







ಪುತ್ತೂರು: ಪುತ್ತೂರು ತಾಲ್ಲೂಕು ಪಂಚಾಯತ್ ಮಿನಿ ಸಭಾಂಗಣದಲ್ಲಿ ಪುತ್ತೂರು ತಾಲ್ಲೂಕು ವಿಕಲಚೇತನರ ಇಲಾಖೆಯ ಕಾರ್ಯಕರ್ತರ ಪ್ರಗತಿ ಪರಿಶೀಲನಾ ಸಭೆ ಆ.6ರಂದು ನಡೆಯಿತು.


ಸಭೆಯ ಅಧ್ಯಕ್ಷತೆಯನ್ನು ಪುತ್ತೂರು ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ವಿಕಲಚೇತನರ ನೋಡೆಲ್ ಅಧಿಕಾರಿ ಮಂಗಳ ಕಾಳೆ ಅವರು ವಹಿಸಿದ್ದರು. ಪುತ್ತೂರು ತಾಲ್ಲೂಕು ವಿಕಲಚೇತನರ ವಿವಿಧೋದ್ದೇಶ ಪುನರ್ ವಸತಿ ಕಾರ್ಯಕರ್ತ ನವೀನ್ ಕುಮಾರ್ ಉಪಸ್ಥಿತರಿದ್ದರು.




ಸಭೆಯಲ್ಲಿ ಜುಲೈ ತಿಂಗಳ ಪ್ರಗತಿ ಪರಿಶೀಲನಾ ವರದಿಯನ್ನು ನವೀನ್ ಕುಮಾರ್ ವಾಚಿಸಿದರು.
ಸಭೆಯ ಪ್ರಮುಖ ನಿರ್ಣಯಗಳು:
ಪುತ್ತೂರು ತಾಲ್ಲೂಕು ವ್ಯಾಪ್ತಿಯ ಹಿರಿಯ ನಾಗರಿಕರ ಹಾಗೂ ಗ್ರಾಮವಾರು ಮಾಹಿತಿಯನ್ನು ಗ್ರಾಮೀಣ ಮತ್ತು ನಗರ ಪುನರ್ ವಸತಿ ಕಾರ್ಯಕರ್ತರಿಂದ ಸಂಗ್ರಹಿಸುವುದು.1ನೇ ತರಗತಿಯಿಂದ 2ನೇ ಪಿ.ಯು.ಸಿ.ವರೆಗಿನ ವಿಕಲಚೇತನರ ಮಕ್ಕಳ ಮಾಹಿತಿಯನ್ನು ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯ ಅಧಿಕಾರಿಗಳ ಕಚೇರಿಗೆ ಕಳುಹಿಸುವುದು.ಆಟಿಸಂ, ಸೆರೆಬ್ರಲ್ ಪಾಲ್ಸಿ, ಬೌದ್ಧಿಕ ಮತ್ತು ಬಹುವಿಧ ವಿಕಲತೆ ಇರುವವರಿಗೆ ಗ್ರಾಮ ಪಂಚಾಯತ್ ವಾರು ನಿರಾಮಯ ಯೋಜನೆ ಮಾಡಿಸುವುದು.ವಿಕಲಚೇತನರ ಇಲಾಖೆಯ ಸಾಧನ-ಸಲಕರಣೆಗಳ ಬಗ್ಗೆ ಚರ್ಚೆ.ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ಮಾಡಿಸಲು ಪುತ್ತೂರು ಮತ್ತು ಕಡಬ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಹಿರಿಯ ನಾಗರಿಕರ ಆರೋಗ್ಯ ತಪಾಸಣಾ ಶಿಬಿರ ನಡೆಸಲು ತಾಲ್ಲೂಕು ಆರೋಗ್ಯ ಅಧಿಕಾರಿಗಳಿಗೆ ಪತ್ರ ಬರೆಯುವುದು.ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಡೆಯುವ ವಿಕಲಚೇತನರ ಪ್ರಮಾಣಪತ್ರ ಶಿಬಿರದವರೆಗೆ ಪುತ್ತೂರು ಮತ್ತು ಕಡಬ ತಾಲೂಕಿನ ಎಲ್ಲಾ ಗ್ರಾಮೀಣ ಮತ್ತು ನಗರ ಪುನರ್ ವಸತಿ ಕಾರ್ಯಕರ್ತರು ಕರ್ತವ್ಯ ನಿರ್ವಹಿಸುವುದು.ಬಿ.ಪಿ.ಎಲ್. ಕಾರ್ಡ್ ಹೊಂದಿರುವ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಪಿಂಚಣಿಗೆ ಅರ್ಜಿ ಸಲ್ಲಿಸುವಾಗ ಇರುವ 32,000 ರೂ. ವಾರ್ಷಿಕ ಆದಾಯ ಮಿತಿಯನ್ನು ಹೆಚ್ಚಿಸಲು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳಿಗೆ ಪತ್ರ ಬರೆಯುವುದು.ಪುತ್ತೂರು ಮತ್ತು ಕಡಬ ತಾಲೂಕಿನ ಅಂಗನವಾಡಿ ವ್ಯಾಪ್ತಿಯಲ್ಲಿರುವ ವಿಶೇಷ ಅಗತ್ಯವುಳ್ಳ ಮಕ್ಕಳ ಸಮೀಕ್ಷೆ ನಡೆಸುವುದು.

ಸಭೆಯನ್ನು ಪುತ್ತೂರು ತಾಲ್ಲೂಕು ಆರ್ಯಾಪು ಗ್ರಾಮ ಪಂಚಾಯತ್ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತ ಲಕ್ಷ್ಮೀಕಾಂತ ಹೆಗಡೆ ಸ್ವಾಗತಿಸಿದರು. ಪುತ್ತೂರು ತಾಲ್ಲೂಕು ಅರಿಯಡ್ಕ ಗ್ರಾಮ ಪಂಚಾಯತ್ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತ ಮಲ್ಲ ಎಂ ಧನ್ಯವಾದ ಸಮರ್ಪಿಸಿದರು.ಸಭೆಯಲ್ಲಿ ಪುತ್ತೂರು ತಾಲ್ಲೂಕಿನ ಎಲ್ಲಾ ಗ್ರಾಮೀಣ ಮತ್ತು ನಗರ ಪುನರ್ ವಸತಿ ಕಾರ್ಯಕರ್ತರು ಭಾಗವಹಿಸಿದ್ದರು.










