






ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ನೆಕ್ಕಿಲಾಡಿ ಗ್ರಾಮದ ಕರ್ವೇಲ್ನಲ್ಲಿ ನಿರ್ಮಾಣ ಹಂತದಲ್ಲಿರುವ ವಿದ್ಯುತ್ ಉಪ ಕೇಂದ್ರದಿಂದ ಕೊಯಿಲ ವಿದ್ಯುತ್ ಉಪ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಲೈನ್ ಕಾಮಗಾರಿ ಸಲುವಾಗಿ ಹಾಕಲಾಗಿರುವ ವಿದ್ಯುತ್ ಕಂಬಗಳು ಮತ್ತೆ ಉರುಳಿ ಬೀಳುವ ಹಂತದಲ್ಲಿದ್ದು, ಸಾರ್ವಜನಿಕರು, ವಾಹನ ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.


ಕೊಯಿಲದಲ್ಲಿ 33 ಕೆ.ವಿ. ವಿದ್ಯುತ್ ಉಪ ಕೇಂದ್ರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ ಕೊಯಿಲದಿಂದ ಕರ್ವೇಲ್ ತನಕ ಹೆದ್ದಾರಿ ಬದಿಯಲ್ಲಿ ವಿದ್ಯುತ್ ಕಂಬ ನಿಲುಗಡೆಗೊಳಿಸುವ ಕೆಲಸ ನಡೆಯುತ್ತಿದ್ದು, ಕೆಲಸ ಪೂರ್ಣಗೊಳ್ಳುವ ಮೊದಲೇ ಇವುಗಳು ವಾಲಲಾರಂಭಿಸಿವೆ. ಶನಿವಾರ ಸಂಜೆ ಹೆದ್ದಾರಿ ಬದಿಯಲ್ಲಿ ಉಪ್ಪಿನಂಗಡಿ-ಹಿರೇಬಂಡಾಡಿ ಸಂಪರ್ಕ ರಸ್ತೆ ಬದಿಯಲ್ಲಿ ಕಂಬಗಳು ವಾಲಿಕೊಂಡು ಬೀಳುವ ಹಂತದಲ್ಲಿತ್ತು. ಆ ಬಳಿಕ ಗುತ್ತಿಗೆದಾರರು ಬಂದು ಕ್ರೇನ್ ಮೂಲಕ ಅದನ್ನು ಸರಿಪಡಿಸಿದ್ದಾರೆ.



12 ದಿನಗಳ ಹಿಂದೆಯೂ ನಡೆದಿತ್ತು:
ಹೆದ್ದಾರಿ ಬದಿಯಲ್ಲಿ ಕರ್ವೇಲ್ನಿಂದ ಉಪ್ಪಿನಂಗಡಿ ತನಕ ವಿದ್ಯುತ್ ಕಂಬಗಳನ್ನು ನಿಲುಗಡೆಗೊಳಿಸುವ ಕೆಲಸ 15 ದಿನಗಳ ಹಿಂದೆ ಪೂರ್ಣಗೊಂಡಿತ್ತು. ಇದಾದ 3 ದಿನದಲ್ಲಿ ಬೊಳ್ಳಾರ್ ಎಂಬಲ್ಲಿ ಸುಮಾರು 8 ಕಂಬಗಳು ಒಮ್ಮೆಗೆ ವಾಲಿಕೊಂಡು ಹೆದ್ದಾರಿಗೆ ಬೀಳುವ ಸ್ಥಿತಿಗೆ ಬಂದಿತ್ತು. ಕಂಬ ಹಾಕುವಾಗ ಕಾಂಕ್ರೀಟ್ ಹಾಕದೆ ಕೇವಲ 4 ಅಡಿಯಷ್ಟು ಹೊಂಡ ತೆಗೆದು ತೀರಾ ಅರೆಬರೆಯಾಗಿ, ಕಳಪೆಯಾಗಿ ಕಂಬವನ್ನು ನಿಲುಗಡೆಗೊಳಿಸಿರುವ ಕಾರಣ ಇವುಗಳು ಮಣ್ಣಿನೊಳಗೆ ಹಿಡಿತ ಸಾಧಿಸಲು ಸಾಧ್ಯವಾಗದೆ ನೆಲಕ್ಕುರುಳಿ ಬೀಳುತ್ತಿದೆ ಎಂಬ ದೂರುಗಳು ವ್ಯಕ್ತವಾಗಿದೆ. ಆದರೆ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕಾದ ಮೆಸ್ಕಾಂ ಮಾತ್ರ ಕಣ್ಣಿದ್ದೂ ಕುರುಡುತನ ತೋರಿಸಿದ್ದು, ಈ ಅವ್ಯವಹಾರದಲ್ಲಿ ತಾನೂ ಪಾಲು ಪಡೆದಿದೆಯೇ ಎಂದು ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ.










