







ಬಿ.ಟಿ.ರಂಜನ್ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ,ವಿಶೇಷ ಉಪನ್ಯಾಸ


ಪುತ್ತೂರು:ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ ಘಟಕ)ದ ವತಿಯಿಂದ ಪತ್ರಿಕಾ ದಿನಾಚರಣೆ, ಉಪನ್ಯಾಸ, ಬಿ.ಟಿ.ರಂಜನ್ ಪ್ರಶಸ್ತಿ ಪ್ರದಾನ ಮತ್ತು ಸಾಧಕ ಮತ್ತು ಹಿರಿಯ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮವು ಜು.18ರಂದು ಪುತ್ತೂರು ಪತ್ರಿಕಾ ಭವನದಲ್ಲಿ ನಡೆಯಿತು.



ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಬಿ.ಟಿ.ರಂಜನ್ ಅವರ ಹೆಸರಿನಲ್ಲಿ ಈ ವರ್ಷ ಸ್ಥಾಪಿಸಲಾದ ಬಿ.ಟಿ.ರಂಜನ್ ಪ್ರಶಸ್ತಿ-2026ನ್ನು ಬೆಳ್ತಂಗಡಿ ವಿಜಯ ಕರ್ನಾಟಕ ಪತ್ರಿಕೆ ವರದಿಗಾರ ಅರವಿಂದ ಹೆಬ್ಬಾರ್ ಮುಂಡಾಜೆ ಅವರಿಗೆ ಪ್ರದಾನ ಮಾಡಲಾಯಿತು.ಪ್ರಶಸ್ತಿಯು ಸನ್ಮಾನಪತ್ರ, ಶಾಲು,ಹಾರ,ಫಲಪುಷ್ಪ ಮತ್ತು 5 ಸಾವಿರ ರೂ. ನಗದು ಒಳಗೊಂಡಿದೆ.ಮೊದಲ ವರ್ಷ ತಾಲೂಕು ಪತ್ರಕರ್ತರ ಸಂಘದಿಂದಲೇ ಪ್ರಶಸ್ತಿ ಮೊತ್ತ ಭರಿಸಲಾಗಿದೆ.ಮುಂದಿನ ವರ್ಷದಿಂದ ಇದಕ್ಕಾಗಿ ದತ್ತಿನಿಧಿ ಸ್ಥಾಪಿಸುವ ಉದ್ದೇಶವಿದೆ ಎಂದು ಸಂಘದ ಅಧ್ಯಕ್ಷ ಸುಧಾಕರ ಸುವರ್ಣ ತಿಳಿಸಿದರು.

ಪತ್ರಿಕಾ ವಿತರಕ ಇಬ್ರಾಹಿಂ ನೆಕ್ಕಿಲಾಡಿಯವರಿಗೆ ಸನ್ಮಾನ:
ಕಳೆದ ಹಲವು ವರ್ಷಗಳಿಂದ ಪತ್ರಿಕಾ ವಿತರಣೆ ಕ್ಷೇತ್ರದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಇಬ್ರಾಹಿಂ ನೆಕ್ಕಿಲಾಡಿ ಅವರನ್ನು ಸಂಘದ ಪರವಾಗಿ ಶಾಸಕ ಅಶೋಕ್ ಕುಮಾರ್ ರೈ ಸನ್ಮಾನಿಸಿದರು.
ಶೈಕ್ಷಣಿಕ ಸಾಧಕಿಗೆ ಪುರಸ್ಕಾರ:
ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ, ಸಂಘದ ಸದಸ್ಯರ ಮಕ್ಕಳನ್ನು ಪುರಸ್ಕರಿಸುವ ಕಾರ್ಯಕ್ರಮದಲ್ಲಿ 2026ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 586 ಅಂಕ(ಶೇ.93.76)ಗಳಿಸಿರುವ ನರಿಮೊಗರು ಸಾಂದೀಪನಿ ಶಾಲೆಯ ವಿದ್ಯಾರ್ಥಿನಿ,ಸಂಘದ ಉಪಾಧ್ಯಕ್ಷರಾಗಿರುವ ಸುದ್ದಿ ಬಿಡುಗಡೆ ಸಂಪಾದಕ ಕರುಣಾಕರ ರೈ ಸಿ.ಎಚ್. ಮತ್ತು ಜ್ಯೋತಿ ಕೆ.ರೈ ಅವರ ಪುತ್ರಿ ಶ್ರೀನಿಕಾ ರೈ ಸಿ.ಎಚ್.ಅವರನ್ನು ಶಾಸಕ ಅಶೋಕ್ ಕುಮಾರ್ ರೈ ಮತ್ತಿತರ ಗಣ್ಯರು ಸನ್ಮಾನಿಸಿ,ಅಭಿನಂದಿಸಿದರು.
ಸಾಧಕ, ಹಿರಿಯ ಪತ್ರಕರ್ತರಿಗೆ ಗೌರವ:
ಪತ್ರಕರ್ತರಾಗಿದ್ದುಕೊಂಡು ಅನ್ಯಾನ್ಯ ಸೃಜನಶೀಲ ಕ್ಷೇತ್ರಗಳಲ್ಲೂ ಹೆಸರು ಮಾಡುತ್ತಿರುವ ಸಂಘದ ಸದಸ್ಯರಾದ ನಾ.ಕಾರಂತ ಪೆರಾಜೆ, ಮೇಘ ಪಾಲೆತ್ತಾಡಿ, ಸಂಶುದ್ದೀನ್ ಸಂಪ್ಯ, ಸುಧಾಕರ ಸುವರ್ಣ, ಲೋಕೇಶ್ ಬನ್ನೂರು, ಸಿ.ಶೇ.ಕಜೆಮಾರ್ ಮತ್ತು ವಿದ್ಯಾಶ್ರೀ (ಶ್ರೀಶಾವಾಸವಿ ತುಳುನಾಡ್)ಅವರನ್ನು ಸನ್ಮಾನಿಸಿ ಗೌರವಿಸಲಾಯತು.ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಸಂಘದ ಹಿರಿಯ ಸದಸ್ಯ ಯು.ಎಲ್.ಉದಯ ಕುಮಾರ್ ಅವರನ್ನು ಗೌರವಿಸಲಾಯಿತು.ಸುದೀರ್ಘ ಕಾಲದಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವವರ ಪೈಕಿ ಸುದ್ದಿ ಬಿಡುಗಡೆ ಹಿರಿಯ ವರದಿಗಾರ ಶೇಖ್ ಜೈನುದ್ದೀನ್,ಸಂಪಾದಕ ಕರುಣಾಕರ ರೈ ಸಿ.ಎಚ್.ಅವರನ್ನು ಗೌರವಿಸಲಾಯಿತು.ಪ್ರಶಸ್ತಿ ಪುರಸ್ಕೃತರ ಸನ್ಮಾನ ಪತ್ರವನ್ನು ಯು.ಎಲ್.ಉದಯಕುಮಾರ್, ಪತ್ರಿಕಾ ವಿತರಕರ ಸನ್ಮಾನ ಪತ್ರವನ್ನು ರಾಜೇಶ್ ಪಟ್ಟೆ, ಶೈಕ್ಷಣಿಕ ಸಾಧಕಿಯ ಪ್ರಶಸ್ತಿ ಪತ್ರವನ್ನು ಗೌತಮ್ ಶೆಟ್ಟಿ ಮತ್ತು ಸಾಧಕರ ಸನ್ಮಾನ ಪತ್ರಗಳನ್ನು ವಿದ್ಯಾಶ್ರೀ, ಲೋಕೇಶ್ ಬನ್ನೂರು, ಅನೀಶ್ ಕುಮಾರ್, ಉಮಾಪ್ರಸಾದ್ ರೈ ನಡುಬೈಲು, ಉಮಾಶಂಕರ್, ಕರುಣಾಕರ ರೈ ಸಿ.ಎಚ್. ವಾಚಿಸಿದರು.

ಭವಿಷ್ಯದ ಸುಂದರ ಪುತ್ತೂರು ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಅಗತ್ಯ:
ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ಪ್ರಜಾಪ್ರಭುತ್ವದಲ್ಲಿ ನಾಲ್ಕನೇ ಅಂಗವಾಗಿ ಪತ್ರಿಕಾ ರಂಗ ಕಾರ್ಯನಿರ್ವಹಿಸುತ್ತದೆ.ಶಾಸಕಾಂಗದ ನಾವು ಕಾನೂನು ಮಾಡುವವರು.ನಾವು ತಪ್ಪು ಮಾಡಿದಾಗ ತಿದ್ದುವವರು ನೀವು.ಹೀಗಾಗಿ ನಮ್ಮ ಮಧ್ಯೆ ಒಳ್ಳೆಯ ಸಂಬಂಧವಿದೆ.ಜನಪ್ರತಿನಿಧಿಗಳ ಮಾತು ವೇದಿಕೆಗಳಿಗೇ ಸೀಮಿತವಾದಾಗ ಅವರನ್ನು ಎಚ್ಚರಿಸಿ ಕಿವಿಹಿಂಡುವ ಕೆಲಸವನ್ನು ಪತ್ರಕರ್ತರು ಮಾಡುತ್ತಾರೆ.ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಕೆಲಸ ಮಾಡಿದಾಗ ಸ್ವಲ್ಪ ಮಟ್ಟಿನ ಪ್ರಚಾರವಾಗುತ್ತದೆ.ಆದರೆ ಬಾಯಿ ತಪ್ಪಿ ಏನಾದರೂ ತಪ್ಪು ಮಾತನಾಡಿದರೆ ಅದನ್ನೇ ವೈಭವೀಕರಣ ಮಾಡುವ ಕೆಲಸವಾಗುತ್ತಿರುವುದನ್ನೂ ನಾವು ನೋಡುತ್ತೇವೆ.ತಪ್ಪುಗಳನ್ನೇ ವೈಭವೀಕರಣ ಮಾಡದೆ ಉತ್ತಮ ಸಂಗತಿಗಳನ್ನೂ ವೈಭವೀಕರಿಸುವ ಕಾರ್ಯ ನಡೆಯಬೇಕು ಎಂದರು.
ಶಾಸಕನಾಗಿ ನಾನು ಪುತ್ತೂರಿನ ಅಭಿವೃದ್ಧಿಯ ಕುರಿತು ಹಲವು ಕನಸುಗಳನ್ನು ಹೊಂದಿದ್ದೇನೆ.ಈಗಾಗಲೇ ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಬರಲಿದೆ.ಅದಾದ ಬಳಿಕ ಇಲ್ಲಿ ಸುಮಾರು 25 ಸಾವಿರ ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗ ಸಿಗಲಿದೆ.ಆದರೆ ಪುತ್ತೂರು ಮೆಡಿಕಲ್ ಕಾಲೇಜನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿ ಪುತ್ತೂರಿನಲ್ಲಿ ಶಾಂತಿಯುತ ವಾತಾವರಣ ಇದ್ಯಾ ಎಂದು ಕೇಳುವ ರೀತಿಯಲ್ಲಿ ಇಲ್ಲಿನ ಶಾಂತ ವಾತಾವರಣವನ್ನು ಕೆಡಿಸುತ್ತ ಹೋದರೆ ಇಲ್ಲಿಗೆ ನಾಡಿನ ಮೂಲೆ ಮೂಲೆಗಳಿಂದ ಮೆಡಿಕಲ್ ವಿದ್ಯಾರ್ಥಿಗಳು ಬರಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಭವಿಷ್ಯದ ಸುಂದರ ಪುತ್ತೂರು ನಿರ್ಮಾಣದಲ್ಲಿ ಮಾಧ್ಯಮಗಳ ಪಾಲು ಕೂಡ ಇದೆ ಎಂದವರು ಹೇಳಿದರು.ಪತ್ರಕರ್ತರ ಸಂಘದ ಕೋರಿಕೆಯಂತೆ ಪ್ರೆಸ್ ಕ್ಲಬ್ ಕಟ್ಟಡದ ಅಭಿವೃದ್ಧಿ ಕಾರ್ಯಗಳಿಗಾಗಿ ಈಗಾಗಲೇ ಸುಮಾರು 8 ಲಕ್ಷ ರೂ.ಅನುದಾನ ನೀಡಿದ್ದು ಕಡಿಮೆಯಾದರೆ ಮುಂದೆಯೂ ಅನುದಾನ ನೀಡಲು ಸಿದ್ಧನಿದ್ದೇನೆ ಎಂದು ಹೇಳಿ,ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಎಲ್ಲಿ ಹೋದರೂ ಸುದ್ದಿ ಓದುತ್ತೇನೆ:
ಪ್ರತಿದಿನ ಬೆಳಿಗ್ಗೆ ಸುದ್ದಿ ಬಿಡುಗಡೆ ಸಹಿತ ಮೂರ್ನಾಲ್ಕು ಪತ್ರಿಕೆಗಳನ್ನು ಓದಿಯೇ ನಾನು ದೈನಂದಿನ ಕಾರ್ಯಗಳಿಗೆ ಹೊರಡುವುದು.ಅದರಲ್ಲೂ ನನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ದೈನಂದಿನ ಬೆಳವಣಿಗೆಗಳ ಕುರಿತು ತಿಳಿದುಕೊಳ್ಳಲು ಸುದ್ದಿಯನ್ನು ಮೊದಲು ಓದುತ್ತೇನೆ.ಬೆಂಗಳೂರು ಸಹಿತ ದೂರ ಹೋದರೂ ವೆಬ್ನಲ್ಲಿಯೂ ಅದನ್ನು ಓದಿ ವಿಷಯ ತಿಳಿದುಕೊಳ್ಳುತ್ತೇನೆ ಎಂದು ಹೇಳಿದ ಶಾಸಕರು, ಜನರು ಪತ್ರಿಕೆಗಳನ್ನು ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ತಂತ್ರಜ್ಞಾನ ಉತ್ತಮವಾಗಿ ಬಳಸಿಕೊಂಡರೆ ಪ್ರಯೋಜನ:
ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಅಜಯ್ ಶಾಸ್ತ್ರಿ ಅವರು ‘ಆಧುನಿಕ ಮಾಧ್ಯಮ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.ಇವತ್ತು ಕೃತಕ ಬುದ್ದಿಮತ್ತೆಯ ಯುಗವಾಗಿದೆ.ಮನುಷ್ಯನ ಅನುಭವ ಸೃಜನಶೀಲತೆಯನ್ನು ರಿಪ್ಲೇಸ್ ಮಾಡಲು ಸಾಧ್ಯವಿಲ್ಲ.ಎ.ಐ ನಮ್ಮ ಉತ್ಪಾದಕತೆಯನ್ನು ಹೆಚ್ಚು ಮಾಡಬಹುದು.ಎಐ ತಂತ್ರಜ್ಞಾನದ ಮೂಲಕ ವೆಬ್ ಮೀಡಿಯದಲ್ಲಿ ನಮ್ಮ ಕ್ರೈಮ್, ರಾಜಕೀಯ ಸಹಿತ ಇತರೆ ನ್ಯೂಸ್ಗಳ ಪ್ರತ್ಯೇಕ ಓದುಗರ ಸಂಖ್ಯೆಯನ್ನು ನೋಡಬಹುದು.ಇವತ್ತು ಚಾಟ್ ಜಿಪಿಟಿ ನಮ್ಮ ಪ್ರಶ್ನೆಗೆ ಸರಿಯಾದ ಉತ್ತರ ಕೊಡುತ್ತದೆ.ಆದರೆ ಗೂಗಲ್ ಉತ್ತರ ಕೊಡುವ ಲಿಂಕ್ ಕೊಡುತ್ತದೆ.ಹಲವು ವೆಬ್ಗಳಲ್ಲಿ ಬಂದಿರುವ ನ್ಯೂಸ್ ಫಾಕ್ಟ್ ಚೆಕ್ ಮಾಡುವ ಆಪ್ ಕೂಡಾ ಇವತ್ತಿನ ವಿದ್ಯಾಮಾನದಲ್ಲಿದೆ.ಒಟ್ಟಿನಲ್ಲಿ ಎ.ಐ ನಮ್ಮ ಕೆಲಸದ ವೇಗ ಹೆಚ್ಚಿಸುತ್ತದೆ.ಆದರೆ ಕಂಪ್ಲೀಟ್ ಅದಕ್ಕೆ ಡಿಪೆಂಡ್ ಅಗುವ ಮೊದಲು ನಾವು ವರದಿಗಳನ್ನು ಚೆಕ್ ಮಾಡಿದ ನಂತರವೇ ಪಬ್ಲಿಷ್ ಮಾಡಿದರೆ ಉತ್ತಮ.ತಂತ್ರಜ್ಞಾನವನ್ನು ಉತ್ತಮವಾಗಿ ಬಳಸಿಕೊಂಡರೆ ಅದರಿಂದ ಪ್ರಯೋಜನವಿದೆ ಎಂದರು.
ಪತ್ರಿಕೋದ್ಯಮದ ಕಾಲ ಮುಗಿದಿಲ್ಲ:
ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಅವರು ಮಾತನಾಡಿ ಊರಿನ ಅಭಿವೃದ್ಧಿಯ ವಿಚಾರದಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು.ಈ ನಿಟ್ಟಿನಲ್ಲಿ ಬಿ.ಟಿ.ರಂಜನ್ ಅವರು ತನ್ನ ಜೀವನದ ಕೊನೆಯ ತನಕ ಪತ್ರಕರ್ತರ ಸಂಘಟನೆಗಳಲ್ಲಿ ಉತ್ತಮ ಕೆಲಸ ಮಾಡಿಕೊಂಡು ಬಂದವರು.ಇವತ್ತು ಕಾಲಕ್ಕೆ ತಕ್ಕಂತೆ ಓದುಗರಿಗೆ ಉಣಬಡಿಸಿದ ಮತ್ತು ತಂತ್ರಜ್ಞಾನದ ಅಪ್ಡ್ಟ್ ಮೂಲಕ ಪತ್ರಿಕೋದ್ಯಮವಿದೆ.ಈ ನಿಟ್ಟಿನಲ್ಲಿ ಸುದ್ದಿ ಬಿಡುಗಡೆ ವಿಶೇಷವಾಗಿ ತಂತ್ರಜ್ಞಾನವನ್ನು ಬಳಸಿಕೊಂಡಿದೆ.ಪತ್ರಿಕೆ ಮಾತ್ರವಲ್ಲದೆ ಅವರದ್ದೇ ವೆಬ್ನ್ಯೂಸ್,ಯೂಟ್ಯೂಬ್ ಚಾನೆಲ್ ಇದೆ ಎಂದರು.ಪತ್ರಿಕೋದ್ಯಮದ ಕಾಲ ಇನ್ನೂ ಮುಗಿದಿಲ್ಲ ಎಂದ ಅವರು,ಪುತ್ತೂರು ಕಾರ್ಯನಿರತ ಪತ್ರಕರ್ತರ ಸಂಘವು ಹಿರಿಯ ಪತ್ರಕರ್ತ ಬಿ.ಟಿ. ರಂಜನ್ ಹೆಸರಿನಲ್ಲಿ ಪ್ರಶಸ್ತಿ ನೀಡಲು ಆರಂಭಿಸಿರುವುದು ಶ್ಲಾಘನೀಯ ಕಾರ್ಯ ಎಂದರು.
ಪತ್ರಿಕಾ ದಿನಾಚರಣೆ ಇಡೀ ಸಮಾಜ ಮಾಡಬೇಕು:
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಅವರು ಮಾತನಾಡಿ, ಪತ್ರಿಕಾ ದಿನಾಚರಣೆಯನ್ನು ಮುಂದಿನ ದಿನಗಳಲ್ಲಿ ಸಮಾಜದ ಮಧ್ಯೆ ಮಾಡುವಂತಾಗಬೇಕು.ಆಗ ಪತ್ರಕರ್ತರ ಕೆಲಸವೇನು,ಪ್ರತಿದಿನ ಸಮಾಜಕ್ಕಾಗಿ ಕೆಲಸ ಮಾಡುವ ಅವರ ಸಮಸ್ಯೆ,ಕಷ್ಟಗಳೇನು ಎನ್ನುವುದು ಸೇರಿದಂತೆ ಪತ್ರಕರ್ತರ ಕುರಿತು ಇಡೀ ಸಮಾಜಕ್ಕೆ ಗೊತ್ತಾಗುತ್ತದೆ.ನಮ್ಮ ಕೆಲಸದ ಬಗ್ಗೆ ನಮಗೆ ಮೊದಲು ಗೌರವವಿರಬೇಕು.ನಮ್ಮ ಕೆಲಸದ ಮೂಲಕ ನಮಗೆ ಗೌರವ ದೊರೆತಾಗ ಸಮಾಜವೂ ನಮ್ಮನ್ನು ಗೌರವಿಸುತ್ತದೆ ನಾವು ಕೆಲಸ ಮಾಡುವ ಮಾಧ್ಯಮ,ಸಂಸ್ಥೆಗೂ ಗೌರವ ದೊರೆಯುತ್ತದೆ.ಅದರ ಬದಲು ಪತ್ರಿಕೆ, ಸಂಸ್ಥೆಯ ಹೆಸರಿನಿಂದ ಗೌರವ ದೊರೆತರೆ ಅದು ಕೇವಲ ಪತ್ರಿಕೆ ಅಥವಾ ಆ ಸಂಸ್ಥೆಗೆ ಗೌರವ ದೊರಕಿಸಿಕೊಡುತ್ತದೆ.ನಮ್ಮ ಬಗ್ಗೆ ನಾವೇ ಹೇಳಿಕೊಳ್ಳಲು ಆಗುವುದಿಲ್ಲ.ಪತ್ರಕರ್ತರ ಸಾಧನೆಯನ್ನು ಪತ್ರಕರ್ತರು ಮೆಚ್ಚಬೇಕು.ಯಾವ ಪತ್ರಿಕೆಯಲ್ಲಿಯೇ ಕೆಲಸ ಮಾಡಲಿ ಅವರನ್ನು ಗುರುತಿಸುವ ಸಂಪ್ರದಾಯ ಎಲ್ಲರೂ ಮಾಡಬೇಕು.ನಾವು ಈ ಸಂಪ್ರದಾಯವನ್ನು ಇಟ್ಟುಕೊಂಡಿದ್ದೇವೆ.ಪರವೂರಿನಲ್ಲಿರುವ ಪುತ್ತೂರಿನ ಪತ್ರಕರ್ತರನ್ನೂ ನಾವು ಸುದ್ದಿಯಲ್ಲಿ ಗುರುತಿಸುತ್ತೇವೆ ಎಂದು ಹೇಳಿದರು.ಇವತ್ತು ನಾನು ಪತ್ರಿಕೆಯ ಸಂಪಾದಕನಲ್ಲ.ನಾನು ಇವತ್ತು ಪತ್ರಿಕೆಯಿಂದ ಹೊರ ಬಂದು ವಿತರಕ ಮತ್ತು ಮಾಲಕನಾಗಿ ಉಳಿದಿದ್ದೇನೆ ಎಂದ ಅವರು, ನನಗೆ ಪುತ್ತೂರು ಪ್ರೆಸ್ ಕ್ಲಬ್ನಿಂದ ಒಳ್ಳೆಯ ಅನುಭವ,ಕೆಟ್ಟ ಅನುಭವವೂ ಆಗಿದೆ.ಕೆಟ್ಟ ವಿಚಾರಗಳನ್ನು ಬಿಟ್ಟು ಒಳ್ಳೆಯ ವಿಚಾರಗಳನ್ನು ಮುಂದುವರಿಸೋಣ ಎಂದರು.
ಸುದ್ದಿ ಮೀಡಿಯಾ ಹೌಸ್ ಜೊತೆ ಕೈಜೋಡಿಸಿ:
ಪುತ್ತೂರು,ಸುಳ್ಯ,ಬೆಳ್ತಂಗಡಿಯಲ್ಲಿ ಏನೇ ಘಟನೆ,ಕಾರ್ಯಕ್ರಮ ನಡೆದರೂ ಅದನ್ನು ಅಲ್ಲಿ ಮಾತ್ರ ಹಂಚಿಕೊಳ್ಳದೇ ಇಡೀ ಜಗತ್ತಿಗೆ ಮುಟ್ಟಿಸುವ ಉದ್ದೇಶದಿಂದ ನಾವು ಸುದ್ದಿ ಮೀಡಿಯಾ ಹೌಸ್ ವ್ಯವಸ್ಥೆ ಪ್ರಾರಂಭಿಸಿದ್ದೇವೆ.ಇದಕ್ಕಾಗಿಯೇ ಮಂಗಳೂರು,ಬೆಂಗಳೂರುನಲ್ಲಿಯೂ ಕಚೇರಿ ಆರಂಭಿಸಿದ್ದೇವೆ.ಪತ್ರಕರ್ತರೂ ಈ ನಿಟ್ಟಿನಲ್ಲಿ ಸುದ್ದಿ ಮೀಡಿಯಾ ಹೌಸ್ ಜೊತೆ ಕೈಜೋಡಿಸಿ ಎಂದು ಹೇಳಿದ ಡಾ.ಯು.ಪಿ.ಶಿವಾನಂದರು,ಏನೇ ಘಟನೆ, ವರದಿ ಮಾಹಿತಿ ನೀಡಿ,ನಿಮ್ಮ ಹೆಸರಿನಲ್ಲಿಯೇ ಅದನ್ನು ಜಗತ್ತಿಗೆ ಕೊಡಬಹುದು.ಮಾಧ್ಯಮವಾಗಿ ಪುತ್ತೂರನ್ನು ಜಗತ್ತಿಗೆ ಮುಟ್ಟಿಸುವ ಕೆಲಸವನ್ನು ಸುದ್ದಿ ಮೀಡಿಯ ಹೌಸ್ ಮಾಡಲಿದೆ.ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದರು.ಲಂಚ ಭ್ರಷ್ಟಾಚಾರ ನಿರ್ಮೂಲನೆ ಕುರಿತ ಫಲಕವನ್ನು ಇದೇ ಸಂದರ್ಭ ಅವರು ಸಂಘದ ಅಧ್ಯಕ್ಷ ಸುಧಾಕರ್ ಸುವರ್ಣ ಅವರ ಮೂಲಕ ವೇದಿಕೆಯಲ್ಲಿದ್ದ ಗಣ್ಯರಿಗೆ ನೀಡಿದರು.

ಸಂಘಟನಾತ್ಮಕ ಕೆಲಸದಿಂದ ಉತ್ತಮ ವಿಚಾರ:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಅವರು ಮಾತನಾಡಿ,ಪ್ರತಿ ಗ್ರಾಮ ಮಟ್ಟದಲ್ಲಿ ವರದಿಗಾರರಿದ್ದರೆ ಅದು ಸುದ್ದಿ ಬಿಡುಗಡೆಗೆ ಮಾತ್ರ.ನನ್ನ ಯಾವುದಾದರೊಂದು ನ್ಯೂಸ್ ಸುದ್ದಿಯಲ್ಲಿ ಬಂದರೆ ನನಗೆ ಊರಿಂದ ಕೆಲವರು ಕರೆ ಮಾಡಿ ‘ಅಣ್ಣೆರೆ ಈರೆನ ಫೋಟೋ ಪೇಪರ್ಡ್ ಬತ್ತ್ಂಡ್’ ಎಂದು ಹೇಳಬೇಕಾದರೆ ಅದಕ್ಕೆ ಸುದ್ದಿ ವರದಿ ಕಾರಣ.ಸುದ್ದಿಯ ನೆಟ್ ವರ್ಕ್ ಆರೀತಿಯಿದೆ.ಬಾಲ್ಯದಲ್ಲಿ ಶಾಲಾ ಮಂತ್ರಿಮಂಡಲದಲ್ಲಿ ನಾನು ಹೋಂ ಮಿನಿಸ್ಟರ್ ಆಗಿದ್ದ ಸಂದರ್ಭ ನನ್ನ -ಟೋ ಸಮೇತ ಸುದ್ದಿಯಲ್ಲಿ ವರದಿ ಬಂದಿತ್ತು.ಪತ್ರಿಕೋದ್ಯಮದೆಡೆಗೆ ಆಸಕ್ತಿ ಬರಲು ನನಗೆ ಇದೂ ಒಂದು ಕಾರಣವಾಯಿತು ಎಂದರು.ಪತ್ರಕರ್ತರು ಸಂಘಟನಾತ್ಮಕವಾಗಿ ಒಗ್ಗಟ್ಟಾಗಿ ಕೆಲಸ ಮಾಡಿದರೆ ನಮ್ನನ್ನು ಯಾರೂ ಮುಟ್ಟುವವರಿಲ್ಲ.ಗ್ರಾಮೀಣ ಪತ್ರಕರ್ತರ ಬಸ್ ಪಾಸ್,ಪತ್ರಕರ್ತರ ನಿವೇಶನ ಸಹಿತ ಹಲವು ಮಾಹಿತಿ ನೀಡಿದರು.ಪತ್ರಕರ್ತರು ಸಮಾಜಕ್ಕಾಗಿ ಕೆಲಸ ಮಾಡುತ್ತಾರೆ.ಇದರ ಜತೆಗೆ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡುವ ಅಗತ್ಯವಿದೆ ಎಂದರು.
ಸದಸ್ಯತ್ವದ ನಿರ್ಬಂಧಗಳನ್ನು ಸ್ವಲ್ಪ ಕಡಿತ ಮಾಡಲಾಗುವುದು:
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಮಾತನಾಡಿ, ಜಿಲ್ಲಾ ಸಂಘವು 1976ರಲ್ಲಿ ಆರಂಭಗೊಂಡಿದ್ದು, ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ.ಸದಸ್ಯರ ಮಕ್ಕಳಿಗೆ ಜಿಲ್ಲಾ ಮಟ್ಟದಲ್ಲಿ ಸನ್ಮಾನ, ಸದಸ್ಯರ ಆರೋಗ್ಯ ತಪಾಸಣೆ, ಅಧ್ಯಯನ ಪ್ರವಾಸ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.ಪುತ್ತೂರು ಸಂಘವು ಈ ಬಾರಿಯ ಪತ್ರಿಕಾ ದಿನಾಚರಣೆಯಲ್ಲಿ ವಿಭಿನ್ನ ಅಂಶಗಳನ್ನು ಸಂಯೋಜನೆ ಮಾಡಿಕೊಂಡಿರುವುದು ಉತ್ತಮ ವಿಚಾರ.ಪತ್ರಕರ್ತರಿಗೆ ನಮ್ಮ ಕೆಲಸದ ಬಗ್ಗೆ ಪ್ರೀತಿ ಇರಬೇಕು.ಎಲೆಮರೆಯ ಕಾಯಿಯಂತೆ ಕೆಲಸ ಮಾಡುವವರು ಬಹಳಷ್ಟು ಮಂದಿ ಇದ್ದಾರೆ.ಇವತ್ತು ನಮ್ಮ ಸಂಘದಲ್ಲಿ 397 ಮಂದಿ ಸದಸ್ಯರಿದ್ದಾರೆ.ಇದರಲ್ಲಿ ಪುತ್ತೂರಿನ ಸಂಘದಲ್ಲೇ ಅತ್ಯಂತ ಹೆಚ್ಚು ಸದಸ್ಯರಿರುವುದು.ಇವತ್ತು ನಮ್ಮ ಮಧ್ಯೆ ಕೆಲವರಿಗೆ ಸದಸ್ಯತ್ವ ಕೊಡಲಾಗಿಲ್ಲ ಎಂಬ ಕೂಗು ಇದೆ.ಅಂತಹ ನಿರ್ಬಂಧವನ್ನು ಹಂತ ಹಂತವಾಗಿ ಸ್ವಲ್ಪ ಕಡಿತ ಮಾಡಲಾಗುತ್ತದೆ ಎಂದರು.
ನಮ್ಮಲ್ಲೇ ಹಲವಾರು ಸಾಧಕರಿದ್ದಾರೆ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಧಾಕರ್ ಸುವರ್ಣ ತಿಂಗಳಾಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಿಕಾದಿನಾಚರಣೆ ವಿಶೇಷತೆ ಇರಬೇಕೆಂಬುದು ನಮ್ಮ ಆಶಯ.ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಪತ್ರಕರ್ತರ ಸಂಘದ ಸ್ಥಾಪನೆ ಮಾಡಿದ ಬಿ.ಟಿ ರಂಜನ್ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಕುರಿತು ನಿರ್ಣಯಿಸಿದಂತೆ ಈ ವರ್ಷದಿಂದ ಆರಂಭಿಸಿದ್ದೇವೆ.ಅದೇ ರೀತಿ ಸಂಘದ ಸದಸ್ಯರಲ್ಲಿ ಹಲವಾರು ಮಂದಿ ಸಾಧಕರಿದ್ದಾರೆ.ನಮ್ಮನ್ನು ನಾವೇ ಗುರುತಿಸುವ ಕೆಲಸ ಆಗಬೇಕೆಂಬ ನಿಟ್ಟಿನಲ್ಲಿ ಆ ಕಾರ್ಯಕ್ರಮ ಸಹಿತ ಹಿರಿಯ ಆಯ್ದ ಸದಸ್ಯರನ್ನೂ ಗುರುತಿಸುವ ಕೆಲಸ ಮಾಡಿದ್ದೇವೆ. ಇದು ಮುಂದಿ ವರ್ಷದಿಂದ ನಿರಂತರ ನಡೆಯಲಿದೆ ಎಂದವರು ಹೇಳಿದರು.
ಪ್ರಶಸ್ತಿ ಸಂತೋಷ ತಂದಿದೆ:
ಬಿ.ಟಿ.ರಂಜನ್ ಪ್ರಶಸ್ತಿ ಸ್ವೀಕರಿಸಿದ ಅರವಿಂದ ಹೆಬ್ಬಾರ್ ಮುಂಡಾಜೆ ಮಾತನಾಡಿ,ಗ್ರಾಮೀಣ ಪ್ರದೇಶದಲ್ಲಿ ಹೇರಳ ಸಮಸ್ಯೆಗಳು, ವಿಷಯಗಳಿರುವ ಕಾರಣ ಅವುಗಳನ್ನು ಹೆಕ್ಕಿ ವಿಶೇಷ ವರದಿಯಾಗಿ ಬರೆಯುವುದಕ್ಕೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದ್ದೇನೆ.ಬಿ.ಟಿ.ರಂಜನ್ ಹೆಸರಿನ ಮೊದಲ ವರ್ಷದ ಪ್ರಶಸ್ತಿ ನನಗೆ ಸಿಕ್ಕಿರುವುದು ತುಂಬ ಸಂತೋಷ ಉಂಟು ಮಾಡಿದೆ ಎಂದರು.ಇವತ್ತು ಬಹುತೇಕ ಮಂದಿ ಸುದ್ದಿಬಿಡುಗಡೆ ಪತ್ರಿಕೆಯ ಮೂಲಕ ಬೆಳೆದ ವರದಿಗಾರರು.ನಾನು ಕೂಡಾ ಅಲ್ಲಿಂದಲೇ ಬಂದವನು ಎಂದರು.
ಸಂಘದ ಅಧ್ಯಕ್ಷ ಸುಧಾಕರ ಸುವರ್ಣ,ಉಪಾಧ್ಯಕ್ಷ ಕರುಣಾಕರ ರೈ ಸಿ.ಎಚ್., ಎಂ.ಎಸ್. ಭಟ್., ಅಜಿತ್ ಕುಮಾರ್, ನಝೀರ್ ಕೊಯಿಲ,ಕೃಷ್ಣ ಪ್ರಸಾದ್, ಫಾರೂಕ್ ಮುಕ್ವೆ ಅವರು ಅತಿಥಿಗಳನ್ನು ಹೂ, ಹಾರ, ಶಾಲುಗಳೊಂದಿಗೆ ಗೌರವಿಸಿದರು.
ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಿದ್ದಿಕ್ ನೀರಾಜೆ ಉಪಸ್ಥಿತರಿದ್ದರು.ವಿದ್ಯಾಶ್ರೀ ಪ್ರಾರ್ಥಿಸಿದರು.ಸಂಘದ ಕೋಶಾಧಿಕಾರಿ ಸಂಶುದ್ದೀನ್ ಸಂಪ್ಯ ಸ್ವಾಗತಿಸಿ,ವಂದಿಸಿದರು.ಪ್ರಧಾನ ಕಾರ್ಯದರ್ಶಿ ಸಿ.ಶೇ. ಕಜೆಮಾರ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಶಸ್ತಿ ಪುರಸ್ಕೃತ ಅರವಿಂದ ಹೆಬ್ಬಾರ್ ಮುಂಡಾಜೆ ಅವರ ಜೊತೆ ಅವರ ಪತ್ನಿ, ಸಂಬಂಧಿಕರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.










