






ಪಾಣಾಜೆ: ಪಾಣಾಜೆ ಗ್ರಾಮದ ಕೊಂದಲ್ಕಾನದಿಂದ ಕೇರಳದ ಕಾಟುಕುಕ್ಕೆ ಸಂಪರ್ಕಿಸುವ ಸಂಪರ್ಕ ರಸ್ತೆ ಸಂಪೂರ್ಣ ಕೆಟ್ಟುಹೋಗಿದ್ದು, ಈ ರಸ್ತೆ ಅವಲಂಬಿತ ನೂರಕ್ಕೂ ಹೆಚ್ಚು ಮನೆಯವರು ತೀರಾ ಸಂಕಷ್ಟದಲ್ಲಿರುವ ಬಗ್ಗೆ ವರದಿಯಾಗಿದೆ.


ಪಾಣಾಜೆ ಗ್ರಾಮದ ಗುರಿಕ್ಕೇಲು ಅಂಗನವಾಡಿ ಕೇಂದ್ರ ಮತ್ತು ತ್ಯಾಜ್ಯವಿಲೇವಾರಿ ಘಟಕ ತಲುಪಬೇಕಾದರೂ ಇದೇ ರಸ್ತೆಯ ಅವಶ್ಯಕತೆಯಿದ್ದು, ರಸ್ತೆ ವಾಹನ ಸಂಚಾರಕ್ಕೆ ತೀರಾ ಅಯೋಗ್ಯ ಪರಿಸ್ಥಿತಿಯಲ್ಲಿದೆ. ಗುರಿಕ್ಕೇಲು -ಖಂಡೇರಿ ಮಧ್ಯೆ ನೂರಕ್ಕೂ ಹೆಚ್ಚು ಮನೆಗಳಿವೆ. ಅಲ್ಲದೇ ಕಾಟುಕುಕ್ಕೆಗೆ ಇದು ಅತೀ ನಿಕಟವಾದ ರಸ್ತೆಯಾಗಿದೆ. ಆದರೆ ಈ ರಸ್ತೆಯ ಡಾಮರು ಸಂಪೂರ್ಣ ಕಿತ್ತುಹೋಗಿದೆ. ತೀರಾ ಏರು ಇಳಿಜಾರು ಪ್ರದೇಶದಲ್ಲಿ ಕಾಂಕ್ರಿಟಿಕೀರಣ ಮಾಡದಿರುವುದರಿಂದ ದ್ವಿಚಕ್ರ ವಾಹನ ಸವಾರರು ಬಿದ್ದು ಎದ್ದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿತ್ಯ ಈ ರಸ್ತೆಯಲ್ಲಿ ಮಹಿಳೆಯರು ಶಾಲಾ ಮಕ್ಕಳನ್ನು ಬಿಡಲು, ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಬಿಡಲು ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾರೆ. ಅನೇಕ ಅಟೋ ರಿಕ್ಷಾದವರಿದ್ದಾರೆ. ಬೆಟ್ಟಂಪಾಡಿಯ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಶಾಲಾ ವಾಹನವೂ ಇದೇ ರಸ್ತೆಯಲ್ಲಿ ಸಂಚರಿಸುತ್ತಿದೆ. ಅನೇಕ ಬಾರಿ ಶಾಲಾ ವಾಹನವನ್ನು ಸ್ಥಳೀಯರೇ ದೂಡಿ ಮೇಲಕ್ಕೆತ್ತಿರುವುದೂ ಇದೆ. ಇತ್ತೀಚೆಗೆ ಮಹಿಳೆಯೋರ್ವರು ದ್ವಿಚಕ್ರ ವಾಹನದಲ್ಲಿ ಬಿದ್ದು ಕೈ ಮತ್ತು ಕಾಲಿಗೆ ಗಾಯವಾಗಿರುವ ಘಟನೆ ನಡೆದಿದೆ.



ಲೆವೆಲ್ ರೋಡ್ಗೆ ಕಾಂಕ್ರಿಟೀಕರಣ
ಏರು ಇಳಿಜಾರು ರಸ್ತೆಗೆ ಕಾಂಕ್ರಿಟ್ ಮಾಡದೆ ಲೆವೆಲ್ ಇರುವ ಜಾಗಕ್ಕೆ ಕಾಂಕ್ರಿಟೀಕರಣ ಮಾಡಿರುವುದರ ಬಗ್ಗೆಯೂ ಸ್ಥಳೀಯರು ಆರೋಪ ವ್ಯಕ್ತಪಡಿಸಿದ್ದಾರೆ.

ಅಪಾಯಕಾರಿ ಸ್ಥಿತಿಯಲ್ಲಿ ಮೋರಿ ತಡೆಗೋಡೆ
ಇದೇ ರಸ್ತೆಯ ತಿರುವಿನಲ್ಲಿ ಮೋರಿಯೊಂದು ಹಾಕಲಾಗಿದ್ದು, ಇದಕ್ಕೆ ಕೇವಲ 1 ಅಡಿ ಎತ್ತರದಲ್ಲಿ ಒಂದು ಕಡೆ ಮಾತ್ರ ತಡೆಗೋಡೆ ಕಟ್ಟಲಾಗಿದೆ. ನೀರು ಬಿದ್ದು ಪ್ರಪಾತದಂತಿರುವ ಈ ಮೋರಿಗೆ ದ್ವಿಚಕ್ರ ವಾಹನ ಸವಾರರು ಬಿದ್ದು, ಮಕ್ಕಳು ಇಣುಕಿದರೂ ಆಯತಪ್ಪಿ ಬಿದ್ದು ಅವಘಡ ಸಂಭವಿಸುವ ಮುನ್ನ ಸರಿಪಡಿಸಬೇಕಾಗಿದೆ.
ಒಟ್ಟಿನಲ್ಲಿ ನೂರಕ್ಕೂ ಹೆಚ್ಚು ಮನೆಗಳು, ಅಂಗನವಾಡಿ ಕೇಂದ್ರ, ತ್ಯಾಜ್ಯ ವಿಲೇವಾರಿ ಘಟಕ, ಶಾಲಾ ವಾಹನ ಸಂಚರಿಸುವ ಈ ರಸ್ತೆಗೆ ಶಾಶ್ವತ ಕಾಯಕಲ್ಪ ನೀಡಿ ಈ ಭಾಗದ ಜನರ ನೋವಿಗೆ ಶೀಘ್ರ ಸ್ಪಂದಿಸುವ ಕಾರ್ಯವನ್ನು ಜನಪ್ರತಿನಿಧಿಗಳು, ಆಡಳಿತ ವರ್ಗ ಮಾಡಬೇಕಾಗಿದೆ.
ರಸ್ತೆ ಮೇಲಿನ ಸ್ಥಳೀಯರ ಅಭಿಮಾನ ಶ್ಲಾಘನೀಯ
ಇದು ಅಂತರಾಜ್ಯ ಸಂಪರ್ಕಿಸುವ ರಸ್ತೆಯಾಗಿ ಸಾರ್ವಜನಿಕ ರಸ್ತೆಯಾಗಿದ್ದರೂ ಈ ಭಾಗದ ಸ್ಥಳೀಯರಿಗೆ ಈ ರಸ್ತೆ ಮೇಲೆ ಅಪಾರ ಅಭಿಮಾನವಿದೆ. ತಾವಾಗಿಯೇ ಈ ರಸ್ತೆಯಲ್ಲಿ ಹೊಂಡ ಮುಚ್ಚುವ, ಮಣ್ಣು ಹಾಕುವ ಕೆಲಸ ಮಾಡುತ್ತಿದ್ದಾರೆ. ವಿದ್ಯುತ್ ಲೈನ್ಗೆ ತಾಗುವ ಮರಗಿಡಗಳನ್ನು ಕಡಿದು ಮೆಸ್ಕಾಂನವರಿಗೂ ಉಪಕಾರ ಮಾಡಿಕೊಡುತ್ತಿದ್ದಾರೆ. ಎಲ್ಲಾ ನಾವೇ ಮಾಡಬೇಕಾದರೆ ನಮಗೆ ಜನಪ್ರತಿನಿಧಿಗಳು ಯಾಕೆ ? ಅನ್ನೋ ಪ್ರಶ್ನೆಯೂ ಇವರಲ್ಲಿದೆ. `ಸುದ್ದಿ’ ವರದಿಗಾರರು ಸ್ಥಳಕ್ಕೆ ಭೇಟಿ ನೀಡಿದಾಗ ಇಲ್ಲಿನ 20 ಕ್ಕೂ ಹೆಚ್ಚಿನ ಜನ ಮಳೆಯನ್ನೂ ಲೆಕ್ಕಿಸದೆ ಪೊದೆ, ಗೆಲ್ಲು ಕಡಿಯುವ ಕೆಲಸದಲ್ಲಿ ನಿರತರಾಗಿರುವುದು ಕಂಡುಬಂತು.
ಇತ್ತೀಚೆಗೆ ಮಗುವನ್ನು ಕರೆದುಕೊಂಡು ಅಂಗಡಿಯಿಂದ ಬರಬೇಕಾದರೆ ಸ್ಕೂಟಿಯಲ್ಲಿ ಜಾರಿಬಿದ್ದು ಕೈಗೆ ಮತ್ತು ಕಾಲಿಗೆ ಗಾಯವಾಗಿದೆ. ಈಗಲೂ ನೋವು ಕಡಿಮೆಯಾಗಿಲ್ಲ, ಗಾಯ ಮಾಸಿಲ್ಲ. ಹೀಗಾದರೆ ನಾವು ಹೋಗೋದು ಹೇಗೆ ?
– ಇಂದಿರಾ ಸ್ಥಳೀಯರು
ನಮ್ಮ ರಸ್ತೆಯ ಈ ಪರಿಸ್ಥಿತಿಯನ್ನು ಯಾರೂ ಕೇಳೋದು ಇಲ್ಲ, ನೋಡುವವರೂ ಇಲ್ಲ, ನಮ್ಮ ತ್ಯಾಜ್ಯ ಸಂಗ್ರಹದ ವಾಹನದ ಚಾಲಕರು ಮಹಿಳೆ ಆಗಿದ್ದು, ಅವರಿಗೆ ಈ ರೋಡ್ನಲ್ಲಿ ಹೋಗಲು ಕಷ್ಟವಾಗುತ್ತಿದೆ. ಅಂಗನವಾಡಿ ಕೇಂದ್ರಕ್ಕೂ ಬರುವ ಗೂಡ್ಸ್ ವಾಹನದವರು ಈ ರಸ್ತೆಯಾಗಿ ಬರುವುದಿಲ್ಲ ಹೇಳಿದ್ದಾರೆ.
– ಚಂದ್ರಾವತಿ ಸ್ಥಳೀಯರು
ಚುನಾವಣೆ ಬರುವಾಗ ಬಂದು ಭರವಸೆ ಕೊಟ್ಟು ಹೋಗುತ್ತಾರೆ. ಮತ್ತೆ ಬರೋದಿಲ್ಲ. ಅನೇಕ ಬಾರಿ ಪಂಚಾಯತ್ಗೆ ಮನವಿ ಕೊಟ್ಟಿದ್ದೇವೆ. ಈಗ ಶಾಸಕರಿಗೂ ಮನವಿ ಕೊಟ್ಟಿದ್ದೇವೆ. ಶಾಸಕರ ಮೇಲೆ ಭರವಸೆ ಇದೆ.
– ಸುಕಿನ್ರಾಜ್ ಸ್ಥಳೀಯರು










