








ಉಪ್ಪಿನಂಗಡಿ: ಗುರುವಾಯನಕೆರೆ- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಮಧ್ಯೆ ಸಂಪರ್ಕ ಸೇತುವಾಗಿರುವ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ ಸೇತುವೆಯಲ್ಲಿ ಅಲ್ಲಲ್ಲಿ ಸಿಮೆಂಟ್ ಕಾಂಕ್ರೀಟ್ ಎದ್ದು ಹೋಗಿ ಕಬ್ಬಿಣದ ಕಂಬಿಗಳು ಕಾಣಲಾರಂಭಿಸಿವೆ. ಇದು ಸೇತುವೆಯ ಈಗಿನ ಧಾರಣಾ ಸಾಮರ್ಥ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.



60 ವರ್ಷಗಳ ಹಿಂದೆ ಆಗಿನ ಮೈಸೂರು ಸರಕಾರವು ಲೋಕೋಪಯೋಗಿ ಇಲಾಖೆಯ ಅನುದಾನದಡಿ ಈ ಸೇತುವೆಯನ್ನು ನಿರ್ಮಿಸಿತ್ತು. ಪುತ್ತೂರು ಹಾಗೂ ಬೆಳ್ತಂಗಡಿ ತಾಲೂಕಿನ ಗಡಿಯಲ್ಲಿರುವ ಈ ಸೇತುವೆಯು ಬೆಳ್ತಂಗಡಿ ತಾಲೂಕಿನ ಇಳಂತಿಲ, ಕರಾಯ, ತಣ್ಣೀರುಪಂತ, ಕುಪ್ಪೆಟ್ಟಿ, ಹಲೇಜಿ ಜಾರಿಗೆಬೈಲು, ಗೇರುಕಟ್ಟೆ, ಗುರುವಾಯನಕೆರೆ, ಬಂದಾರು ಸೇರಿದಂತೆ ಪದ್ಮುಂಜ ಭಾಗದವರಿಗೆ ಉಪ್ಪಿನಂಗಡಿಯನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದೆ. ಅಲ್ಲದೇ, ಧರ್ಮಸ್ಥಳ, ಕಾರ್ಕಳ, ಉಜಿರೆ, ಶಿವಮೊಗ್ಗ, ಚಿಕ್ಕಮಂಗಳೂರು ಜಿಲ್ಲೆಗಳಿಗೆ ತೆರಳಲು ಪ್ರಮುಖ ಸಂಪರ್ಕ ಸೇತುವಾಗಿದೆ. ದಿನಕ್ಕೆ ಸಾವಿರಾರು ವಾಹನಗಳು ಈ ಸೇತುವೆಯಲ್ಲಿ ಸಂಚರಿಸುತ್ತಿದ್ದು, ಕಳೆದೊಂದು ವರ್ಷದಿಂದ ಮೂಡಬಿದ್ರೆ ಕಡೆಯಿಂದ ಗಣಿಗಾರಿಕೆಯಲ್ಲಿನ ಮಣ್ಣು ಸಾಗಾಟ ಮಾಡುವ ಘನಗಾತ್ರದ ಲಾರಿಗಳು ರಾತ್ರಿ ಹೊತ್ತಿನಲ್ಲಿ ಈ ಸೇತುವೆಯಲ್ಲಿ ನಿರಂತರ ಸಾಗತೊಡಗಿವೆ. ಈಗ ಸೇತುವೆಯ ಫಿಲ್ಲರ್ಗಳು ಸೇರಿದಂತೆ ಸೇತುವೆಯ ಕೆಳಭಾಗದಲ್ಲಿ ಕಾಂಕ್ರೀಟ್ ಮಿಶ್ರಣ ಅಲ್ಲಲ್ಲಿ ಎದ್ದು ಹೋಗಿ ಕಬ್ಬಿಣದ ಕಂಬಿಗಳು ಕಾಣತೊಡಗಿವೆ. ಸೇತುವೆಯನ್ನು ಆಶ್ರಯಿಸಿಕೊಂಡು ಕೆಲವು ಜಾತಿಯ ಮರಗಳು ಬೆಳೆಯುತ್ತಿವೆ. ಈ ನಿಟ್ಟಿನಲ್ಲಿ ಸೇತುವೆಯ ಬಾಳಿಕೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆ ಕಾರಣವಾಗಿದೆ. ಆದ್ದರಿಂದ ಅಪಾಯ ಬಂದೊದಗುವ ಮುನ್ನ ಸಂಬಂಧಿತ ಇಲಾಖಾಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.




ಈ ಸೇತುವೆಯ ಮೇಲೆ ಘನ ಗಾತ್ರದ ಲಾರಿಗಳು ಮಣ್ಣು ಸಾಗಾಟ ನಡೆಸುತ್ತಿವೆ. ಇದರಿಂದ ಈಗಾಗಲೇ ಉಪ್ಪಿನಂಗಡಿ- ಗುರುವಾಯನಕೆರೆ ರಾಜ್ಯ ಹೆದ್ದಾರಿ ಸಂಪೂರ್ಣ ಕೆಟ್ಟು ಹೋಗಿದ್ದು, ಸೇತುವೆಯೂ ಅಪಾಯಕ್ಕೆ ಸಿಲುಕುವ ಭೀತಿಯಿದೆ. ಈಗಾಗಲೇ ಸೇತುವೆಯ ಫಿಲ್ಲರ್ನಲ್ಲಿ ಸಿಮೆಂಟ್ನ ಕಾಂಕ್ರೀಟ್ ಮಿಶ್ರಣ ಎದ್ದು ಹೋಗಿದ್ದರಿಂದ ಅಲ್ಲಲ್ಲಿ ಕಬ್ಬಿಣದ ಕಂಬಿಗಳು ಕಾಣಿಸುತ್ತಿವೆ. ಆದ್ದರಿಂದ ಅಧಿಕಾರಿಗಳು ಎಚ್ಚೆತ್ತುಕೊಂಡು ಇದರ ಧಾರಣಾ ಸಾಮರ್ಥ್ಯ ಪರೀಕ್ಷಿಸಬೇಕು. ಮುಂದೆ ಏನಾದರೂ ಅಪಾಯ ಸಂಭವಿಸಿದರೆ ಅದಕ್ಕೆ ಅಧಿಕಾರಿಗಳೇ ನೇರ ಹೊಣೆ.
ಇಸುಬು ಪೆದಮಲೆ
ಮಾಜಿ ಅಧ್ಯಕ್ಷರು, ಇಳಂತಿಲ ಗ್ರಾ.ಪಂ.


ಈ ಸೇತುವೆಗೆ 60 ವರ್ಷ ಸಂದಿದೆ. ಆದರೂ ಇಲಾಖೆಯು ಯಾವುದೇ ನಿರ್ವಹಣೆ ನಡೆಸುತ್ತಿಲ್ಲ. ಇದರ ಗುಣಮಟ್ಟದ ವಾಸ್ತವಾಂಶ ತಿಳಿಯುವ ಗೋಜಿಗೆ ಹೋಗುತ್ತಿಲ್ಲ. ಈಗಾಗಲೇ ಸೇತುವೆ ಮೇಲೆ ವಾಹನಗಳು ಸಾಗುವಾಗ ಪಕ್ಕದಲ್ಲಿರುವ ಕಟ್ಟಡಗಳು ಅದುರಿದಂತಾಗುತ್ತವೆ.
ಯು.ಟಿ. ಫಯಾಝ್
ಸಾಮಾಜಿಕ ಕಾರ್ಯಕರ್ತ










