







ಪುತ್ತೂರು: ಸೂಪರ್ ಪವರ್ ಕರೆಯುವಂತಹ ದೇಶಗಳು ಇಂದು ಯುದ್ಧಗಳಲ್ಲಿ ತೊಡಗಿಸಿಕೊಂಡಿದೆ. ನಾವು ಯಾಕೆ ಯುದ್ಧ ಮಾಡುತ್ತಿದ್ದೇವೆ ಎಂದು ಅವರಿಗೆ ಅರಿಯದಾಗಿದೆ. ಇಡೀ ವಿಶ್ವವೇ ವಿಶ್ವಶಾಂತಿಗಾಗಿ ಪರಿತಪಿಸುತ್ತಿದೆ. ಸಮಾಜ, ದೇಶ, ಜಗತ್ತಿನಲ್ಲಿ ಗುಣಮಟ್ಟದ ನಾಯಕತ್ವ ಇರುವುದಿಲ್ಲವೋ ಅಲ್ಲಿ ದುರಂತ ಸಂಭವಿಸುತ್ತದೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಆದ್ದರಿಂದ ನಾವೆಲ್ಲಾ ವಿಶ್ವಶಾಂತಿಗಾಗಿ ಪ್ರಾರ್ಥಿಸೋಣ, ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಯು ಕೂಡ ಇದನ್ನೇ ಬಯಸುತ್ತದೆ ಎಂದು ರೋಟರಿ ಪಿಡಿಜಿ ಅಭಿನಂದನ್ ಶೆಟ್ಟಿ ಹೇಳಿದರು.



ಜು.4ರಂದು ಬಪ್ಪಳಿಗೆ-ಬೈಪಾಸ್ ಇಲ್ಲಿನ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಂಗಣದಲ್ಲಿ ನಡೆದ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇದರ 2026-27ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪದ ಪ್ರದಾನವನ್ನು ನೆರವೇರಿಸಿ ಮಾತನಾಡಿದರು. ನಾವು ಮಾಡುವ ಕೆಲಸದಲ್ಲಿ, ಆಡುವ ಮಾತುಗಳಲ್ಲಿ, ನಡೆ-ನುಡಿಯಲ್ಲಿ ಸಮಾಜಕ್ಕೆ ಪ್ರಭಾವ ಬೀರುವಂತಾಗಬೇಕಾಗಿದೆ. ನಾವು ಸಮಾಜದಲ್ಲಿ ಮಾಡುವ ಪ್ರಾಜೆಕ್ಟ್ಗಳು ಸಮಾಜಕ್ಕೆ ಆಶಾಕಿರಣವಾಗಬೇಕು, ಉತ್ತಮ ಸಂದೇಶ ನೀಡುವಂತಾಗಬೇಕಿದೆ ಎಂದರು.




ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸ್ವಾವಲಂಭಿ ಸುಂದರ ಬದುಕನ್ನು ಕಾಣಬೇಕು-ಅರುಣ್ ಪುತ್ತಿಲ:
ಮುಖ್ಯ ಅತಿಥಿ, ಪುತ್ತಿಲ ಪರಿವಾರ ಟ್ರಸ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಸಮಾಜದ ಏಳಿಗೆಗಾಗಿ ಮಾನವೀಯತೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿದ ಸಂಸ್ಥೆ ಅಂತರ್ರಾಷ್ಟ್ರೀಯ ರೋಟರಿಯಾಗಿದೆ. ನಾವೆಲ್ಲ ಸರ್ವೇ ಜನ ಸುಖಿನೋ ಭವಂತು ಎಂಬಂತೆ ಒಳ್ಳೆಯ ಬದುಕನ್ನು ಕಾಣಬೇಕು, ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛಭಾರತ ಕನಸನ್ನು ಈಡೇರಿಸುವಂತಾಗಬೇಕು ಅದರಂತೆ ಬಯೋ ಗ್ಯಾಸ್ ಪ್ಲ್ಯಾಂಟ್ ಅನ್ನು ಅನುಷ್ಠಾನ ಮಾಡುವ ಮೂಲಕ ಸ್ವಚ್ಛಭಾರತದ ಕನಸು ಈಡೇರಿಸುವಲ್ಲಿ ರೋಟರಿ ಸಂಸ್ಥೆ ಹೆಜ್ಜೆ ಹಾಕುತ್ತಿರುವುದು ಶ್ಲಾಘನೀಯ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸಮಾಜದಲ್ಲಿ ಸ್ವಾವಲಂಭಿ ಸುಂದರ ಬದುಕನ್ನು ಕಾಣಬೇಕು ಎನ್ನುವ ರೋಟರಿ ಸಂಸ್ಥೆಯ ಧ್ಯೇಯ ಮೆಚ್ಚುವಂತಹುದು ಎಂದರು.

ನಾವು ಮಾಡುವ ಕೆಲಸ ಪ್ರಭಾವ ಬೀರುವಂತಾಗಬೇಕು-ಅಬ್ದುಲ್ ರಝಾಕ್ ಕಬಕಕಾರ್ಸ್:
ರೋಟರಿ ಅಸಿಸ್ಟೆಂಟ್ ಗವರ್ನರ್ ಅಬ್ದುಲ್ ರಝಾಕ್ ಕಬಕಕಾರ್ಸ್ ರವರು ಡಾ.ಶ್ಯಾಮ್ಪ್ರಸಾದ್ ಸಂಪಾದಕತ್ವದ ಕ್ಲಬ್ ಬುಲೆಟಿನ್ ಅನಾವರಣಗೊಳಿಸಿ ಮಾತನಾಡಿ, ಅಂತರ್ರಾಷ್ಟ್ರೀಯ ರೋಟರಿ ಅಧ್ಯಕ್ಷರ ಪ್ರಸ್ತುತ ವರ್ಷದ ಧ್ಯೇಯವಾಕ್ಯವಾಗಿರುವ ನಾವು ಮಾಡುವ ಕೆಲಸ ಪ್ರಭಾವ ಬೀರುವಂತಾಗಬೇಕು ಎಂಬುದು. ಅದರಂತೆ ಅಧ್ಯಕ್ಷ ರವಿಕುಮಾರ್ ರೈರವರು ತಿಂಗಳಾಡಿಯಲ್ಲಿ ರೋಟರ್ಯಾಕ್ಟ್ ಕ್ಲಬ್ ಆರಂಭಿಸಿ, ಇಂದು ರೋಟರಿ ಈಸ್ಟ್ ಅಧ್ಯಕ್ಷರಾಗಿರುವುದು ಅಂತರ್ರಾಷ್ಟ್ರೀಯ ರೋಟರಿ ಅಧ್ಯಕ್ಷೆಯವರ ಧ್ಯೇಯವಾಕ್ಯ ಸರಿಯೆನಿಸಿದೆ ಮಾತ್ರವಲ್ಲ ಪುತ್ತೂರಿನ ಎಲ್ಲಾ ಕ್ಲಬ್ಗಳು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಪ್ರಜ್ವಲಿಸುತ್ತಿದೆ ಎಂದರು.

ಶಶಿ ಜಾರಿದ, ರವಿ ಮೂಡಿದ, ವರ್ಷವಿಡೀ ರವಿಯದ್ದೇ ಪಾರುಪತ್ಯ-ಶಶಿಧರ್ ಕಿನ್ನಿಮಜಲು:
ರೋಟರಿ ವಲಯ ಸೇನಾನಿ ಹಾಗೂ ರೋಟರಿ ಕ್ಲಬ್ ಪುತ್ತೂರು ಈಸ್ಟ್ ನಿಕಟಪೂರ್ವ ಅಧ್ಯಕ್ಷ ಶಶಿಧರ್ ಕಿನ್ನಿಮಜಲು ಮಾತನಾಡಿ, ನನ್ನ ಅಧ್ಯಕ್ಷಾವಧಿಯಲ್ಲಿ ನಮ್ಮ ಕ್ಲಬ್ನ ಡಾ.ಸೂರ್ಯನಾರಾಯಣ ಕೆ.ರವರು ಜಿಲ್ಲಾ ಗವರ್ನರ್ ನಾಮಿನಿಯಾಗಿರುವುದು, ಪೂರ್ವಾಧ್ಯಕ್ಷ ಕೃಷ್ಣನಾರಾಯಣ ಮುಳಿಯರವರ ಕನಸಿನ ಸ್ವಚ್ಛಭಾರತದ ಉದ್ಘಾಟನೆ, ಕ್ಲಬ್ ಸದಸ್ಯರ ವಿದೇಶ ಪ್ರವಾಸ ಹೀಗೆ ಕ್ಲಬ್ನಿಂದ ಸಮಾಜದಲ್ಲಿನ ಬಡವರ ಕಣ್ಣೀರು ಒರೆಸುವ ಕಾರ್ಯ ನಡೆದಿದೆ ಎನ್ನುವುದಕ್ಕೆ ಖುಶಿಯಾಗುತ್ತದೆ. ಶಶಿ ಜಾರಿದ, ರವಿ ಮೂಡಿದ ಎಂಬಂತೆ ಮುಂದಿನ ವರ್ಷವಿಡೀ ರವಿಕುಮಾರ್ ರೈಯವರದ್ದೇ ಪಾರುಪತ್ಯ ಎಂದರು.

ರಸ್ತೆ ಸುರಕ್ಷತೆ, ನಾಗರಿಕ ಸೇವೆ, ಮಹಿಳೆಯರಿಗೆ ಪಿಂಕ್ ಆಟೋ ನೆರವು-ಪ್ರೊ|ದತ್ತಾತ್ರೇಯ ರಾವ್:
ಮಾತೃಸಂಸ್ಥೆ, ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಪ್ರೊ|ದತ್ತಾತ್ರೇಯ ರಾವ್ ಮಾತನಾಡಿ, ಜಿಲ್ಲೆಯಲ್ಲಿಯೇ ದೊಡ್ಡ ಕ್ಲಬ್ ಎನಿಸಿದ ರೋಟರಿ ಪುತ್ತೂರು ಪ್ರಾಯೋಜಿಸಿದ ಸಂಸ್ಥೆ ರೋಟರಿ ಈಸ್ಟ್ ಆಗಿದೆ. ರೋಟರಿ ಕ್ಲಬ್ ರೋಟರಿ ಜಿಲ್ಲಾ ಆಶಯಗಳಾದ ರಸ್ತೆ ಸುರಕ್ಷತೆ ಹಾಗೂ ನಾಗರಿಕ ಸೇವೆಯ ಬಗ್ಗೆ ಗಮನಹರಿಸೋಣ ಜೊತೆಗೆ ದುಡಿಯುವ ಸ್ವಾವಲಂಭಿ ಮಹಿಳೆಗೆ ಬ್ಯಾಂಕ್ ಸಾಲದೊಂದಿಗೆ ಪಿಂಕ್ ಆಟೋ ಒದಗಿಸುವ ಮೂಲಕ ಮಹಿಳೆಯ ಸ್ವಾವಲಂಭಿ ಬದುಕಿಗೆ ನಾಂದಿ ಹಾಡೋಣ. ನಿಕಟಪೂರ್ವ ಅಧ್ಯಕ್ಷ ಶಶಿಧರ್ ಕಿನ್ನಿಮಜಲುರವರು ಕ್ಲಬ್ ಅನ್ನು ಎತ್ತರದ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಅದನ್ನು ನೂತನ ನೂತನ ಅಧ್ಯಕ್ಷ ರವಿಕುಮಾರ್ ರೈಯವರು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದರು.
ನೂತನ ಸದಸ್ಯರ ಸೇರ್ಪಡೆ:
ಕ್ಲಬ್ ಸರ್ವಿಸ್ನಡಿಯಲ್ಲಿ ನೂತನ ಸದಸ್ಯರಾದ ಮಹಾಲಿಂಗೇಶ್ವರ ಟೈರ್ ವರ್ಕ್ಸ್ನ ಅಭಿಷೇಕ್ ಶೆಟ್ಟಿ, ಬಜಾಜ್ ಫೈನಾನ್ಸ್ ಕಲೆಕ್ಷನ್ ಮ್ಯಾನೇಜರ್ ಯಶೋಧರ ಪೂಜಾರಿ, ಹೊಟೇಲ್ ಉದ್ಯಮ ನಡೆಸುತ್ತಿರುವ ಕರುಣಾಕರ ಕರ್ಕೇರಾ, ಉದ್ಯಮಿ ಆದರ್ಶ್ ಭಟ್, ಕೃಷಿಕ ರಾಕೇಶ್ ರೈ, ಕೋಡಿಬೈಲು ಏಜೆನ್ಸೀಸ್ನ ಸದಾಶಿವ ರೈ ಕೋಡಿಬೈಲುರವರುಗಳನ್ನು ಪಿಡಿಜಿ ಅಭಿನಂದನ್ ಶೆಟ್ಟಿರವರು ರೋಟರಿ ಪಿನ್ ತೊಡಿಸಿ ಕ್ಲಬ್ಗೆ ಬರಮಾಡಿಕೊಂಡರು.
ಸೇವಾ ಚಟುವಟಿಕೆಗಳು:
ದೇವಾ ಟ್ರೇಡರ್ಸ್ನ ಟಿ.ವಿ ರವೀಂದ್ರನ್ರವರ ಪ್ರಾಯೋಜಕತ್ವದಲ್ಲಿ ಬಾಲಕ್ಕ ಬಿ ಅರಿಯಡ್ಕ, ರೇಶ್ಮಾ ಕೆ ಆರ್ಲಪದವು, ನಳಿನಿ ಶ್ರೀಧರ್ ಪಡ್ಡಾಯೂರು, ನರಿಮೊಗರು ಶಾರದಾ ಚಾರಿಟೇಬಲ್ ಟ್ರಸ್ಟ್ರವರಿಗೆ ಹೊಲಿಗೆ ಯಂತ್ರಗಳು, ಪಿಡಿಜಿ ವಿನಾಯಕ್ ಕುಡ್ವರವರಿಂದ ಎನ್ಐಟಿಕೆ ಇಂಜಿನಿಯರಿಂಗ್ ವಿದ್ಯಾರ್ಥಿ ಸಂಜಿತ್ರವರಿಗೆ ರೂ.1 ಲಕ್ಷ ಮೊತ್ತದ ಲ್ಯಾಪ್ಟಾಪ್ ಹಾಗೂ ಪುತ್ತೂರು ಸರಕಾರಿ ಆಸ್ಪತ್ರೆಯ ಫಿಸಿಯೋಥೆರಪಿ ಸೆಂಟರ್ಗೆ ರೂ.5 ಸಾವಿರ ಮೊತ್ತದ ಡಾಕ್ಟರ್ಸ್ ಚೇರ್, ಅಧ್ಯಕ್ಷ ರವಿಕುಮಾರ್ ರೈರವರಿಂದ ತಿಂಗಳಾಡಿ ಸರಕಾರಿ ಶಾಲೆಯ ಅಭಿವೃದ್ಧಿಗೆ ರೂ.5 ಸಾವಿರ ಚೆಕ್ ಹಾಗೂ ಶಾರದಾ ಚಾರಿಟೇಬಲ್ ಟ್ರಸ್ಟ್ಗೆ ಒಂದು ಕ್ವಿಂಟಾಲ್ ಅಕ್ಕಿ, ರವಿಕುಮಾರ್ ರೈ, ವಿಶ್ವಾಸ್ ಶೆಣೈ, ಮುರಳೀಶ್ಯಾಮ್, ಡಾ.ಶ್ಯಾಮ್ಪ್ರಸಾದ್, ಮನೋಜ್ ಡಿಸೋಜ, ಶಶಿಕಿರಣ್ ರೈ, ಜಯಂತ್ ಬಾಯಾರ್, ಕೃಷ್ಣಪ್ಪ ಕೆ, ಡಾ.ಸೂರ್ಯನಾರಾಯಣ ಕೆ, ಚಂದ್ರಶೇಖರ್ ಪ್ರಾಯೋಜಕತ್ವದಲ್ಲಿ ಉಜ್ರುಪಾದೆ ಸರಕಾರಿ ಶಾಲೆಗೆ ಮಕ್ಕಳಿಗೆ ಪುಸ್ತಕ ಇಡುವ ಎರಡು ಕಪಾಟುಗಳು, ಪಿಡಿಜಿ ವಿನಾಯಕ್ ಕುಡ್ವರವರ ಪ್ರಾಯೋಜಕತ್ವದಲ್ಲಿ ರೂ.2.30ಲಕ್ಷ ಮೊತ್ತದಲ್ಲಿ ಬೆಟ್ಟಂಪಾಡಿ ಪ್ರಿಯದರ್ಶಿನಿ ಶಾಲೆಗೆ ಲ್ಯಾಬೋರೇಟರಿ ಸಲಕರಣೆಗಳನ್ನು ಸೇವಾ ಚಟುವಟಿಕೆಯಾಗಿ ಹಸ್ತಾಂತರಿಸಲಾಯಿತು.
ಜಿಲ್ಲೆಯಲ್ಲಿ ಸೇವೆಗೈಯುವವರಿಗೆ ಅಭಿನಂದನೆ:
ಕ್ಲಬ್ ಸದಸ್ಯರಾಗಿದ್ದು, ರೋಟರಿ ಜಿಲ್ಲೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಲಿರುವ ಸಚ್ಚಿದಾನಂದ, ಶಶಿಧರ್ ಕಿನ್ನಿಮಜಲು, ಡಾ.ಸೂರ್ಯನಾರಾಯಣ ಕೆ, ಕೆ.ಆರ್ ಶೆಣೈ, ಪುರಂದರ ರೈ, ಜಯಂತ್ ನಡುಬೈಲು, ದಿವಾಕರ ನಿಡ್ವಣ್ಣಾಯ, ಸೂರ್ಯನಾಥ ಆಳ್ವ, ಕರ್ನಲ್ ಜಿ.ಡಿ ಭಟ್, ಶರತ್ ಕುಮಾರ್ ರೈ, ಪ್ರಮೀಳಾ ರಾವ್, ಅಬ್ಬಾಸ್ ಮುರ, ಡಾ.ಶ್ಯಾಮ್ಪ್ರಸಾದ್, ಕೃಷ್ಣನಾರಾಯಣ ಮುಳಿಯ, ಮುರಳೀಶ್ಯಾಂರವರುಗಳನ್ನು ಅಭಿನಂದಿಸಲಾಯಿತು.

ವಿದ್ಯಾರ್ಥಿವೇತನ ವಿತರಣೆ:
ದಿ.ಮಾರಪ್ಪ ಶೆಟ್ಟಿ ಧತ್ತಿನಿಧಿ ಸಹಾಯಾರ್ಥವಾಗಿ ಮೈಸೂರು ಪಿ.ಚಿತ್ತರಂಜನ್ ಶೆಟ್ಟಿ ಪ್ರಾಯೋಜಕತ್ವದಲ್ಲಿ ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನ ಯತೀನ್, ಬಾನ್ವಿ ಸಿ.ಎಚ್, ಹಾರ್ದಿಕ್ ಎಂ, ಸಮೀಕ್ಷಾ ಡಿ, ಪೂಜಾಶ್ರೀ(ತಲಾ.ರೂ.4000), ಉಜಿರೆ ಎಸ್ಡಿಎಂಸಿಯ ತಪಸ್ಯ(ರೂ.5000), ದಿ.ಕುಡ್ಗಿ ಸುಧಾಕರ್ ಶೆಣೈ ಧತ್ತಿನಿಧಿಯಲ್ಲಿ ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನ ಮನ್ವಿತಾ, ವಿದ್ಯಾ, ಸಿಂಚನಾ, ನಿಕ್ಷಿತ್, ವಿವೇಕಾನಂದ ಕಾಲೇಜಿನ ಅಭಿಜ್ಞಾ(ತಲಾ ರೂ.4000), ವಿವೇಕಾಂದ ಇಂಜಿನಿಯರಿಂಗ್ ಕಾಲೇಜಿನ ಹಂಶಿತಾ(ರೂ.5000), ಕುಡ್ಗಿ ರತ್ನಾಕರ್ ಶೆಣೈ ವಿದ್ಯಾರ್ಥಿವೇತನದಲ್ಲಿ ಸುಬ್ರಹ್ಮಣ್ಯ ಸರಕಾರಿ ಪದವಿ ಕಾಲೇಜಿನ ಜ್ಯೋತಿ ಕೆದಂಬಾಡಿ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಎ.ಬಿ ಯಶ್ವಿನ್, ಅಕ್ಷಯ ಕಾಲೇಜಿನ ಮೇಘ, ಪೂರ್ಣಿಮಾ, ಕೊಂಬೆಟ್ಟು ಸರಕಾರಿ ಪಿಯು ಕಾಲೇಜಿನ ಅಶ್ವಿತಾ(ತಲಾ ರೂ.5000), ಕುಡ್ಗಿ ಪ್ರಭಾಕರ ಶೆಣೈ ವಿದ್ಯಾರ್ಥಿವೇತನದಲ್ಲಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆದರ್ಶ್ ಅಂಕೊಲೇಖರ್(ರೂ.11,4074)ರವರಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.

ಆನೆಟ್ಸ್ಗಳಿಗೆ ಗೌರವ:
ಕ್ಲಬ್ ಸದಸ್ಯರ ಮಕ್ಕಳಾಗಿದ್ದು ವಿವಿಧ ಕ್ಷೇತ್ರದಲ್ಲಿ ಹೆಸರು ಗಳಿಸಿದ ಡಾ.ಪ್ರಥ್ವಿಸಾಗರ್ ಕೆ.ಎಸ್(ಸುರೇಶ್ ಕೆರವರ ಪುತ್ರ), ತನ್ಮಯ್ ನವೀನ್ ರೈ(ನವೀನ್ ಕುಮಾರ್ ಪಂಜಳರವರ ಪುತ್ರ), ತನಿಶ್ ಎಂ.ಭಟ್(ಡಾ.ಶ್ಯಾಮ್ಪ್ರಸಾದ್ರವರ ಪುತ್ರ)ರವರುಗಳನ್ನು ಗೌರವಿಸಲಾಯಿತು.
ಟಿ.ಆರ್.ಎಫ್ ದೇಣಿಗೆ:
ಅಂತರ್ರಾಷ್ಟ್ರೀಯ ರೋಟರಿ ಫೌಂಡೇಶನ್ಗೆ ದೇಣಿಗೆ ನೀಡಿದ ಡಾ.ಸೂರ್ಯನಾರಾಯಣ ಕೆ, ಪ್ರಮೀಳಾ ರಾವ್, ಕೆ.ವಿಶ್ವಾಸ್ ಶೆಣೈ, ಪುರಂದರ ರೈ, ಬುಡಿಯಾರು ರಾಧಾಕೃಷ್ಣ ರೈ, ಜಯಂತ್ ನಡುಬೈಲು, ಸಚ್ಚಿದಾನಂದ, ಮುರಳೀಶ್ಯಾಂ, ಕೃಷ್ಣನಾರಾಯಣ ಮುಳಿಯ, ಸುರೇಶ್ ಕೆ.ಯು, ರವಿಕುಮಾರ್ ರೈ, ಜಯಂತ್ ಬಾಯಾರ್, ಪ್ರಕಾಶ್ ರೈರವರುಗಳನ್ನು ಅಭಿನಂದಿಸಲಾಯಿತು.
ತನ್ವಿ ಶೆಣೈರವರು ವಂದೇ ಮಾತರಂ ಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕ್ಲಬ್ ನಿರ್ಗಮಿತ ಅಧ್ಯಕ್ಷ ಶಶಿಧರ್ ಕಿನ್ನಿಮಜಲುರವರ ಪತ್ನಿ ಅರ್ಪಿತಾ, ನೂತನ ಅಧ್ಯಕ್ಷ ರವಿಕುಮಾರ್ ರೈರವರ ಪತ್ನಿ ಕವಿತಾ, ೨೦೨೪-೨೫ರ ಅಧ್ಯಕ್ಷ ಡಾ.ರವಿಪ್ರಕಾಶ್ ಕಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್ ನಿರ್ಗಮಿತ ಅಧ್ಯಕ್ಷ ಶಶಿಧರ್ ಕಿನ್ನಿಮಜಲು ಸ್ವಾಗತಿಸಿ, ನೂತನ ಕಾರ್ಯದರ್ಶಿ ಜಯಂತ್ ಬಾಯಾರು ವಂದಿಸಿದರು. ನಿರ್ಗಮಿತ ಕಾರ್ಯದರ್ಶಿ ನವೀನ್ ರೈ ಪಂಜಳರವರು ವರದಿಯನ್ನು ಹಾಗೂ ಪದ ಪ್ರದಾನ ಅಧಿಕಾರಿಯ, ಮುಖ್ಯ ಅತಿಥಿಗಳ ಪರಿಚಯವನ್ನು ಎಲ್.ಇ.ಡಿ ಪರದೆಯ ಮೂಲಕ ಪರಿಚಯಿಸಲಾಗಿತ್ತು. ಎಕೆಎಸ್ ಕೆ.ವಿಶ್ವಾಸ್ ಶೆಣೈ ಹಾಗೂ ಚಂದ್ರಶೇಖರ್ ಎಸ್ ಕಾರ್ಯಕ್ರಮ ನಿರೂಪಿಸಿದರು.

ಕಾಯಾ ವಾಚಾ ಮನಸ್ಸಿನಿಂದ ಮುನ್ನೆಡೆಸುವೆ…
ಕ್ಲಬ್ನಲ್ಲಿ ಅಧ್ಯಕ್ಷನಾಗಿರುವ ಈ ದಿನವನ್ನು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ. ಬಡ ಕುಟುಂಬದಲ್ಲಿ ಬಂದಂತಹ ನಾನು ಪದವೀಧರನಲ್ಲದಿದ್ದರೂ, ಸ್ವಂತ ದುಡಿಮೆಯ ಮೂಲಕ ಪರೋಪಕಾರಿ ಸೇವೆ ಮಾಡುತ್ತಿರುವುದು ನನಗೆ ಖುಶಿ ತಂದಿದೆ. ತಿಂಗಳಾಡಿಯಲ್ಲಿ ರೋಟರ್ಯಾಕ್ಟ್ ಸಂಸ್ಥೆಯ ಮೂಲಕ ತನ್ನ ರೋಟರಿ ಜೀವನವನ್ನು ಆರಂಭಿಸಿ ಇದೀಗ ಪ್ರತಿಷ್ಠಿತ ರೋಟರಿ ಈಸ್ಟ್ ಸಂಸ್ಥೆಯ ಅಧ್ಯಕ್ಷನಾಗಲು ಪ್ರೇರಣೆಯಾಗಿದ್ದಾರೆ ಕೆ.ವಿಶ್ವಾಸ್ ಶೆಣೈಯವರು. ಕಳೆದ 38 ಅಧ್ಯಕ್ಷರು ಈ ಕ್ಲಬ್ನ್ನು ಮುನ್ನೆಡೆಸುತ್ತಾ ಬಂದಿದ್ದು, ಇದೇ ಕ್ಲಬ್ನ್ನು ಮತ್ತಷ್ಟು ಎತ್ತರಕ್ಕೇರಿಸಲು ನಾನು ಕಾಯಾ ವಾಚಾ ಮನಸ್ಸಾ ಪ್ರಯತ್ನ ಪಡುತ್ತೇನೆ, ಇದಕ್ಕೆ ಎಲ್ಲರ ಸಹಕಾರ ಬೇಕಾಗಿದೆ. ಕ್ಲಬ್ ಮುನ್ನೆಡೆಸುವಲ್ಲಿ ಒಂದಷ್ಟು ಯೋಚನೆ, ಯೋಜನೆಗಳಿದ್ದು, ಸದಸ್ಯರ ನಂಬಿಕೆ, ವಿಶ್ವಾಸದಿಂದ ಎಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಣೆ ಮಾಡೋಣ.
-ರವಿಕುಮಾರ್ ರೈ, ನೂತನ ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು ಈಸ್ಟ್
ಡೈಮಂಡ್ ಫ್ಲಸ್ ಅವಾರ್ಡ್..
ಪುತ್ತೂರಿನಲ್ಲಿ ಮೊದಲ ಬಾರಿಗೆ ರೋಟರಿ ಜಿಲ್ಲಾ ಗವರ್ನರ್ ಆಗಿ ಪಿಡಿಜಿ ಡಾ.ಭಾಸ್ಕರ್ ಎಸ್ರವರು ಆಯ್ಕೆಯಾಗಿದ್ದರು. ಇದೀಗ ರೋಟರಿ ಕ್ಲಬ್ ಪುತ್ತೂರು ಈಸ್ಟ್ನ ಪೂರ್ವಾಧ್ಯಕ್ಷ ಡಾ.ಸೂರ್ಯನಾರಾಯಣ ಕೆ.ರವರು ೨೦೨೮-೨೯ನೇ ಸಾಲಿನ ಜಿಲ್ಲಾ ಗವರ್ನರ್ ಆಗಿ ಆಯ್ಕೆಯಾಗಿದ್ದು ಜೊತೆಗೆ ರೋಟರಿ ಈಸ್ಟ್ ಕ್ಲಬ್ ಪ್ರಥಮ ಬಾರಿಗೆ ೨೦೨೫-೨೬ನೇ ಸಾಲಿನ ಸೇವಾ ಚಟುವಟಿಕೆಗಳಿಗೆ ಡೈಮಂಡ್ ಫ್ಲಸ್ ಅವಾರ್ಡ್ಗೆ ಭಾಜನವಾಗಿದ್ದು, ಇದರ ಅನಾವರಣವನ್ನು ಪಿಡಿಜಿ ಅಭಿನಂದನ್ ಶೆಟ್ಟಿರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಗವರ್ನರ್ ನಾಮಿನಿ ಡಾ.ಸೂರ್ಯನಾರಾಯಣ ಕೆ ಹಾಗೂ ಮನೋರಮಾ ಸೂರ್ಯನಾರಾಯಣ ದಂಪತಿಯನ್ನು ಸನ್ಮಾನಿಸಲಾಯಿತು.
ಸನ್ಮಾನ..
ಪುತ್ತೂರು ಏಳ್ಮುಡಿಯಲ್ಲಿ ಕಾರ್ಯಾಚರಿಸುತ್ತಿರುವ ಗಣೇಶ್ ರೇಡಿಯೋ ಕಾರ್ಪೋರೇಶನ್ ಇದರ ಮಾಲಕಿ ಹಾಗೂ ದೇವಾ ಟ್ರೇಡರ್ಸ್ ಇದರ ಪಾಲುದಾರರಾಗಿರುವ ಮಾಜಿ ಅಸಿಸ್ಟೆಂಟ್ ಗವರ್ನರ್ ಸಚ್ಚಿದಾನಂದ ಇವರ ತಾಯಿಯಾಗಿರುವ 78 ವರ್ಷದ ಮೀನಾಕ್ಷಿ ದೇವಪ್ಪ, ಕೇರಳ ಕಣ್ಣೂರಿನಲ್ಲಿ ಜನಿಸಿದ್ದರೂ ಪುತ್ತೂರಿನಲ್ಲಿ ವಾಸ್ತವ್ಯ ಹೊಂದಿದ್ದು, ಆರಂಭದಲ್ಲಿ ಗಣೇಶ್ ರೇಡಿಯೋ ಕೋರ್ಪೊರೇಶನ್ನಲ್ಲಿ ರೇಡಿಯೋ ಮೆಕಾನಿಕ್ ಆಗಿ ಕಾರ್ಯ ನಿರ್ವಹಿಸಿ ಬಳಿಕ ಮೀನಾಕ್ಷಿ ದೇವಪ್ಪರವರ ಪಾಲುದಾರಿಕೆಯೊಂದಿಗೆ ದೇವಾ ಟ್ರೇಡರ್ಸ್ ಸಂಸ್ಥೆಯನ್ನು ಸ್ಥಾಪಿಸಿದ ಟಿ.ವಿ ರವೀಂದ್ರನ್, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಹಾಗೂ ಮೈ ಗವರ್ನ್ಮೆಂಟ್ ಸಂಯುಕ್ತವಾಗಿ ಆಯೋಜಿಸಿದ ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೊಕ್ಗುರು ಆಂಡ್ ಅಜಿವಿಕಾ ವಿಷನ್ ಗ್ರಾಮೀಲಿ ರಾಷ್ಟ್ರೀಯ ಲೋಗೋ ವಿನ್ಯಾಸ ಸ್ಪರ್ಧೆಯಲ್ಲಿ ದೇಶದಾದ್ಯಂತ 7233 ಪ್ರವೇಶಿಕೆಗಳ ಪೈಕಿ ಆಯ್ಕೆಯಾಗಿರುವ ಹಾಗೂ ನವದೆಹಲಿಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾನ್ರವರಿಂದ ರಾಷ್ಟ್ರೀಯ ವಿಕಾಸ ಸಮ್ಮೇಳನದಲ್ಲಿ ನಗದು ಬಹುಮಾನ ಪಡೆದಿರುವ ಬಪ್ಪಳಿಗೆ ನಿವಾಸಿ ರಾಮ್ಪ್ರಸಾದ್, ಕೆದಂಬಾಡಿ ಘನತ್ಯಾಜ್ಯ ಘಟಕದ ವಾಹನದ ಚಾಲಕಿಯಾಗಿ ಕಳೆದ 4 ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಪುಷ್ಪ ಎಂ, ಕೆದಂಬಾಡಿ ಪಂಚಾಯತ್ನ ಘನತ್ಯಾಜ್ಯ ಘಟಕದಲ್ಲಿ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಗಿರಿಜಾ ಬಿ, ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎಂಟನೇ ರ್ಯಾಂಕ್ ಗಳಿಸಿದ ನರೇಂದ್ರ ಪಿಯು ಕಾಲೇಜಿನ ಷಷ್ಠಿಕಾ ಎಂ.ಕೆ ಮತ್ತು ಕಳೆದ ವರ್ಷ ಕ್ಲಬ್ ಅನ್ನು ಉತ್ತಮ ರೀತಿಯಲ್ಲಿ ಮುನ್ನೆಡೆಸಿದ ಕ್ಲಬ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲು ಹಾಗೂ ಕಾರ್ಯದರ್ಶಿ ನವೀನ್ ರೈ ಪಂಜಳ, ಪೋಲಿಯೋ ಫ್ಲಸ್ ಸೊಸೈಟಿ ಸದಸ್ಯರಾಗಿ ಆಯ್ಕೆಯಾದ ಪ್ರಮೀಳಾ ರಾವ್ರವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಪದ ಪ್ರದಾನ…
ಕ್ಲಬ್ ನೂತನ ಅಧ್ಯಕ್ಷ ರವಿಕುಮಾರ್ ರೈ ಕೆದಂಬಾಡಿ ಮಠ, ಕಾರ್ಯದರ್ಶಿ ಜಯಂತ್ ಬಾಯಾರು, ಕೋಶಾಧಿಕಾರಿ ಹಾಗೂ ಜೊತೆ ಕಾರ್ಯದರ್ಶಿ ಪ್ರಕಾಶ್ ರೈ ಮನವಳಿಕೆ, ನಿಕಟಪೂರ್ವ ಅಧ್ಯಕ್ಷ ಹಾಗೂ ವೆಬ್/ಐಟಿ ಚೇರ್ಮನ್ ಶಶಿಧರ್ ಕಿನ್ನಿಮಜಲು, ನಿಯೋಜಿತ ಅಧ್ಯಕ್ಷ ದೀಪಕ್ ಶೆಟ್ಟಿ, ಉಪಾಧ್ಯಕ್ಷ ನವೀನ್ ಕುಮಾರ್ ಶೆಟ್ಟಿ, ಸಾರ್ಜಂಟ್ ಎಟ್ ಆಮ್ಸ್೯ ಶರತ್ ಕುಮಾರ್ ರೈ, ಬುಲೆಟಿನ್ ಎಡಿಟರ್ ಡಾ.ಶ್ಯಾಮ್ ಪ್ರಸಾದ್ ಎಂ, ನಿರ್ದೇಶಕರುಗಳಾದ ಕ್ಲಬ್ ಸರ್ವಿಸ್ ದೀಪಕ್ ಶೆಟ್ಟಿ, ವೊಕೇಶನಲ್ ಸರ್ವಿಸ್ ಸುರೇಶ್ ಕೆ.ಯು, ಕಮ್ಯೂನಿಟಿ ಸರ್ವಿಸ್ ವಿಶ್ವಾಸ್ ಶೆಣೈ, ಇಂಟರ್ನ್ಯಾಷನಲ್ ಸರ್ವಿಸ್ ಜಯಂತ್ ನಡುಬೈಲು, ಯೂತ್ ಸರ್ವಿಸ್ ನವೀನ್ ರೈ ಪಂಜಳ, ಚೇರ್ಮನ್ಗಳಾದ ಟಿ.ಆರ್.ಎಫ್ ಮುರಳೀಶ್ಯಾಮ್, ಪಬ್ಲಿಕ್ ಇಮೇಜ್ ಕೃಷ್ಣನಾರಾಯಣ ಮುಳಿಯ, ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಡಾ.ಸೂರ್ಯನಾರಾಯಣ, ಪೋಲಿಯೊ ಪ್ಲಸ್ ಪ್ರಮೀಳಾ ರಾವ್ರವರಿಗೆ ಪಿಡಿಜಿ ಅಭಿನಂದನ್ ಶೆಟ್ಟಿರವರು ಪದ ಪ್ರದಾನ ಕಾರ್ಯಕ್ರಮವನ್ನು ನೆರವೇರಿಸಿದರು.










