







ಸಂತನ ಬದುಕು ಸಮಾಜಕ್ಕೆ ಆದರ್ಶವಾಗಬೇಕು: ಮಾಣಿಲ ಶ್ರೀ
ನಮ್ಮ ಮಕ್ಕಳನ್ನು ಜಾಗೃತವಾಗಿ ಬೆಳೆಸುವುದು ನಮ್ಮ ಕರ್ತವ್ಯ: ಚೆನ್ನಯ್ಯ ಸ್ವಾಮಿ


ವಿಟ್ಲ: ಮನುಷ್ಯನ ಆಹಾರ ಪದಾರ್ಥಗಳು ವಿಷಯುಕ್ತವಾಗುತ್ತಿದೆ. ಒಳ್ಳೆಯ ಭಾವನೆ ನಮ್ಮದಾಗಬೇಕು. ಜೀವನದಲ್ಲಿ ಬರುವ ಕೆಟ್ಟಪರಿಣಾಮವನ್ನು ದೂರಮಾಡಲು ದೇವರ ನಾಮಸ್ಮರಣೆ ಅತೀ ಅಗತ್ಯ. ಜೀವನದಲ್ಲಿ ಗುರು ಮತ್ತು ಗುರಿ ಮುಖ್ಯ. ಭಗವಂತ ಮತ್ತು ಗುರು ನಮ್ಮೊಂದಿಗಿದ್ದರೆ ಯಾವುದನ್ನೂ ಜಯಿಸಲು ಸಾಧ್ಯ. ಸಂತನ ಬದುಕು ಸಮಾಜಕ್ಕೆ ಆದರ್ಶವಾಗಬೇಕು. ಒಂದು ಮಾದರಿ ಕಾರ್ಯಕ್ರಮ ಇದಾಗಬೇಕು. ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಒಂದಾಗಬೇಕು ಎಂದು ಶ್ರೀಧಾಮ ಮಾಣಿಲ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದ ಯೋಗಿ, ಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿರವರು ಹೇಳಿದರು.



ಅವರು ಶ್ರೀಧಾಮ ಮಾಣಿಲ ಶ್ರೀದುರ್ಗಾ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಜು.19ರಂದು ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಅಂಗವಾಗಿ ನಡೆದ 8ನೇ ದಿನದ ಸಾಮೂಹಿಕ ಲಕ್ಷ್ಮಿ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಸೇವಾಭಾರತಿ ಕರ್ನಾಟಕ ಪ್ರಾಂತ್ಯ ಕಾರ್ಯದರ್ಶಿ ಚೆನ್ನಯ್ಯ ಸ್ವಾಮಿರವರು ಮಾತನಾಡಿಭಾರತವನ್ನು ನಮ್ಮ ಮಾಣಿಲದಲ್ಲಿ ಕಾಣಬಹುದು. ಶಾಲಾ ಕಾಲೇಜು ವಿದ್ಯಾರ್ಥಿಗಳು ಇಂದು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಮಕ್ಕಳನ್ನು ಪರಿವರ್ತನೆ ಮಾಡುವ ಕೆಲಸವಾಗಬೇಕು. ಒಮ್ಮೆಲೆ ಸಮಾಜದ ಬದಲಾವಣೆ ಅಸಾಧ್ಯ. ಆದರೆ ನಮ್ಮಿಂದಲೇ ಬದಲಾವಣೆ ಸಾಧ್ಯ. ಉಪಕಾರ ಸ್ಮರಣೆ ನಮ್ಮಲ್ಲಿರಬೇಕು. ಜೀವನದಲ್ಲಿ ಗುರು ಮುಖ್ಯ. ನಮ್ಮ ಮಕ್ಕಳನ್ನು ಜಾಗೃತವಾಗಿ ಬೆಳೆಸುವುದು ನಮ್ಮ ಕರ್ತವ್ಯ. ಶಕ್ತಿ ಶಾಲಿ, ಸದೃಡ ಭಾರತವನ್ನು ನಾವು ಕಟ್ಟೋಣ ಎಂದರು.
ಶ್ರೀ ವರಮಹಾಲಕ್ಷ್ಮಿ ವೃತಾಚರಣೆ ಸಮಿತಿ ಅಧ್ಯಕ್ಷರಾದ ಡಾ| ಹರೀಶ್ ಬೊಟ್ಟಾರಿ ಚೇವಾರುರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನ ದ ಪ್ರಧಾನ ಕಾರ್ಯದರ್ಶಿ ತಾರಾನಾಥ ಕೊಟ್ಟಾರಿ, ಕಾಸರಗೋಡು ಜಿಲ್ಲೆ ಕುಲಾಲ ಸುಧಾರಕ ಸಂಘದ ಪ್ರಧಾನ ಕಾರ್ಯದರ್ಶಿ ದಾಮೋದರ್ ಮಾಸ್ಟ್ರು ಕಬ್ಬಿನಹಿತ್ತಿಲು, ಬಳಂತಿಮೊಗರು ಪ್ರೌಡ ಶಾಲಾ ಶಿಕ್ಷಕಿ ಲತಾ ಟೀಚರ್, ಶ್ರೀ ವರಮಹಾಲಕ್ಷ್ಮಿ ವೃತಾಚರಣೆ ಸಮಿತಿ ಪ್ರಧಾನ ಕಾರ್ಯದರ್ಶಿ ರೇವತಿ ಪೆರ್ನೆ, ಪ್ರಮುಖರಾದ ವೆಂಕಟರಮಣ ಕಲ್ಯಾಟೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೇಯ, ಗೀತಾಲಕ್ಷ್ಮಿ ಪ್ರಾರ್ಥಿಸಿದರು.ಶ್ರೀ ವರಮಹಾಲಕ್ಷ್ಮಿ ವೃತಾಚರಣೆ ಸಮಿತಿ ಗೌರವಾಧ್ಯಕ್ಷರಾದ ಕೆಯ್ಯೂರು ನಾರಾಯಣ ಭಟ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ರಾಧಾಕೃಷ್ಣ ಎರುಂಬು ವಂದಿಸಿದರು.ಸೋಮಪ್ಪ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.










