







ನಿಡ್ಪಳ್ಳಿ: ಬೆಟ್ಟಂಪಾಡಿ ಗ್ರಾಮದ ಕಕ್ಕೂರು ಎಂಬಲ್ಲಿ ರಸ್ತೆಯಲ್ಲಿ ಹೊಂಡ-ಗುಂಡಿ ಬಿದ್ದು ಸಂಚಾರಕ್ಕೆ ಸಮಸ್ಯೆಯಾಗುತ್ತಿರುವ ಹಿನ್ನೆಲೆ ಕೂಡಲೇ ದುರಸ್ತಿಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.


ಕೊರಿಂಗಿಲದಿಂದ ಕಕ್ಕೂರು ಮೂಲಕ ನಿಡ್ಪಳ್ಳಿಯ ಕರ್ನಪ್ಪಾಡಿಯನ್ನು ಸಂಪರ್ಕಿಸುವ ರಸ್ತೆಯ ಮಧ್ಯದಲ್ಲಿ ಕಕ್ಕೂರು ಪ್ರದೇಶದಲ್ಲಿ ಅಂದಾಜು 150 ಮೀಟರ್ ಉದ್ದದಷ್ಟು ಕಾಂಕ್ರೀಟ್ ಆಗದೆ ಬಾಕಿಯಾಗಿದೆ. ರಸ್ತೆಯ ಮಧ್ಯ ಭಾಗ ಸ್ವಲ್ಪ ಮಾತ್ರ ಅಭಿವೃದ್ಧಿಯಾಗದೆ ಉಳಿದಿರುವುದರಿಂದ ಸಂಚಾರಕ್ಕೆ ಬಹಳ ಅಡಚಣೆಯಾಗಿದೆ. ಮಳೆ ಬರುವ ಸಮಯದಲ್ಲಿ ಗುಂಡಿಯಲ್ಲಿ ಕೆಸರು ನೀರು ತುಂಬುವುದರಿಂದ ವಾಹನ ಸವಾರರು ಮತ್ತು ಪಾದಾಚಾರಿಗಳಿಗೆ ತೊಂದರೆಯಾಗುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿ ನೀರು ಹರಿಯಲು ಸಮರ್ಪಕವಾದ ಚರಂಡಿ ಇಲ್ಲದೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಆದ್ದರಿಂದ ತಕ್ಷಣ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ರಸ್ತೆ ದುರಸ್ತಿಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



ರಸ್ತೆಯ ಗುಂಡಿಯಲ್ಲಿ ಕೆಸರು ನೀರು ನಿಂತು ವಾಹನ ಚಲಾಯಿಸಲು ಬಹಳ ತೊಂದರೆಯಾಗುತ್ತಿದೆ. ಒಂದು ಗುಂಡಿ ತಪ್ಪಿಸುವಾಗ ಇನ್ನೊಂದು ಗುಂಡಿಗೆ ವಾಹನ ಬೀಳುತ್ತಿದೆ. ಇದರಿಂದ ಅವಘಡ ಸಂಭವಿಸುವ ಪರಿಸ್ಥಿತಿ ಇದೆ. ದುರಸ್ತಿಗೆ 10 ಲಕ್ಷ ಅನುದಾನ ಇಟ್ಟಿದೆ ಎಂದು ಹಿಂದೆ ಒಮ್ಮೆ ಸುದ್ದಿಯಾಗಿತ್ತು ಆದರೆ ಅದು ಏನಾಯಿತು ಗೊತ್ತಿಲ್ಲ. ಒಂದು ಸಲ ಸ್ಥಳೀಯರು ಸೇರಿ ಶ್ರಮದಾನದ ಮೂಲಕ ನಾವು ದುರಸ್ತಿ ಮಾಡಿದ್ದೆವು. ಇನ್ನಾದರೂ ತಕ್ಷಣ ಇದನ್ನು ದುರಸ್ತಿ ಮಾಡಬೇಕು.
ಚಂದ್ರಶೇಖರ ಕಕ್ಕೂರು, ಸ್ಥಳೀಯ ನಿವಾಸಿ










