







ದೇಶದಲ್ಲಿ 14,500 ಪಿಎಂ ಶ್ರೀ ಶಾಲೆಗಳಿಗೆ 27,360 ಕೋಟಿ ರೂ.ವಿನಿಯೋಗ: ಕ್ಯಾ| ಬ್ರಿಜೇಶ್ ಚೌಟ


ನೆಲ್ಯಾಡಿ: ಪಿಎಂಶ್ರೀ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆ ನೆಲ್ಯಾಡಿ ಇಲ್ಲಿ 2024-25ನೇ ಪಿಎಂಶ್ರೀ ಯೋಜನೆಯಡಿ ರೂ.17.70 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಶಾಲಾ ಕೊಠಡಿ, 4 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ ಬಾಲಕಿಯರ ಶೌಚಾಲಯದ ಉದ್ಘಾಟನೆ ಜೂ.20ರಂದು ನಡೆಯಿತು.




ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು, 2023ರಿಂದ 28ರ ತನಕದ 5 ವರ್ಷಗಳ ಅವಧಿಗೆ ಪಿಎಂಶ್ರೀ ಯೋಜನೆ ಕೇಂದ್ರ ಸರಕಾರ ಹಾಕಿಕೊಂಡಿದೆ. ಈ ಯೋಜನೆಯಡಿ ಆಯ್ಕೆಗೊಂಡ ಶಾಲೆಗಳಲ್ಲಿ ಮೂಲಭೂತ ಸೌಕರ್ಯ, ಅನುಭವ ಮೂಲಕ ಕಲಿಕೆಗೆ ಒತ್ತು ನೀಡಲಾಗುತ್ತದೆ. ದೇಶಾದ್ಯಂತ 14,5೦೦ ಶಾಲೆಗಳು ಪಿಎಂಶ್ರೀ ಯೋಜನೆಗೆ ಆಯ್ಕೆಗೊಂಡಿವೆ. ಇದಕ್ಕೆ ಸರಕಾರ 5 ವರ್ಷಗಳಲ್ಲಿ 27,360 ಕೋಟಿ ರೂ. ವಿನಿಯೋಗಿಸಲಿದ್ದು ಇದರಲ್ಲಿ 18,128 ಕೋಟಿ ರೂ.ಕೇಂದ್ರ ಸರಕಾರ ಹಾಗೂ 9232 ಕೋಟಿ ರೂ.ರಾಜ್ಯ ಸರಕಾರ ಭರಿಸಲಿದೆ. ತರಗತಿ ಕೊಠಡಿ, ಶೌಚಾಲಯ, ಆಟಿಕೆ, ಯೋಗ, ಕರಾಟೆ ಸೇರಿದಂತೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಸರಕಾರ ಒದಗಿಸಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 20 ಪಿಎಂಶ್ರೀ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ನೆಲ್ಯಾಡಿ ಶಾಲೆಯೂ ಅವುಗಳಲ್ಲಿ ಒಂದಾಗಿದೆ. ಶಾಲೆಯ ಅಗತ್ಯ ಬೇಡಿಕೆಗಳನ್ನು ಹಂತ ಹಂತವಾಗಿ ಪೂರೈಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಒಂದೇ ಸೂರಿನಡಿ ಗುಣಮಟ್ಟದ ಹಾಗೂ ಸಮಗ್ರ ಶಿಕ್ಷಣ ಒದಗಿಸುವ ಉದ್ದೇಶದಿಂದ ಪಿಎಂಶ್ರೀ ಯೋಜನೆ ಆರಂಭಿಸಲಾಗಿದೆ. ಶಾಲೆಯ ಅಭಿವೃದ್ಧಿಗೆ ದಾನಿಗಳು, ಪೋಷಕರು ಹಾಗೂ ಸಂಘ-ಸಂಸ್ಥೆಗಳ ಸಹಕಾರ ಅಗತ್ಯವಾಗಿದೆ. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಪಿಎಂಶ್ರೀ ಶಾಲೆಯಾಗಿ ಆಯ್ಕೆಯಾದ ನೆಲ್ಯಾಡಿ ಶಾಲೆ ಮುಂದಿನ ದಿನಗಳಲ್ಲಿ ಮಾದರಿ ಶಾಲೆಯಾಗಿ ಬೆಳೆದು ಪ್ರಧಾನಮಂತ್ರಿಯವರ ’ಮನ್ ಕಿ ಬಾತ್’ ಕಾರ್ಯಕ್ರಮದಲ್ಲೂ ಉಲ್ಲೇಖಗೊಳ್ಳುವಂತಾಗಲಿ ಎಂದು ಹೇಳಿದರು. ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದಿನಕರ ಎಚ್., ಉಪಾಧ್ಯಕ್ಷೆ ನಸೀಮಾ, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಸ್ಮಾಯಿಲ್, ಸಮೂಹ ಸಂಪನ್ಮೂಲ ವ್ಯಕ್ತಿ ದೇವಕಿ, ಶಾಲಾ ೭೫ನೇ ವರ್ಷಾಚರಣೆ ಸಮಿತಿ ಕಾರ್ಯಾಧ್ಯಕ್ಷ ಬಾಲಕೃಷ್ಣ ಬಾಣಜಾಲು ಉಪಸ್ಥಿತರಿದ್ದರು.
ಶಾಲಾ ಮುಖ್ಯಶಿಕ್ಷಕ ಶ್ರೀಧರ ಕೆ.ಎಸ್. ಸ್ವಾಗತಿಸಿದರು. ಶಿಕ್ಷಕಿ ಮೇರಿಜಾನ್ ವಂದಿಸಿದರು. ಶಿಕ್ಷಕ ವಿಮಲ್ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ, ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಇಚ್ಲಂಪಾಡಿ, ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ವೆಂಕಟ ವಳಲಂಬೆ, ರಾಕೇಶ್ ಕೆಡೆಂಜಿ, ಗಣೇಶ್ ಉದನಡ್ಕ, ಪ್ರದೀಪ್ ರೈ ಮನವಳಿಕೆ, ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ರವಿಚಂದ್ರ ಹೊಸವಕ್ಲು, ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ಸಂಚಾಲಕ ಫಾ. ಡಾ. ವರ್ಗೀಸ್ ಕೈಪನಡ್ಕ, ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಸಲಾಂ ಬಿಲಾಲ್, ಸದಸ್ಯ ರವಿಪ್ರಸಾದ್ ಶೆಟ್ಟಿ ಬಲ್ಯ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ವೇದಿಕೆಯಲ್ಲಿ ವಿದ್ಯಾರ್ಥಿಗಳಿಂದ ಭರತನಾಟ್ಯ, ಯೋಗ ಹಾಗೂ ಕರಾಟೆ ಪ್ರದರ್ಶನಗಳು ನಡೆಯಿತು.
ಸ್ಟೂಡೆಂಟ್ ಬ್ಯಾಂಕ್ ಉದ್ಘಾಟನೆ;
ಶಾಲೆಯಲ್ಲಿ ನೂತನವಾಗಿ ಆರಂಭಿಸಿರುವ ಸ್ಟೂಡೆಂಟ್ ಬ್ಯಾಂಕ್ ಈ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.










