ಬೂಡಿಯಾರ್ ಪುರುಷೋತ್ತಮ ರೈಯವರಿಂದ ಕುರಿಯ ಹಾಗೂ ಇಡಬೆಟ್ಟು ಶಾಲೆಗೆ ಉಚಿತ ಪುಸ್ತಕ ವಿತರಣೆ

0

ಪುತ್ತೂರು: ಮಕ್ಕಳ ವಿದ್ಯಾಭ್ಯಾಸಕ್ಕೆ ನಾವು ಪ್ರೋತ್ಸಾಹ ಕೊಡಬೇಕು, ಸರಕಾರಿ ಶಾಲೆಗಳು ಮುಚ್ಚಲ್ಪಡುವ ಇಂದಿನ ಪರಿಸ್ಥಿತಿಯಲ್ಲಿ ಸರಕಾರಿ ಶಾಲೆಗಳಲ್ಲೂ ಇಂಗ್ಲೀಷ್ ಶಿಕ್ಷಣ ಕೊಡುವುದರ ಜೊತೆಗೆ ಯಾವುದೇ ಶಾಲೆಗಳು ಮುಚ್ಚದಂತೆ ಸಂಬಂಧಪಟ್ಟವರು ಅಗತ್ಯ ಕ್ರಮ ಕೈಗೊಳ್ಳಬೇಕು, ಸರಕಾರಿ ಶಾಲೆಗಳು ಮುಚ್ಚಿದರೆ ಬಡವರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಲು ಬಹಳ ಸಂಕಷ್ಟಪಡಬೇಕಾದ ಸನ್ನಿವೇಶ ನಿರ್ಮಾಣವಾಗಬಹುದು ಎಂದು ಆರ್ಯಾಪು ಗ್ರಾ.ಪಂ ಮಾಜಿ ಸದಸ್ಯ, ಭೂನ್ಯಾಯ ಮಂಡಳಿ ಸದಸ್ಯರೂ ಆಗಿರುವ ಬೂಡಿಯಾರ್ ಪುರುಷೋತ್ತಮ ರೈ ಹೇಳಿದರು.
ಜೂ.17ರಂದು ಕುರಿಯ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿ ಅವರು ಮಾತನಾಡಿದರು.


ನಾನು ಅಗರ್ಭ ಶ್ರೀಮಂತನೇನಲ್ಲ, ದೇವರು ಕೊಟ್ಟ ಸಂಪತ್ತಿನಿಂದ ಕಿಂಚಿತ್‌ನ್ನು ಸಮಾಜಕ್ಕೂ ನೀಡುತ್ತಿದ್ದೇನೆ, ಇಲ್ಲಿನ ಶಾಲಾ ಮಕ್ಕಳು ಮಧ್ಯಮ ವರ್ಗದವರು ಮತ್ತು ಬಡವರಾಗಿದ್ದು ನನ್ನಿಂದಾಗಿ ಈ ಮಕ್ಕಳ ಪೋಷಕರಿಗೆ ಕಿಂಚಿತ್ತಾದರೂ ಸಹಾಯವಾಗಲಿ ಎಂಬುವುದು ನನ್ನ ಉದ್ದೇಶ, ಕಳೆದ ಕೆಲವು ವರ್ಷಗಳಿಂದ ಈ ಶಾಲೆಗೆ ನಾನು ನೋಟ್ ಪುಸ್ತಕ ವಿತರಿಸುತ್ತಿದ್ದು ಮುಂದಿನ ವರ್ಷವೂ ವಿತರಿಸುತ್ತೇನೆ ಎಂದು ಭರವಸೆ ನೀಡಿದರು.

ಪತ್ರಕರ್ತ ಯೂಸುಫ್ ರೆಂಜಲಾಡಿ ಮಾತನಾಡಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಬೂಡಿಯಾರ್ ಪುರುಷೋತ್ತಮ ರೈಯವರು ಸರಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ನೀಡುವ ಮೂಲಕ ಸರಕಾರಿ ಶಾಲೆಗಳ ಉಳಿವಿಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ, ಸಮಾಜದಲ್ಲಿರುವ ಇನ್ನಷ್ಟು ಉದ್ಯಮಿಗಳು, ಸ್ಥಿತಿವಂತರು ಈ ರೀತಿಯ ಮನಸ್ಸು ಮಾಡುವ ಮೂಲಕ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಬೇಕಾದ ಅವಶ್ಯಕತೆಯಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕುರಿಯ ಸ.ಹಿ.ಪ್ರಾ.ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಮಾತನಾಡಿ ಕೆಲವು ವರ್ಷಗಳಿಂದ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಬೂಡಿಯಾರ್ ಪುರುಷೋತ್ತಮ ರೈಯವರು ಬರೆಯುವ ಪುಸ್ತವನ್ನು ಉಚಿತವಾಗಿ ನೀಡುತ್ತಿದ್ದು ಇದು ಬಡ ವಿದ್ಯಾರ್ಥಿಗಳಿಗಂತೂ ಬಹಳಷ್ಟ ಉಪಕಾರಿಯಾಗಿದೆ, ಕುರಿಯ ಶಾಲೆಯ ಅಭಿವೃದ್ಧಿ ಬಗ್ಗೆ ಸದಾ ಕಾಳಜಿ ಹೊಂದಿರುವ ಬೂಡಿಯಾರ್ ಪುರುಷೋತ್ತಮ ರೈಯವರಂತಹ ಹೃದಯ ಶ್ರೀಮಂತಿಕೆ ಇರುವ ವ್ಯಕ್ತಿಗಳು ಈ ಸಮಾಜದ ಆಸ್ತಿಯಾಗಿದ್ದಾರೆ ಎಂದು ಹೇಳಿದರು.

ಸ್ವಾಗತಿಸಿದ ಕುರಿಯ ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ಫೆಲ್ಸಿಟಾ ಡಿ ಕುನ್ಹಾ ಮಾತನಾಡಿ ನಮ್ಮ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ನೀಡಿರುವ ಬೂಡಿಯಾರ್ ಪುರುಷೋತ್ತಮ ರೈ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಶಿಕ್ಷಕಿ ಕಾವ್ಯ ವಂದಿಸಿದರು. ಶಿಕ್ಷಕಿ ಕವಿತಾ ಪಿ.ಎನ್ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕಿ ನಳಿನಿ, ಗೌರವ ಶಿಕ್ಷಕಿ ಯಜ್ಞಾ ಸಹಕರಿಸಿದರು.

22 ವರ್ಷಗಳಿಂದ ಇಡಬೆಟ್ಟು ಶಾಲೆಗೆ ಪುಸ್ತಕ ವಿತರಣೆ:
ಜೂ.17ರಂದು ಇಡಬೆಟ್ಟು ಸ.ಹಿ.ಪ್ರಾ.ಶಾಲೆಯಲ್ಲಿ ಬೂಡಿಯಾರ್ ಪುರುಷೋತ್ತಮ ರೈಯವರು ಮಕ್ಕಳಿಗೆ ಉಚಿತ ಬರೆಯುವ ಪುಸ್ತಕ ವಿತರಿಸಿದ್ದು ಆ ಮೂಲಕ ಸತತ ೨೨ನೇ ವರ್ಷ ಇಡಬೆಟ್ಟು ಶಾಲೆಗೆ ಪುಸ್ತಕ ವಿತರಿಸಿದರು.


ನನ್ನಿಂದ ಪುಸ್ತಕ ಸ್ವೀಕರಿಸಿದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಮೂಡಿ ಬರಬೇಕು ಮತ್ತು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆ ಲಭಿಸಬೇಕು, ಅದುವೇ ನನಗೆ ನಿಜವಾದ ಖುಷಿ ಎಂದು ಬೂಡಿಯಾರ್ ಪುರುಷೋತ್ತಮ ರೈ ಹೇಳಿದರು.


ಇಡಬೆಟ್ಟು ಸ.ಹಿ.ಪ್ರಾ.ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ್ ಮಾತನಾಡಿ ಬೂಡಿಯಾರ್ ಪುರುಷೋತ್ತಮ ರೈಯವರು ನಮ್ಮ ಶಾಲೆಗೆ ಪ್ರತೀ ವರ್ಷ ಬರೆಯುವ ಪುಸ್ತಕ ನೀಡುತ್ತಿದ್ದು ನಮ್ಮ ಶಾಲೆಗೆ ಏನೇ ಅಗತ್ಯ ಬಂದರೂ ಅದನ್ನು ಪೂರೈಸಲು ಅವರು ಸಿದ್ದರಿದ್ದಾರೆ, ಅಂತಹ ಮನಸ್ಸಿನ ವ್ಯಕ್ತಿಯೊಬ್ಬರು ಊರಲ್ಲಿದ್ದರೆ ಅದಕ್ಕಿಂತ ದೊಡ್ಡ ಆಸ್ತಿ ಇನ್ನೊಂದಿಲ್ಲ ಎಂದು ಹೇಳಿದರು.
ಶಾಲಾ ಮುಖ್ಯ ಶಿಕ್ಷಕಿ ಆಶಾ ಮಾತನಾಡಿ ಶಾಲಾ ಮಕ್ಕಳ ಶ್ರೇಯೋಭಿವೃದ್ಧಿ ಬಯಸಿ ಶಾಲೆಗೆ ಉಚಿತ ನೋಟ್ ಪುಸ್ತಕ ನೀಡಿರುವ ಬೂಡಿಯಾರ್ ಪುರುಷೋತ್ತಮ ರೈಯವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.


ಬಳಿಕ ಶಾಲೆಯ ವತಿಯಿಂದ ಬೂಡಿಯಾರ್ ಪುರುಷೋತ್ತಮ ರೈಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇಡಬೆಟ್ಟು ಸ.ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷೆ ನಳಿನಿ, ನಿಕಟಪೂರ್ವ ಅಧ್ಯಕ್ಷ ಅದ್ರಾಮ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನೋದ್, ಕುರಿಯ ಪ್ರಾ.ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಪತ್ರಕರ್ತ ಯೂಸುಫ್ ರೆಂಜಲಾಡಿ, ಇಡಬೆಟ್ಟು ಶಾಲಾ ಎಸ್‌ಡಿಎಂಸಿ ಸದಸ್ಯ ಲಕ್ಷ್ಮಣ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಆಶಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಮಂಜುಳಾ ವಂದಿಸಿದರು. ಶಿಕ್ಷಕಿ ಪದ್ಮಶ್ರೀ ಸಹಕರಿಸಿದರು.

LEAVE A REPLY

Please enter your comment!
Please enter your name here