






ಸ್ಥಳೀಯ ಗುತ್ತಿಗೆದಾರರ ಆಕ್ರೋಶ
ನ್ಯಾಯಯುತ ದರದಲ್ಲಿ ಮರಳು ಪೂರೈಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ


ಕಡಬ: ಕಡಬ ತಾಲೂಕಿನಲ್ಲಿ ಮರಳಿನ ಕೃತಕ ಅಭಾವ ಸೃಷ್ಟಿಸಿ ಅವೈಜ್ಞಾನಿಕವಾಗಿ ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದ್ದು, ಇದರಿಂದ ಸ್ಥಳೀಯ ಸಣ್ಣ ಗುತ್ತಿಗೆದಾರರು ಹಾಗೂ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಪ್ರಮುಖ ಕ್ಸೇವಿಯರ್ ಬೇಬಿ ಅವರು ಹೇಳಿದ್ದಾರೆ. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಸುಮಾರು 60 ರಿಂದ 70 ಮಂದಿ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.



ಪ್ರತಿದಿನ 15 ರಿಂದ 20 ಮಂದಿ ಕಾರ್ಮಿಕರಿಗೆ ಉದ್ಯೋಗ ನೀಡುತ್ತಿರುವ ಸ್ಥಳೀಯ ಗುತ್ತಿಗೆದಾರರ ಮೇಲೆ ಸುಮಾರು 1,500ಕ್ಕೂ ಹೆಚ್ಚು ಕುಟುಂಬಗಳು ಜೀವನೋಪಾಯಕ್ಕಾಗಿ ಅವಲಂಬಿತವಾಗಿವೆ. ಆದರೆ ಮರಳು ದಂಧೆಯಿಂದಾಗಿ ಕಾಮಗಾರಿಗಳು ಸ್ಥಗಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಾರ್ಮಿಕರಿಗೂ ಕೆಲಸದ ಅಭಾವ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.
ಗುತ್ತಿಗೆದಾರರ ಪ್ರಕಾರ, 50 ರಿಂದ 60 ಕಿಲೋಮೀಟರ್ ದೂರದಿಂದ ಕಲ್ಲು ತಂದು, ಬೌಲ್ಡರ್ ಮಾಡಿ, ಕ್ರಷರ್ನಲ್ಲಿ ವಿದ್ಯುತ್ ಅಥವಾ ಜನರೇಟರ್ ಬಳಸಿ ತಯಾರಿಸುವ ಒಂದು ಯೂನಿಟ್ ಜಲ್ಲಿ ಕೇವಲ ₹4,000 ರಿಂದ ₹5,000ಕ್ಕೆ ದೊರೆಯುತ್ತದೆ. ಆದರೆ ಕಡಬ ವ್ಯಾಪ್ತಿಯಲ್ಲೇ 5 ರಿಂದ 6 ಕಿಲೋಮೀಟರ್ ದೂರದಲ್ಲಿ ಲಭ್ಯವಾಗುವ ಒಂದು ಯೂನಿಟ್ ಮರಳಿಗೆ ₹8,000 ರಿಂದ ₹9,000 ವರೆಗೆ ವಸೂಲಿ ಮಾಡಲಾಗುತ್ತಿದೆ. ಇದು ಸಂಪೂರ್ಣ ಅವೈಜ್ಞಾನಿಕ ದರವಾಗಿದ್ದು, ಸಾರ್ವಜನಿಕರ ಹಗಲು ದರೋಡೆಯಾಗಿದೆ ಎಂದು ಆರೋಪಿಸಿದ್ದಾರೆ.
ಸ್ಥಳೀಯ ಗುತ್ತಿಗೆದಾರರು ಮರಳು ಕೇಳಿದಾಗ “ಮರಳು ಲಭ್ಯವಿಲ್ಲ” ಎಂಬ ಉತ್ತರ ನೀಡಲಾಗುತ್ತಿದೆ. ಆದರೆ ಕಡಬ ವ್ಯಾಪ್ತಿಯಿಂದ ಪ್ರತಿನಿತ್ಯ 30 ರಿಂದ 40 ಲೋಡ್ ಮರಳು ಸಾಗಾಟವಾಗುತ್ತಿರುವುದು ಕಂಡುಬರುತ್ತಿದ್ದು, ಮರಳಿನ ಟೆಂಡರ್ ಪಡೆದವರು ಯಾವ ಉದ್ದೇಶದಿಂದ ಈ ರೀತಿಯ ವ್ಯವಸ್ಥೆ ಮಾಡುತ್ತಿದ್ದಾರೆ ಎಂಬುದು ಅನುಮಾನಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ. ಈ ಪರಿಸ್ಥಿತಿಗೆ ಸ್ಥಳೀಯ ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೇ ನೇರ ಹೊಣೆಗಾರರು. ಅಧಿಕಾರಿಗಳ ಕಣ್ಣೆದುರೇ ಈ ದಂಧೆ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಗುತ್ತಿಗೆದಾರರು ದೂರಿದ್ದಾರೆ.
ಗುತ್ತಿಗೆದಾರರು ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಜಲ್ಲಿ ಕಲ್ಲಿಗಿಂತ ಮರಳಿನ ದರ ಕಡಿಮೆಯಾಗಿರಬೇಕು. ಸರ್ಕಾರವೇ ಮರಳಿಗೆ ನಿಗದಿತ ದರ ನಿಗದಿಪಡಿಸಿ, ಅದೇ ದರದಲ್ಲಿ ಗ್ರಾಹಕರಿಗೆ ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳಬೇಕು. ಮರಳು ಮಾರಾಟಗಾರರು ಕಡ್ಡಾಯವಾಗಿ ದರಪಟ್ಟಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು. ಮರಳು ದಾಸ್ತಾನು ಕೇಂದ್ರಗಳಲ್ಲಿ ತೂಕದ ಮಾಪಕ ಅಳವಡಿಸಿ, ಪ್ರತಿಯೊಬ್ಬ ಗ್ರಾಹಕರಿಗೂ ತೂಕದ ಪ್ರಮಾಣಪತ್ರ ನೀಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಮರಳಿನ ಟೆಂಡರ್ ಪಡೆದವರು ನಡೆಸುತ್ತಿರುವ ಅಕ್ರಮ ದಂಧೆಯನ್ನು ತಕ್ಷಣವೇ ನಿಲ್ಲಿಸಿ, ಸ್ಥಳೀಯ ಗುತ್ತಿಗೆದಾರರಿಗೆ ನ್ಯಾಯಯುತ ದರದಲ್ಲಿ ಮರಳು ದೊರೆಯುವಂತೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕಡಬ ತಾಲೂಕಿನ ಎಲ್ಲಾ ಗುತ್ತಿಗೆದಾರರು ಹಾಗೂ ಕಾರ್ಮಿಕರು ಒಗ್ಗೂಡಿ ಉಗ್ರ ಹೋರಾಟ ಮತ್ತು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಗುತ್ತಿಗೆದಾರರಾದ ವಿನೋದ್ ಪಿ.ಎ., ಸತೀಶ್ ರೈ ಕರ್ಮೆಣ, ಮಹಮ್ಮದ್ ರಪೀಕ್, ಅಬೂಬಕ್ಕರ್ ಪಿ. ಬಾಲಚಂದ್ರ ಮೈಕಾಜೆ ಅವರುಗಳು ಉಪಸ್ಥಿತರಿದ್ದರು.










