ಕಡಬ ಪೇಟೆಯ ರಸ್ತೆ ಬದಿಯ ಅನಧಿಕೃತ ಅಂಗಡಿ ತೆರವುಗೊಳಿಸಲು ಆಗ್ರಹ

0

ಕಡಬ: ಪೇಟೆಯ ಹೃದಯ ಭಾಗದ ಸಾಹಿರಾ ಟ್ರೇಡರ‍್ಸ್ ಮುಂಭಾಗದ ರಸ್ತೆ ಬದಿಯಲ್ಲಿ ಪಟ್ಟಣ ಪಂಚಾಯಿತಿಯಿಂದ ಯಾವುದೇ ಅಧಿಕೃತ ಪರವಾನಿಗೆ ಪಡೆಯದೆ ಕಳೆದ 2 ತಿಂಗಳಿನಿಂದ ಹಣ್ಣುಹಂಪಲು ವ್ಯಾಪಾರ ನಡೆಸಲಾಗುತ್ತಿರುವ ಅಂಗಡಿಯಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದ್ದು, ಅದನ್ನು ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿ ಸ್ಥಳೀಯರು ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದ್ದಾರೆ.

ಈಗಾಗಲೇ ಪಟ್ಟಣ ಪಂಚಾಯಿತಿಗೆ ಲಿಖಿತ ದೂರು ಸಲ್ಲಿಸಿದರೂ ಅನಧಿಕೃತ ಅಂಗಡಿಯನ್ನು ತೆರವುಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಮುಖ್ಯ ರಸ್ತೆಯ ಬದಿಯಲ್ಲಿ ಈ ಅಂಗಡಿಯನ್ನು ಮಾಡಿರುವುದರಿಂದ ಅಲ್ಲಿ ವಾಹನ ಪಾರ್ಕಿಂಗ್ ಮಾಡಲು ಜಾಗವಿಲ್ಲದೆ, ಜನರು ರಸ್ತೆಯಲ್ಲೇ ವಾಹನ ಪಾರ್ಕಿಂಗ್ ಮಾಡುವಂತಾಗಿದೆ. ಅದರಿಂದಾಗ ಸುಗಮ ರಸ್ತೆ ಸಂಚಾರಕ್ಕೆ ತೊಡಕಾಗಿ ಅಪಘಾತಗಳು ಸಂಭವಿಸುವಂತಾಗಿದೆ. ಹಾಗೆಯೇ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದು ಪರಿಸರ ಮಲಿನಗೊಳ್ಳುತ್ತಿದ್ದು, ಅದರಿಂದ ಜನರಿಗೆ ರೋಗ ಭೀತಿಯ ಜೊತೆಗೆ ಓಡಾಡಲು ಕೂಡ ಕಷ್ಟವಾಗುತ್ತಿದೆ. ಅನಧಿಕೃತ ಅಂಗಡಿಗಳ ಉಪಟಳದಿಂದಾಗಿ ಪೇಟೆಯಲ್ಲಿ ತೆರಿಗೆ ಪಾವತಿಸಿ ಅಧಿಕೃತ ಪರವಾನಿಗೆ ಪಡೆದಿರುವ ಅಂಗಡಿ ಮಾಲೀಕರಿಗೂ ವ್ಯಾಪಾರವಿಲ್ಲದೇ ನಷ್ಟ ಉಂಟಾಗುತ್ತಿದೆ ಎಂದು ಸ್ಥಳೀಯ ಆಟೋ ಚಾಲಕರು ಹಾಗೂ ಅಧಿಕೃತ ಅಂಗಡಿಗಳ ಮಾಲಕರು ಪಟ್ಟಣ ಪಂಚಾಯಿತಿಗೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಅನಧಿಕೃತ ಅಂಗಡಿಯನ್ನು ತೆರವುಗೊಳಿಸಲು ಪಟ್ಟಣ ಪಂಚಾಯಿತಿಯ ಸ್ಥಾಯಿ ಸಮಿತಿಯ ಸಭೆಯಲ್ಲಿ ಈಗಾಗಲೇ ನಿರ್ಣಯ ಕೈಗೊಂಡು ಅನಧಿಕೃತ ಅಂಗಡಿ ನಡೆಸುತ್ತಿರುವವರಿಗೆ ನೋಟಿಸ್ ನೀಡಲಾಗಿದೆ. ಅದರೆ ಅವರು ಅಂಗಡಿಯನ್ನು ತೆರವುಗೊಳಿಸದೇ ಇರುವುದರಿಂದ ಪೊಲೀಸ್ ರಕ್ಷಣೆ ತೆಗೆದುಕೊಂಡು ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
ಲೀಲಾವತಿ ಇ. ಮುಖ್ಯಾಧಿಕಾರಿ , ಪಟ್ಟಣ ಪಂಚಾಯಿತಿ ಕಡಬ.

LEAVE A REPLY

Please enter your comment!
Please enter your name here