ಕಡಬ ಸರಸ್ವತಿ ವಿದ್ಯಾಲಯದಲ್ಲಿ ಯಶಸ್ವಿಯಾಗಿ ನಡೆದ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ

0

‘ಗೆದ್ದವರು ಸಂತೋಷ ಪಡಿ, ಸೋತವರು ಸವಾಲಾಗಿ ಸ್ವೀಕರಿಸಿ’ – ಪ್ರಕಾಶ್ ಎನ್.ಕೆ

ಕಡಬ: ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಸರಸ್ವತೀ ವಿದ್ಯಾಲಯ, ಕಡಬ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯು ಜುಲೈ 7ರಂದು ಕಡಬದ ಹನುಮಾನ್ ನಗರದ ಕೇವಳದಲ್ಲಿರುವ ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಶಸ್ವಿಯಾಗಿ ನಡೆಯಿತು.


ಸ್ಪರ್ಧೆಯನ್ನು ಕಡಬದ ತುಳಸಿ ಸ್ಟೋರ್ಸ್‌ನ ಮಾಲೀಕರಾದ ಪ್ರಕಾಶ್ ಎನ್.ಕೆ. ಉದ್ಘಾಟಿಸಿ ಮಾತನಾಡಿ, ಚದುರಂಗವು ವಿದ್ಯಾರ್ಥಿಗಳ ಬುದ್ಧಿಶಕ್ತಿ, ಏಕಾಗ್ರತೆ ಹಾಗೂ ಚಿಂತನಾ ಸಾಮರ್ಥ್ಯವನ್ನು ವೃದ್ಧಿಸುವ ಆಟವಾಗಿದೆ. “ಸ್ಪರ್ಧೆಯಲ್ಲಿ ಗೆದ್ದವರು ವಿಜಯಿಗಳಾಗಿ ಸಂತೋಷ ಪಡಬೇಕು. ಸೋತವರು ನಿರಾಶರಾಗದೆ ಅದನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ಯಶಸ್ಸಿನ ಮೆಟ್ಟಿಲಾಗಿಸಿಕೊಳ್ಳಬೇಕು” ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಸದಾಶಿವ ಭಟ್ ವಹಿಸಿ, ಚದುರಂಗ ಆಟವು ಜ್ಞಾನ, ಚಾತುರ್ಯ ಹಾಗೂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಬೆಳೆಸುತ್ತದೆ ಎಂದು ಹೇಳಿದರು. ವೇದಿಕೆಯಲ್ಲಿ ಸರಸ್ವತೀ ವಿದ್ಯಾಲಯ ಕನ್ನಡ ಮಾಧ್ಯಮ ವಿಭಾಗದ ಸಂಚಾಲಕಿ ಸವಿತಾ ಶಿವಸುಬ್ರಹ್ಮಣ್ಯ ಭಟ್, ವಿದ್ಯಾಭಾರತಿಯ ಖೇಲ್ ಖೂದ್ ಪ್ರಮುಖ್ ಕರುಣಾಕರ, ಪ್ರೌಢ ವಿಭಾಗದ ಮುಖ್ಯ ಶಿಕ್ಷಕಿ ಶೈಲಶ್ರೀ ರೈ ಎಸ್. ಉಪಸ್ಥಿತರಿದ್ದರು.


ಸರಸ್ವತೀ ಆಂಗ್ಲ ಮಾಧ್ಯಮ ವಿಭಾಗದ ಮುಖ್ಯ ಶಿಕ್ಷಕ ವಸಂತ ಕೆ. ಅತಿಥಿಗಳನ್ನು ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ ಚಂದ್ರ ಕೆ. ವಂದಿಸಿದರು. ಶಿಕ್ಷಕಿಯರಾದ ಸುಮಂಗಲ ಎ. ಹಾಗೂ ಮಮತಾ ಎ. ಕಾರ್ಯಕ್ರಮ ನಿರೂಪಿಸಿದರು. ಸಮಾರೋಪ ಸಮಾರಂಭದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ಜ್ಯೋತಿ ವಿಜೇತರ ಪಟ್ಟಿಯನ್ನು ವಾಚಿಸಿದರು. ಬಳಿಕ ವಿವಿಧ ವಿಭಾಗಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.


ಸ್ಪರ್ಧೆಗೆ ಡೆರಿಕ್ಸ್ ಚೆಸ್ ಸ್ಕೂಲ್‌ನ ಮುಖ್ಯ ಅರ್ಬಿಟರ್ ಕೌಶಿಕ್ ಆರ್. ಹಾಗೂ ಸುದೀಪ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಲಕ್ಷ್ಮೀಶ ಗೌಡ ಆರಿಗ ಸಮಾರೋಪ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು, ಸ್ಪರ್ಧಾಳು ವಿದ್ಯಾರ್ಥಿಗಳು, ಸಂಸ್ಥೆಯ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಹಾಗೂ ಪೋಷಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here