ಸ್ನೇಹಿತೆಯ ಮುನಿಸಿಗೆ ಚರಂಡಿ ಸೇರಿದ ಕಾರಿನ ಕೀ..!

0

ಹುಟ್ಟುಹಬ್ಬದ ಶುಭಾಶಯ ಕೋರಲು ಕಡಬಕ್ಕೆ ಬಂದು ಪೇಚಿಗೆ ಸಿಲುಕಿದ ಯುವಕ

ಕಡಬ: ಸ್ನೇಹಿತೆಗೆ ಹುಟ್ಟುಹಬ್ಬದ ಶುಭಾಶಯ ಕೋರಲು ಕಾರಿನಲ್ಲಿ ಬಂದ ಯುವಕನೋರ್ವ ಸ್ನೇಹಿತೆಯ ಮುನಿಸಿಗೆ ತುತ್ತಾಗಿ ಕಾರಿನ ಕೀ ಕಳೆದುಕೊಂಡು ಪೇಚಿಗೆ ಸಿಲುಕಿದ ಸ್ವಾರಸ್ಯಕರ ಘಟನೆಯೊಂದು ಜು.24ರಂದು ಕಡಬದಲ್ಲಿ ನಡೆದಿದೆ.

ಕಡಬದ ಸ್ನೇಹಿತೆಗೆ ಹುಟ್ಟುಹಬ್ಬದ ಶುಭಾಶಯ ಕೋರಲು ಯುವಕನೋರ್ವ ತನ್ನ ಸ್ನೇಹಿತನ ಸ್ವಿಫ್ಟ್ ಕಾರಿನಲ್ಲಿ ಮಧ್ಯಾಹ್ನ 2 ಗಂಟೆ ವೇಳೆಗೆ ಕಡಬಕ್ಕೆ ಬಂದಿದ್ದು ಕಡಬದ ಸಂತೆ ಕಟ್ಟೆ ಬಳಿ ಕಾರು ನಿಲ್ಲಿಸಿ ಸ್ನೇಹಿತೆಯ ಭೇಟಿ ಮಾಡಿದ್ದಾನೆ. ಪರಸ್ಪರ ಮಾತುಕತೆಯಲ್ಲಿ ತೊಡಗಿಕೊಂಡಿದ್ದ ಅವರಿಬ್ಬರ ನಡುವೆ ಅದೇನಾಯ್ತೋ ಗೊತ್ತಿಲ್ಲ. ಯುವಕನ ವಿರುದ್ಧ ಮುನಿಸಿಕೊಂಡ ಯುವತಿ ಆತನ ಕೈಯಲ್ಲಿದ್ದ ಕಾರಿನ ಕೀಯನ್ನು ಏಕಾಏಕಿ ಕಿತ್ತುಕೊಂಡು ಪಕ್ಕದ ಗಿಡಗಂಟಿ, ಕೊಳಚೆ ನೀರುಗಳಿಂದ ತುಂಬಿದ್ದ ಚರಂಡಿ ಕಡೆಗೆ ಎಸೆದು ಕೋಪ ತೀರಿಸಿಕೊಂಡಿದ್ದಾಳೆ. ಆದರೆ ಸ್ನೇಹಿತೆಯ ಈ ಕೃತ್ಯದಿಂದ ಗಲಿಬಿಲಿಗೊಂಡ ಯುವಕ ಚರಂಡಿ ಕಡೆಗೆ ಬಂದು ಕಾರಿನ ಕೀಗಾಗಿ ಎಷ್ಟೇ ಹುಡುಕಾಡಿದರೂ ಕಾರಿನ ಕೀ ಸಿಗದೇ ಸಂಕಷ್ಟಕ್ಕೆ ಒಳಗಾಗಿದ್ದಾನೆ.

ಸ್ಥಳೀಯರಿಂದಲೂ ಹುಡುಕಾಟ:
ಗಿಡ ಗಂಟಿಗಳ ನಡುವೆ ಕಾರಿನ ಕೀ ಹುಡುಕಾಟ ನಡೆಸುತ್ತಿದ್ದ ಯುವಕನ ಸ್ಥಿತಿ ಕಂಡ ಸ್ಥಳೀಯರು ಆತನ ನೆರವಿಗೆ ಧಾವಿಸಿದ್ದಾರೆ. ಗಿಡಗಂಟಿ, ಕೊಳಚೆ ನೀರಿನಲ್ಲಿ ಕೀಗಾಗಿ ಸ್ಥಳೀಯರೂ ಹುಡುಕಾಟ ನಡೆಸಿದ್ದಾರೆ. ಚರಂಡಿ ಪಕ್ಕದ ಗಿಡಗಂಟಿ ಕತ್ತರಿಸಿ ತೆಗೆದರೂ ಕಾರಿನ ಕೀ ಮಾತ್ರ ಪತ್ತೆಯಾಗಿಲ್ಲ. ಕೀ ಹುಡುಕಾಟ ನಡೆಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲೂ ಹರಡಿ ಮತ್ತಷ್ಟೂ ಜನ ಸ್ಥಳದಲ್ಲಿ ಜಮಾಯಿಸುವಂತೆಯೂ ಆಗಿತ್ತು. ಮಧ್ಯಾಹ್ನ 2.30 ರಿಂದ ರಾತ್ರಿ 7.30ರ ತನಕವೂ ಸ್ಥಳೀಯರ ಸಹಕಾರದೊಂದಿಗೆ ಯುವಕ ಕೀ ಗಾಗಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ರಾತ್ರಿ 7.30ರ ವೇಳೆಗೆ ಯುವಕ ಕಾರನ್ನು ಕಡಬದಲ್ಲೇ ಬಿಟ್ಟು ರಿಕ್ಷಾ ಮಾಡಿಕೊಂಡ ತನ್ನೂರಿಗೆ ತೆರಳಿರುವುದಾಗಿ ವರದಿಯಾಗಿದೆ.

LEAVE A REPLY

Please enter your comment!
Please enter your name here