






ವಿಟ್ಲ: ವನ್ಯಜೀವಿ ಉತ್ಪನ್ನವಾದ ಅಂಬರ್ಗ್ರೀಸ್ (ತಿಮಿಂಗಿಲ ವಾಂತಿ)ಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ದ್ವಿಚಕ್ರವಾಹನ ಸಹಿತ ವಿಟ್ಲ ಠಾಣಾ ಪೊಲೀಸರು ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಬೊಳಂತಿಮೊಗರು ಎಂಬಲ್ಲಿ ಬಂಧಿಸಿದ್ದಾರೆ.


ಬಂಟ್ವಾಳ ತಾಲೂಕು ಕರೋಪಾಡಿ ನಿವಾಸಿ ಕುಮುದಾಕ್ಷ (27 ವ.) ಹಾಗೂ ಬಂಟ್ವಾಳ ತಾಲೂಕು ವಿಟ್ಲ ಕಸಬಾ ನಿವಾಸಿ ಧನು ಕುಮಾರ್ (32 ವ.) ಬಂಧಿತ ಆರೋಪಿಗಳು.
ವಿಟ್ಲ ಠಾಣಾ ಎಸ್.ಐ. ರಾಮಕೃಷ್ಣರವರು ಜೂ.24ರಂದು ತನ್ನ ಸಿಬ್ಬಂದಿಗಳೊಂದಿಗೆ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಬೊಳಂತಿಮೊಗರು ಎಂಬಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಆ ದಾರಿಯಾಗಿ ಬಂದ ದ್ವಿಚಕ್ರವಾಹನವನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 5.73 ಗ್ರಾಂ ತೂಕದ ಅಂಬರ್ಗ್ರೀಸ್ (ತಿಮಿಂಗಿಲ ವಾಂತಿ) ಪತ್ತೆಯಾಗಿದೆ. ಕೂಡಲೇ ಅವರಿಬ್ಬರನ್ನು ಬಂಧಿಸಿ ಅವರು ಸಂಚರಿಸುತ್ತಿದ್ದ ದ್ವಿಚಕ್ರ ವಾಹನ, ೨ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ:140/2026, ಕಲಂ: 51 THE WILD LIFE (PROTECTION) ACT, 1972 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.













