ಪುತ್ತೂರು: ಸರ್ವೆಯರ್‌ಗಳ ಮುಷ್ಕರ ಅಂತ್ಯ – ಬಾಕಿ ಕಡತಗಳ ಶೀಘ್ರ ವಿಲೇವಾರಿಗೆ ಶಾಸಕ ಅಶೋಕ್ ರೈ ಸೂಚನೆ

0

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಂದಾಯ ಇಲಾಖೆಯ ಸರ್ವೆಯರ್‌ಗಳು ಕಳೆದ ನಾಲ್ಕು ತಿಂಗಳಿಂದ ಮುಷ್ಕರದಲ್ಲಿದ್ದ ಕಾರಣ ಬಾಕಿ ಉಳಿದಿದ್ದ ಕಡತಗಳ ವಿಲೇವಾರಿ ಕುರಿತು ಶಾಸಕ ಅಶೋಕ್ ರೈ ಸೋಮವಾರ ತಮ್ಮ ಕಚೇರಿಯಲ್ಲಿ ಕಂದಾಯ ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸಿದರು.

ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು:
ಬಾಕಿ ಕಡತಗಳ ವಿಲೇವಾರಿ: ಸುಮಾರು 1000 ಬಗರ್‌ಹುಕುಂ ಹಕ್ಕು ಪತ್ರ ಕಡತಗಳು ಬಾಕಿ ಇವೆ. ಇವುಗಳನ್ನು ಮುಂದಿನ 3 ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಕನ್ವರ್ಷನ್, 11ಇ ಖಾತೆ ಕಡತಗಳನ್ನು 45 ದಿನಗಳೊಳಗೆ ವಿಲೇವಾರಿ ಮಾಡಲಾಗುವುದು. 312 ಕಡತಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಫ್ಲಾಟಿಂಗ್ ಕಡತಗಳು ತಹಶೀಲ್ದಾರ್ ಕಚೇರಿಯಿಂದ ಸರ್ವೆ ಇಲಾಖೆಗೆ ಪುಶ್ ಆಗಿದ್ದು, ಹಂತಹಂತವಾಗಿ ವಿಲೇವಾರಿ ಮಾಡಲು ಸೂಚನೆ ನೀಡಿದ್ದಾರೆ.

ಫ್ಲಾಟಿಂಗ್ ಅರ್ಜಿದಾರರಿಗೆ ಭರವಸೆ:
ಫ್ಲಾಟಿಂಗ್ ಅರ್ಜಿ ಹಾಕಿದವರ ಕಡತಗಳು ಆಟೋಮ್ಯಾಟಿಕ್ ಆಗಿ ಸರ್ವೆ ಇಲಾಖೆಗೆ ಪುಶ್ ಆಗಲಿವೆ.ಈಗಾಗಲೇ ಶೇ.80 ಕಡತಗಳು ತಹಶೀಲ್ದಾರ್ ಲಾಗಿನ್‌ನಿಂದ ಸರ್ವೆ ಇಲಾಖೆಗೆ ಹೋಗಿವೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಶಾಸಕರು ತಿಳಿಸಿದರು. ಪುತ್ತೂರಿನಲ್ಲಿ 15 ಸರ್ಕಾರಿ ಸರ್ವೆಯರ್‌ಗಳು ಇದ್ದು, ಉಳಿದಂತೆ ಲೈಸೆನ್ಸ್‌ಡ್ ಸರ್ವೆಯರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ವೇತನ ಹೆಚ್ಚಳದ ಬೇಡಿಕೆಯನ್ನು ಕಂದಾಯ ಸಚಿವರ ಗಮನಕ್ಕೆ ತರುವುದಾಗಿ ಶಾಸಕರು ಭರವಸೆ ನೀಡಿದರು. ಕಡತಗಳ ಇತ್ಯರ್ಥಕ್ಕೆ ಹೆಚ್ಚುವರಿ ಲೈಸೆನ್ಸ್‌ಡ್ ಸರ್ವೆಯರ್‌ಗಳ ನೇಮಕಾತಿಗೆ ಸರ್ಕಾರದ ಮೇಲೆ ಒತ್ತಡ ತರುವುದಾಗಿ ಹೇಳಿದರು.

ಸಾರ್ವಜನಿಕರಲ್ಲಿ ಮನವಿ:

ಸರ್ವೆಯರ್‌ಗಳು ಅಳತೆಗೆ ಬಂದಾಗ ಸಹಕರಿಸುವಂತೆ ಶಾಸಕರು ಮನವಿ ಮಾಡಿದರು. “ವ್ಯರ್ಥ ಕಾರಣ ಹೇಳಿ ಅವರನ್ನು ಹಿಂದಕ್ಕೆ ಕಳುಹಿಸಬೇಡಿ. ಎಲ್ಲರೂ ಕೈಜೋಡಿಸಿದರೆ ಕಡತಗಳ ಇತ್ಯರ್ಥ ಶೀಘ್ರವಾಗುತ್ತದೆ” ಎಂದು ತಿಳಿಸಿದರು. ಸರ್ವೆಯರ್‌ಗಳ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಕಂದಾಯ ಸಚಿವರು ನೀಡಿರುವ ಆದೇಶದಂತೆ ಕಡತ ವಿಲೇವಾರಿ ಸಮರೋಪಾದಿಯಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.


ಸಭೆಯಲ್ಲಿ ಡಿಡಿಎಲ್‌ಆರ್ ಪುಷ್ಪರಾಜ್, ಎಡಿಎಲ್‌ಆರ್, ಸರ್ವೆಯರ್‌ಗಳು, ಲೈಸೆನ್ಸ್‌ಡ್ ಸರ್ವೆಯರ್‌ಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here