ಸರ್ಕಾರಿ ಶಾಲೆಗಳ ವಿಲೀನ..? ಕೆಪಿಎಸ್ ಅಡಿಯಲ್ಲಿ ಹೊಸ ಶಿಕ್ಷಣ ಮಾದರಿ- ಶಿಕ್ಷಣ ಇಲಾಖೆಯ ಮಹತ್ವದ ನಿರ್ಧಾರ…! ಬಂದ್ ಆಗಲಿದೆಯಾ ನೂರಾರು ಶಾಲೆಗಳು…!?

0


@ ಸಿಶೇ ಕಜೆಮಾರ್

ಪುತ್ತೂರು : ರಾಜ್ಯ ಸರ್ಕಾರಿ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಮಹತ್ವದ ಹೆಜ್ಜೆಯಿಟ್ಟಿದ್ದು, ಅಲ್ಪ ವಿದ್ಯಾರ್ಥಿಗಳ ಸಂಖ್ಯೆಯಿರುವ ಸರ್ಕಾರಿ ಶಾಲೆಗಳನ್ನು ಸಮೀಪದ ಕರ್ನಾಟಕ ಪಬ್ಲಿಕ್ ಶಾಲೆಗಳ (ಕೆಪಿಎಸ್) ಜೊತೆಗೆ ವಿಲೀನಗೊಳಿಸಲು ( ಮರ್ಜಿ) ಮುಂದಾಗಿದೆ. ಈಗಾಗಲೇ ಸರಕಾರ ಈ ಬಗ್ಗೆ ಚಿಂತನೆ ನಡೆಸಿದ್ದು ಮುಂದಿನ ಶೈಕ್ಷಣಿಕ ವರ್ಷದಿಂದ ವಿಲೀನಗೊಳಿಸುವ ಪ್ರಕ್ರಿಯೆ ಆರಂಭವಾಗಲಿದೆ ಎನ್ನಲಾಗಿದೆ. ಅಲ್ಪ ವಿದ್ಯಾರ್ಥಿಗಳಿರುವ ಶಾಲೆಗಳನ್ನು ಕೆಪಿಎಸ್‌ನೊಂದಿಗೆ ವಿಲೀನಗೊಳಿಸುವುದರಿಂದ ಗ್ರಾಮೀಣ ಭಾಗದ ನೂರಾರು ಶಾಲೆಗಳಿಗೆ ಬೀಗ ಬೀಳುವ ಸಾಧ್ಯತೆ ಹೆಚ್ಚಾಗಿದೆ.


ಏನಿದು ಯೋಜನೆ?
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿರುವ ಸರ್ಕಾರಿ ಶಾಲೆಗಳನ್ನು, ಆಯಾ ವ್ಯಾಪ್ತಿಯಲ್ಲಿರುವ ಸುಸಜ್ಜಿತ ಕೆಪಿಎಸ್ ಶಾಲೆಗಳೊಂದಿಗೆ ವಿಲೀನಗೊಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಕೆಪಿಎಸ್ ಶಾಲೆಗಳಲ್ಲಿ ಲಭ್ಯವಿರುವ ಅತ್ಯುತ್ತಮ ಮೂಲಸೌಕರ್ಯ, ಪ್ರಯೋಗಾಲಯಗಳು ಮತ್ತು ಹೆಚ್ಚಿನ ಸಂಖ್ಯೆಯ ಶಿಕ್ಷಕರ ಸಂಪನ್ಮೂಲವನ್ನು ಸಣ್ಣ ಶಾಲೆಗಳ ಮಕ್ಕಳಿಗೆ ತಲುಪಿಸುವುದು ಸರ್ಕಾರದ ಗುರಿಯಾಗಿದೆ. ವಿಲೀನ ಪ್ರಕ್ರಿಯೆಯ ಪ್ರಮುಖ ಅಂಶಗಳಲ್ಲಿ ಮುಖ್ಯವಾಗಿ ಗುಣಮಟ್ಟದ ಶಿಕ್ಷಣ ನೀಡುವುದು ಆಗಿದೆ. ವಿಲೀನಗೊಳ್ಳುವ ಶಾಲೆಗಳ ಮಕ್ಕಳಿಗೆ ಕೆಪಿಎಸ್‌ನ ಸುಸಜ್ಜಿತ ಗ್ರಂಥಾಲಯ, ಕ್ರೀಡಾ ಸೌಲಭ್ಯ ಮತ್ತು ಡಿಜಿಟಲ್ ತರಗತಿಗಳ ಸೌಲಭ್ಯ ದೊರೆಯಲಿದೆ.ಸಣ್ಣ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳು ಮತ್ತು ಸೀಮಿತ ಸೌಲಭ್ಯಗಳಿಂದ ಆಗುವ ಸಮಸ್ಯೆಯನ್ನು ತಪ್ಪಿಸಿ, ಸುಸಜ್ಜಿತ ಶಾಲೆಗಳಲ್ಲಿ ಉತ್ತಮ ಕಲಿಕಾ ವಾತಾವರಣ ಕಲ್ಪಿಸಲಾಗುವುದು. ಶಾಲೆ ವಿಲೀನದಿಂದ ದೂರದ ಶಾಲೆಗಳಿಗೆ ಹೋಗಬೇಕಾದ ಮಕ್ಕಳಿಗೆ, ಸರ್ಕಾರದಿಂದ ಉಚಿತ ಸಾರಿಗೆ ಸೌಲಭ್ಯ ಅಥವಾ ಸಾರಿಗೆ ಭತ್ಯೆಯನ್ನು ಒದಗಿಸುವ ಕುರಿತು ಇಲಾಖೆ ಪರಿಶೀಲನೆ ನಡೆಸುತ್ತಿದೆ.


ಪೋಷಕರು ಮತ್ತು ಸಂಘಟನೆಗಳ ಆತಂಕ:
ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುವವರ ಜೊತೆಗೆ, ದೂರದ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವುದು ಪೋಷಕರಿಗೆ ಸವಾಲಾಗಬಹುದು ಎಂಬ ಆತಂಕವೂ ವ್ಯಕ್ತವಾಗಿದೆ. ಸಣ್ಣ ಗ್ರಾಮಗಳಲ್ಲಿನ ಶಾಲೆಗಳು ಮುಚ್ಚಲ್ಪಟ್ಟರೆ, ಅಲ್ಲಿನ ಸ್ಥಳೀಯ ಸಮುದಾಯದ ಮೇಲಾಗುವ ಪ್ರಭಾವದ ಕುರಿತು ಕೆಲ ಶಿಕ್ಷಣ ತಜ್ಞರು ಮತ್ತು ಸಂಘಟನೆಗಳು ಚರ್ಚೆಗಳನ್ನು ಆರಂಭಿಸಿವೆ.


ಕೆಪಿಎಸ್ ಪರಿಕಲ್ಪನೆ
ರಾಜ್ಯದಲ್ಲಿ ಪ್ರಸ್ತುತ 19,603 ಪ್ರಾಥಮಿಕ, 21,676 ಹಿರಿಯ ಪ್ರಾಥಮಿಕ, 4,895 ಪ್ರೌಢ ಶಾಲೆಗಳು ಮತ್ತು 1,319 ಪಿ ಯು ಕಾಲೇಜುಗಳು ಇವೆ. ಈ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರತೀ ವರ್ಷ ಕುಸಿಯುತ್ತಲೇ ಇದೆ. 2015-16 ರಲ್ಲಿ ಇದ್ದ 47.1 ಲಕ್ಷ ವಿದ್ಯಾರ್ಥಿಗಳ ದಾಖಲಾತಿಯು 2025-26 ರಲ್ಲಿ 38.2 ಲಕ್ಷಕ್ಕೆ ಕುಸಿದಿದೆ. ಇದೇ ಅವಧಿಯಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ 36.3 ಲಕ್ಷಗಳಿಂದ 47 ಲಕ್ಷಗಳಿಗೆ ಏರಿಕೆಯಾಗಿದೆ. ಇದಕ್ಕೆ ಪೂರಕವಾಗಿ 2025-26 ನೇ ಸಾಲಿನಲ್ಲಿ 50 ಮತ್ತು ಅದಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳು ಇರುವ ಸರಕಾರಿ ಶಾಲೆಗಳ ಸಂಖ್ಯೆ 25,683ಕ್ಕೆ ಏರಿಕೆ ಆಗಿರುವುದು ಆತಂಕದ ವಿಚಾರವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಈಗಾಗಲೇ ಆರಂಭಿಸಲಾಗಿರುವ ಕೆಪಿಎಸ್ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಗಣನೀಯವಾಗಿ ಚೇತರಿಸಿಕೊಂಡಿದೆ. ಜೊತೆಗೆ ಕಲಿಕೆಯ ಗುಣಮಟ್ಟ ಕೂಡ ಹೆಚ್ಚಿರುವುದು 10ನೇ ತರಗತಿಯ ಫಲಿತಾಂಶದಿAದ ಸಾಬೀತಾಗಿದೆ.



ಶಿಕ್ಷಣ ಇಲಾಖೆಯ ಸ್ಪಷ್ಟನೆ
ಈ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು, ಇದು ಶಾಲೆಗಳನ್ನು ಮುಚ್ಚುವ ಪ್ರಕ್ರಿಯೆಯಲ್ಲ, ಬದಲಾಗಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಪ್ರಕ್ರಿಯೆಯಾಗಿದೆ. ಮಕ್ಕಳಿಗೆ ಎಲ್ಲಾ ಮೂಲಭೂತ ಸೌಕರ್ಯಗಳಿರುವ ಒಂದೇ ಸೂರಿನಡಿ ಶಿಕ್ಷಣ ನೀಡುವ ಮೂಲಕ ಅವರ ಕಲಿಕಾ ಸಾಮರ್ಥ್ಯವನ್ನು ವೃದ್ಧಿಸುವುದು ಇದರ ಮೂಲ ಉದ್ದೇಶವಾಗಿದೆ. ಮುಂದಿನ ಶೈಕ್ಷಣಿಕ ಸಾಲಿನಿಂದ ಈ ಪ್ರಕ್ರಿಯೆಯನ್ನು ಹಂತ ಹಂತವಾಗಿ ಜಾರಿಗೆ ತರಲು ಇಲಾಖೆ ಸಿದ್ಧತೆ ನಡೆಸುತ್ತಿದ್ದು, ಈ ಸಂಬಂಧ ಹೆಚ್ಚಿನ ಮಾರ್ಗಸೂಚಿಗಳನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ತಿಳಿದುಬಂದಿದೆ.

ನೂರಾರು ಶಾಲೆಗಳು ಬಾಗಿಲು ಮುಚ್ಚಲಿವೆ…!?
ಸರಕಾರದ ಈ ನೀತಿಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿರುವ ನೂರಾರು ಸರಕಾರಿ ಶಾಲೆಗಳು ಬಾಗಿಲು ಮುಚ್ಚಲಿವೆ. ಕೆಪಿಎಸ್ ಶಾಲೆಗಳಿಗೆ ಸುಮಾರು ೬ ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಶಾಲೆಗಳನ್ನು ಕೆಪಿಎಸ್‌ನೊಂದಿಗೆ ವಿಲೀನ ಮಾಡುವುದರಿಂದ ಈ ಶಾಲೆಗಳಿಗೆ ಬೀಗ ಬೀಳಲಿದೆ. ಈ ಶೈಕ್ಷಣಿಕ ವರ್ಷದಲ್ಲೂ ಕೂಡ ಬಹುತೇಕ ಸರಕಾರಿ ಶಾಲೆಗಳಲ್ಲಿ ಒಂದನೇ ತರಗತಿಗೆ ಕಡಿಮೆ ದಾಖಲಾತಿ ಕಂಡು ಬಂದಿದೆ. ಇನ್ನು ಕೆಪಿಎಸ್‌ನೊಂದಿಗೆ ಮರ್ಜಿ ಮಾಡುವುದರಿಂದ ಶತಮಾನ ಕಂಡ ಶಾಲೆಗಳು ಕೂಡ ಬಂದ್ ಆಗಲಿವೆ.

1 ರಿಂದ 6 ಕಿಲೋ ಮೀಟರ್ ವ್ಯಾಪ್ತಿ
ಶಿಕ್ಷಣ ಇಲಾಖೆಯ ಆದೇಶಗಳು ಮತ್ತು ವರದಿಗಳ ಪ್ರಕಾರ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳ ಜೊತೆ ವಿಲೀನಗೊಳಿಸುವ ಪ್ರಕ್ರಿಯೆಯಲ್ಲಿ 1 ರಿಂದ 6 ಕಿಲೋ ಮೀಟರ್ ವ್ಯಾಪ್ತಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ.ಸಾಮಾನ್ಯವಾಗಿ ಕೆಪಿಎಸ್ ಶಾಲೆಗಳ ಸುತ್ತಮುತ್ತಲಿನ 1 ರಿಂದ 5 ಕಿ.ಮೀ ಅಥವಾ ಕೆಲವೊಮ್ಮೆ 6 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಕಡಿಮೆ ದಾಖಲಾತಿ ಹೊಂದಿರುವ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಪ್ರಕ್ರಿಯೆಯನ್ನು ಇಲಾಖೆ ಕೈಗೊಂಡಿದೆ.

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲಿದೆ
ಕಡಿಮೆ ದಾಖಲಾತಿ ಇರುವ ಸರಕಾರಿ ಶಾಲೆಗಳನ್ನು ಕೆಪಿಎಸ್‌ನೊಂದಿಗೆ ವಿಲೀನ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವುದರಿಂದ ಸಂಶಯವಿಲ್ಲ ಏಕೆಂದರೆ ಈಗಾಗಲೇ ಕಡಿಮೆ ಮಕ್ಕಳಿರುವ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಕೂಡ ಇದ್ದು ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಶಿಕ್ಷಕರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆಯಲ್ಲಿ ಕಛೇರಿ ಕೆಲಸ ಇನ್ನೊಂದು ಕಡೆಯಲ್ಲಿ ಪಾಠದ ಬೆನ್ನತ್ತಿ ಹೋಗಬೇಕಾಗಿದೆ. ಇಂತಹ ಶಾಲೆಗಳನ್ನು ಕೆಪಿಎಸ್‌ನೊಂದಿಗೆ ಮರ್ಜಿ ಮಾಡಿದರೆ ಶಿಕ್ಷಕರ ಕೊರತೆ ಕೂಡ ನೀಗುತ್ತದೆ ಹಾಗೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೂಡ ದೊರೆತಂತಾಗುತ್ತದೆ.

  • ಈಗಾಗಲೇ ಇರುವ ಕೆಪಿಎಸ್ ಶಾಲೆಗಳು ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು 2. ಕರ್ನಾಟಕ ಪಬ್ಲಿಕ್ ಸ್ಕೂಲ್ ಕುಂಬ್ರ. ಈ ವರ್ಷ ಹೊಸತಾಗಿ ತಾಲೂಕಿಗೆ ಮಂಜೂರು ಆಗಿರುವ ಕೆಪಿಎಸ್ ಸ್ಕೂಲ್‌ಗಳು 1. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಪ್ಪಳಿಗೆ 2. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಟಣಿಗೆ ಮುಡ್ನೂರು 3. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಿಂಬಾಡಿ.

  • “ಅತ್ಯಂತ ಕಡಿಮೆ ದಾಖಲಾತಿ ಇರುವ ಶಾಲೆಗಳನ್ನು ಕೆಪಿಎಸ್‌ನೊಂದಿಗೆ ವಿಲೀನ ಮಾಡುವ ಬಗ್ಗೆ ಈ ಹಿಂದೆಯೂ ಸರಕಾರ ಚಿಂತನೆ ಮಾಡಿತ್ತು ಆದರೆ ಇದುವರೆಗೆ ಸರಕಾರದಿಂದ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕೆಪಿಎಸ್ ಮಾದರಿಯಲ್ಲಿ ಶಾಲೆಗಳ ಬಲವರ್ಧನೆಗೆ ಹೆಚ್ಚಿನ ಒತ್ತನ್ನು ಸರಕಾರ ನೀಡುತ್ತಿದೆ.”
    ಮೋನಪ್ಪ ಬಿ. ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪುತ್ತೂರು

LEAVE A REPLY

Please enter your comment!
Please enter your name here