






ಆಲಂಕಾರು: ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಆ.9ರಂದು ಪೂರ್ವಾಹ್ನ ಗಂಟೆ 10 ಕ್ಕೆ ಆಲಂಕಾರಿನಲ್ಲಿರುವ ಸಂಘದ ಕೇಂದ್ರ ಕಚೇರಿಯ ಬೈದಶ್ರೀ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷರಾದ ಎನ್.ಮುತ್ತಪ್ಪ ಪೂಜಾರಿ ನೈಯ್ಯಲ್ಗ, ಉಪಾಧ್ಯಕ್ಷರಾದ ಜನಾರ್ದನ ಪೂಜಾರಿ ಕದ್ರ, ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಲಿಂಗಪ್ಪ ಪೂಜಾರಿ ನೈಯ್ಯಲ್ಗರವರು ತಿಳಿಸಿದ್ದಾರೆ.


ಕಳೆದ ಸಾಲಿನ ವಿಶೇಷ ಮಹಾಸಭೆಯ ನಿರ್ಣಯದಂತೆ ಜಿಲ್ಲಾಮಟ್ಟಕ್ಕೆ ಕಾರ್ಯಕ್ಷೇತ್ರವನ್ನು ಇಲಾಖಾನುಮತಿಯಂತೆ ವಿಸ್ತರಿಸಿದ್ದು, ಹೆಚ್ಚುವರಿಯಾಗಿ ಬೆಳ್ಳಾರೆ ಶಾಖೆಯನ್ನು ಒಳಪಟ್ಟು, ಆಲಂಕಾರು ಪ್ರಧಾನ ಕಚೇರಿ, ಕಡಬ, ನೂಜಿಬಾಳ್ತಿಲ, ನೆಟ್ಟಣ ಮತ್ತು ಕೊಯಿಲ ಶಾಖೆಯಲ್ಲಿ ಸಂಘವು ಬ್ಯಾಂಕಿಂಗ್ ವ್ಯವಹಾರವನ್ನು ಹೊಂದಿರುತ್ತದೆ. ಗ್ರಾಹಕರ ಸಹಕಾರದಿಂದ ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸುತ್ತಿದೆ. ಸಂಘವು 1991 ರಲ್ಲಿ ಪ್ರಾರಂಭಗೊಂಡು 2005 ರಿಂದ ಬ್ಯಾಂಕಿಂಗ್ ವ್ಯವಹಾರವನ್ನು ಪ್ರಾರಂಭಿಸಿರುತ್ತದೆ. ಆಲಂಕಾರಿನಲ್ಲಿ ಸ್ವಂತ ನಿವೇಶನದ ಕಟ್ಟಡ ಬೈದಶ್ರೀ ಸಹಕಾರ ಸೌಧದಲ್ಲಿ ಕೇಂದ್ರ ಕಚೇರಿ ಹೊಂದಿರುತ್ತದೆ. ಎಲ್ಲ ಸಮುದಾಯದವರು ನಮ್ಮಲ್ಲಿ ನಂಬಿಕೆ, ವಿಶ್ವಾಸ ಇಟ್ಟು ವ್ಯವಹಾರ ನಡೆಸುತ್ತಿದ್ದು ಕೇವಲ ಲಾಭದ ಉದ್ದೇಶವನ್ನಿಟ್ಟುಕೊಂಡು ವ್ಯವಹಾರ ನಡೆಸದೆ ಸಮಾಜದ ಎಲ್ಲಾ ಸಮುದಾಯದ ವ್ಯಕ್ತಿಗಳಿಗೂ ಸೌಲಭ್ಯ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಗ್ರಾಹಕರು ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿದ್ದಾಗ ಸಹಾಯಧನ ವಿತರಣೆ, ಮೂರ್ತೆದಾರ ವಯೋವೃದ್ದರಿಗೆ ಆರ್ಥಿಕ ನೆರವು, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆಯಂತಹ ಕಾರ್ಯಕ್ರಮ ಹಾಕಿಕೊಂಡಿದೆ.



ಪ್ರತಿ ವರ್ಷದಂತೆ ಮಹಾಸಭೆಯಲ್ಲಿ ಸಂಘದ ಕಾರ್ಯವ್ಯಾಪ್ತಿಯಲ್ಲಿ ಬರುವ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿರುವ, ಕಳೆದ ಸಾಲಿನ ಎಸ್.ಎಸ್.ಎಲ್.ಸಿ, ಪಿ.ಯು.ಸಿ ಮತ್ತು ಪದವಿ ತರಗತಿಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಗೌರವಿಸಲಾಗುವುದು. ಸಂಘದ ಸದಸ್ಯರ ಮಕ್ಕಳ ಪೈಕಿ ಪ್ರತಿಭಾನ್ವಿತರಿಗೆ, ಮೂರ್ತೆದಾರ ಸದಸ್ಯರ ಮಕ್ಕಳಿಗೆ, ಸರಕಾರಿ ಪ್ರೌಢಶಾಲೆ ಮತ್ತು ಕಾಲೇಜುನಲ್ಲಿ ವ್ಯಾಸಂಗ ಮಾಡಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ದತ್ತಿನಿಧಿ ಠೇವಣಿ ಇರಿಸಿದ ಸದಸ್ಯರು ಸೂಚಿಸಿದ ಅರ್ಹ ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು.
ಸಂಘದಲ್ಲಿ ಅಡಮಾನ ಸಾಲ, ಗೃಹ ನಿರ್ಮಾಣ ಸಾಲ, ಜಾಮೀನು ಸಾಲ, ಸ್ವ ಸಹಾಯ ಸಂಘ ಸಾಲ ಪಡೆದ ಸಾಲಗಾರರು, ಸಂಘದ ಆಡಳಿತ ಮಂಡಳಿ ರೂಪಿಸಿದ ನಿಯಮಾವಳಿ ಪ್ರಕಾರ ಮರಣ ಪರಿಹಾರ ನಿಧಿ ಶುಲ್ಕ ಪಾವತಿಸಿದರೆ, ಅರ್ಹ ಫಲಾನುಭವಿಗಳು ನಿಯಮಾನುಸಾರ ಮರಣ ಪರಿಹಾರ ನಿಧಿ ಪಡೆಯಲು ಅರ್ಹರಾಗುತ್ತಾರೆ. ಕಳೆದ ಸಾಲಿನಲ್ಲಿ ಇಬ್ಬರು ಸದಸ್ಯರು ಇದರ ಸೌಲಭ್ಯವನ್ನು ಪಡೆದಿರುತ್ತಾರೆ. ಸಂಘದ ಪ್ರಧಾನ ಕಛೇರಿಯಲ್ಲಿ ಸೇಫ್ ಲಾಕರ್ ಹಾಗೂ ಪ್ರಧಾನ ಕಛೇರಿ ಮತ್ತು ಕಡಬ ಶಾಖೆಯಲ್ಲಿ ಇ ಸ್ಟಾ÷್ಯಂಪ್ ಸೌಲಭ್ಯ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.
1.04 ಕೋಟಿ ರೂ.ನಿವ್ವಳ ಲಾಭ;
ಸಂಘವು 2025-26ನೇ ಸಾಲಿನಲ್ಲಿ ರೂ. 340.33 ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು 1.04 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ವರ್ಷಾಂತ್ಯಕ್ಕೆ ರೂ.69.54 ಲಕ್ಷ ಪಾಲು ಬಂಡವಾಳ, ರೂ.44.89 ಕೋಟಿ ಠೇವಣಿ, ರೂ.3.95 ಕೋಟಿ ವಿವಿಧ ನಿಧಿಗಳನ್ನು ಹೊಂದಿದ್ದು, ರೂ.41.57 ಕೋಟಿ ಸದಸ್ಯರ ಸಾಲ ಇರುತ್ತದೆ. ರೂ 9.19 ಕೋಟಿ ಹೂಡಿಕೆ ಇದ್ದು, ರೂ 49.72 ಕೋಟಿ ದುಡಿಯುವ ಬಂಡವಾಳ ಇರುತ್ತದೆ. ಶೇ 98.75 ಸಾಲ ವಸೂಲಾತಿ ಸಾಧಿಸಿರುತ್ತದೆ. ಲೆಕ್ಕಪರಿಶೋಧನೆಯಲ್ಲಿ ಸತತವಾಗಿ ಕಳೆದ 13 ವರ್ಷಗಳಿಂದ ‘ಎ’ ವರ್ಗೀಕರಣದಲ್ಲಿ ಗುರುತಿಸಿಕೊಂಡಿದೆ. ಸಂಘದಲ್ಲಿ 93 ಸ್ವಸಹಾಯ ಸಂಘಗಳಿದ್ದು, 863 ಸದಸ್ಯರು ಸ್ವಸಹಾಯ ಸಂಘದಲ್ಲಿ ವ್ಯವಹರಿಸುತ್ತಿದ್ದಾರೆ. ಸಂಘದ ಕಲ್ಲುಗುಡ್ಡೆ ಮತ್ತು ನೆಟ್ಟಣ ಶಾಖೆಯಲ್ಲಿ ಶೇ.100 ಸಾಲ ವಸೂಲಿ ಆಗಿರುತ್ತದೆ.
ಎನ್.ಮುತ್ತಪ್ಪ ಪೂಜಾರಿ ನೈಯ್ಯಲ್ಗ, ಅಧ್ಯಕ್ಷರು, ಮೂರ್ತೆದಾರರ ಸೇವಾ ಸಹಕಾರಿ ಸಂಘ ಆಲಂಕಾರು










