ಸುಳ್ಯದ ಜನರ ಪ್ರಥಮ ಬೇಡಿಕೆ ಯಾವುದು?

0

ಉತ್ತಮ ಸೇವೆಗೆ ಪುರಸ್ಕಾರ, ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ- ಎಂಬ ಘೋಷಣೆ ಮೊಳಗಿಸಬಹುದಿತ್ತಲ್ಲವೇ ?
ಸಚಿವ ಖಾದರ್ ಅಭಿನಂದನಾ ಸಮಿತಿಗೊಂದು ಚಿಂತನೆಗೆ ಪ್ರಶ್ನೆ. ಖಾದರ್ ಅವರೊಂದಿಗೆ ಇರುವ ಫೋಟೋ – ಭ್ರಷ್ಟಾಚಾರ ರಹಿತ ಸೇವೆ ಒದಗಿಸಬಹುದೇ?
ಪುತ್ತೂರಿನಲ್ಲಿ ಸರಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ನಡೆದರೆ ಶಾಸಕ ಅಶೋಕ್ ಕುಮಾರ್ ರೈರವರಿಗೆ ಕರೆ ಹೋಗುತ್ತದೆ -ಸುಳ್ಯದಲ್ಲಿ ಯಾರಿಗೆ ಕರೆ ಮಾಡಬೇಕು?
ಸುಳ್ಯದಲ್ಲಿ ಭ್ರಷ್ಟಾಚಾರ ನಿವಾರಣೆಗೆ ಕೆದಂಬಾಡಿ ರಾಮಯ್ಯ ಗೌಡರು ಹುಟ್ಟಿ ಬರಬೇಕೇ ಅಥವಾ ಪುತ್ತೂರಿನ ಶಾಸಕರು ಇಲ್ಲಿಗೆ ಬರಬೇಕೇ?


ಕಳೆದ ಸೋಮವಾರ ಸುಳ್ಯದಲ್ಲಿ ಸಾರ್ವಜನಿಕ ಅಭಿನಂದನಾ ಸಭೆ ನಡೆಯಿತು. ಪಕ್ಷಾತೀತರಾಗಿ, ಧರ್ಮಾತೀತರಾಗಿ ಜನರು ಸೇರಿ, ಆರೋಗ್ಯ ಸಚಿವ, ಜಿಲ್ಲಾ ಉಸ್ತುವಾರಿಯೂ ಆದ ಯು.ಟಿ. ಖಾದರ್ ಅವರನ್ನು ಸಾರ್ವಜನಿಕರು ಸನ್ಮಾನಿಸಿದರು. ನಾಯಕರು, ಧರ್ಮಗುರುಗಳು ಅಭಿನಂದನಾ ಭಾಷಣ ಮಾಡಿದರು. ಜನರು ಸರತಿಯಲ್ಲಿ ನಿಂತು ಗೌರವಾರ್ಪಣೆ ಮಾಡಿ ಹೆಮ್ಮೆಯಿಂದ ಫೋಟೋ ತೆಗೆಸಿಕೊಂಡರು. ಸನ್ಮಾನಕ್ಕೆ ಉತ್ತರ ನೀಡಿದ ಯು.ಟಿ.ಖಾದರ್ ಅತ್ಯುತ್ತಮ ಭಾಷಣ ಮಾಡಿದರು. ಸುಳ್ಯದ ಕೆದಂಬಾಡಿ ರಾಮಯ್ಯ ಗೌಡರು ಬ್ರಿಟಿಷರ ಆಡಳಿತದ ವಿರುದ್ಧ ಹೋರಾಡಿದ್ದನ್ನು ಸುಳ್ಯದ ಹೆಮ್ಮೆ ಮತ್ತು ಸ್ವಾಭಿಮಾನದ ಸಂಸ್ಕ ತಿ ಎಂದು ನೆನಪಿಸಿದರು. ದ್ವೇಷ ರಹಿತ, ಸಾಮರಸ್ಯದ, ಸಂತೋಷದ, ಅಭಿವೃದ್ಧಿಯ ಸುಳ್ಯಕ್ಕೆ ಶ್ರಮಿಸುವುದಾಗಿ, ಸುಳ್ಯದ ಜನರ ಸಮಸ್ಯೆಗಳನ್ನು, ಕಷ್ಟಗಳನ್ನು ಪರಿಹರಿಸುವುದಾಗಿ ಘೋಷಿಸಿದರು. ಖಾದರ್ ಅಭಿನಂದನಾ ಸಮಿತಿ, ಸುಳ್ಯದ ಜನರ ಬಹುಕಾಲದ ಬೇಡಿಕೆಯ ಪಟ್ಟಿಯನ್ನು ಸಚಿವ ಖಾದರ್‌ಗೆ ನೀಡಿ ಅದರ ಬೇಡಿಕೆಯನ್ನು ಸಾರ್ವಜನಿಕವಾಗಿ ವೇದಿಕೆಯಲ್ಲಿ ಮಂಡಿಸಿದರು. ಚಪ್ಪಾಳೆಯ ಸುರಿಮಳೆಯನ್ನು ಪಡೆದರು.


ಕಛೇರಿಗಳಲ್ಲಿಯ ಲಂಚ, ಭ್ರಷ್ಟಾಚಾರವೇ ಸುಳ್ಯದ ಜನರ ಅತೀ ದೊಡ್ಡ ಸಮಸ್ಯೆ:
ಸುಳ್ಯದ ಜನರ ಕಷ್ಟಗಳಿಗೆ ಕಾರಣವಾಗಿರುವುದು ಸರಕಾರಿ ಕಚೇರಿಯ ಲಂಚ, ಭ್ರಷ್ಟಾಚಾರ. ಅದಕ್ಕೆ ಪರಿಹಾರವೇ ಸುಳ್ಯದ ಜನರ ಪ್ರಥಮ ಬೇಡಿಕೆ ಎಂದು ಎಲ್ಲರಿಗೆ ತಿಳಿದಿದೆ. ಹೀಗಿದ್ದರೂ ಸನ್ಮಾನ ಸಮಿತಿಯವರು ಖಾದರ್ ರವರಿಗೆ ನೀಡಿದ ಬೇಡಿಕೆಯ ಪಟ್ಟಿಯಲ್ಲಿ ಅದು ಪ್ರಥಮ ಆದ್ಯತೆಯನ್ನು ಪಡೆಯಲಿಲ್ಲ ಯಾಕೆ ಎಂಬ ಪ್ರಶ್ನೆ ಸಹಜವಾಗಿ ಏಳಬೇಕಲ್ಲವೇ? ಅದು ಅನಿವಾರ್ಯ ಮತ್ತು ನಾವು ಅನುಭವಿಸಲೇ ಬೇಕಾದ ಕರ್ಮ ಎಂದು ಸುಳ್ಯದ ಜನರು, ನಾಯಕರು, ಶಾಸಕರು ಒಪ್ಪಿದ್ದಾರೆಯೇ?. ನಮ್ಮಿಂದ, ನಮಗಾಗಿ, ನಮ್ಮದೇ ಆಡಳಿತವಿರುವ ಈ ಪ್ರಜಾಪ್ರಭುತ್ವದಲ್ಲಿ ನಮ್ಮ ಸೇವೆಗಾಗಿ ಇರುವ ಕಚೇರಿಗಳಲ್ಲಿಯ ಭ್ರಷ್ಟಾಚಾರದ ವಿರುದ್ಧ ಹೋರಾಡಲು, ನಿವಾರಣೆ ಮಾಡಲು ಪ್ರಜಾರಾಜರುಗಳಾದ ನಮಗೆ ಮನಸ್ಸು, ಧೈರ್ಯ ಬರುತ್ತಿಲ್ಲ ಯಾಕೆ? ನಮ್ಮ ಸೇವೆಗಾಗಿ ಇರುವವರ ಮುಂದೆ ತಲೆ ತಗ್ಗಿಸಿ ಕಪ್ಪಕೊಟ್ಟು, ಕೆಲಸಮಾಡಿಸಿಕೊಡುವ ಪರಿಸ್ಥಿತಿ ಬಂದಿದೆ ಯಾಕೆ? ಸುಳ್ಯದ ಜನರಿಗೆ ಭ್ರಷ್ಟಾಚಾರದ ಅನ್ಯಾಯದ ವಿರುದ್ದ ಹೋರಾಟದ ಶಕ್ತಿ ಬರಲು, ಗುಲಾಮಗಿರಿಯ ಮಾನಸಿಕತೆಯನ್ನು ಹೋಗಲಾಡಿಸಲು ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಹೋರಾಡಿ, ಗಲ್ಲಿಗೆ ಏರಿದ್ದ ಕೆದಂಬಾಡಿ ರಾಮಯ್ಯ ಗೌಡರು ಇನ್ನೊಮ್ಮೆ ಹುಟ್ಟಿ ಬರಬೇಕೇ?


ಸುಳ್ಯದಲ್ಲಿ ಮತ್ತು ದ.ಕ.ಜಿಲ್ಲೆಯಲ್ಲಿ ಸುದ್ದಿ ಜನಾಂದೋಲನ ಸಭೆ ನಡೆಸಿ, ಭ್ರಷ್ಟಾಚಾರದ ವಿರುದ್ಧ ಕೆಲವು ವರ್ಷಗಳು ಹೋರಾಟ ನಡೆಸಿದ್ದೇವೆ. ಉತ್ತಮ ಸೇವೆ ನೀಡುವ ಅಧಿಕಾರಿಗಳನ್ನು ಗುರುತಿಸಿದ್ದೇವೆ. ಲಂಚ ಭ್ರಷ್ಟಾಚಾರದ ವಿರುದ್ಧ ಘೋಷಣೆ ಕೂಗಿಸಿದ್ದೇವೆ. ಅದರ ಫಲಕವನ್ನು ಸುಳ್ಯ ಮತ್ತು ದ. ಕ. ಜಿಲ್ಲೆಯ ಜನತೆ ಅಲ್ಲಲ್ಲಿ ಹಾಕಿಕೊಂಡಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು, ಜನನಾಯಕರು ಅದಕ್ಕೆ ಬೆಂಬಲ ಸೂಚಿಸಿದ್ದರು. ಅದು ಚುನಾವಣಾ ಸಂದರ್ಭದಲ್ಲಿ ಪಕ್ಷಗಳ ಜನಪ್ರತಿನಿಧಿಗಳ ಘೋಷಣೆಯಾಗಿ ಪರಿವರ್ತನೆಯಾಗಿತ್ತು. ಈ ಎಲ್ಲದರ ಪರಿಣಾಮವಾಗಿ ಸುಳ್ಯದಲ್ಲಿ ಲಂಚ ಭ್ರಷ್ಟಾಚಾರಕ್ಕಿರುವ ಮಾನ್ಯತೆ ಕಡಿಮೆಯಾಗಿ ಅಽಕಾರಿಗಳಲ್ಲಿ ಸ್ವಲ್ಪ ಮಟ್ಟಿಗೆ ಹೆದರಿಕೆ ಉಂಟಾಗಿತ್ತು.


ಲಂಚ ಭ್ರಷ್ಟಾಚಾರದ ವಿರುದ್ಧದ ಆಂದೋಲನವನ್ನು ತಮ್ಮದನ್ನಾಗಿ ಮಾಡಿದ ಅಶೋಕ್ ಕುಮಾರ್ ರೈ:
ಅದೇ ಸಂದರ್ಭದಲ್ಲಿ ಪುತ್ತೂರಿನಲ್ಲಿ ಶಾಸಕ ಸ್ಥಾನದ ಆಕಾಂಕ್ಷಿ ಯಾಗಿದ್ದ ಅಶೋಕ್ ಕುಮಾರ್ ರೈಯವರು ಲಂಚ, ಭ್ರಷ್ಟಾಚಾರದ ವಿರುದ್ಧದ ಜನಾಂದೋಲನವನ್ನು ತಮ್ಮ ಆಂದೋಲನವಾಗಿ ತೆಗೆದುಕೊಂಡರು. ದೀಪಾವಳಿಯ ಸಂದರ್ಭದ ವಸ ವಿತರಣಾ ಕಾರ್ಯಕ್ರಮದಲ್ಲಿ ಸುದ್ದಿಯ ಫಲಕವನ್ನು ಉಲ್ಲೇಖಿಸಿ ಲಂಚ, ಭ್ರಷ್ಟಾಚಾರ ವಿರುದ್ಧ ಘೋಷಣೆ ಕೂಗಿದರು. ತಾನು ಶಾಸಕನಾಗಿ ಆಯ್ಕೆ ಆದರೆ ಪುತ್ತೂರಿನ ಯಾವುದೇ ಸರಕಾರಿ ಕಚೇರಿಗಳಲ್ಲಿ ಲಂಚ ಭ್ರಷ್ಟಾಚಾರ ನಡೆದರೆ ಸಹಿಸುವುದಿಲ್ಲ, ನಡೆಯಲು ಬಿಡುವುದಿಲ್ಲ. ಮಾತ್ರವಲ್ಲ ಅಧಿಕಾರಿ ಲಂಚವಾಗಿ ಹಣ ಪಡೆದರೆ ಅದನ್ನು ಹಿಂತಿರುಗಿಸಿಕೊಡುವುದಾಗಿ ಘೋಷಿಸಿದರು. ಜನರ ಆಶೀರ್ವಾದದಿಂದ ಗೆದ್ದು ಬಂದರು. ಭ್ರಷ್ಟಾಚಾರದ ವಿರುದ್ಧದ ಘೋಷಣೆ ವೋಟಾಗಿ ಪರಿವರ್ತನೆಗೊಂಡಿದೆ ಎಂಬ ನಂಬಿಕೆ ಅವರಿಗುಂಟಾಗಿತ್ತು. ಗೆದ್ದು ಬಂದಮೇಲೆ ತನ್ನ ಘೋಷಣೆಯನ್ನು ಈಡೇರಿಸಲು ಇಲಾಖೆಗಳಲ್ಲಿಯ ಸಮಸ್ಯೆಗಳನ್ನು, ಭ್ರಷ್ಟಾಚಾರಕ್ಕೆ ಕಾರಣವಾಗುವ ವಿಷಯಗಳನ್ನು ಅರಿತು ಅದಕ್ಕೆ ಪರಿಹಾರ ಕಂಡುಕೊಳ್ಳಲು ತನ್ನ ಕಚೇರಿಯಲ್ಲಿ ಅದಕ್ಕಾಗಿಯೇ ಸಿಬ್ಬಂದಿ ನೇಮಕಮಾಡಿದರು. ಯಾವುದೇ ಕಚೇರಿಗೆ ಜನರು ಹೋದಾಗ ಅಲ್ಲಿ ಲಂಚದ ಬೇಡಿಕೆ ಬಂದರೆ ಆ ಕಾರಣಕ್ಕೆ ಕೆಲಸಗಳು ತಡವಾದರೆ ಕೂಡಲೇ ಶಾಸಕ ಕಚೇರಿಗೆ ಫೋನ್ ಮಾಡುವಂತೆ, ದೂರು ಸಲ್ಲಿಸುವಂತೆ ತಿಳಿಸಿದ್ದಾರೆ. ಕೆಲವು ಅಧಿಕಾರಿಗಳು ಲಂಚವಾಗಿ ಪಡೆದ ಹಣವನ್ನು ಶಾಸಕರು ಜನರಿಗೆ ಹಿಂತಿರುಗಿಸುವಂತೆ ಮಾಡಿದ್ದಾರೆ.


ಲಂಚ ಭ್ರಷ್ಟಾಚಾರ ನಡೆದರೆ ಯಾರಿಗೆ ಕರೆ ಮಾಡಬೇಕು?:
ಆದರೆ ಸುಳ್ಯದಲ್ಲಿ ಏನಾಗುತ್ತಿದೆ? ಲಂಚ ಭ್ರಷ್ಟಾಚಾರ ನಡೆದರೆ ಯಾರಿಗೆ ಕರೆ ಮಾಡಬೇಕು? ಶಾಸಕರಿಗೆಯೇ? ಜನನಾಯಕರುಗಳಿಗೆಯೇ? ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈಯವರೇ ಇಲ್ಲಿಗೆ ಶಾಸಕರಾಗಿ ಬರಬೇಕೆ? ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರನ್ನು ಸಂಪರ್ಕಿಸಬೇಕೇ? ಉತ್ತಮ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಯು.ಟಿ.ಖಾದರ್ ಅವರೊಂದಿಗೆ ತೆಗೆಸಿಕೊಂಡಿರುವ ಫೋಟೋವನ್ನು ತೋರಿಸಿದರೆ ಕಚೇರಿಗಳಲ್ಲಿ ಲಂಚ ಭ್ರಷ್ಟಾಚಾರ ಕಡಿಮೆಯಾಗಿ ಉತ್ತಮ ಸೇವೆ ದೊರಕಬಹುದೇ? ಜನರು ಪ್ರಯತ್ನಿಸಿ ನೋಡಬಾರದೇಕೆ ? (ಸಚಿವ ಖಾದರ್‌ರವರ ಅಭಿನಂದನಾ ಸಭೆಯಲ್ಲಿ ತಾಲೂಕಿನ ಎಲ್ಲಾ ನಾಯಕರು ಮತ್ತು ಅಽಕಾರಿಗಳು ವೇದಿಕೆಯಲ್ಲಿ ಇದ್ದರು. ಆ ಸಂದರ್ಭವನ್ನು ಉಪಯೋಗಿಸಿ ಸಚಿವ ಖಾದರ್‌ರವರಿಂದ ಉತ್ತಮ ಸೇವೆಗೆ ಪುರಸ್ಕಾರ, ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ ಎಂಬ ಘೋಷಣೆಯನ್ನು ಮಾಡಿಸಬೇಕೆಂದಿದ್ದೆ ಆದರೆ ಅದಕ್ಕೆ ಅವಕಾಶ ದೊರಕಲಿಲ್ಲವಾದರೂ ಆ ವಿಷಯವನ್ನು ಇಲ್ಲಿ ಮುಂದುವರಿಸುತ್ತಿದ್ದೇನೆ. )


ಸುದ್ದಿಬಿಡುಗಡೆ ಪತ್ರಿಕೆಯ ಉದಯಕ್ಕೆ ಲಂಚ ಭ್ರಷ್ಟಾಚಾರದ ವಿರುದ್ದದ ಹೋರಾಟವೇ ಕಾರಣ:
41 ವರ್ಷಗಳ ಹಿಂದೆ ಸುಳ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ, ಅತೀ ದೊಡ್ಡ ಭ್ರಷ್ಟಾಚಾರಿಯೆಂದು ಆಗಿನ ಸಬ್ ಇನ್ಸ್‌ಪೆಕ್ಟರ್ ಕಾಂಬ್ಳೆಯವರ ಪ್ರತಿಕೃತಿ ದಹನ ಮಾಡಿದ್ದೆವು. ಅದರ ಪರಿಣಾಮವಾಗಿ ಕೇಸುಗಳ ಕಷ್ಟಗಳನ್ನು ಎದುರಿಸಿ. 1985ರಲ್ಲಿ ರಾಜ್ಯದಲ್ಲಿ ಸಂಭಾವ್ಯ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗ್ಡೆ, ಬಂಗಾರಪ್ಪ, ವೀರಪ್ಪ ಮೊಯ್ಲಿ ಎದುರು ಚುನಾವಣೆಗೆ ನಿಂತು ಸಮಸ್ಯೆಗಳನ್ನು ಪರಿಹರಿಸಿಕೊಂಡಿದ್ದರೂ, ಈ ಹೋರಾಟದ ಮುಂದುವರೆದ ಭಾಗವಾಗಿ ವೈದ್ಯಕೀಯ ವೃತ್ತಿ ಕಡೆಗಣಿಸಿ ಪತ್ರಿಕೆಯನ್ನು ಪ್ರಾರಂಭಿಸಿದ್ದೇನೆ. ಇಂದಿಗೂ ಎಷ್ಟೇ ಕಷ್ಟ ನಷ್ಟವಾದರೂ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಮುಂದುವರಿಸುತ್ತಾ ಜನರ ಬೆಂಬಲದಿಂದ ಪತ್ರಿಕೆ ನಡೆಸಿಕೊಂಡು ಬಂದಿದ್ದೇವೆ. ಪುತ್ತೂರು, ಬೆಳ್ತಂಗಡಿ, ಮಂಗಳೂರಿಗೂ ಅದನ್ನು ಹರಡಿದ್ದೇವೆ. ಪ್ರಜಾಪ್ರಭುತ್ವದಲ್ಲಿಯ ಆಶಯವಾದ- ಜನರು ರಾಜರು, ನಮ್ಮ ಸೇವೆಗಾಗಿ ಜನಪ್ರತಿನಿಧಿಗಳು, ಇಲಾಖೆ ಮತ್ತು ಅಧಿಕಾರಿಗಳು ಇರುವುದು. ಹಳ್ಳಿಯಿಂದ ಡೆಲ್ಲಿಗೆ ಆಡಳಿತ ಎಂಬುದನ್ನು ನಾವು ಪ್ರತಿಪಾದಿಸುತ್ತಾ ಬಂದಿದ್ದೇವೆ. ಅದಕ್ಕಾಗಿ ಪ್ರಧಾನಿ ಮೋದಿಯವರ ಕ್ಷೇತ್ರಮತ್ತು ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಯಸಿದ್ದೆ. ಆದರೂ ಸುಳ್ಯದ ಹೆಚ್ಚಿನ ಜನತೆ ತಾವು ರಾಜರು ಎಂದು ಅರ್ಥ ಮಾಡಿಕೊಳ್ಳದೆ, ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಗುಲಾಮರಂತೆ ವರ್ತಿಸುತ್ತಿರುವುದು ನಿಜವಾಗಿಯೂ ಬೇಸರದ ಸಂಗತಿ. ಅದರ ನಿವಾರಣೆಗಾಗಿ ‘ಉತ್ತಮ ಸೇವೆಗೆ ಪುರಸ್ಕಾರ, ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ’ಎಂಬ ಆಂದೋಲನಕ್ಕೆ ಮರು ಚಾಲನೆ ನೀಡಿ ಅದರ ಅನುಷ್ಠಾನಕ್ಕಾಗಿ ಜಿಲ್ಲೆ ಮತ್ತು ರಾಜ್ಯಕ್ಕೆ ವಿಸ್ತರಿಸಬೇಕೆಂಬ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಜನರ ಬೆಂಬಲ ಮತ್ತು ಪ್ರೋತ್ಸಾಹ ಅದರ ಯಶಸ್ಸನ್ನು- ಸೋಲನ್ನು ಅವಲಂಭಿಸಿದೆ ಎಂದು ಹೇಳಲು ಇಚ್ಛಿಸುತ್ತೇನೆ. – ಡಾ. ಯು.ಪಿ. ಶಿವಾನಂದ

LEAVE A REPLY

Please enter your comment!
Please enter your name here