







ಬಡಗನ್ನೂರು: ಬಡಗನ್ನೂರು ಗ್ರಾಮದ ಪಟ್ಟೆ ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳಲ್ಲಿ ಸಹ ಶಿಕ್ಷಕರಾಗಿ ದೀರ್ಘಕಾಲ ಕರ್ತವ್ಯ ನಿರ್ವಹಿಸುತ್ತಿದ್ದ ರಾಮಚಂದ್ರಪ್ಪ ಕೆ ರವರು ಜು.30ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ.


ದಾವಣಗೆರೆ ಜಿಲ್ಲೆ ಕರ್ನಾಟಕ, ಹೊನ್ನಾಳಿ ತಾಲೂಕು ಕ್ಯಾಸಿನ ಕೆರೆ ಕೃಷ್ಣಪ್ಪ ಮತ್ತು ತಿಮ್ಮಮ್ಮ ದಂಪತಿಗಳ ಎಂಟನೇ ಮಗನಾದ ರಾಮಚಂದ್ರಪ್ಪ ಕೆ ರವರು 21.07.1966ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಹೊನ್ನಾಳಿ ತಾಲೂಕು ಕ್ಯಾಸಿನ ಕೆರೆ ಸರಕಾರಿ ಶಾಲೆಯಲ್ಲಿ ನಡೆಸಿ ಪ್ರೌಢಶಿಕ್ಷಣವನ್ನು ಸರ್ಕಾರಿ ಜೂನಿಯರ್ ಕಾಲೇಜು ಭದ್ರಾವತಿಯಲ್ಲಿ ಮುಗಿಸಿದರು. 1987ರಲ್ಲಿ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಕೊಟ್ರೆ ನಂಜಪ್ಪ ಜೂನಿಯರ್ ಕಾಲೇಜಿನಲ್ಲಿ ಪಿ.ಯು.ಸಿ ಇಂಟರ್ನ್ಶಿಪ್, ಮುಗಿಸಿ ಸರ್ ವಿಶ್ವೇಶ್ವರಯ್ಯ ಪ್ರಥಮ ದರ್ಜೆ ಕಾಲೇಜು ನ್ಯೂಟೌನ್ ಭದ್ರಾವತಿಯಲ್ಲಿ ಬಿ.ಎ ವ್ಯಾಸಂಗ ನಡೆಸಿದರು.



ವೃತ್ತಿ ಜೀವನ
1991 ರಿಂದ 1995ರ ತನಕ ಕುಳಗಟ್ಟಿ ಶ್ರೀ ಚೇತನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವೃತ್ತಿ ಜೀವನ ಆರಂಭಿಸಿದರು. ಬಳಿಕ 23.03.1999ರಲ್ಲಿ ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಗೆ ಖಾಯಂ ಶಿಕ್ಷಕನಾಗಿ ಸೇರ್ಪಡೆಗೊಂಡರು. ಕಳೆದ 27 ವರ್ಷಗಳಿಂದ ಪಟ್ಟೆ ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳಲ್ಲಿ ಸಹ ಶಿಕ್ಷಕರಾಗಿ ಅತ್ಯಂತ ನಿಷ್ಠೆಯಿಂದ ಸೇವೆ ಸಲ್ಲಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಸಾಧನೆ ಹಾಗೂ ಪ್ರಶಸ್ತಿಗಳು
2000 ನೇ ಇಸವಿಯಲ್ಲಿ ಪುನರೂರಿನಲ್ಲಿ ಹಿಂದೂಸ್ಥಾನಿ ಭಾರತ್ ಸೇವಾದಳ ಸಹಾಯಕ ತರಬೇತಿ ಪಡೆದು 2001-02ರಲ್ಲಿ ನೇತಾಜಿ ಶಾಖೆ ಪ್ರಾರಂಭಿಸಿದರು. 2004ರಲ್ಲಿ ಕಂಬಳ ಬೆಟ್ಟಿನಲ್ಲಿ ಉನ್ನತ ಸಹಾಯಕ ತರಬೇತಿ, 2012ರಲ್ಲಿ ಉನ್ನತ ಸಹಾಯಕ ಭಾರತ್ ಸೇವಾದಳ ತರಬೇತಿ ಪಡೆದ ಇವರು 2017-18 ರಲ್ಲಿ ದ.ಕ ಜಿಲ್ಲಾ ಮಟ್ಟದ ಭಾರತ್ ಸೇವಾದಳ ಭಾವೈಕ್ಯತಾ ಮೇಳ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಜಿಲ್ಲಾ ಹಂತದ ಉತ್ತಮ ಶಾಖಾ ನಾಯಕ ಪ್ರಶಸ್ತಿಯನ್ನು ಪಡೆದಿರುತ್ತಾರೆ.
ಸರಳ ಸಜ್ಜನಿಕೆಯ ವ್ಯಕ್ತಿ
ಸರಳ ಸಜ್ಜನಿಕೆಯ ವ್ಯಕ್ತಿತ್ವದ ರಾಮಚಂದ್ರಪ್ಪ ಕೆ ರವರು ವಿದ್ಯಾರ್ಥಿಗಳಿಗೆ, ಶಿಕ್ಷಕ ವೃಂದಕ್ಕೆ ಹಾಗೂ ಊರಿನವರಿಗೆ ಪ್ರೀತಿಪಾತ್ರರು. ಇವರು ಪ್ರಸ್ತುತ ಬಡಗನ್ನೂರು ಗ್ರಾಮದ ಪಟ್ಟೆಯಲ್ಲಿ ಪತ್ನಿ ಬಡಗನ್ನೂರು ಅಂಗನವಾಡಿ ಕಾರ್ಯಕರ್ತೆ ಚಂದ್ರಮ್ಮ ಕೆ, ಮಕ್ಕಳಾದ ಮಂಜುನಾಥ್ ಸಿವಿಲ್ ಇಂಜಿನಿಯರ್, ಮೇಘನಾ ಕೆ.ಆರ್. ಬಿ.ಕಾಂ ರವರೊಂದಿಗೆ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ










