






ಉಪ್ಪಿನಂಗಡಿ: ಮಳೆಯ ಕೊರತೆಯಿಂದ ಈ ಬಾರಿ ದ.ಕ. ಜಿಲ್ಲೆಯ ಜೀವನದಿಗಳಾದ ನೇತ್ರಾವತಿ- ಕುಮಾರಧಾರ ನದಿಗಳು ಶಾಂತ ರೀತಿಯಲ್ಲಿ ಹರಿಯುತ್ತಿದ್ದರೆ 2024ರ ಜು.30ರಂದು ಉಭಯ ನದಿಗಳು ಉಕ್ಕೇರಿ ಹರಿದು ಉಪ್ಪಿನಂಗಡಿ ಭಾಗದಲ್ಲಿ ಪ್ರವಾಹ ಬಂದಿತ್ತು.





ಇಲ್ಲಿ ನದಿಗಳ ಅಪಾಯದ ಮಟ್ಟ 31.05 ಆಗಿದೆ. ಜು.30ರಂದು ಮಧ್ಯಾಹ್ನವಾಗುತ್ತಲೇ ಅಪಾಯದ ಮಟ್ಟವನ್ನು ಮೀರಿ ನದಿಗಳು ಹರಿದಿತ್ತು. ಕ್ಷಣ ಕ್ಷಣಕ್ಕೂ ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇತ್ತು. ನೇತ್ರಾವತಿ ನದಿ ದಡದ ಪಂಜಳ ಎಂಬಲ್ಲಿ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ನೀರು ನುಗ್ಗಿತ್ತು. ಕತ್ತಲಾಗುತ್ತಿದ್ದಂತೆ ಮತ್ತಷ್ಟು ನದಿ ನೀರಿನಲ್ಲಿ ಏರಿಕೆಯಾಗಿ ಪಂಜಳದಲ್ಲಿ ಹೆದ್ದಾರಿಯ ಮೇಲೆ ಸೊಂಟದಷ್ಟು ಎತ್ತರಕ್ಕೆ ನೀರು ಬಂದಿತ್ತು. ಮಠ ಹಿರ್ತಡ್ಕದಲ್ಲಿ ನೇತ್ರಾವತಿ ನದಿ ದಡದಲ್ಲಿರುವ ಮನೆಗಳು ಮುಳುಗಡೆಗೊಂಡು ಆ ಮನೆಯವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಕದಿಕ್ಕಾರು ಬೈಲು, ಕೂಟೇಲು, ನಟ್ಟಿಬೈಲು, ನೂಜಿ ಪ್ರದೇಶವಲ್ಲದೇ, ನೇತ್ರಾವತಿ – ಕುಮಾರಧಾರ ನದಿ ಪಾತ್ರದ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡು ಹಲವು ಮನೆಗಳಿಗೆ ನೀರು ನುಗ್ಗಿತ್ತು. ಹಳೆಗೇಟು ಬಳಿ ಸುಮಾರು 12ರಷ್ಟು ಮನೆಗಳು ಜಲಾವೃತಗೊಂಡಿತ್ತು. ಇಂದ್ರಪ್ರಸ್ಥ ಶಾಲಾ ಎದುರಿನ ರಸ್ತೆ, ರಥ ಬೀದಿಗೂ ನೀರು ನುಗ್ಗಿತ್ತು. ಕತ್ತಲಾಗುತ್ತಿದ್ದಂತೆಯೇ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗ ಎರಡೂ ನದಿಗಳು ಸಂಗಮಗೊಂಡಿದ್ದವು. ಜು.31ರ ನಸುಕಿನ ಜಾವ 2 ಗಂಟೆಯ ಬಳಿಕ ನದಿಗಳು ಶಾಂತವಾಗಿ ಮುಂಜಾನೆ 4ರ ವೇಳೆಗೆ ಎರಡೂ ನದಿಯ ನೀರು ನದಿಯ ಒಳಹರಿವಿನಲ್ಲೇ ಹರಿಯಲು ಆರಂಭಿಸಿತ್ತು.
ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದ್ದು, ಉಭಯ ನದಿಗಳು ಶಾಂತವಾಗಿ ನದಿಯ ಒಡಲಲ್ಲೇ ಹರಿಯತೊಡಗಿವೆ. ಈ ಬಾರಿಯ ಜು.30ರಂದು ನೇತ್ರಾವತಿ ನದಿಯು ಸಮುದ್ರ ಮಟ್ಟಕ್ಕಿಂತ 25.05 ಮೀಟರ್ ಎತ್ತರದಲ್ಲಿ ಹರಿಯುತ್ತಿದೆ.














