






ಪುತ್ತೂರು: ಪುತ್ತೂರು ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಗೂಡ್ಸ್ ವಾಹನಗಳಾದ ಪಿಕಪ್ ಹಾಗೂ ಇನ್ನಿತರ ವಾಹನಗಳ ಮೇಲೆ ಪೊಲೀಸರು ಕ್ಷುಲ್ಲಕ ಕಾರಣ ನೀಡಿ ಕೇಸು ಹಾಕುತ್ತಿದ್ದಾರೆ ಎಂದು ಆರೋಪಿಸಿ ಗೂಡ್ಸ್ ವಾಹನ ಚಾಲಕ, ಮಾಲಕರ ಸಂಘದ ಸದಸ್ಯರು ಶಾಸಕ ಅಶೋಕ್ ರೈ ಅವರಿಗೆ ದೂರು ಸಲ್ಲಿಸಿದ್ದಾರೆ.


ಚಾಲಕರ ಅಳಲು:
ಸಂಘದಲ್ಲಿ ನೋಂದಾಯಿತ 50 ಜನ ಸದಸ್ಯರಿದ್ದು, ಎಲ್ಲರೂ ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಹಾರ್ಡ್‌ವೇರ್ ಕಲ್ಲು, ಹೊಯಿಗೆ ವಸ್ತು, ಸಿಮೆಂಟು, ತಗಡು ಶೀಟು, ಕಬ್ಬಿಣದ ರಾಡ್‌ಗಳನ್ನು ಸಾಗಿಸಿ ಬಾಡಿಗೆ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಬಾಡಿಗೆಯೇ ಕಡಿಮೆ ಸಿಗುತ್ತಿರುವಾಗ, ಒಂದು ವರ್ಷದಿಂದ ಪೊಲೀಸ್ ಇಲಾಖೆ ಕ್ಷುಲ್ಲಕ ಕಾರಣ ಒಡ್ಡಿ ಕೇಸು ಹಾಕುತ್ತಿದೆ. ಇದರಿಂದ ಬಡ ಚಾಲಕ-ಮಾಲಕರಿಗೆ ಮಾನಸಿಕ ಹಿಂಸೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.



ಶಾಸಕರ ಖಡಕ್ ಸೂಚನೆ:
ದೂರು ಸ್ವೀಕರಿಸಿದ ಶಾಸಕ ಅಶೋಕ್ ರೈ ಪೊಲೀಸ್ ಇಲಾಖೆಗೆ ಕರೆ ಮಾಡಿ ಬಡ ವಾಹನ ಚಾಲಕರ ಮೇಲೆ ಕ್ಷುಲ್ಲಕ ಕಾರಣಕ್ಕೆ ಕೇಸು ಹಾಕಬೇಡಿ ಎಂದು ಸೂಚಿಸಿದರು. “ಕಾನೂನಿಗೆ ವಿರುದ್ಧವಾಗಿ ನಡೆದರೆ ಮಾತ್ರ ಕೇಸು ದಾಖಲಿಸಿ. ದಿನದ ಹೊಟ್ಟೆಪಾಡಿಗಾಗಿ ಬೆಳಿಗ್ಗೆಯಿಂದ ರಾತ್ರಿ ತನಕ ಬಾಡಿಗೆ ಮಾಡಿ ಕುಟುಂಬ ಸಲಹುತ್ತಿದ್ದಾರೆ. ಕೇಸು ಹಾಕಿ ದಂಡ ವಿಧಿಸಿದರೆ ಅವರು ಕುಟುಂಬವನ್ನು ಸಾಕುವುದಾದರೂ ಹೇಗೆ? ಬಡವರ ಅನ್ನಕ್ಕೆ ಕಲ್ಲು ಹಾಕುವ ಕೆಲಸ ಪೊಲೀಸ್ ಇಲಾಖೆ ಮಾಡಬಾರದು. ಬಡವರ ಮೇಲೆ ಕರುಣೆಯಿಂದ ವರ್ತಿಸಿ” ಎಂದು ತಾಕೀತು ಮಾಡಿದರು. ಕಾನೂನಿಗೆ ವಿರುದ್ಧವಾಗಿ ಯಾರೇ ಏನೇ ಮಾಡಿದರೂ ಅಧಿಕಾರ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಿ, ಆದರೆ ಕ್ಷುಲ್ಲಕ ವಿಚಾರಕ್ಕೆ ಕೇಸು ಬೇಡ ಎಂದು ಸ್ಪಷ್ಟಪಡಿಸಿದರು.










