ಕಿಲ್ಲೆ ಮೈದಾನದಲ್ಲಿ ಪುತ್ತೂರ ಹಬ್ಬಕ್ಕೆ ಚಾಲನೆ : ಮೇಳೈಸುತ್ತಿದೆ ಮಾವು, ಹಲಸು, ಸಸ್ಯಜಾತ್ರೆ ಹಾಗೂ ಫುಡ್‌ಫೆಸ್ಟಿವಲ್

0

ಪುತ್ತೂರು: ಪುತ್ತೂರು ವಾರಿಯರ್‍ಸ್ ಮತ್ತು ಸುದ್ದಿ ಅರಿವು ಕೇಂದ್ರ ಇದರ ಜಂಟಿ ಆಶ್ರಯದಲ್ಲಿ ಸ್ಪೂರ್ತಿ ಕ್ಯಾಟರಿಂಗ್ ಸರ್ವೀಸ್ ಮತ್ತು ಈವೆಂಟ್ ಆರ್ಗನೈಸರ್ಸ್ ಇವರ ಸಹಯೋಗದಲ್ಲಿ ನಾಲ್ಕು ದಿನಗಳ ಕಾಲ ಕಿಲ್ಲೆ ಮೈದಾನದಲ್ಲಿ ಮೇಳೈಸಲಿರುವ, `ಪುತ್ತೂರ ಹಬ್ಬ’ ಮಾವು, ಹಲಸು, ಸಸ್ಯಜಾತ್ರೆ ಹಾಗೂ ಫುಡ್‌ಫೆಸ್ಟಿವಲ್ ಜು.2ರಂದು ಪ್ರಾರಂಭಗೊಂಡಿತು.


ಪುತ್ತೂರು ಹಬ್ಬವನ್ನು ಉದ್ಘಾಟಿಸಿದ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಮಾತನಾಡಿ, ಪ್ರಕೃತಿದತ್ತವಾಗಿ ದೊರೆಯುವ ಮಾವು-ಹಲಸಿನ ಹಬ್ಬ ಆಯೋಜನೆಗೊಂಡಿದೆ. ಇದು ಪ್ರಕೃತಿಯನ್ನು ಉಳಿಸಿ, ಬೆಳೆಸಲು ಪೂರಕವಾಗಿದ್ದು ಪುತ್ತೂರ ಹಬ್ಬವು ಪ್ರಕೃತಿಯ ಹಬ್ಬವಾಗಿದೆ. ಎಲ್ಲಾ ಧರ್ಮದವರು ಸೇರಿಕೊಂಡು ಆಯೋಜಿಸಿರುವ ಹೆಸರಿಗಷ್ಟೇ ಮಾವು, ಹಲಸು ಹಬ್ಬವಾದರೂ ಇದರಲ್ಲಿ ಧರ್ಮಗಳ ಸಾಮರಸ್ಯತೆ ಅಡಗಿದೆ ಎಂದರು. ಎಲ್ಲಾ ಧರ್ಮಗಳ ಸಾರವೇ ಪರೋಪಕಾರ. ಪರಸ್ಪರ ಪರೋಪಕಾರದಿಂದ ಬದುಕುವುದೇ ಧರ್ಮ. ಪ್ರಕೃತಿಯು ಪರೋಪಕಾರಿಯಾಗಿದ್ದು ನಮಗೆಲ್ಲಾ ಗುರುವಾಗಿ ಪರೋಪಕಾರದ ಪ್ರಕೃತಿಯೇ ಪ್ರೇರಣೆ ನೀಡುತ್ತಿದೆ ಎಂದು ಹೇಳಿದ ಅವರು ನಾಲ್ಕು ಮಂದಿ ಕೂಡಿ ಚಾ ಕುಡಿಯುವಾಗ ಬಂದ ಯೋಚನೆ ಇಂದು ಮಾದರಿ ಹಬ್ಬವಾಗಿ ಮೂಡಿ ಬಂದಿದೆ ಎಂದು ಹೇಳಿದರು.


ಮುಖ್ಯ ಅತಿಥಿ ಮಾಡನ್ನೂರು ಜುಮ್ಮಾ ಮಸೀದಿಯ ಖತೀಬ ಎಸ್.ಬಿ ದಾರಿಮಿ, ಧಾರ್ಮಿಕ ಆಚರಣೆಗಳ ಮೂಲಕ ನಾಗರೀಕತೆ ಬೆಳೆದು ಬಂದಿದೆ. ಮನುಷ್ಯನ ಒಳಿತಿಗಾಗಿ ಧರ್ಮಗಳಿವೆ. ಧರ್ಮಗಳನ್ನ ಟೀಕೆ ಮಾಡುವುದು, ಧರ್ಮ ನಿಷೇಧಿಸುವಂತೆ ಹೇಳಿಕೆ ನೀಡುವುದು ಸರಿಯಲ್ಲ. ಹಿಂದು-ಮುಸ್ಲಿಂ ಅಂದು ಕೊಂಡು ಹೊಡೆದಾಡಿಕೊಂಡರೆ ದೇಶ ಮುಂದುವರಿಯಲು ಸಾಧ್ಯ ಇಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ಗಲಭೆಗಳು ಅಗುತ್ತಿದ್ದು ಪೊಲೀಸ್ ಕಠಿಣ ಕ್ರಮಕೈಗೊಂಡರೆ ಅವುಗಳನ್ನು ನಿಯಂತ್ರಿಸಬಹುದು. ಶಾಂತಿ ಸ್ಥಾಪನೆಯಾಗದಿದ್ದರೆ ದೇಶದ ಅಭಿವೃದ್ಧಿ ಅಸಾಧ್ಯ. ತಪ್ಪಿತಸ್ಥರು ಎಲ್ಲಾ ಕಡೆಯಲ್ಲೂ ಇರುತ್ತಾರೆ. ನಾವು ಮಾತ್ರ ಒಳ್ಳೆಯವರಲ್ಲ ಅನ್ನುವುದು ಸರಿಯಲ್ಲ ಎಂದ ಅವರು ಪುತ್ತೂರ ಹಬ್ಬವನ್ನು ಎಲ್ಲಾ ಧರ್ಮದವರು ಒಟ್ಟು ಸೇರಿ ಆಯೋಜಿಸಿರುವುದು ಅಭಿನಂದನೀಯ ಎಂದರು.


ಮಾಯಿದೆ ದೇವುಸ್ ಚರ್ಚ್ ಸಹಾಯಕ ಧರ್ಮಗುರು ಮರ್ವಿನ್ ಪ್ರವೀಣ್ ಮಾತನಾಡಿ, ಹಲಸು ಫಲಗಳ ರಾಜ. ಅದರಲ್ಲಿ ಬಹಳಷ್ಟು ಪೋಷಕಾಂಶಗಳಿದ್ದು ದೇಹಕ್ಕೆ ಅಗತ್ಯವಾದ ಎಲ್ಲಾ ಅಂಶಗಳನ್ನು ನೀಡುತ್ತಿದೆ. ಇಲ್ಲಿ ಆಯೋಜಿಸಿರುವ ಪುತ್ತೂರ ಹಬ್ಬವು ರೈತರ ಪರಿಶ್ರಮಗಳಿವೆ ನೀಡುವ ಗೌರವದ ವೇದಿಕೆಯಾಗಿದೆ. ಹಬ್ಬದಲ್ಲಿರುವ ಆಹಾರ ಮಳಿಗೆಗಳು ಪುರಾತನ ಸಂಪ್ರದಾಯಿಕ ರುಚಿಯನ್ನು ನೀಡಲಿದೆ. ಪುರಾತನ ಜೀವನ ವಿಧಾನ ನೆನಪಿಸುತ್ತದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಾರಿಯರ್‍ಸ್‌ನ ಅಧ್ಯಕ್ಷ ಗಿರೀಶ್ ರೈ ಮೂಲೆ ಮಾತನಾಡಿ, ಎರಡು ತಿಂಗಳ ಹಿಂದೆ ನಾಲ್ಕು ಮಂದಿ ಸೇರಿಕೊಂಡು ಹೊಟೇಲೊಂದರಲ್ಲಿ ಚಾ ಕುಡಿಯುವ ಸಮಯದಲ್ಲಿ ಹಣ್ಣುಗಳ ಮೇಳ ಮಾಡುವ ಯೋಚನೆಯಾಗಿದೆ. ಅದೇ ಇಂದು ದೊಡ್ಡ ಹಬ್ಬವಾಗಿ ಆಯೋಜನೆಗೊಂಡಿದೆ. ಇದಕ್ಕೆ ಹಲವು ಮಂದಿ ಸಹಕಾರ, ಮಾರ್ಗದರ್ಶನ ನೀಡಿದ್ದಾರೆ. ಸುದ್ದಿ ಅರಿವು ಕೇಂದ್ರದವರು ಉತ್ತಮ ಸಹಕಾರ ನೀಡಿದ್ದು ಹಬ್ಬದಲ್ಲಿ 80ಕ್ಕೂ ಅಧಿಕ ವ್ಯಾಪಾರ, ಆಹಾರ ಮಳಿಗೆಗಳು ಮೇಳೈಸುವಂತಾಗಿದೆ ಎಂದು ಹೇಳಿದರು.


ಪುತ್ತೂರು ವಾರಿಯರ್‍ಸ್‌ನ ರಜಾಕ್ ಬಪ್ಪಳಿಗೆ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಿಂಚನಾ ಹೆಗ್ಡೆ ಪ್ರಾರ್ಥಿಸಿದರು. ಪುತ್ತೂರು ವಾರಿಯರ್‍ಸ್‌ನ ಸದಸ್ಯರಾದ ಪ್ರಸಾದ್ ರೈ, ಶರೀಫ್ ಬಲ್ನಾಡು, ಶರೂನ್ ಸಿಕ್ವೆರಾ, ವಸಂತ, ಸಿರಿಲ್ ರೋಡ್ರಗಸ್, ಜ್ಞಾನೇಶ್ ಆಚಾರ್ಯ, ದಾಮೋದರ ಕಬಕ, ವಜ್ರಮಾತಾ ಮಹಿಳಾ ಮಂಡಳಿ ನಯನಾ ರೈ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.


70ಕ್ಕೂ ಅಧಿಕ ಮಳಿಗೆಗಳು:
ವಿವಿಧ ಜಾತಿಯ ಹಣ್ಣು, ಹೂವಿನ ಗಿಡ, ಅಲಂಕಾರಿಕ ಹೂವಿನ ಗಿಡ, ಹಲಸು, ವಿವಿಧ ತಳಿಯ ಮಾವು, ಹಲಸಿನ ಹಣ್ಣುಗಳು ಹಾಗೂ ನೇರಳೆ, ಡ್ರಾಗನ್‌ಫ್ರುಟ್, ರಂಬೂಟನ್ ಸೇರಿದಂತೆ ವಿವಿಧ ಜಾತಿಯ ಹಣ್ಣುಗಳು, ವಿವಿಧ ಗೃಹ ಉತ್ಪನ್ನಗಳು, ತೂಕದ ಯಂತ್ರಗಳು, ಮನೆ ಬಳಕೆಯ ಸಾಮಾಗ್ರಿಗಳು, ಫುಡ್ ಪ್ರಾಡಕ್ಟ್‌ಗಳು, ಸಾವಯವ ಐಸ್ ಕ್ರೀಂ, ಕೃಷಿ ಯಂತ್ರೋಪಕರಣಗಳು, ಕೃಷಿ ಉಪಯೋಗ ಸಾಮಾಗ್ರಿಗಳು, ಸಾವಯವ ಮಸಾಲೆ ಹುಡಿಗಳು, ಪ್ಲಾಸ್ಟಿಕ್ ಸಾಮಾಗ್ರಿಗಳು, ಪುಸ್ತಕ ಮಳಿಗೆ, ಫ್ಯಾನ್ಸಿ ಸಾಮಾಗ್ರಿ, ಖಾದಿ, ಕೈಮಗ್ಗದ ಬಟ್ಟೆಗಳು, ಬಾಡಿ ಮಸಾಜ್, ಅಲ್ಯೂಮಿನಿಯಂ ಏಣಿ, ನೋವಿನ ಎಣ್ಣೆ, ಹರ್ಬಲ್ ಉತ್ಪನ್ನಗಳು, ತರಕಾರಿ ಬೀಜಗಳ, ಮಳೆಕೊಯ್ಲು, ವಿವಿಧ ಖಾದ್ಯಗಳ ಆಹಾರ ಮಳಿಗೆಗಳಿವೆ. ಪುತ್ತೂರ ಹಬ್ಬದಲ್ಲಿ ವಿಶೇಷ ಆಕರ್ಷಣೆಯಾಗಿ ಮಕ್ಕಳಿಗೆ ವಿಶೇಷ ಪ್ಲೇಯಿಂಗ್ ಮತ್ತು ಫನ್‌ಝೋನ್‌ನ್ನು ಆಯೋಜಿಸಲಾಗಿದ್ದು ವಿವಿಧ ಆಟೋಪಕರಣಗಳು, ಮನರಂಜನಾ ಚಟುವಟಿಕೆಗಳು ಹಾಗೂ ಮಕ್ಕಳಿಗೆ ಸಂತಸ ನೀಡುವ ವಿನೂತನ ಆಟಗಳನ್ನು ಆಯೋಜಿಸಲಾಗಿದೆ.

LEAVE A REPLY

Please enter your comment!
Please enter your name here