ಪುತ್ತೂರು : ನಿಯಮಬಾಹಿರವಾಗಿ ತಡರಾತ್ರಿ ತೆರೆದಿದ್ದ ಹೊಟೇಲ್, ಪೊಲೀಸರೊಂದಿಗೆ ವಾಗ್ವಾದ: ಗ್ರಾಹಕ, ಹೊಟೇಲ್ ವಿರುದ್ಧ ಕ್ರಮ, ಪಿಎಸ್‌ಐಗೆ ಮೇಲಾಧಿಕಾರಿಗಳ ಎಚ್ಚರಿಕೆ

0

ಪುತ್ತೂರು: ನಿಯಮಬಾಹಿರವಾಗಿ ತಡರಾತ್ರಿ ತೆರೆದುಕೊಂಡಿದ್ದ ಹೊಟೇಲ್ ಅನ್ನು ಮುಚ್ಚವುಂತೆ ಸೂಚನೆ ನೀಡಿದ್ದಕ್ಕೆ ಗ್ರಾಹಕರೊಬ್ಬರು ಪೊಲೀಸರ ವಿರುದ್ಧ ತಕಾರರು ಎತ್ತಿದ್ದ ಘಟನೆಯ ಕುರಿತು ಹೊಟೇಲ್ ಮತ್ತು ಗ್ರಾಹಕನ ವಿರುದ್ಧ ಪುತ್ತೂರು ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ. ಇದರ ಜೊತೆಗೆ ಘಟನೆ ನಡೆದು ವಾರ ಕಳೆದರೂ ಮೇಲಾಧಿಕಾರಿಗೆ ಮಾಹಿತಿ ನೀಡದ ಪಿ.ಎಸ್.ಐ ಓರ್ವರಿಗೆ ಮೇಲಾಧಿಕಾರಿಗಳು ಎಚ್ಚರಿಕೆ ನೀಡಿರುವ ಕುರಿತು ವರದಿಯಾಗಿದೆ.


ಜೂ. 18ರಂದು ರಾತ್ರಿ ಗಂಟೆ 10.30ರ ವೇಳೆಗೆ ಪುತ್ತೂರು ನಗರ ಠಾಣಾ ಸಹಾಯಕ ಪೊಲೀಸ್ ಉಪನಿರೀಕ್ಷಕ ಚಂದ್ರರವರು ಠಾಣಾ ಸಿಬ್ಬಂದಿ ಅಸ್ತಮ್ ಎಂಬವರೊಂದಿಗೆ ಠಾಣಾ ಸರಹದ್ದಿನಲ್ಲಿ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುತ್ತ ಕಬಕ ಜಂಕ್ಷನ್ ಬಳಿ ಬಂದಾಗ, ಮೊಹಮ್ಮದ್ ಆಸೀಫ್ ಎಂಬವರ ಮಾಲಿಕತ್ವದ ಕೆ.ಎಸ್ ಅಲ್ಫಾ ಕಾರ್ನರ್ ಎಂಬ ಹೋಟೆಲ್ ತೆರೆದಿರುವುನ್ನು ಗಮನಿಸಿ ನಿಗಧಿತ ಸಮಯದ ಒಳಗೆ ಹೊಟೇಲ್ ಮುಚ್ಚುವಂತೆ ಅಲ್ಲಿನ ಸಿಬ್ಬಂದಿಗಳಿಗೆ ತಿಳುವಳಿಕೆ ನೀಡಿ ಅಲ್ಲಿಂದ ತೆರಳಿದ್ದರು. ತಡರಾತ್ರಿ ಸುಮಾರು 1.30 ಗಂಟೆಗೆ ಉಪವಿಭಾಗದ ರಾತ್ರಿಗಸ್ತು ಅಧಿಕಾರಿ ಪಿ.ಎಸ್.ಐ ಸುರೇಶ್ ಎಂಬರೊಂದಿಗೆ ಎ.ಎಸ್.ಚಂದ್ರ ರವರು ಠಾಣಾ ಸಿಬ್ಬಂದಿ ಅಸ್ತಮ್ ಎಂಬವರೊಂದಿಗೆ ಗಸ್ತು ಕರ್ತವ್ಯದಲ್ಲಿ ಅದೇ ಸ್ಥಳಕ್ಕೆ ಬಂದಾಗ ಹೊಟೇಲ್ ತೆರೆದಿರುವುದನ್ನು ನೋಡಿ ಅಲ್ಲಿಗೆ ತೆರಳಿ ನಿಯಮ ಬಾಹಿರವಾಗಿ ತಡರಾತ್ರಿ ಹೋಟೇಲ್ ತೆರೆದಿರುವ ಬಗ್ಗೆ ಹೊಟೇಲ್ ಸಿಬ್ಬಂದಿಗಳಿಗೆ ಕಾನೂನು ತಿಳುವಳಿಕೆ ನೀಡಿ ತಕ್ಷಣ ಮುಚ್ಚುವಂತೆ ಸೂಚಿಸಿದ್ದರು. ಇದೇ ವೇಳೆ ಸ್ಥಳದಲ್ಲಿದ್ದ ಮೂವರು ಗ್ರಾಹಕರ ಪೈಕಿ ಕಬಕ ನಿವಾಸಿ ಉಜ್ವಲ್ ಕುಮಾರ್ ಪ್ರಭು (45ವ) ಎಂಬವರು ಹೊಟೇಲ್ ಮುಚ್ಚವುದಕ್ಕೆ ತಕರಾರು ತೆಗೆದು ಗಸ್ತು ಕರ್ತವ್ಯದಲ್ಲಿದ್ದ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದರು. ಆಗ ಪಿ.ಎಸ್.ಐ ಸುರೇಶ್ ರವರು ಆತನಿಗೆ ಸೂಕ್ತ ಕಾನೂನು ತಿಳುವಳಿಕೆ ನೀಡಿ ಸದ್ರಿ ಹೊಟೇಲನ್ನು ಮುಚ್ಚಿಸಿ ಅಲ್ಲಿಂದ ತೆರಳಿದ್ದರು. ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯು ಸ್ಥಳದಲ್ಲಿ ನಡೆದ ವಾಗ್ವಾದವನ್ನು ಮೊಬೈಲ್ ಮೂಲಕ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು. ತಕರಾರು ಎತ್ತಿದ್ದ ಉಜ್ವಲ್ ಕುಮಾರ್ ಪ್ರಭು(45) ಎಂಬಾತನ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಈ ಹಿಂದೆ 2 ಪ್ರಕರಣಗಳು ದಾಖಲಾಗಿದ್ದು, ಪ್ರಸ್ತುತ ಕರ್ತವ್ಯನಿರತ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಹಿನ್ನೆಲೆಯಲ್ಲಿ ಪುತ್ತೂರು ನಗರ ಠಾಣೆಯಲ್ಲಿ ಮುಂಜಾಗ್ರತಾ ಕ್ರಮ ವರದಿ(Preventive Action Report) 127/2026ರಂತೆ ಕಾನೂನುಕ್ರಮ ಕೈಗೊಳ್ಳಲಾಗಿದೆ. ಪರವಾನಿಗೆ ಅವಧಿ ಮುಗಿದ ಬಳಿಕ ಅನಧೀಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಸದ್ರಿ ಹೋಟೆಲ್‌ನ್ನು ಮುಚ್ಚಿಸಲಾಗಿದೆ. ಇದರ ಜೊತೆಗೆ ಮೇಲಾಧೀಕಾರಿಗಳಿಗೆ ಘಟನೆಯ ಬಗ್ಗೆ ಮಾಹಿತಿ ನೀಡದೇ, ಪರಿಸ್ಥಿತಿಯನ್ನು ವೃತ್ತಿಪರವಾಗಿ ನಿರ್ವಹಿಸುವಲ್ಲಿ ವಿಫಲರಾದ ಪಿ.ಎಸ್.ಐ ಸುರೇಶ್ ರವರಿಗೆ ಎಚ್ಚರಿಕೆ ನೀಡಲಾಗಿರುತ್ತದೆ ಎಂದು ಮೇಲಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here