







ಪುತ್ತೂರು:ಕರ್ನಾಟಕದಲ್ಲಿ ಜೂ.30ರಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಪ್ರಕ್ರಿಯೆಯು ನಡೆಯುತ್ತಿದ್ದು ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಬೂತ್ ಮಟ್ಟದ ಅಧಿಕಾರಿ(ಬಿಎಲ್ಓ)ಗಳು ಮನೆ ಮನೆಗೆ ಭೇಟಿ ನೀಡಿ ಎನ್ಯೂಮರೇಷನ್(ಗಣತಿ ನಮೂನೆ) ಫಾರಂ ವಿತರಣೆ ಶೇ.100ರಷ್ಟು ಪೂರ್ಣಗೊಂಡಿದೆ.ಪುತ್ತೂರಿನಲ್ಲಿ ಮತದಾರರಿಗೆ ವಿತರಿಸಿದ ಫಾರಂಗಳ ಡಿಜಿಟೈಸ್ ಪ್ರಕ್ರಿಯೆಯು ಶೇ.81.34 ಪ್ರಗತಿ ಕಂಡಿದೆ.


ಪುತ್ತೂರು ವಿಧಾನ ಸಭಾ ಕ್ಷೇತ್ರದ ಪುತ್ತೂರು, ಉಪ್ಪಿನಂಗಡಿ, ವಿಟ್ಲ ಹೋಬಳಿ ವ್ಯಾಪ್ತಿಯಲ್ಲಿ 221 ಮತಗಟ್ಟೆಗಳಲ್ಲಿ ಒಟ್ಟು 2,16,542 ಮಂದಿ ಮತದಾರರಿದ್ದು ಎಲ್ಲಾ ಮತದಾರರಿಗೂ ಎನ್ಯುಮರೇಷನ್ ಫಾರಂ ಅನ್ನು ವಿತರಿಸಲಾಗಿದೆ.ಫಾರಂ ವಿತರಣೆಯು ಶೇ.100ರಷ್ಟು ಪೂರ್ಣಗೊಂಡಿದೆ.ಮತದಾರರಿಗೆ ವಿತರಿಸಲಾದ ಫಾರಂಗಳಲ್ಲಿ ಭರ್ತಿ ಮಾಡಿ ಹಿಂತಿರುಗಿಸಿದ 1,76,131 ಫಾರಂಗಳನ್ನು ಜು.23ರ ಸಂಜೆ ವೇಳೆಗೆ ಡಿಜಿಟೈಝ್ ಮಾಡಲಾಗಿದೆ.ಎಸ್ಐಆರ್ ಪ್ರಕ್ರಿಯೆ ಪ್ರಾರಂಭಗೊಂಡ 24 ದಿನಗಳಲ್ಲಿ ಡಿಜಿಟೈಝ್ ಪ್ರಕ್ರಿಯೆಯು ಶೇ.81.34 ಪ್ರಗತಿ ಕಂಡಿದೆ.ಒಟ್ಟು ಮತದಾರರ ಪೈಕಿ 35,742 ಮಂದಿಯ ಎನ್ಯೂಮರೇಷನ್ ಫಾರಂ ಡಿಜಿಟೈಝ್ ಮಾಡಲು ಬಾಕಿಯಿದೆ.ಈ ತನಕ ಮನೆ ಮನೆ ಭೇಟಿಯಲ್ಲಿ 74 ಮತದಾರರು ಗೈರು, 1,563 ಮಂದಿ ಶಾಶ್ವತ ವಲಸೆ, 2,430 ಮಂದಿ ಮರಣ ಹೊಂದಿರುವುದು,580 ಮಂದಿ ಎರಡು ಕಡೆ ಮತದಾರರ ಪಟ್ಟಿಯಲ್ಲಿರುವುದು ಹಾಗೂ 22 ಇತರ ಪಟ್ಟಿಯಲ್ಲಿರುವುದು ಕಂಡು ಬಂದಿದೆ ಎಂದು ತಾಲೂಕು ಕಚೇರಿ ಪ್ರಕಟಣೆ ತಿಳಿಸಿದೆ.



ಜಿಲ್ಲೆಯಲ್ಲಿ ಶೇ.79.57 ಪ್ರಗತಿ:
ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ 18,03,766 ಮತದಾರರಲ್ಲಿ ಎನ್ಯುಮರೇಷನ್ ಫಾರಂ ವಿತರಣೆಯು ಶೇ.100 ಪೂರ್ಣಗೊಂಡಿದೆ.ಈ ಪೈಕಿ 14,35,167 ಫಾರಂಗಳು ಡಿಜಿಟೈಝ್ಗೊಂಡಿದ್ದು ಶೇ.79.57 ಪ್ರಗತಿ ಕಂಡಿದೆ.ದ.ಕ ಜಿಲ್ಲೆಯ ಬೆಳ್ತಂಗಡಿಯಲ್ಲಿ ಶೇ.83.59, ಮೂಡಬಿದರೆಯಲ್ಲಿ ಶೇ.80.43, ಮಂಗಳೂರು ಉತ್ತರದಲ್ಲಿ ಶೇ.69.27, ಮಂಗಳೂರು ದಕ್ಷಿಣದಲ್ಲಿ ಶೇ.68.75, ಮಂಗಳೂರಿನಲ್ಲಿ ಶೇ.88.64, ಬಂಟ್ವಾಳದಲ್ಲಿ ಶೇ.79.33, ಪುತ್ತೂರಿನಲ್ಲಿ ಶೇ.81.34 ಹಾಗೂ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಶೇ.88.83 ಪ್ರಗತಿಕಂಡಿದೆ.ಜಿಲ್ಲೆಯಲ್ಲಿ ಒಟ್ಟು 3,21,414 ಫಾರಂಗಳ ಡಿಜಿಟೈಝ್ ಆಗಲು ಬಾಕಿಯಿದೆ.










