ಮೋಂತಿಮಾರ್ : ಬಸ್‌ ನಿಲ್ದಾಣದಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನ ಆರೋಪ – ಆರೋಪಿ ಪರಾರಿ

0

ವಿಟ್ಲ: ಕಾಲೇಜಿಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಯುವಕನೋರ್ವ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮೋಂತಿಮಾರು ಪಡ್ಪು ಬಸ್ ನಿಲ್ದಾಣದಲ್ಲಿ ಜು.6ರಂದು ನಡೆದಿದೆ.

ಪ್ರಕರಣದಲ್ಲಿ ಬಂಟ್ವಾಳ ತಾಲೂಕು ಮಂಚಿ ನಿವಾಸಿ ಮಹಮ್ಮದ್ ಜವ್ವಾರ್ (28 ವ.) ಎಂಬಾತನ ವಿರುದ್ಧ ಆರೋಪ ಕೇಳಿಬಂದಿದೆ. ಆತ ಬಸ್ ನಿಲ್ದಾಣದ ಸಮೀಪ ದಿನಸಿ ಅಂಗಡಿ ನಡೆಸುತ್ತಿದ್ದಾನೆ ಎನ್ನಲಾಗಿದೆ.

ವಿದ್ಯಾರ್ಥಿನಿ ಬಸ್‌ಗಾಗಿ ಕಾಯುತ್ತಿದ್ದ ವೇಳೆ ಆರೋಪಿ ಚೂರಿಯಿಂದ ಇರಿದಿದ್ದ. ಈ ಸಂದರ್ಭದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಇತರ ಪ್ರಯಾಣಿಕರು ಘಟನೆ ಕಂಡು ಜೋರಾಗಿ ಕಿರುಚಿದ ಪರಿಣಾಮ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ತಲೆ ಹಾಗೂ ಕೈ ಯ ಭಾಗಕ್ಕೆ ಗಂಭೀರ ಗಾಯಗೊಂಡ ವಿದ್ಯಾರ್ಥಿನಿಯನ್ನು ಸ್ಥಳೀಯರು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಮಾಹಿತಿ ಪಡೆದ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಆಸ್ಪತ್ರೆಗೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ. ಘಟನೆಯ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಬಾಲಕಿ ಅಪಾಯದಿಂದ ಪಾರಾಗಿದ್ದು, ಪರಾರಿಯಾಗಿರುವ ಆರೋಪಿಯ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಎಂದು‌ ಮಾಹಿತಿ ಲಭಿಸಿದೆ.

LEAVE A REPLY

Please enter your comment!
Please enter your name here