ಕಡಬ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ

0

ಮೃತರಾಗಿದ್ದು ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯಾಗಿದ್ದಲ್ಲಿ ಸರಕಾರಕ್ಕೆ ಮರುಕಟ್ಟಿಸಿ: ಸುಧೀರ್ ಶೆಟ್ಟಿ

ಕಡಬ: ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಅರ್ಹ ಫಲಾನುಭವಿಗಳು ಮೃತರಾಗಿದ್ದು ಅವರ ಖಾತೆಗೆ ಮೃತರಾದ ಬಳಿಕ ಹಣ ಜಮೆಯಾಗಿದ್ದಲ್ಲಿ ಅಂಥವರನ್ನು ಗುರುತಿಸಿ ಮೃತರ ವಾರಸುದಾರರಿಗೆ ನೋಟೀಸು ನೀಡಿ ಹಣವನ್ನು ಸರಕಾರಕ್ಕೆ ಪುನಃ ಪಾವತಿಸಲು ಕ್ರಮಕೈಗೊಳ್ಳಲಾಗುವುದು ಎಂದು ಕಡಬ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಅಭಿಪ್ರಾಯಪಟ್ಟರು.


ಅವರು ಜು.7 ರಂದು ಕಡಬ ತಾಲೂಕು ಪಂಚಾಯತ್ ನಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಿಳಿಸಿದರು. ಗೃಹಲಕ್ಷ್ಮೀ ಯೋಜನೆಯಡಿ ಮೃತರಾದ ಫಲಾನುಭವಿಗಳ ಪಟ್ಟಿಯನ್ನು ಗ್ರಾಮವಾರು ನೀಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗೆ ಸೂಚಿಸಿದರು.


ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಬಸ್ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಬಸ್ ನಿರ್ವಾಹಕರಿಗೆ ಪರಿಶೀಲನೆ ನೀಡುವಂತೆ ಸಾರ್ವಜನಿಕರು ಸಹಕರಿಸಬೇಕು. ಕಡಬ-ಪಾಲೋಳಿ- ಪಿಜಕ್ಕಳ-ಎಡಮಂಗಲ ಮಾರ್ಗವಾಗಿ ಸುಳ್ಯ ಮತ್ತು ಪುತ್ತೂರಿಗೆ ಬಸ್ ಸಂಚಾರ ಪ್ರಾರಂಭಿಸುವಂತೆ ಸದಸ್ಯರು ಆಗ್ರಹಿಸಿದರು. ಅಲ್ಲದೆ ತಾಲೂಕಿನ ವಿವಿಧ ಪ್ರದೇಶಗಳಿಗೆ ಹೆಚ್ಚುವರಿ ಬಸ್ ಒದಗಿಸಲು ಸರಕಾರಕ್ಕೆ ಬರೆಯಲು ನಿರ್ಣಯಿಸಲಾಯಿತು. ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಪೂರ್ವಾಹ್ನ ಗಂಟೆ 8:20 ಕ್ಕೆ ಎಡಮಂಗಲದಿಂದ ಕಡಬಕ್ಕೆ ಬಸ್ ಸಂಚಾರ ನಡೆಸುವಂತೆ ಕ್ರಮಕೈಗೊಳ್ಳಲು ಸೂಚಿಸಲಾಯಿತು. ಅಂತೆಯೇ ಕೊಣಾಲು ಶಾಲಾ ಮಕ್ಕಳು ಹಾಗೂ ಶಿಕ್ಷಕರಿಗೆ ಸಂಚಾರಕ್ಕೆ ಅನುಕೂಲವಾಗುವಂತೆ ಸಂಜೆ 3:30 ರ ಬದಲಿಗೆ 4 ಗಂಟೆಗೆ ಸಂಚರಿಸುವಂತೆ ಆಗಬೇಕೆಂದು ಶಾಲಾ ಮುಖ್ಯೋಪಾಧ್ಯಾಯರು ಮನವಿ ನೀಡಿರುವುದನ್ನು ಸಂಬಂಧಪಟ್ಟ ಅಧಿಕಾರಿಗೆ ತಿಳಿಸಿದರು. ಪದವು ಕಾಲೇಜು ಬಳಿ ಪ್ರಯಾಣಿಕರ ಬಸ್ ತಂಗುದಾಣವಿದ್ದು ಬಸ್ಸು ನಿಲುಗಡೆ ಮಾಡುವಂತೆ ಅಧಿಕಾರಿ ಸೂಚಿಸಲಾಯಿತು.


ನೆಲ್ಯಾಡಿ ಬಸ್ಸು ತಂಗುದಾಣಕ್ಕೆ ಬೆಂಗಳೂರಿಗೆ ಹೋಗುವ ಮತ್ತು ಬರುವ ಎಲ್ಲಾ ಬಸ್ಸುಗಳು ಹಾಗೂ ಸ್ಥಳೀಯ ಬಸ್ಸುಗಳು ತಂಗುದಾಣಕ್ಕೆ ಕಡ್ಡಾಯವಾಗಿ ಸಂಚರಿಸುವಂತೆ ಇಲಾಖಾಧಿಕಾರಿಗೆ ಸೂಚಿಸಿದರು. ಅಲ್ಲದೆ ಕೆಎಸ್ಆರ್ಟಿಸಿ ವೆಬ್ಸೈಟ್ನಲ್ಲಿ ನೆಲ್ಯಾಡಿ ಬೋರ್ಡಿಂಗ್ ಪಾಯಿಂಟ್ ಅನ್ನು ಕಡ್ಡಾಯವಾಗೊ ಅಪ್ಡೇಟ್ ಮಾಡುವಂತೆ ಸೂಚಿಸಲಾಯಿತು ಹಾಗೂ ಕಡಬ ತಾಲೂಕು ಕೇಂದ್ರವಾಗಿದ್ದು ಸುಸಜ್ಜಿತ ಬಸ್ಸು ತಂಗುದಾಣ ರಚನೆಯ ಬಗ್ಗೆ ಇಲಾಖೆ ಕೈಗೊಂಡ ಕ್ರಮದ ಬಗ್ಗೆ ಸಂಪೂರ್ಣ ಮಾಹಿತಿಯ ವರದಿಯನ್ನು ನೀಡುವಂತೆ ಸೂಚಿಸಿದರು.


ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಪಡಿತರ ಗುಣಮಟ್ಟ ಪರಿಶೀಲಿಸಲು ಗ್ಯಾರಂಟಿ ಅನುಷ್ಠಾನ ಸಮಿತಿಯು ತಾಲೂಕಿನ ವಿವಿಧ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಲಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.


ಪ್ರಕೃತಿ ವಿಕೋಪದಡಿ ಮನೆಗೆ ಹಾನಿಯಾಗಿ ಸದ್ರಿಯವರು ಬೇರೆಮನೆ ಕಟ್ಟಿದ್ದಲ್ಲಿ ಅಂತಹವರಿಗೆ ಹಳೆಯ ಮನೆಯ ವಿದ್ಯುತ್ ಮೀಟರ್ ಅನ್ನೇ ನೀಡಬೇಕು. ಅಥವಾ ಹೊಸ ಮೀಟರ್ ನೀಡುವುದಾದರೆ ಫಲಾನುಭವಿಗಳಿಂದ ಮೆಸ್ಕಾಂಗೆ ಡೆಪಾಸಿಟ್ ಪಾವತಿಸುವುದನ್ನು ಸ್ಥಗಿತಗೊಳಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಕ್ರಮಗೊಳ್ಳಬೇಕೆಂದು ಇಲಾಖಾಧಿಕಾರಿಗೆ ಸೂಚಿಸಲಾಯಿತು.
ಈ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಉಷಾ ಅಂಚನ್, ಬಶೀರ್, ಹನೀಫ್, ಗಂಗಾಧರ ಶೆಟ್ಟಿ, ಅವಿನಾಶ್, ಜಗದೀಶ್, ರಾಘವೇಂದ್ರ, ಸತೀಶ್, ಗೌರಿ, ಹರಿಣಾಕ್ಷಿ, ಮಾದವ ಪೂಜಾರಿ, ಯುವನಿಧಿ ಇಲಾಖೆಯ ಮಂಜುಷಾ, ಮೆಸ್ಕಾಂ ಇಲಾಖೆಯ ಕೃಷ್ಣಮೂರ್ತಿ, ಸತ್ಯನಾರಾಯಣ, ಕೆಎಸ್ಆರ್ಟಿಸಿ ಇಲಾಖೆಯ ಕುಶಾಲಪ್ಪ ಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ವನಿತಾ, ಆಹಾರ ಶಿರಸ್ತೇಧಾರರಾದ ಜಿತೇಶ್, ತಾ.ಪಂ. ವಿಷಯ ನಿರ್ವಾಹಕರಾದ ಗೋಪಿನಾಥ್ ಉಪಸ್ಥಿತರಿದ್ದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿ, ವಂದಿಸಿದರು

LEAVE A REPLY

Please enter your comment!
Please enter your name here