ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

ಪುತ್ತೂರು: ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಜು.18ರಂದು ಸಂಘದ ಸಭಾಂಗಣದಲ್ಲಿ ನಡೆಯಿತು.
ಆಡಳಿತ ಮಂಡಳಿಯ ಅಧ್ಯಕ್ಷ ಜಗನ್ನಾಥ ಶೆಟ್ಟಿ ನಡುಮನೆ ಅಧ್ಯಕ್ಷತೆ ವಹಿಸಿದ್ದರು. ದ.ಕ. ಹಾ.ಉ. ಸಂಘಗಳ ಒಕ್ಕೂಟದ ಉಪವ್ಯವಸ್ಥಾಪಕ ಡಾ. ಸತೀಶ್‌ ರಾವ್‌, ವಿಸ್ತರಣಾಧಿಕಾರಿ ವಿದ್ಯಾ ಬಿ.ಬಿ, ಪಶುವೈದ್ಯಾಧಿಕಾರಿ ಡಾ. ಜಿತೇಂದ್ರ ಪ್ರಸಾದ್‌ ಉಪಸ್ಥಿತರಿದ್ದರು.


ವರದಿ ವರ್ಷದಲ್ಲಿ ಸಂಘ 1,89,405 ಲೀಟರ್‌ ಹಾಲು ಸದಸ್ಯರಿಂದ ಖರೀದಿ ಮಾಡಿದ್ದು 13.228 ಲೀಟರ್ ಹಾಲು ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ. ಉಳಿಕೆ 1,73,237 ಲೀಟರ್ ಹಾಲನ್ನು ಒಕ್ಕೂಟಕ್ಕೆ ಸರಬರಾಜು ಮಾಡಿದೆ. 2,06,216.35 ರೂ ಲಾಭಗಳಿಸಿದ್ದು ಸದಸ್ಯರಿಗೆ 65% ಬೋನಸ್‌ ಮತ್ತು 5% ಷೇರು ಡಿವಿಡೆಂಡ್‌ ನೀಡಲಾಗುವುದು. ಪ್ರಸ್ತುತ ಸಾಲಿನಲ್ಲಿ ಪುತ್ತೂರು ಶಾಸಕ ಅಶೋಕ್‌ ರೈ ಅವರ 3 ಲಕ್ಷ ರೂ ಅನುದಾನದಲ್ಲಿ ಸಭಾಂಗಣದ ನಿರ್ಮಾಣವಾಗಿದೆ. ವಿಧಾನಪರಿಷತ್‌ ಸದಸ್ಯ ಪ್ರತಾಪ್‌ಸಿಂಹ ನಾಯಕ್‌ ಅವರ 3 ಲಕ್ಷ ರೂ ಅನುದಾನದಲ್ಲಿ ತಡೆಗೋಡೆ ಮತ್ತು ಕಾಂಕ್ರೀಟಿಕರಣ ಕಾಮಗಾರಿಗಳು ನಡೆದಿವೆ ಮತ್ತು 2024-25 ಸಾಲಿನಲ್ಲಿ ತಾಲೂಕುವಾರು ಉತ್ತಮ ಸಂಘ ಪ್ರಶಸ್ತಿ ಲಭಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅಧ್ಯಕ್ಷರಿಗೆ ಸನ್ಮಾನ:
ದ.ಕ. ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ನಿರ್ದೇಶಕರಾಗಿ ಸರಕಾರದಿಂದ ನಾಮ ನಿರ್ದೇಶನಗೊಂಡ ಸಂಘದ ಅಧ್ಯಕ್ಷರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ರಮೇಶ್‌ ಕೆ, ಹಾಲು ಪರೀಕ್ಷಕ ನಾರಾಯಣ ಮತ್ತು ಕಂಪ್ಯೂಟರ್‌ ಸಹಾಯಕಿ ಕವಿತಾ ಅವರನ್ನು ಗೌರವಿಸಲಾಯಿತು. ಸಂಘಕ್ಕೆ ಹೆಚ್ಚು ಹಾಲು ಪೂರೈಸಿದ ಅಜಿತ್‌ ಕುಮಾರ್‌, ಸುಂದರಿ ಮತ್ತು ಚಿತ್ರಾ ಅವರನ್ನು ಅಭಿನಂದಿಸಲಾಯಿತು.


ವೇದಿಕೆಯಲ್ಲಿ ಉಪಾಧ್ಯಕ್ಷ ಕೇಶವ ಗೌಡ, ನಿರ್ದೇಶಕ ಚಂದ್ರಶೇಖರ್‌ ರೈ, ರತ್ನವರ್ಮ ಆಳ್ವ, ವಿಜಯಲಕ್ಷ್ಮೀ ಆರ್‌. ನಾಯಕ್‌, ಲೀಲಾವತಿ ಹಾಗೂ ಬಾಬು ಆಚಾರ್ಯ ಉಪಸ್ಥಿತರಿದ್ದರು. ಮಾಜಿ ತಾ.ಪಂ. ಅಧ್ಯಕ್ಷ ಜಯಾನಂದ ಕೆ, ಬನ್ನೂರು ರೈತರ ಸೇವಾ ಸಂಘದ ನಿರ್ದೇಶಕ ಸುಭಾಷ್‌ ನಾಯಕ್‌, ವಾರಿಸೇನ ಜೈನ್‌, ಪ್ರದೀಪ್‌ ಶೆಟ್ಟಿ, ರಮೇಶ್‌ ನಾಯಕ್‌, ಡಾ.ಕೆ. ವಿಷ್ಣು ಭಟ್‌, ಮಾಜಿ ಅಧ್ಯಕ್ಷೆ ಲೀಲಾವತಿ ಗೌಡ, ಪ್ರಹ್ಲಾದ್‌ ಶೆಟ್ಟಿ, ನಾರಾಯಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ನಿರ್ದೇಶಕಿ ರಾಧಿಕಾ ಸಾಮಂತ್ ಪ್ರಾರ್ಥಿಸಿದರು. ಸಂತೋಷ್‌ ರೈ ಕೆದಿಕಂಡೆಗುತ್ತು ಸ್ವಾಗತಿಸಿದರು. ಸಿಬ್ಬಂದಿ ಕವಿತಾ ವಂದಿಸಿದರು. ಪವಿತ್ರಾ ಕೈಪ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here