







ಉಪ್ಪಿನಂಗಡಿ: ಸಾರ್ವಜನಿಕರ ಆಕ್ರೋಶದ ಬಿಸಿ ಮುಟ್ಟಿದ ಬೆನ್ನಲ್ಲೇ ಕರ್ವೇಲ್‌ನಲ್ಲಿ ಸರ್ವೀಸ್ ರಸ್ತೆಯ ಕಾಮಗಾರಿ ಆರಂಭಗೊಂಡಿದೆ.


ಚತುಷ್ಪಥ ಹೆದ್ದಾರಿ ಕಾಮಗಾರಿಯ ವೇಳೆ ಕರ್ವೇಲ್‌ನಲ್ಲಿ ಸರ್ವೀಸ್ ರಸ್ತೆಯ ಕಾಮಗಾರಿಯನ್ನು ಗುತ್ತಿಗೆದಾರರು ನಡೆಸದೇ ಕೇವಲ ಹೆದ್ದಾರಿ ಕಾಮಗಾರಿ ಮಾತ್ರ ನಡೆಸುತ್ತಿದ್ದರು. ಕೆಲದಿನಗಳ ಹಿಂದೆ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಗುತ್ತಿಗೆದಾರ ಸಂಸ್ಥೆಯ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.



ಈ ಮಧ್ಯೆ ಬಿಳಿಯೂರು ಸಂಪರ್ಕಿಸುವ ಹತ್ತುಕಳಸೆ ರಸ್ತೆ ಬಳಿ ಖಾಸಗಿ ವ್ಯಕ್ತಿಯೋರ್ವರು ರಸ್ತೆ ನಿರ್ಮಾಣಕ್ಕೆ ಇದು ನನ್ನ ಜಾಗ ಎಂದು ತಕರಾರು ತೆಗೆದಿದ್ದು, ಅವರಲ್ಲಿ ಸೂಕ್ತ ದಾಖಲೆಯನ್ನು ಹೆದ್ದಾರಿ ಪ್ರಾಧಿಕಾರದ ಕಚೇರಿಗೆ ಹಾಜರುಪಡಿಸಲು ಸೂಚಿಸಲಾಗಿತ್ತು. ಆದರೆ ಅವರಲ್ಲಿ ಸಮರ್ಪಕ ದಾಖಲೆ ಇಲ್ಲದ ಕಾರಣ ಅವರ ವಾದಕ್ಕೆ ಮನ್ನಣೆ ದೊರೆಯದೇ ಇದೀಗ ಅಲ್ಲಿಯೂ ಸರ್ವೀಸ್ ರಸ್ತೆಯ ಕಾಮಗಾರಿ ಭರದಿಂದ ಸಾಗುತ್ತಿದೆ.










