






ಸಮಾಜ ಸೇವೆಯೇ ರೋಟರಿಯ ಮುಖ್ಯ ಧ್ಯೇಯ: ರೋ. ಜಯಪ್ರಕಾಶ್


ಕಡಬ: “ಅಂತರಾಷ್ಟ್ರೀಯ ರೋಟರಿ ಸಂಸ್ಥೆಯು ಸಮಾಜ ಸೇವೆಯನ್ನೇ ತನ್ನ ಮುಖ್ಯ ಧ್ಯೇಯವಾಗಿಸಿಕೊಂಡಿದ್ದು, ಸಮಾಜದಲ್ಲಿನ ದೀನದಲಿತರು ಹಾಗೂ ಅಶಕ್ತರ ಸೇವೆಯೊಂದಿಗೆ ಶಾಲಾ–ಕಾಲೇಜುಗಳು, ಅಂಗನವಾಡಿಗಳು ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಗುರುತಿಸಿ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಈ ಸೇವಾ ಮನೋಭಾವದ ಮೂಲಕ ರೋಟರಿ ಸಂಸ್ಥೆ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದೆ” ಎಂದು ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ, ಎಂ.ಪಿ.ಎಚ್.ಎಫ್. ರೋ. ಜಯಪ್ರಕಾಶ್ ಆರ್. ಹೇಳಿದರು.



ಅವರು ಸೋಮವಾರ ಸ. ಉ. ಹಿ. ಪ್ರಾ. ಶಾಲೆ, ಕುಂತೂರಿನಲ್ಲಿ ನಡೆದ ಕೊಡುಗೆ ಹಸ್ತಾಂತರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ದಿವಂಗತ ಪ್ರಾಚಾರ್ಯ ವಿಠಲ್ ರಾವ್ ಅವರ ಸ್ಮರಣಾರ್ಥ ಅವರ ಪುತ್ರಿ ರಕ್ಷಾ ರಾವ್ ಅವರು ಕೊಡುಗೆಯಾಗಿ ನೀಡಿದ ಆಕ್ಸಿಕ್ಯೂಟಿವ್ ಚೇರ್‌ಗಳನ್ನು ಶಾಲೆಯ ಮುಖ್ಯೋಪಾಧ್ಯಾಯ ರಾಮಕೃಷ್ಣ ಮಲ್ಲಾರ ಅವರಿಗೆ ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಗೌಡ ಎರ್ಮಾಳ ಅವರು ಕೊಡುಗೆಯಾಗಿ ನೀಡಿದ ಟಿಫಾಯಿಯನ್ನೂ ಶಾಲೆಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಖಾಸಿಂ, ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಚಂದ್ರಶೇಖರ ರೈ, ಸುಬ್ರಹ್ಮಣ್ಯ ರೋಟರಿ ಕ್ಲಬ್‌ನ ನಿಯೋಜಿತ ಅಧ್ಯಕ್ಷ ರೋಹಿತ್ ಬಿ.ಬಿ. ಹಾಗೂ ಶಾಲಾ ಮುಖ್ಯೋಪಾಧ್ಯಾಯ ರಾಮಕೃಷ್ಣ ಮಲ್ಲಾರ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಡಬ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ಜಂಬುರಾಜ್ ಮಹಾಜನ್ ಅವರು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿ, ನಶಾ ಮುಕ್ತ ಭಾರತ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಅರಿವು ಮೂಡಿಸಿದರು. ಅಲ್ಲದೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನೂ ಬೋಧಿಸಿದರು.
ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷರಾದ ಉಮೇಶ್ ಕೆ.ಎನ್., ವಿಶ್ವನಾಥ್ ನಡುತೋಟ, ಗೋಪಾಲ ಎಣ್ಣೆ ಮಜಲ್, ಡಾ. ರವಿ ಕಕ್ಕೆಪದವು, ಮೈಲಪ್ಪ ಸಂಕೇಶ, ವಿದ್ಯಾರ್ಥಿಗಳ ಪೋಷಕರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಾಲೆಯ ಪದವೀಧರ ಶಿಕ್ಷಕಿ ಶ್ರುತಿ ಬಿ.ಎಚ್. ಸ್ವಾಗತಿಸಿದರು. ಗೋಪಾಲ ಎಣ್ಣೆ ಮಜಲ್ ಪ್ರಸ್ತಾವನೆಗೈದರು. ವಿಶ್ವನಾಥ್ ನಡುತೋಟ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯೋಪಾಧ್ಯಾಯ ರಾಮಕೃಷ್ಣ ಮಲ್ಲಾರ ಧನ್ಯವಾದ ಸಮರ್ಪಿಸಿದರು.










