






ಸಹಸ್ರಾರು ಉದ್ಯೋಗಾಕಾಂಕ್ಷಿಗಳ ಆಗಮನ
ಯುವ ಜನರ ಭವಿಷ್ಯಕ್ಕೆ ಆಸರೆಯಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ


ಮೂಡುಬಿದಿರೆ: ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ರಾಂತಿಗೆ ಹೆಸರಾಗಿರುವ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಯುತ್ತಿರುವ, ದೇಶದ ಅತಿದೊಡ್ಡ ಉದ್ಯೋಗ ಮೇಳವೆಂದು ಗುರುತಿಸಿಕೊಂಡಿರುವ ‘ಆಳ್ವಾಸ್ ಪ್ರಗತಿ-2026’ರ ಮೊದಲ ದಿನವಾದ ಶುಕ್ರವಾರ ರಾಜ್ಯ, ಹೊರ ರಾಜ್ಯಗಳಿಂದ ಸಹಸ್ರಾರು ಉದ್ಯೋಗಾಕಾಂಕ್ಷಿಗಳು ಆಗಮಿಸಿದ್ದು, ಅಭೂತಪೂರ್ವ ಪ್ರತಿಕ್ರಿಯೆ ಕಂಡುಬಂತು.



ಬೆಳಗ್ಗಿನಿಂದಲೇ ಉದ್ಯೋಗಾಕಾಂಕ್ಷಿಗಳ ಸಾಲು:
ಬೆಳಗ್ಗಿನಿಂದಲೇ ವಿದ್ಯಾಗಿರಿ ಆವರಣದಲ್ಲಿ ಉದ್ಯೋಗ ಆಕಾಂಕ್ಷಿಗಳ ಸಾಲು ಕಂಡುಬಂತು. ಪದವಿ, ಸ್ನಾತಕೋತ್ತರ ಪದವಿ, ಐಟಿಐ, ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್ ಸೇರಿದಂತೆ ವಿವಿಧ ವಿಭಾಗಗಳ ಸಹಸ್ರಾರು ಅಭ್ಯರ್ಥಿಗಳು ತಮ್ಮ ಕನಸಿನ ಕೆಲಸದ ಹುಡುಕಾಟಕ್ಕೆ ಸಾಗರೋಪಾದಿಯಲ್ಲಿ ಆಗಮಿಸಿದ್ದರು. ಅಭ್ಯರ್ಥಿಗಳ ಜತೆಗೆ ಅವರ ಹೆತ್ತವರು ಕೂಡ ಆಗಮಿಸಿದ್ದು, ಇಡೀ ವಿದ್ಯಾಗಿರಿ ಆವರಣದಲ್ಲಿ ಯುವ ಜನತೆಯ ಭವಿಷ್ಯದ ಭರವಸೆಯ ವಾತಾವರಣ ನಿರ್ಮಾಣವಾಗಿತ್ತು.
ಅಚ್ಚುಕಟ್ಟು ಮತ್ತು ಶಿಸ್ತಿನ ವ್ಯವಸ್ಥೆ:
ಸಹಸ್ರಾರು ಉದ್ಯೋಗಾಕಾಂಕ್ಷಿಗಳು ಆಗಮಿಸಿದ್ದರೂ, ಯಾರಿಗೂ ತೊಂದರೆಯಾಗದಂತೆ ಆಳ್ವಾಸ್ ಶಿಕ್ಷಣ ಸಂಸ್ಥೆಯು ಅಚ್ಚುಕಟ್ಟಾದ ವ್ಯವಸ್ಥೆ ಮಾಡಿತ್ತು. ಸೂಕ್ತ ಮಾರ್ಗದರ್ಶನ, ಮಾಹಿತಿ ನೀಡಲು ನೂರಾರು ಸ್ವಯಂಸೇವಕರಿದ್ದರು. ಅಭ್ಯರ್ಥಿಗಳ ಆಯ್ಕೆಗೆ ಆಗಮಿಸಿದ 326 ಕಂಪೆನಿಗಳ ಪ್ರತಿನಿಧಿಗಳು ಯಾವುದೇ ಅಡಚಣೆಯಿಲ್ಲದೆ ಶಿಸ್ತುಬದ್ಧವಾಗಿ ಸಂದರ್ಶನ ನಡೆಸಲು ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಲಾಗಿತ್ತು.

ಈ ಮೊದಲೇ ಆನ್ಲೈನ್ನಲ್ಲಿ ನೋಂದಣಿ ಮಾಡಲು ಸಾಧ್ಯವಾಗದ ಅಭ್ಯರ್ಥಿಗಳಿಗಾಗಿ ಸ್ಥಳದಲ್ಲೇ ‘ಸ್ಪಾಟ್ ನೋಂದಣಿ’ಗೂ ಅವಕಾಶ ಕಲ್ಪಿಸಲಾಗಿತ್ತು. ಹತ್ತಾರು ಕೌಂಟರ್ಗಳನ್ನು ತೆರೆಯಲಾಗಿದ್ದು, ಯಾವುದೇ ಗೊಂದಲವಿಲ್ಲದೆ ಅಭ್ಯರ್ಥಿಗಳು ಸುಲಭವಾಗಿ ಪೂರ್ವ ಪ್ರಕ್ರಿಯೆಗಳನ್ನು ಮುಗಿಸಿ ಮುಂದಿನ ಹಂತಕ್ಕೆ ತೆರಳುತ್ತಿದ್ದರು.
ಆಗಾಗ ಮಳೆ ಬರುತ್ತಿದ್ದರೂ ಉದ್ಯೋಗಾಕಾಂಕ್ಷಿಗಳ ಉತ್ಸಾಹ ಕಡಿಮೆಯಾಗಲಿಲ್ಲ. ಮಳೆ ಪರಿಸ್ಥಿತಿ ಎದುರಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಆಳ್ವಾಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಹಾಗೂ ಅವರ ಪುತ್ರ ವಿವೇಕ್ ಆಳ್ವ ಸ್ವತಃ ವ್ಯವಸ್ಥೆಗಳನ್ನು ಪರಿಶೀಲಿಸಿ, ಯಾರಿಗೂ ತೊಂದರೆಯಾಗದಂತೆ ಸ್ವಯಂ ಸೇವಕರಿಗೆ ಮಾರ್ಗದರ್ಶನ ನೀಡುತ್ತಿದ್ದರು.ಆಳ್ವಾಸ್ ಪ್ರಗತಿ- ಉದ್ಯೋಗ ಮೇಳವು ಕೇವಲ ಉದ್ಯೋಗ ನೀಡುವ ವೇದಿಕೆಯಾಗದೆ, ಸಾವಿರಾರು ಯುವಜನರ ಮನದಲ್ಲಿ ಹೊಸ ನಂಬಿಕೆ ಸೃಷ್ಟಿ ಮಾಡುವಲ್ಲಿ ಯಶಸ್ವಿಯಾಯಿತು.

ಆಳ್ವಾಸ್ ಪ್ರಗತಿ ಮೊದಲ ದಿನದ ವಿವರ
*ಆನ್ಲೈನ್ ನೋಂದಣಿ ಮಾಡಿಸಿದ ಉದ್ಯೋಗಾಕಾಂಕ್ಷಿಗಳು: 13247
*ಸ್ಪಾಟ್ ನೋಂದಣಿ ಮಾಡಿಸಿದ ಅಭ್ಯರ್ಥಿಗಳು: 83
*ಉದ್ಯೋಗ ಮೇಳಕ್ಕೆ ಆಗಮಿಸಿದ ಕಂಪೆನಿಗಳು: 326
*ಮೊದಲ ದಿನ ಆಗಮಿಸಿದ ಉದ್ಯೋಗಾಕಾಂಕ್ಷಿಗಳು: 1.016
ಮೊದಲ ದಿನದ ಉದ್ಯೋಗ ಮೇಳದಲ್ಲಿ ಭಾಗವಹಿಸಿದ 326 ಕಂಪೆನಿಗಳ ಪೈಕಿ 207 ಕಂಪೆನಿಗಳು 718 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗದ ಆಫರ್ಗಳನ್ನು ನೀಡಿದ್ದು, 3093 ಅಭ್ಯರ್ಥಿಗಳನ್ನು ಮುಂದಿನ ಹಂತದ ಆಯ್ಕೆ ಪ್ರಕ್ರಿಯೆಗೆ ಶಾರ್ಟ್ ಲಿಸ್ಟ್ ಮಾಡಿವೆ.










