ರಾಮಕುಂಜ: ಕೆ.ಸೇಸಪ್ಪ ರೈ -ಪುಷ್ಪಾ ಎಸ್.ರೈ ದಂಪತಿ ’ ಸುವರ್ಣ ವಿವಾಹ ಸಂಭ್ರಮ’

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕೋಶಾಧಿಕಾರಿ ಕೆ.ಸೇಸಪ್ಪ ರೈ-ಪುಷ್ಪಾ ಎಸ್.ರೈ ದಂಪತಿಯ ದಾಂಪತ್ಯ ಜೀವನಕ್ಕೆ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ’ ಸುವರ್ಣ ವಿವಾಹ ಸಂಭ್ರಮ ’ ಜು.15ರಂದು ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಮೈದಾನದಲ್ಲಿ ಹಾಕಲಾದ ಬೃಹತ್ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.

ಚಿತ್ರ: ರಘು ಶೆಟ್ಟಿ ಫೋಟೋಶಾಪ್

ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು, ಭಾರತೀಯ ಕೌಟುಂಬಿಕ ಪದ್ಧತಿಗೆ ಈ ಸುವರ್ಣ ವಿವಾಹ ಸಂಭ್ರಮ ಉತ್ತಮ ಉದಾಹರಣೆಯಾಗಿದೆ. ಇಂದಿನ ಯುವ ಜನತೆಗೆ ಈ ಕಾರ್ಯಕ್ರಮ ಆದರ್ಶ ಆಗಬೇಕಿದೆ. ಈ ನಿಟ್ಟಿನಲ್ಲಿ ಅವರ ಮಕ್ಕಳು, ಅಳಿಯಂದಿರು, ಹಿತೈಷಿಗಳು ಸೇರಿಕೊಂಡು ಸಾರ್ವಜನಿಕವಾಗಿ ಸುವರ್ಣ ವಿವಾಹ ಸಂಭ್ರಮವನ್ನು ಆಚರಿಸುತ್ತಿರುವುದು ಮಾದರಿಯಾಗಿದೆ ಎಂದು ನುಡಿದರು. ಪೇಜಾವರ ಶ್ರೀಗಳ ಪರಮಾನುಗ್ರಹದಿಂದ ಸೇಸಪ್ಪ ರೈಗಳ ವೈಯಕ್ತಿಕ ನಿಷ್ಠೆ, ಶ್ರದ್ಧೆ, ಕಳಕಳಿಯಿಂದ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಿಕ್ಷಣ ಸಂಸ್ಥೆ ಬೆಳೆದಿದೆ. ಇಲ್ಲಿ ಕಲಿತ ಹಲವು ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ಏರಿದ್ದಾರೆ. ಇದರ ಹಿಂದೆ ಸೇಸಪ್ಪ ರೈ ಅವರ ಪರಿಶ್ರಮವಿದೆ ಎಂದು ಸುಬ್ರಹ್ಮಣ್ಯ ಸ್ವಾಮೀಜಿ ಹೇಳಿದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ, ಅರಿತು ಬಾಳಿದರೆ ಬಾಳು ಬಂಗಾರ, ಬೆರೆತು ಬಾಳಿದರೆ ಬಾಳು ಶೃಂಗಾರ, ಅರಿತು-ಬೆರೆತು ಬಾಳಿದರೆ ಬಾಳು ಸಾಕ್ಷಾತ್ಕಾರ ಎಂಬುದಕ್ಕೆ ಕೆ.ಸೇಸಪ್ಪ ರೈ-ಪುಷ್ಪಾ ಎಸ್.ರೈ ದಂಪತಿ ಸಾಕ್ಷಿಯಾಗಿದ್ದಾರೆ. ಹೊಂದಾಣಿಕೆಯ ಬದುಕು ಕಣ್ಮರೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ 50ನೇ ವರ್ಷದ ವಿವಾಹ ಸಂಭ್ರಮ ಆಚರಿಸುತ್ತಿರುವ ಕೆ.ಸೇಸಪ್ಪ ರೈ ದಂಪತಿ ಎಲ್ಲರಿಗೂ ಆದರ್ಶರಾಗಿದ್ದಾರೆ ಎಂದು ನುಡಿದರು. ಕೆ.ಸೇಸಪ್ಪ ರೈ ಅವರು ಶಿಕ್ಷಣ ಸಂಸ್ಥೆಗಳ ಮೂಲಕ ಪ್ರಜ್ಞಾವಂತ ಪ್ರಜೆಗಳನ್ನು ಸೃಷ್ಟಿಸುವ ಕಾರ್ಯ ಮಾಡುತ್ತಿದ್ದಾರೆ. ಪೇಜಾವರ ಶ್ರೀಗಳ ಆಶೀರ್ವಾದ ಅವರ ಮೇಲಿದೆ. ಸೇಸಪ್ಪ ರೈಯವರದ್ದು ಸರಳ, ಸಜ್ಜನಿಕೆಯ ವ್ಯಕ್ತಿತ್ವ. ಪ್ರೀತಿ, ವಿಶ್ವಾಸ, ನಂಬಿಕೆಯ ಬದುಕು ಆಗಿದೆ ಎಂದು ಒಡಿಯೂರು ಶ್ರೀ ಹೇಳಿದರು.

ಶಿಕ್ಷಣ ಸಂಸ್ಥೆಯನ್ನು ಬೆಳೆಸಿದ್ದಾರೆ-ಬಿ.ಆರ್.ಎಸ್.ಆಳ್ವ;
ಅತಿಥಿಯಾಗಿದ್ದ ಸೇಸಪ್ಪ ರೈಗಳ ಆಪ್ತರಾದ ಮಂಗಳೂರಿನ ಬಿ.ಆರ್.ಎಸ್.ಆಳ್ವ ಅವರು ಮಾತನಾಡಿ, 25 ವರ್ಷಗಳ ಹಿಂದೆ ಯಾವುದೇ ಮೂಲ ಸೌಕರ್ಯವಿಲ್ಲದ ಸಂದರ್ಭದಲ್ಲಿ ಶ್ರೀ ರಾಮಕುಂಜೇಶ್ವರ ವಸತಿ ನಿಲಯ, ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳ ಚುಕ್ಕಾಣಿ ಹಿಡಿದು ಈ ಸಂಸ್ಥೆಗಳನ್ನು ಈಗ ದೊಡ್ಡ ಮಟ್ಟದಲ್ಲಿ ಬೆಳೆಸಿದ್ದಾರೆ. ಅವರ ಬದುಕು ಎಲ್ಲರಿಗೂ ಆದರ್ಶವಾಗಿದೆ. ಅವರಿಗೆ ಒಳ್ಳೆಯದಾಗಲಿ. ಅವರಿಗೆ ದೇವರ ದಯೆ ಇರಲಿ ಎಂದು ಹೇಳಿದರು.

ಶಾಂತಿ, ತಾಳ್ಮೆಯ ಗುಣವಿದೆ-ವೆಂಕಟ್ರಮಣ ಪಾಂಗಣ್ಣಾಯ;
ಇನ್ನೋರ್ವ ಅತಿಥಿ ವೆಂಕಟ್ರಮಣ ಪಾಂಗಣ್ಣಾಯ ಅವರು ಮಾತನಾಡಿ, ರುದ್ರ ದೇವರ ಅನುಗ್ರಹ ಹಾಗೂ ಪೇಜಾವರ ಶ್ರೀಗಳ ಉಪದೇಶದಿಂದ ಸೇಸಪ್ಪ ರೈ ಅವರಿಗೆ ಪ್ರಸಿದ್ಧಿ ಬಂದಿದೆ. ಅವರ ಮನಸ್ಸು ಸಮತೋಲನದಲ್ಲಿದೆ. ಶಾಂತಿ, ತಾಳ್ಮೆಯಿದ್ದಲ್ಲಿ ಮಾತ್ರ ಇಂತಹ ವಿದ್ಯಾಸಂಸ್ಥೆಯಲ್ಲಿ ಸೇವೆ ಮಾಡಲು ಸಾಧ್ಯವಿದೆ. ಆ ಗುಣ ಸೇಸಪ್ಪ ರೈ ಅವರಲ್ಲಿ ಇದೆ ಎಂದರು.

ಹೃದಯ ಶ್ರೀಮಂತಿಕೆಯ ವ್ಯಕ್ತಿತ್ವ-ಗೋಪಾಲ ಶೆಟ್ಟಿ;
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲ ಶೆಟ್ಟಿ ಕಳೆಂಜ ಮಾತನಾಡಿ, ಕೆ.ಸೇಸಪ್ಪ ರೈ ಅವರದ್ದು ಹೃದಯ ಶ್ರೀಮಂತಿಕೆಯ ವ್ಯಕ್ತಿತ್ವ. ಆದ್ದರಿಂದಲೇ ಅವರು ಶಿಕ್ಷಕರ, ಮಕ್ಕಳ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರ ಬಾಲ್ಯದ ಜೀವನ ಬಹಳ ಕಷ್ಟದಾಯಕವಾಗಿತ್ತು. ಅವೆಲ್ಲವನ್ನೂ ಸವಾಲಾಗಿ ಸ್ವೀಕರಿಸಿ ಮೇಲೆ ಬಂದಿದ್ದಾರೆ. ಅವರ ಪತ್ನಿಯೂ ಸಹನಾಮೂರ್ತಿ. ಪತಿಗೆ ಬೆನ್ನೆಲುಬಾಗಿ ನಿಂತು ಅವರ ವೃತ್ತಿ ಜೀವನಕ್ಕೆ ಗೌರವ ತರುವ ಕೆಲಸ ಮಾಡಿದ್ದಾರೆ ಎಂದರು.

ವಿದ್ಯಾರ್ಥಿಗಳ ಬಾಳಿಗೆ ಬೆಳಕು-ಆರತಿ;
ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯ ಆರಂಭದಲ್ಲಿ ಮುಖ್ಯ ಶಿಕ್ಷಕಿಯಾಗಿದ್ದು, ಪ್ರಸ್ತುತ ವಿಟ್ಲ ಕೊಡಪದವು ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಆರತಿದಾಸಪ್ಪ ಅವರು ಮಾತನಾಡಿ, ಕೆ.ಸೇಸಪ್ಪ ರೈ ಅವರ ನಿರಂತರ ಶ್ರಮ, ದೃಢಸಂಕಲ್ಪ, ದೂರದೃಷ್ಟಿಯಿಂದಾಗಿ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆ ಬೆಳೆದು ನಿಂತಿದ್ದು ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದೆ. ಇಲ್ಲಿ ಕೇವಲ ಕಟ್ಟಡ ನಿರ್ಮಾಣ ಮಾತ್ರವಲ್ಲ. ಮುಂದಿನ ಪೀಳಿಗೆಗೆ ಅವರು ಅಮೂಲ್ಯ ಕೊಡುಗೆ ನೀಡಿದ್ದಾರೆ. ಪ್ರತಿಯೊಂದು ತರಗತಿಯಲ್ಲೂ ಅವರ ಬೆವರ ಹನಿ ಇದೆ. ಪ್ರತಿಯೊಂದು ವಿದ್ಯಾರ್ಥಿಯ ಯಶಸ್ವಿಯಲ್ಲಿ ಅವರ ಪ್ರಾರ್ಥನೆ ಇದೆ ಎಂದು ಹೇಳಿದರು.

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ-ಸೇಸಪ್ಪ ರೈ;
ಕೆ.ಸೇಸಪ್ಪ ರೈ ಅವರು ಮಾತನಾಡಿ, ನನ್ನ ಆರು ಮಂದಿ ಸಹೋದರಿಯರು, ಓರ್ವ ಸಹೋದರ ಹಾಗೂ ಅವರ ಮಕ್ಕಳು, ನಮ್ಮ ಮಕ್ಕಳನ್ನು ಬೆಳೆಸುವಲ್ಲಿ ನನಗೆ ಆತ್ಮವಿಶ್ವಾಸ ತುಂಬಿಸಿದ್ದು ಪತ್ನಿ ಪುಷ್ಪಾ ಎಸ್.ರೈ ಎಂದು ನೆನಪಿಸಿಕೊಂಡರು. ಸುವರ್ಣ ವಿವಾಹ ಸಂಭ್ರಮ ಕೇಶವ ಅಮೈ ಅವರ ಕಲ್ಪನೆಯಂತೆ ಅದ್ದೂರಿಯಾಗಿ ನಡೆದಿದೆ. ಸಂಘಟಕರಾಗಿ, ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಕೇಶವ ಅಮೈ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಶಾಲೆಯ ಶಿಕ್ಷಿಯರಾದ ಸರಿತ, ಪ್ರೇಮ ಹಾಗೂ ಇತರೇ ಶಿಕ್ಷಕರಿಂದಲೂ ಬೆಂಬಲ ಸಿಕ್ಕಿದೆ. ಪೇಜಾವರ ಮಠದಿಂದ ಸಂಪೂರ್ಣ ಸಹಕಾರ ದೊರೆತಿರುವುದರಿಂದಲೇ ಸಂಸ್ಥೆಯ ಬೆಳವಣಿಗೆಯಾಗಿದೆ ಎಂದು ಹೇಳಿದ ಅವರು, ಪೋಷಕರು ತಮ್ಮ ಮಕ್ಕಳಿಗೆ ಪ್ರೀತಿಯ ಜೊತೆಗೆ ಶಿಸ್ತು ಕಳಿಸಿಕೊಡಬೇಕು. ಮಕ್ಕಳಿಗೆ ಆಸ್ತಿ ಮಾಡುವ ಬದಲು ಉತ್ತಮ ಶಿಕ್ಷಣ ನೀಡಬೇಕೆಂದು ಹೇಳಿದರು.

ಕೆ.ಸೇಸಪ್ಪ ರೈ ಅವರ ಅಳಿಯ ಡಾ.ನಿರಂಜನ್ ರೈ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸೇಸಪ್ಪ ರೈ-ಪುಷ್ಪಾ ಎಸ್.ರೈ ದಂಪತಿ ಸುವರ್ಣ ವಿವಾಹ ಸಂಭ್ರಮವನ್ನು ಅವರ ಕುಟುಂಬ ಹಾಗೂ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳು ಸೇರಿಕೊಂಡು ಸಣ್ಣಮಟ್ಟಿನಲ್ಲಿ ಆಚರಿಸಲು ನಿರ್ಧರಿಸಿದ್ದೆವು. ಆದರೆ ಈ ಸಂದರ್ಭದಲ್ಲಿ ನಮ್ಮೊಂದಿಗೆ ಸೇರಿಕೊಂಡ ಎಸ್‌ಆರ್‌ಕೆ ಲ್ಯಾಡರ್ಸ್‌ನ ಮಾಲಕ ಕೇಶವ ಅಮೈ ಅವರ ಸ್ಪೂರ್ತಿ, ಹುಮ್ಮಸ್ಸಿನಿಂದ ದೊಡ್ಡಮಟ್ಟದಲ್ಲಿ ಆಯೋಜನೆಗೊಂಡಿದೆ. ಸ್ವಯಂ ಹುಟ್ಟುಹಾಕಿದ ಸಂಸ್ಥೆಯನ್ನು ಬೆಳೆಸುವುದು ಸುಲಭ. ಆದರೆ ಇನ್ನೊಬ್ಬರ ಸಂಸ್ಥೆಯನ್ನು ಮುನ್ನಡೆಸುವುದು ಬಹಳ ಕಷ್ಟ. ಈ ನಿಟ್ಟಿನಲ್ಲಿ ಕೆ.ಸೇಸಪ್ಪ ರೈ ಅವರ ಸಾಧನೆ ವಿಶಿಷ್ಠವಾಗಿದೆ. ಅವರ ಪತ್ನಿ ಪುಷ್ಪಾ ಎಸ್.ರೈ ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಅವರ ಸುವರ್ಣ ವಿವಾಹ ಸಂಭ್ರಮ ಯುವ ಜನತೆಗೆ ಮಾದರಿಯಾಗಬೇಕೆಂಬ ನಿಟ್ಟಿನಲಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

ಕೆ.ಸೇಸಪ್ಪ ರೈ-ಪುಷ್ಪಾ ಎಸ್.ರೈ ಅವರ ಪುತ್ರಿಯರಾದ ಡಾ.ಸುಪ್ರಿತಾ ರೈ, ಸುಕೇತಾ ಶೆಟ್ಟಿ, ಅಳಿಯ ಮುಂಬೈಯ ಹೋಟೆಲ್ ರಾಜ್ ಪ್ಯಾಲೇಸ್‌ನ ಮಾಲಕ ಅಶೋಕ್ ಶೆಟ್ಟಿ ಮುಂಬಯಿ, ಮೊಮ್ಮಕ್ಕಳಾದ ತನ್ವಿ ಶೆಟ್ಟಿ, ನಿಕೇತ್ ರೈ, ಸಮ್ರಿದ್ಧ್ ರೈ, ಕೆ.ಸೇಸಪ್ಪ ರೈ ಅವರ ಸಹೋದರಿಯರಾದ ಪದ್ಮಾವತಿ, ದೇವಕಿ, ಪಾರ್ವತಿ, ಲೀಲಾವತಿ, ಕುಸುಮಾ, ಸರೋಜಿನಿ ಆಳ್ವ, ಸಹೋದರ ಗೋಪಾಲಕೃಷ್ಣ ರೈ, ಪುಷ್ಪಾ ಎಸ್.ರೈ ಅವರ ಸಹೋದರ ರತ್ನಾಕರ ಶೆಟ್ಟಿ ಕೌಡೂರು, ಸಹೋದರಿಯರಾದ ಶಕುಂತಳಾ ಶೆಟ್ಟಿ, ಯೋಗಿನಿ ಆಳ್ವ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ದುರ್ಗಾಪ್ರಸಾದ್ ರೈ ಕುಂಬ್ರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಸರಿತ, ಕಿಶೋರ್‌ಕುಮಾರ್ ಬಿ. ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಹರ್ಷಿತ್ ಮರ್ಕಂಜ ಪ್ರಾರ್ಥಿಸಿದರು. ಎಸ್‌ಆರ್‌ಕೆ ಲ್ಯಾಡರ್ಸ್‌ನ ಮಾಲಕ ಕೇಶವ ಅಮೈ ಅವರು ಕಾರ್ಯಕ್ರಮ ಸಂಘಟಿಸಿದರು. ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಸಿಬ್ಬಂದಿಗಳು, ಪೋಷಕರು ವಿವಿಧ ಕಾರ್ಯಕ್ರಮಗಳಲ್ಲಿ ಸಹಕರಿಸಿದರು. ಕಾರ್ಯಕ್ರಮ ಸುದ್ದಿನ್ಯೂಸ್ ಪುತ್ತೂರು ಯು ಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರಗೊಂಡಿತು.

ಮಾಲಾರ್ಪಣೆ, ಮದುವೆ ಸಂಭ್ರಮ;
ಕೆ.ಸೇಸಪ್ಪ ರೈ-ಪುಷ್ಪಾ ಎಸ್.ರೈ ದಂಪತಿಯನ್ನು ಬ್ಯಾಂಡ್, ವಾದ್ಯ, ಚೆಂಡೆಯೊಂದಿಗೆ ವೇದಿಕೆಗೆ ಕರೆ ತರಲಾಯಿತು. ಕಾರಿನಿಂದ ಇಳಿದು ಸಭಾಂಗಣಕ್ಕೆ ಆಗಮಿಸುತ್ತಿದ್ದಂತೆ ಸೇಸಪ್ಪ ರೈ ಅವರ ತಂಗಿ ಹಾಗೂ ಬಾವ ಸಂಪ್ರದಾಯದಂತೆ ಇಬ್ಬರ ಕಾಲುಗಳಿಗೆ ನೀರು ಹಾಕಿ ಸ್ವಾಗತಿಸಿದರು. ಪುತ್ರಿಯರಾದ ಸುಕೇತಾ ಶೆಟ್ಟಿ, ಡಾ.ಸುಪ್ರೀತಾ ರೈ ಆರತಿ ಬೆಳಗಿದರು. ಬಳಿಕ ದಂಪತಿಯನ್ನು ಮದುವೆ ಮಂಟಪಕ್ಕೆ ಕರೆ ತರಲಾಯಿತು. ಅಲ್ಲಿ ದಂಪತಿ ಹಾರ ಬದಲಾವಣೆ ಮಾಡಿಕೊಂಡು ಮದುವೆ ಸಂಭ್ರಮ ಆಚರಿಸಿಕೊಂಡರು, ಬಂಟ ಸಂಪ್ರದಾಯದಂತೆ ನಡೆದ ಮದುವೆ ಕಾರ್ಯಕ್ರಮದಲ್ಲಿ ಶೋಭಾನೆ, ಸಪ್ತಪದಿ, ಹೆಣ್ಣು ಇಳಿಸಿಕೊಡುವ ಕಾರ್ಯಕ್ರಮ ನಡೆಯಿತು. ಕಡಮಜಲು ಸುಭಾಸ್ ರೈ ಅವರು ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಹಲವು ಗಣ್ಯರಿಂದ ಶುಭ ಹಾರೈಕೆ;
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಸಂಜೀವ ಮಠಂದೂರು, ಕಡಬ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ಬೆಂಗಳೂರಿನ ಮಾಧವರಯ್ಯ ಸಹಿತ ಹಲವು ಗಣ್ಯರು ಆಗಮಿಸಿ ಕೆ.ಸೇಸಪ್ಪ ರೈ-ಪುಷ್ಪಾ ಎಸ್.ರೈ ದಂಪತಿಗೆ ಶುಭ ಹಾರೈಸಿದರು. ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಿಕ್ಷಣ ಸಂಸ್ಥೆಗಳ ಶಿಕ್ಷಕವೃಂದ, ರಕ್ಷಕ-ಶಿಕ್ಷಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಘಟಕ, ಉಪ್ಪಿನಂಗಡಿ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ಆಲಂಕಾರು ವಲಯ ಬಂಟರ ಸಂಘ ಸಹಿತ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಕೆ.ಸೇಸಪ್ಪ ರೈ ದಂಪತಿಗೆ ಗೌರವಾರ್ಪಣೆ ಮಾಡಿದರು. ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಶುಚಿ-ರುಚಿಯಾದ ಸಿಹಿ ಊಟ ಹಾಗೂ ಸಂಜೆ ಚಾ, ತಿಂಡಿ ವ್ಯವಸ್ಥೆ ಮಾಡಲಾಗಿತ್ತು.

ನಿರಂತರ ಸಾಂಸ್ಕೃತಿಕ ಕಾರ್ಯಕ್ರಮ’
ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಸವಣೂರು ಸೀತಾರಾಮ ರೈ ಅವರು ಬೆಳಗ್ಗೆ ದೀಪ ಬೆಳಗಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಬಳಿಕ ಜೀವನ್ ರಾಂ ಸುಳ್ಯ ಇವರ ನೇತೃತ್ವದಲ್ಲಿ ’ಆಳ್ವಾಸ್ ಕನ್ನಡ ಗಾನ ಗುಚ್ಚ’ ನಡೆಯಿತು. ಮಧ್ಯಾಹ್ನದ ಬಳಿಕ ಕೇರಳ ಹಾಗೂ ಕರ್ನಾಟಕದ ಪ್ರಸಿದ್ಧ ಗಾಯಕರು ಕನ್ನಡ, ಹಿಂದಿ, ತುಳು ಗೀತೆಗಳ ಗಾಯನದೊಂದಿಗೆ ಪ್ರೇಕ್ಷಕರನ್ನು ರಂಜಿಸಿದರು. ಹೆಜ್ಜೆನಾದ ತಂಡದವರಿಂದ ವಿವಿಧ ನೃತ್ಯ ಸಂಭ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿಗಳು, ವಿದ್ಯಾರ್ಥಿಗಳು, ಶಿಕ್ಷಕರು ಹಾಡುಗಳಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

LEAVE A REPLY

Please enter your comment!
Please enter your name here