






ಪುತ್ತೂರು:ಸಂಪಾಜೆ ಕಡೆಪಾಲದಲ್ಲಿ ವಿವಾಹಿತ ಮಹಿಳೆಯ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಅತ್ತೆ,ಮಾವ ಮತ್ತು ನಾದಿನಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.
ಕುಂಬ್ರ ಸಮೀಪದ ಸಾರೆಪುಣಿ ನಿವಾಸಿ ಜುಬೈದಾ ಎಂಬವರ ಪುತ್ರಿ,ಸಂಪಾಜೆ ಕಡೆಪಾಲ ಆಲಿಗುಡ್ಡೆ ನಿವಾಸಿ ಸಿ.ಪಿ.ಅಳವಿ ಕುಟ್ಟಿ ಎಂಬವರ ಮಗ ಅನ್ಸಾರ್ ಎಂಬವರ ಪತ್ನಿ ಫಾತಿಮತ್ ನಿಶಾನ(22ವ.)ಅವರು ಜು.18ರಂದು ಪತಿ ಮನೆಯಲ್ಲಿ ಸಾವಿಗೀಡಾಗಿದ್ದರು.ತನ್ನ ಮಗಳನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಜುಬೈದಾ ಅವರು ಪೊಲೀಸರಿಗೆ ದೂರು ನೀಡಿದ್ದರು.ಘಟನೆಗೆ ಸಂಬಂಧಿಸಿ ಸುಳ್ಯ ಪೊಲೀಸರು ಕಲಂ 85,103(1) 3(5)ಬಿಎನ್ಎಸ್ 2023ರಡಿ ಪ್ರಕರಣ ದಾಖಲಸಿಕೊಂಡಿದ್ದರು.ಇದೀಗ ಪ್ರಕರಣದ ಆರೋಪಿಗಳಾಗಿ ಮೃತ ಫಾತಿಮತ್ ನಿಶಾನ ಅವರ ಮಾವ ಸಿ.ಪಿ.ಅಳವಿ(54ವ.),ಅತ್ತೆ ಆಯಿಷಾ ಸಿ.ಎ.(44ವ.)ಹಾಗೂ ನಾದಿನಿ ಫಸಿಲಾ ಸಿ.ಎ.(28ವ.)ಅವರನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.


ಮಗಳನ್ನು ಕೊಲೆ ಮಾಡಲಾಗಿದೆ ಎಂದು ದೂರು ನೀಡಿದ್ದ ತಾಯಿ:
‘ಮಗಳು ಫಾತಿಮತ್ ನಿಶಾನಳನ್ನು ನಾಲ್ಕು ವರ್ಷಗಳ ಹಿಂದೆ ಅನ್ಸಾರ್ಗೆ ಮದುವೆ ಮಾಡಿಕೊಡಲಾಗಿತ್ತು.ದಂಪತಿಗೆ ಒಂದು ಗಂಡು ಮಗುವಿದೆ.ಜು.18ರಂದು ರಾತ್ರಿ 8.35 ಗಂಟೆಗೆ ಮಗಳು ನಗರ ಕರೆ ಮಾಡಿ ಮಾತನಾಡಿದ್ದು, ನನಗೆ ಮಾವ ಅಲವಿ, ಅತ್ತೆ ಆಯಿಷ, ನಾದಿನಿ ಫಸೀಲಾ ಅವರು ಕಿರುಕುಳ ನೀಡುತ್ತಾ ಇದ್ದಾರೆ ಎಂದು ತಿಳಿಸಿದ್ದಳು.ನನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಾರೆ ಎಂದೂ ತಿಳಿಸಿದ್ದಳು.ನಾನು ಸುಳ್ಯದ ಅರಂಬೂರು ಎಂಬಲ್ಲಿಗೆ ತಲುಪುವ ತನಕ ಮಗಳಲ್ಲಿ ಮಾತನಾಡುತ್ತಾ ಇದ್ದು, ಇದರ ಮಧ್ಯೆ ಮಗಳ ಕೈಯಿಂದ ಫೋನ್ ಕಸಿದುಕೊಂಡು ಮಗಳ ಮಾವ ನನ್ನಲ್ಲಿ ಮಾತನಾಡಿದ್ದು,ನಿನ್ನ ಮಗಳನ್ನು ಕರೆದುಕೊಂಡು ಹೋಗು.ಇಲ್ಲವಾದರೆ ನಾನು ಅವಳನ್ನು ಕೊಂದು ಜೈಲಿಗೆ ಹೋಗುತ್ತೇನೆ ಎಂದಿದ್ದು, ನಾವು ಅರಂಬೂರುನಿಂದ ಕಡೆಪಾಲಕ್ಕೆ ಹೋಗುವುದಕ್ಕಿಂತ ಮೊದಲು ಮಗಳನ್ನು ಕೊಂದು ಮನೆಯ ಹೊರಾಂಗಣದಲ್ಲಿ ಮಲಗಿಸಿದರು.ನಂತರ ಒಂದು ಆಂಬುಲೆನ್ಸ್ನಲ್ಲಿ ಕೆವಿಜಿ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲಿ ರಾತ್ರಿ 10.36ಕ್ಕೆ ಮಗಳು ಫಾತಿಮತ್ ನಿಸಾನಳನ್ನು ಪರಿಶೀಲಿಸಿದ ವೈದ್ಯಾಧಿಕಾರಿಗಳು ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದರು.ನನ್ನ ಮಗಳ ಗಂಡ ಅನ್ಸಾರ್ ಬೆಂಗಳೂರುನಲ್ಲಿದ್ದು ಆತನು ಆಕೆಯನ್ನು ಬೆಂಗಳೂರುಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದ.ನೀನು ಅವಳನ್ನು ಬೆಂಗಳೂರುಗೆ ಕರೆದುಕೊಂಡು ಹೋದರೆ ಮತ್ತೆ ಮನೆಗೆ ಬರಬಾರದು ಎಂದು ಬೆದರಿಸಿ ಮಗಳನ್ನು ಆಕೆಯ ಅತ್ತೆ,ಮಾವ ಮನೆಯಲ್ಲಿ ಇರಿಸಿಕೊಂಡರು.ನನ್ನ ಮಗಳನ್ನು ಆಕೆಯ ಮಾವ ಅಳವಿ,ಅತ್ತೆ ಆಯಿಷ ಹಾಗೂ ನಾದಿನಿ ಫಸೀಲ ಸೇರಿಕೊಂಡು ಕೊಂದಿರುವುದಾಗಿ’ಆರೋಪಿಸಿ ಜುಬೈದಾ ಅವರು ಪೊಲೀಸರಿಗೆ ದೂರು ನೀಡಿದ್ದರು.



ಮೃತ ಫಾತಿಮತ್ ನಿಶಾನ ಅವರ ಪತಿ ಅನ್ಸಾರ್ ಬೆಂಗಳೂರುನಲ್ಲಿ ಉದ್ಯೋಗದಲ್ಲಿದ್ದರು.ಆರಂಭದಲ್ಲಿ ದೇವರಕೊಲ್ಲಿಯಲ್ಲಿ ವಾಸ್ತವ್ಯವಿದ್ದ ಅನ್ಸಾರ್ ಕುಟುಂಬ ಕೆಲವು ವರ್ಷಗಳಿಂದ ಸಂಪಾಜೆ ಕಡೆಪಾಲದಲ್ಲಿ ವಾಸ್ತವ್ಯವಿದ್ದಾರೆ.ಜು.18ರಂದು ರಾತ್ರಿ ಫಾತಿಮತ್ ನಿಶಾನ ಮೃತಪಟ್ಟಿದ್ದರು.ಫಾತಿಮತ್ ನಿಶಾನ ಮನೆಯ ಸ್ನಾನಗೃಹದ ಶವರ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆಯ ಗಂಡನ ಮನೆಯವರು ತಿಳಿಸಿದ್ದರು.ಆದರೆ ತನ್ನ ಮಗಳನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಜುಬೈದಾ ಅವರು ಪೊಲೀಸರಿಗೆ ದೂರು ನೀಡಿದ್ದರು.ಇದೀಗ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.










