ನಾಡಹಬ್ಬ ದಸರಾದಲ್ಲಿ ಈ ಬಾರಿ ಕಂಬಳ

0

ಮೈಸೂರು ಡಿ.ಸಿ.ನೇತೃತ್ವದಲ್ಲಿ ಸಭೆ: ಮುರಳೀಧರ ರೈ ಮಠಂತಬೆಟ್ಟು ಭಾಗಿ

ಪುತ್ತೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಕರಾವಳಿಯ ಕಂಬಳ ಕ್ರೀಡೆಯನ್ನು ವಿಶೇಷ ಆಕರ್ಷಣೆಯಾಗಿ ಆಯೋಜಿಸಲಾಗುವುದು ಎಂದು ಮೈಸೂರು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.


ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜೂ.20ರಂದು ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಳೆದ ವರ್ಷವೇ ಕಂಬಳ ಆಯೋಜಿಸಲು ಉದ್ದೇಶಿಸಲಾಗಿತ್ತು. ಆದರೆ ಸರಿಯಾದ ಸ್ಥಳ ದೊರಕದಿದ್ದರಿಂದ ಸಾಧ್ಯವಾಗಲಿಲ್ಲ ಎಂದು ಹೇಳಿದರು.


ಈ ಬಾರಿ ಕಂಬಳ ಆಯೋಜನೆಗಾಗಿ 3 ತಿಂಗಳಿಗೆ ಮುಂಚಿತವಾಗಿಯೇ ತಯಾರಿ ಆರಂಭಿಸಲಾಗಿದೆ. ವಿಜಯನಗರ ಮೊದಲನೇ ಹಂತ, ವಿಜಯನಗರ 4ನೇ ಹಂತ ಹಾಗೂ ಸಾತಗಳ್ಳಿಯ ವರ್ತುಲ ರಸ್ತೆಯ ಬಳಿ ಸೇರಿದಂತೆ ಮೂರು ಸ್ಥಳ ಗುರುತಿಸಲಾಗಿದೆ. ಇದರಲ್ಲಿ ಒಂದು ಸ್ಥಳವನ್ನು ಆಯ್ಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.


ಕಂಬಳ ಆಯೋಜನೆಗೆ ಕನಿಷ್ಠ ಏಳು ಎಕರೆ ಜಾಗ ಬೇಕಿದೆ. ಪಾರ್ಕಿಂಗ್ ವ್ಯವಸ್ಥೆಗೆ, ವೀಕ್ಷಕರ ಗ್ಯಾಲರಿ ನಿರ್ಮಾಣಕ್ಕೆ, ಕೋಣಗಳು ಹಾಗೂ ಆಯೋಜಕರು ಉಳಿದುಕೊಳ್ಳಲು ಬೇಕಾದಷ್ಟು ಸ್ಥಳ ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸಿ ನಿರ್ಧರಿಸಲಾಗುವುದು ಎಂದು ಹೇಳಿದ ಅವರು ಕಂಬಳ ಕಾರ್ಯಕ್ರಮದ ಉಪ ಸಮಿತಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗುವುದು ಎಂದು ತಿಳಿಸಿದರು.


ಜಿ.ಪಂ. ಸಿಇಒ ಎಸ್. ಯುಕೇಶ್‌ ಕುಮಾರ್, ಎಸ್‌.ಪಿ. ಮಲ್ಲಿಕಾರ್ಜುನ ಬಾಲದಂಡಿ, ಕರ್ನಾಟಕ ರಾಜ್ಯ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯ್‌ ಕುಮಾರ್ ಕಂಗಿನಮನೆ, ಬೆಂಗಳೂರು ಕಂಬಳ ಸಮಿತಿಯ ಕಾರ್ಯಾಧ್ಯಕ್ಷರಾದ ಕೋಡಿಂಬಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎ. ಮುರಳೀಧರ್‌ ರೈ ಮಠಂತಬೆಟ್ಟು, ಜಯಸೂರ್ಯ ರೈ ಮೊದಲಾದವರು ಪಾಲ್ಗೊಂಡಿದ್ದರು.

ಡಿಕೆಶಿ ಸೂಚನೆ:
ಹಿಂದಿನ ದಸರಾ ಸಂದರ್ಭದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್‌ ಅವರು ನಾಡಹಬ್ಬದಲ್ಲಿ ಹಳೆಯ ಒಂದಷ್ಟು ಪದ್ಧತಿಗಳನ್ನು ಕೈ ಬಿಟ್ಟು ಹೊಸ ಪೀಳಿಗೆಯನ್ನು ಸೆಳೆಯುವಂತೆ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಚರ್ಚೆ ನಡೆಸಲಾಗಿದೆ. ಕಂಬಳ ನಮ್ಮ ರಾಜ್ಯದ ಕರಾವಳಿ ಭಾಗ ವಿಶೇಷವಾದ ಆಚರಣೆ. ಹೀಗಾಗಿ ಕಂಬಳವನ್ನು ದಸರಾದಲ್ಲಿ ಸೇರಿಸಲಾಗುವುದು. ಈ ಕ್ರೀಡೆ ನಡೆಸಲು ಅಗತ್ಯವಾದ ಸ್ಥಳ ಹುಡುಕುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದರು. ಈಗ ಡಿ.ಕೆ.ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಿದ್ದು ಕಂಬಳ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ ಕಾರಣದಿಂದ ಜಿಲ್ಲಾಡಳಿತದ ತಯಾರಿ ನಡೆಸಿದೆ. ಬೆಂಗಳೂರು ಕಂಬಳದ ರೀತಿಯಲ್ಲಿ ಮೈಸೂರಿನಲ್ಲೂ ಕಂಬಳ ಆಯೋಜಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲಹೆ ನೀಡಿದ್ದರಿಂದ ಪುತ್ತೂರು ಶಾಸಕರೂ ಬೆಂಗಳೂರು ಕಂಬಳದ ರೂವಾರಿಗಳೂ ಆಗಿರುವ ಉಪ್ಪಿನಂಗಡಿ ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಅವರ ಸೂಚನೆಯಂತೆ ಮುರಳೀಧರ ರೈ ಅವರು ಮೈಸೂರಿನ ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here