






ಪುತ್ತೂರು: ದುಡಿಸಿ ಬದುಕಲು ತಕ್ಕ ಸಂಬಳ ನೀಡಲಾಗದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇಂದು ಮಹಿಳಾ ಕಾರ್ಮಿಕರನ್ನು ಜೀತದಾಳುಗಳಂತೆ ದುಡಿಸುತ್ತಿವೆ ಎಂದು ಸಿಐಟಿಯು ದ.ಕ. ಜಿಲ್ಲಾ ಸಹಕಾರ್ಯದರ್ಶಿ ಈಶ್ವರಿ ಶಂಕರ್ ಪದ್ಮುಂಜ ಟೀಕಿಸಿದರು.


ಅಕ್ಷರದಾಸೋಹ ಯೋಜನೆಯ ಅಖಿಲ ಭಾರತ ಸಮಿತಿ ನೀಡಿದ ಕರೆಯಂತೆ ದೇಶದಾದ್ಯಂತ ನಡೆಸುತ್ತಿರುವ ಕರಾಳ ದಿನಾಚರಣೆಯ ಅಂಗವಾಗಿ ಸರಕಾರಗಳಿಗೆ ಆಗ್ರಹ ಪತ್ರ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.2008 ರಿಂದ ಕೇಂದ್ರ ಸರಕಾರ ಸಂಬಳ ಏರಿಕೆ ಮಾಡಿಲ್ಲ. ನರೇಂದ್ರ ಮೋದಿ ಸರಕಾರ ನಮಗೆ 1 ರೂಪಾಯಿ ಕೂಡ ಸಂಬಳ ಏರಿಸಿಲ್ಲ ಎಂದು ಆರೋಪಿಸಿದ ಅವರು, “ಬೇಟಿ ಬಚಾವೋ” ಎನ್ನುವ ಮೋದಿ ಸರಕಾರವಾಗಲಿ, ಮಹಿಳಾ ಶಕ್ತಿ ಹೆಚ್ಚಿಸುವೆವು ಎನ್ನುವ ರಾಜ್ಯ ಸರಕಾರವಾಗಲಿ ಮೊದಲು ದುಡಿದ ವೇತನವನ್ನು ನೀಡಲಿ ಎಂದು ಆಗ್ರಹಿಸಿದರು.



ಬದುಕುವ ವೇತನ ನೀಡುವುದೇ ನಿಜವಾದ “ಬೇಟಿ ಬಚಾವೋ” ಮತ್ತು ಮಹಿಳಾ ಶಕ್ತಿ ಬಲಪಡಿಸುವ ದಾರಿ ಎಂದು ಹೇಳಿದರು. ಭ್ರಷ್ಟಾಚಾರಿ, ಅತ್ಯಾಚಾರಿಗಳ ನಾಯಕರನ್ನಾಗಿಸುವ ಬಿಜೆಪಿಗಾಗಲಿ, ಲೂಟಿಕೋರನ್ನು ಬೆಂಬಲಿಸುವ ಕಾಂಗ್ರೇಸ್ಗಾಗಲಿ ಮಹಿಳಾ ಕಾರ್ಮಿಕರ ಬಗ್ಗೆ ಕಾಳಜಿ ಇಲ್ಲದಾಗಿದೆ ಎಂದು ಟೀಕಿಸಿದರು. ವೇತನ ಹೆಚ್ಚಳ, 12 ತಿಂಗಳ ಸಂಬಳ, ಅರ್ಧದಲ್ಲಿ ಕೆಲಸದಿಂದ ತೆಗೆಯದಂತೆ ತಡೆ, ಪ್ರತಿ ಶಾಲೆಗೆ ಕನಿಷ್ಠ 2 ಅಡುಗೆಯವರ ನೇಮಕ ಸೇರಿದಂತೆ 20 ಬೇಡಿಕೆಗಳ ಆಗ್ರಹ ಪತ್ರವನ್ನು ಕಡಬ ಮತ್ತು ಪುತ್ತೂರು ತಾಲೂಕು ಸಮಿತಿಯಿಂದ ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಗಳಿಗೆ ಸಹಾಯಕ ಆಯುಕ್ತರ ಮೂಲಕ ನೀಡಲಾಯಿತು.
ಈ ಸಂದರ್ಭದಲ್ಲಿ ಅಕ್ಷರದಾಸೋಹ ನೌಕರರ ಸಂಘದ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷೆ ರಂಜಿತ, ಕಾರ್ಯದರ್ಶಿ ಲತಾ ಕೊಂಬೆಟ್ಟು, ಖಜಾಂಜಿ ತೆರೆಸಾ ಹಾಗೂ ಕಡಬ ತಾಲೂಕು ಸಮಿತಿ ಅಧ್ಯಕ್ಷೆ ರೇವತಿ, ಕಾರ್ಯದರ್ಶಿ ಸುಲೋಚನ, ಖಜಾಂಜಿ ಹೇಮಲತ ಮೂರಾಜೆ ಮೊದಲಾದವರು ಉಪಸ್ಥಿತರಿದ್ದರು.










