







ಕೊಂದವನನ್ನು ಕೊಲ್ಲುವ ಕಾನೂನು ಜಾರಿಯಾದರೆ ಮಾತ್ರ ಇಂಥ ಕೃತ್ಯಗಳಿಗೆ ಕಡಿವಾಣ ಸಾಧ್ಯ


ಪುತ್ತೂರು: ಕೊಂದವನನ್ನು ಕೊಲ್ಲುವ ಕಾನೂನು ಯಾವಾಗ ನಮ್ಮ ದೇಶದಲ್ಲಿ ಜಾರಿಯಾಗುತ್ತದೋ ಆವಾಗ ಮಾತ್ರ ಇಂತಹ ಕೊಲೆಗಳನ್ನು, ಅತ್ಯಾಚಾರಗಳನ್ನು ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.



ಬಂಟ್ವಾಳ ತಾಲೂಕಿನ ಬಿಸಿ ರೋಡ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ದುಷ್ಕರ್ಮಿಯಿಂದ ಬಲಿಯಾದ ಲಾವಣ್ಯ ಅವರ ಮನೆಗೆ ಶಾಸಕ ಅಶೋಕ್ ರೈ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ದೇಶದಲ್ಲಿ ಕಠಿಣ ಕಾನೂನು ತರಬೇಕಾದ ಅಗತ್ಯವಿದೆ, ರಾಜ್ಯ ಸರಕಾರ, ಕೇಂದ್ರ ಸರಕಾರ ಸೇರಿ ಈ ಕಠಿಣ ಕಾನೂನನ್ನು ಜಾರಿಗೆ ತರಬೇಕು. ಪುತ್ತೂರು ನಗರಠಾಣೆಯ ಮುಂಭಾಗದಲ್ಲಿ ಯುವತಿಯನ್ನು ಕೊಲೆ ಮಾಡಿದ ಘಟನೆ ಪುತ್ತೂರಿನಲ್ಲಿ ನಡೆದಿತ್ತು. ದೇಶದಲ್ಲಿ ಯುವತಿಯರಿಗೆ ಕಾನೂನಿನ ಮೂಲಕ ಭದ್ರತೆ ತರುವ ಕೆಲಸ ಮಾಡಬೇಕು. ಕಾನೂನು ಯಾವ ರೀತಿ ಇರಬೇಕೆಂದ್ರೆ ಕೃತ್ಯ ಮಾಡುವವ ಭಯಪಡಬೇಕು ಆ ರೀತಿ ಇರಬೇಕು ಎಂದು ಹೇಳಿದರು. ಕಠಿಣ ಕಾನೂನು ಜಾರಿಯಾದರೆ ಮಾತ್ರ ಇಂಥದ್ದಕ್ಕೆ ಪರಿಹಾರ ಕಾಣಲು ಸಾಧ್ಯವಾಗುತ್ತದೆ. ಒಬ್ಬ ಸಾಧಾರಣ ಕೃಷಿ ಕುಟುಂಬದ ತಾಯಿಯ ಮಗಳನ್ನು ವಿನಾಕಾರಣ ಕೊಲೆ ಮಾಡಿದ್ದಾರೆ ಇದು ಅತ್ಯಂತ ಹೇಯಕೃತ್ಯವಾಗಿದೆ. ಮಗಳನ್ನು ಕಳೆದುಕೊಂಡ ತಾಯಿಯ ನೋವು ಅತ್ಯಂತ ದುಖಭರಿತವಾಗಿದೆ ಅವರಿಗೆ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಶಾಸಕರು ಅಭಿಪ್ರಾಯಿಸಿದರು.
ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ
ನಾನು ಮತ್ತು ಸಚಿವ ಯು ಟಿ ಖಾದರ್ ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕೊಲೆ ಕೃತ್ಯ ಮಾಡಿದ ಆರೋಪಿಗೆ ಕಠಿಣ ಶಿಕ್ಷೆಯಾಗುವಲ್ಲಿ ಕ್ರಮವಹಿಸುತ್ತೇವೆ. ಜಿಲ್ಲೆಯಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಜಾಗೃತೆ ವಹಿಸಬೇಕು ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಾನೂನು ಇನ್ನಷ್ಟು ಬಿಗಿ ಮಾಡುವ ಬಗ್ಗೆಯೂ ಸಿ ಎಂ ಜೊತೆ ಮಾತುಕತೆ ನಡೆಸುತ್ತೇವೆ ಎಂದು ಶಾಸಕರು ಹೇಳಿದರು.
ಸೌಧಿಯಲ್ಲಾದರೆ ಮೊನ್ನೆ ಕೊಲೆ ಮಾಡಿದ ಆರೋಪಿಯನ್ನು ಆವತ್ತೇ ಶೂಟೌಟ್ ಮಾಡುತ್ತಿದ್ದರು. ಕೊಲೆ ನಡೆದ ಎರಡೇ ತಿಂಗಳಲ್ಲಿ ಆದೇಶದಲ್ಲಿ ಶೂಟೌಟ್ ಅಥವಾ ಸಾರ್ವಜನಿಕವಾಗಿ ನೇಣಿಗೆ ಹಾಕುತ್ತಾರೆ ಈ ಭಯದಿಂದ ಆದೇಶದಲ್ಲಿ ಈ ರೀತಿಯ ಘಟನೆಗಳು ಅತ್ಯಂತ ವಿರಳವಾಗಿ ನಡೆಯುತ್ತದೆ. ಕಾನೂನಿನ ಸಡಿಲಿಕೆಯಿಂದ ಈ ರೀತಿಯ ಘಟನೆಗಳು ನಡೆಯುತ್ತದೆ. ನಮ್ಮಲ್ಲಿ ಕೊಂದು ಜೈಲಿಗೆ ಹೋದವ ಬರುವಾಗ ಅಣ್ಣನಾಗಿ ಹೊರಗೆ ಬರುತ್ತಾನೆ ಇದು ದುರಂತವಾಗಿದೆ ಎಂದು ಹೇಳಿದರು.
ವೈಯುಕ್ತಿಕ ನೆರವು
ಶಾಸಕ ಅಶೋಕ್ ರೈ ಅವರು ಮೃತ ಲಾವಣ್ಯ ಕುಟುಂಬಕ್ಕೆ ವೈಯುಕ್ತಿಕ ನೆಲೆಯಲ್ಲಿ 25 ಸಾವಿರ ರೂ ನೆರವು ನೀಡಿದರು.ಈ ಸಂದರ್ಭದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ, ಪುತ್ತೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನಝೀರ್ ಮಠ, ಆದಂ ಮಠ ಸಹಿತ ಅನೇಕ ಮಂದಿ ಉಪಸ್ಥಿತರಿದ್ದರು.










