾರ್ಮಿಕ, ಶೈಕ್ಷಣಿಕ, ಸಹಕಾರಿ ಸಂಘಗಳ ಕಾನೂನು ಸಲಹೆಗಾರರಾಗಿಯೂ ಪಿ.ಪಿ. ಹೆಗ್ಡೆ ಕಾರ್ಯ ನಿರ್ವಹಿಸುತ್ತಿದ್ದಾರೆ.


ಮಾ.11ರಂದು ಚುನಾವಣೆ ನಡೆದಿತ್ತು:
ವಕೀಲರ ಪರಿಷತ್ ಚುನಾವಣೆ ಮಾ.11ರಂದು ರಾಜ್ಯದ ಎಲ್ಲ ತಾಲೂಕು ಮತ್ತು ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ನಡೆದಿತ್ತು.ಪುತ್ತೂರು,ಕಡಬ ತಾಲೂಕಿಗೆ ಸಂಬಂಧಿಸಿ ಬನ್ನೂರು ಆನೆಮಜಲು ನೂತನ ನ್ಯಾಯಾಲಯ ಸಂಕೀರ್ಣದಲ್ಲಿರುವ ಬಾರ್ ಎಸೋಸಿಯೇಷನ್‌ನಲ್ಲಿ ಶಾಂತಿಯುತ ಚುನಾವಣೆ ನಡೆದಿತ್ತು.ತಾಲೂಕಿನಲ್ಲಿ ಒಟ್ಟು 356 ವಕೀಲ ಮತದಾರರ ಪೈಕಿ 277 ಮಂದಿ ಮತ ಚಲಾಯಿಸಿದ್ದು ಶೇ.77.8 ಮತದಾನವಾಗಿದೆ.ಸುಳ್ಯದಲ್ಲಿ ಒಟ್ಟು 133 ಮತದಾರರಲ್ಲಿ 102 ಮಂದಿ ಮತಚಲಾಯಿಸಿದ್ದು ಶೇ.76.69 ಮತದಾನವಾಗಿತ್ತು.


23 ಸ್ಥಾನಗಳಿಗೆ 149 ಅಭ್ಯರ್ಥಿಗಳು:
ಪುತ್ತೂರು ಮೂಲದವರಾಗಿದ್ದು ಈ ಹಿಂದೆ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿರುವ ಪಿ.ಪಿ.ಹೆಗ್ಡೆ,ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಹೈಕೋರ್ಟ್ ವಕೀಲ ಸುಭಾಸ್ ಕೌಡಿಚ್ಚಾರ್, ಬೆಳ್ಳಾರೆಯ ಜಯಪ್ರಕಾಶ್ ಶೆಟ್ಟಿ,ಮಂಗಳೂರುನ ಸಂಧ್ಯಾ ಪ್ರಭು ಸೇರಿದಂತೆ 23 ಸ್ಥಾನಗಳಿಗೆ ಒಟ್ಟು 149 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು.ಈ ಪೈಕಿ 42 ಮಂದಿ ಮಹಿಳೆಯರು.ಪ್ರತಿ ಮತದಾರ 23 ಮಂದಿ ಅಭ್ಯರ್ಥಿಗಳಿಗೆ ಮತ ಚಲಾವಣೆಗೆ ಅವಕಾಶವಿತ್ತು.23 ಸ್ಥಾನಗಳ ಪೈಕಿ ಇದೇ ಮೊದಲ ಬಾರಿಗೆ 5 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ.ಒಂದು ಸ್ಥಾನಕ್ಕೆ ಪದನಿಮಿತ್ತ ಸದಸ್ಯರಾಗಿ ಅಡ್ವೊಕೇಟ್ ಜನರಲ್ ಅವರು ಇರುತ್ತಾರೆ.ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಚುನಾವಣೆ ಪಾರದರ್ಶಕವಾಗಿ ನಡೆದಿದೆ.

LEAVE A REPLY

Please enter your comment!
Please enter your name here