






ಉಪ್ಪಿನಂಗಡಿ: ನೇತ್ರಾವತಿ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಾದ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯ ಮಠ ಎಂಬಲ್ಲಿ ಅಪರಿಚಿತ ಗಂಡಸಿನ ಮೃತದೇಹವೊಂದು ಪತ್ತೆಯಾಗಿದೆ. ನದಿ ನೀರಿನಲ್ಲಿ ಕೊಚ್ಚಿಕೊಂಡು ಬಂದ ಮೃತದೇಹವು ಬಿದಿರು ಪೊದೆಯಲ್ಲಿ ಸಿಲುಕಿಕೊಂಡಿತ್ತು. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಪೊಲೀಸರು ಮತ್ತು ಸ್ಥಳೀಯರ ನೆರವಿನಿಂದ ಶವವನ್ನು ಪೊದೆಯಿಂದ ದಡಕ್ಕೆ ತರಲಾಯಿತು.


ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಶವವು ಒಂದೆರಡು ದಿನಗಳ ಹಿಂದೆ ಮೃತಪಟ್ಟ ಸ್ಥಿತಿಯಲ್ಲಿದೆ. ಮೃತ ವ್ಯಕ್ತಿಯು ಸುಮಾರು 30 ರಿಂದ 40 ವರ್ಷ ವಯೋಮಾನದವನಾಗಿದ್ದು, ದೇಹದಲ್ಲಿ ಪ್ಯಾಂಟ್ ಮತ್ತು ನಿಕ್ಕರ್ ಹೊರತು ಬೇರೆ ಯಾವುದೇ ಉಡುಪು ಇರಲಿಲ್ಲ.ಈ ಸಂಬಂಧ ಸ್ಥಳೀಯ ನಿವಾಸಿ ಕೆ. ಮೊಹಮ್ಮದ್ ನಾಸೀರ್ ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮೃತನ ಗುರುತು ಪತ್ತೆಯಾದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆ 9480805362 ಗೆ ಸಂಪರ್ಕಿಸುವಂತೆ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.













