







ಮಕ್ಕಳಿಗೆ ಕನ್ನಡ ಓದು, ಬರಹ ಕಲಿಸಿಕೊಡುವುದು ಅತ್ಯಗತ್ಯ- ಸೇಸಪ್ಪ ರೈ


ಕಾಣಿಯೂರು: ಶಾಲೆಗಳಲ್ಲಿ ಮಕ್ಕಳಿಗೆ ಕನ್ನಡ ಓದು ಮತ್ತು ಬರವಣಿಗೆಯ ಮೂಲಕ ಕನ್ನಡ ಭಾಷೆಯನ್ನು ಕಲಿಸಿ ಕೊಡುವ ಮುಖಾಂತರ ಕನ್ನಡವನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಇದೆ. ಪ್ರತಿಯೊಬ್ಬ ಕನ್ನಡಿಗನಿಗೂ ತನ್ನ ಮಾತೃಭಾಷೆ ಕನ್ನಡದ ಮೇಲೆ ಅಭಿಮಾನವಿರಬೇಕು. ಕನ್ನಡವನ್ನು ಯಾವಾಗ ನಾವು ಗೌರವಿಸುತ್ತೇವೆಯೋ ಆವಾಗ ನಾವು ಕನ್ನಡಿಗ ಎಂದು ಹೇಳಿಕೊಳ್ಳುವುದಕ್ಕೆ ಹಕ್ಕಿರುತ್ತದೆ. ಹಲವಾರು ಭಾಷೆಗಳಿದ್ದರೂ ಕನ್ನಡ ಭಾಷೆ ಎಂಬ ಅಭಿಮಾನ ದ.ಕ ಜಿಲ್ಲೆಗೆ ಇದೆ ಎಂಬುದು ನಮ್ಮೆಲ್ಲರ ಹೆಮ್ಮೆ ಎಂದು ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್ನ ಅಧ್ಯಕ್ಷ ಸೇಸಪ್ಪ ರೈ ಹೇಳಿದರು.




ಅವರು ದ.ಕ ಜಿ.ಪಂ.ಉ.ಹಿ.ಪ್ರಾ.ಶಾಲೆ ಕುದ್ಮಾರು ಇವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು, ಎಸ್ಡಿಎಂಸಿ ಕುದ್ಮಾರು ಶಾಲೆ ಇವರ ಸಹಕಾರದೊಂದಿಗೆ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯೊAದಿಗೆ ಕುದ್ಮಾರು ಸ.ಉ.ಹಿ.ಪ್ರಾ.ಶಾಲೆಯಲ್ಲಿ ಆ.6ರಂದು ನಡೆದ ಮುಂಗಾರು ಸಾಹಿತ್ಯ ಕಲರವ-2026 ಕಾರ್ಯಕ್ರಮದಲ್ಲಿ ಮಾತನಾಡಿದರು. ಆ.29ರಂದು ಶ್ರೀ ರಾಮಕುಂಜೇಶ್ವರ ಶಾಲೆಯಲ್ಲಿ ನಡೆಯಲಿರುವ ಕಡಬ ತಾಲೂಕಿನ 5ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲರೂ ಭಾಗವಹಿಸಬೇಕು ಮತ್ತು ಸಮ್ಮೇಳನದ ಅಂಗವಾಗಿ ಕಡಬ ತಾಲೂಕಿನ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಪ್ರಬಂಧ ಮತ್ತು ಕವನ ಸ್ಪರ್ಧೆಗಳನ್ನು ಕಳುಹಿಸಿಕೊಡಲು ಆ.15ರ ತನಕ ವಿಸ್ತರಿಸಲಾಗಿದೆ ಎಂದು ಸೇಸಪ್ಪ ರೈ ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕುದ್ಮಾರು ಶಾಲಾ ಎಸ್ಡಿಎಂಸಿ ಅಧ್ಯಕ್ಷ ದೇವರಾಜ್ ನೂಜಿ ಮಾತನಾಡಿ, ಎಲ್ಲರ ಸಹಕಾರದಿಂದ ಮುಂಗಾರು ಸಾಹಿತ್ಯ ಕಲರವ ಅತ್ಯಂತ ಸಂಭ್ರಮದಿಂದ ಯಶಸ್ವಿಯಾಗಿ ನೆರವೇರಿದ್ದು, ಮುಂದೆಯೂ ಎಲ್ಲರ ಸಹಕಾರ ಅಗತ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕುದ್ಮಾರು ಶಾಲಾ ಮುಖ್ಯಗುರು ಮಿನಿ ವರ್ಗಿಸ್ ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಕೇವಲ ಓದು, ಬರಹ ಮಾತ್ರ ಸಾಕಾಗುವುದಿಲ್ಲ, ಜೊತೆಗೆ ಕಲೆ, ಸಾಹಿತ್ಯ, ನಾಟಕ ಇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು, ಸಾಹಿತ್ಯ, ಕಲೆಯನ್ನು ಉಳಿಸಿ ಬೆಳೆಸುವುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಶಾಲೆಯಲ್ಲಿ ಆಯೋಜನೆ ಮಾಡಿಕೊಂಡು ಬರುತ್ತಿದ್ದೇವೆ. ಸಾಹಿತ್ಯ ಕಲರವ ಮುಖಾಂತರ ಕುದ್ಮಾರು ಶಾಲೆಯಿಂದ ವಿದ್ಯಾರ್ಥಿಗಳು ಕವಿಯಾಗಿ ಮೂಡಿಬಂದು ಹೆಸರುವಾಸಿಯಾಗಲಿ ಎಂಬುದೇ ನಮ್ಮ ಆಶಯ ಎಂದರು. ಸವಣೂರು ಕ್ಲಸ್ಟರ್ ಸಿಆರ್ಪಿ ಜಯಂತ ವೈ ಮಾತನಾಡಿ, ಎಲ್ಲಾ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕು ಎಂಬ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಇಲಾಖೆ ಹಮ್ಮಿಕೊಂಡಿದೆ. ಇಲ್ಲಿನ ಸಾಹಿತಿಗಳು, ಕವಿಗಳು ರಾಜ್ಯದಲ್ಲಿ ಬೆಳಗಲಿ ಎಂದರು. ಯುವ ಸಾಹಿತಿ, ವಿಮರ್ಶಕಿ ಸುನೀತಾ ಶ್ರೀರಾಮ್ ಕೊಯಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಶ್ವಿಜ ಶ್ರೀಧರ್, ಆಶೋಕ್ ಸೌತೆಮಾರು, ನಾರಾಯಣ ಕುಂಬ್ರ, ಪೂರ್ಣಿಮಾ ಸಾಲೆತ್ತೂರು, ಸುರೇಶ್ ಚಾರ್ವಾಕ, ಯಶ್ವಿ ಡಿ.ಎನ್, ಪ್ರಿಯಾ ನಾರಾವಿ ಅತಿಥಿಗಳನ್ನು ಗೌರವಿಸಿದರು. ಕುದ್ಮಾರು ಶಾಲಾ ವಿದ್ಯಾರ್ಥಿನಿಯರಾದ ಯಶ್ವಿ ಡಿ.ಎನ್, ತೃಷಾ ಎ, ಹರ್ಷಿತ ಬಿ ಪ್ರಾರ್ಥಿಸಿದರು. ಪುತ್ತೂರು ಚಿಗುರೆಲೆ ಸಾಹಿತ್ಯ ಬಳಗದ ಸಂಯೋಜಕ ನಾರಾಯಣ ಕುಂಬ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುದ್ಮಾರು ಶಾಲಾ ಶಿಕ್ಷಕಿ, ಮುಂಗಾರು ಸಾಹಿತ್ಯ ಕಲರವ ಕಾರ್ಯಕ್ರಮ ಸಂಯೋಜಕಿ ವೀಣಾ ಜಗದೀಶ್ ಸ್ವಾಗತಿಸಿ, ಶಿಕ್ಷಕಿ ವಿನುತಾ ವಂದಿಸಿದರು. ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಜಗದೀಶ್ ಬಾರಿಕೆ, ಅಶ್ವಿಜ ಶ್ರೀಧರ್ ಕಾರ್ಯಕ್ರಮ ನಿರೂಪಿಸಿದರು.
ಕವಿಗೋಷ್ಠಿ:
ಮುಂಗಾರು ಸಾಹಿತ್ಯ ಕಲರವ -2026ರ ಕವಿಗೋಷ್ಠಿಯಲ್ಲಿ ಸುಮಾರು 32 ಕವಿಗಳಿಂದ ವಿವಿಧ ಕವನ ವಾಚನಗಳು ನಡೆದವು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ ಸುನೀತಾ ಶ್ರೀರಾಮ್ ಕೊಯಿಲರವರು ಕವನಗಳನ್ನು ವಿಮರ್ಶಿಸಿ ಅಭಿನಂದಿಸಿದರು.

ಗೌರವಾರ್ಪಣೆ:
ಕಾರ್ಯಕ್ರಮದಲ್ಲಿ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ ಯುವ ಸಾಹಿತಿ, ವಿಮರ್ಶಕಿ ಸುನೀತಾ ಶ್ರೀರಾಮ್ ಕೊಯಿಲ, ಕುದ್ಮಾರು ಶಾಲಾ ಶಿಕ್ಷಕಿ, ಮುಂಗಾರು ಸಾಹಿತ್ಯ ಕಲರವ ಕಾರ್ಯಕ್ರಮ ಸಂಯೋಜಕರಾದ ವೀಣಾ ಜಗದೀಶ್ ಹಾಗೂ ಪುತ್ತೂರು ಚಿಗುರೆಲೆ ಸಾಹಿತ್ಯ ಬಳಗದ ಸಂಯೋಜಕ ನಾರಾಯಣ ಕುಂಬ್ರ ಅವರನ್ನು ಗೌರವಿಸಲಾಯಿತು.










